
ಕಾರವಾರ: ತಾಲೂಕಿನ ಕಡವಾಡ ಗ್ರಾಮದಲ್ಲಿ ಕಾಳಿ ನದಿಗೆ ಅಡ್ಡಲಾಗಿ ನಿರ್ಮಿಸಲಾಗಿದ್ದ ಹಾಗೂ ಸುಮಾರು ಆರು ದಶಕಗಳ ಸುದೀರ್ಘ ಇತಿಹಾಸ ಹೊಂದಿದ್ದ ಹಳೆಯ ಸೇತುವೆ ಸೋಮವಾರ ರಾತ್ರಿ ಸುರಿದ ಮಳೆ ