ವಿರೋಧ ಪಕ್ಷಗಳ ನಡೆ ದೇಶಕ್ಕೆ ಮಾರಕ: ಅನಂತಕುಮಾರ ಹೆಗಡೆ

By Kannadaprabha NewsFirst Published Aug 11, 2021, 10:56 AM IST
Highlights

*  ಕಾಂಗ್ರೆಸ್‌ನ ಬೌದ್ಧಿಕ ದಿವಾಳಿತನಕ್ಕೆ ಸಾಕ್ಷಿ: ಸಂಸದ ಅನಂತಕುಮಾರ ಆಕ್ರೋಶ
*  ರಾಹುಲ್‌ ಗಾಂಧಿಯವರ ಬೇಜವಾಬ್ದಾರಿ ಮತ್ತು ಗಾಂಭೀರ್ಯತೆ ಇಲ್ಲದ ನಾಯಕತ್ವ
*  ಅಧಿವೇಶನದಲ್ಲಿ ಕೋವಿಡ್‌ ರೋಗಕ್ಕೆ ಸಂಬಂಧಿಸಿದ ಮಹತ್ವದ ವಿಚಾರಗಳ ಚರ್ಚೆ ನಡೆಸಬೇಕಿತ್ತು
 

ಶಿರಸಿ(ಆ.11):  ಸದನದ ಕಲಾಪಗಳಿಂದ ಪಲಾಯನಗೈಯ್ಯುತ್ತಿರುವ ಬೇಜವಾಬ್ದಾರಿ ಕಾಂಗ್ರೆಸ್‌ ಹಾಗೂ ಮಿತ್ರಪಕ್ಷಗಳ ನಡೆ ದೇಶಕ್ಕೆ ಮಾರಕವಾಗಿದೆ ಎಂದು ಉತ್ತರ ಕನ್ನಡ ಸಂಸದ ಅನಂತಕುಮಾರ ಹೆಗಡೆ ಟೀಕಿಸಿದ್ದಾರೆ.

ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಸಂಸತ್ತಿನ ಮುಂಗಾರು ಅಧಿವೇಶನದಲ್ಲಿ ಕೋವಿಡ್‌ ಮಹಾಮಾರಿಯಂಥ ಗಂಭೀರ ಸಾಂಕ್ರಾಮಿಕ ರೋಗಕ್ಕೆ ಸಂಬಂಧಿಸಿದ ಮಹತ್ವದ ವಿಚಾರಗಳ ಚರ್ಚೆ ನಡೆಸಬೇಕಿತ್ತು. ಇನ್ನೊಂದೆಡೆ ಇದರಿಂದ ಉದ್ಭವವಾಗಿರುವ ಆರ್ಥಿಕ ಸಮಸ್ಯೆಗಳು, ಉತ್ಪಾದನಾ ಕ್ಷೇತ್ರದ ಸವಾಲುಗಳು, ಆಂತರಿಕ ಭದ್ರತೆ, ಗಡಿಯಾಚೆಗೆ ಉಲ್ಬಣಗೊಳ್ಳುತ್ತಿರುವ ಅಷ್ಘಾನಿಸ್ತಾನದ ಸಮಸ್ಯೆಯ ಪರಿಣಾಮಗಳು, ನಮ್ಮ ದೇಶವನ್ನು ಅತಂತ್ರಗೊಳಿಸುವ ಮತ್ತು ದ ಷಡ್ಯಂತ್ರ ಹಾಗೂ ಇನ್ನಿತರ ಅನೇಕ ಸಮಸ್ಯೆಗಳ ಕುರಿತು ವಿಸ್ತೃತ ಚರ್ಚೆ ನಡೆಯುವ ಅಗತ್ಯವಿದೆ ಹಾಗೂ ಅನೇಕ ಪ್ರಮುಖ ವಿಧೇಯಕಗಳ ಮಂಡನೆ ಆಗುವ ಈ ಸಂದರ್ಭದಲ್ಲಿ ಸದನದ ಕಲಾಪಗಳನ್ನು ಸ್ಥಗಿತಗೊಳಿಸುವ ಮತ್ತು ಚರ್ಚೆಗಳಿಂದ ಪಲಾಯನ ಮಾಡುವ ಕಾಂಗ್ರೆಸ್‌ನ ಈ ಮಾನಸಿಕತೆ, ಅವರ ಬೌದ್ಧಿಕ ದಿವಾಳಿತನಕ್ಕೆ ಸಾಕ್ಷಿಯಾಗಿದೆ. ಕಾಂಗ್ರೆಸ್‌ ಪಕ್ಷದ ಸ್ವಯಂಕೃತ ಅಪರಾಧಗಳಿಂದ ಆ ಪಕ್ಷವು ಮುಂದಿನ ದಿನಗಳಲ್ಲಿ ದೇಶದಲ್ಲಿ ನಗಣ್ಯವಾಗಲಿದ್ದು, ಕಾಂಗ್ರೆಸ್ಸಿಗರ ಈ ಪಲಾಯನವಾದ ವಿನಾಶಕಾಲೇ ವಿಪರೀತ ಬುದ್ಧಿ ಎನ್ನುವ ಉಕ್ತಿಗೆ ನಿದರ್ಶನವಾಗಿದೆ ಎಂದಿದ್ದಾರೆ.

'ಇಸ್ಲಾಂ ಜಗತ್ತಿಗೆ ಬಾಂಬ್'  ಅನಂತ್‌ಕುಮಾರ್‌ ಹೆಗಡೆ ಖುಲಾಸೆ

ಭಯೋತ್ಪಾದಕರಿಗೆ ಸಹಾಯ ಮಾಡುವ, ಜಿಹಾದಿ ಸಾಹಿತ್ಯವನ್ನು ಒದಗಿಸುವ ಮತ್ತು ಕಲ್ಲು ತೂರಾಟ ಹಾಗೂ ಇನ್ನಿತರ ಪ್ರಕರಣಗಳಲ್ಲಿ ತೊಡಗಿಸಿಕೊಳ್ಳುವವರನ್ನು ನಿಗ್ರಹಿಸುವ ಅತ್ಯಂತ ಪ್ರಮುಖ ಮಸೂದೆಯನ್ನು ಮಂಡಿಸುವ ಸಂದರ್ಭದಲ್ಲಿ ಸೋನಿಯಾ ಗಾಂಧಿ ನೇತೃತ್ವದಲ್ಲಿ ಕಾಂಗ್ರೆಸ್‌ ಪಕ್ಷದ ಸದಸ್ಯರು ಚರ್ಚೆಯಲ್ಲಿ ಭಾಗವಹಿಸದೇ ಭಯೋತ್ಪಾದಕರ ಪರವಾಗಿ ಸಭಾತ್ಯಾಗ ಮಾಡಿರುವುದು ಕಾಂಗ್ರೆಸ್‌ ಪಕ್ಷ ಭಯೋತ್ಪಾದಕರ ಪರವಾದ ನಿಲುವನ್ನು ಸ್ಪಷ್ಟಪಡಿಸಿದೆ. ಕಾಂಗ್ರೆಸ್‌ ಮತ್ತು ಇತರ ಕೆಲವು ವಿರೋಧ ಪಕ್ಷಗಳಿಗೆ ಪೆಗಾಸಸ್‌ ಘಟನೆ ಕೋವಿಡ್‌ ಸಾಂಕ್ರಾಮಿಕ ಮತ್ತು ಅದರ ಪರಿಣಾಮಗಳಿಗಿಂತ ದೊಡ್ಡ ಸಮಸ್ಯೆಯಾಗಿದೆ. ಇಡೀ ದೇಶವು ಒಗ್ಗಟ್ಟಿನಿಂದ ಕೋವಿಡ್‌ ವಿರುದ್ಧ ಹೋರಾಡುತ್ತಿದ್ದಾಗ, ಕಾಂಗ್ರೆಸ್‌ ಮತ್ತು ಇತರ ಕೆಲವು ವಿರೋಧ ಪಕ್ಷಗಳು ಎಲ್ಲೋ ಅಡಗಿ ಕುಳಿತಿದ್ದಂತಿದೆ. ರಾಹುಲ್‌ ಗಾಂಧಿಯವರ ಬೇಜವಾಬ್ದಾರಿ ಮತ್ತು ಗಾಂಭೀರ್ಯತೆ ಇಲ್ಲದ ನಾಯಕತ್ವ ಈ ದೇಶವನ್ನು ಸುದೀರ್ಘಕಾಲ ಆಳಿದ ಕಾಂಗ್ರೆಸ್‌ ಪಕ್ಷವನ್ನು ಈ ಸ್ಥಿತಿಗೆ ತಂದು ನಿಲ್ಲಿಸಿದೆ ಎಂದಿದ್ದಾರೆ.

ಯುಪಿಎ ಸರ್ಕಾರದ ಅವಧಿಯಲ್ಲಿ ಅಂದಿನ ಹಣಕಾಸು ಸಚಿವರು ತನ್ನ ಮೇಲೆ ಬೇಹುಗಾರಿಕೆ ನಡೆಸಿರುವ ಆಪಾದನೆಯನ್ನು ತನ್ನದೇ ಸರ್ಕಾರದ ಮೇಲೆ ಹೇರಿದ್ದರು ಎನ್ನುವುದನ್ನು ಜಾಣಮರೆವಿನಿಂದ ಮರೆತಿರುವ ಕಾಂಗ್ರೆಸ್‌, ಪೆಗಾಸಸ್‌ ಪ್ರಕರಣವನ್ನು ಕೈಗೆತ್ತಿಕೊಂಡು ಪ್ರತಿಭಟನೆಗೆ ಮುಂದಾಗಿರುವುದು ಕಾಂಗ್ರೆಸ್‌ ಟೂಲ್‌ಕಿಟ್‌ ತಂತ್ರಗಾರಿಕೆಯ ಮುಂದುವರಿದ ಭಾಗವಾಗಿದ್ದರೂ ಆಶ್ಚರ್ಯವಿಲ್ಲವೆಂದಿದ್ದಾರೆ.
 

click me!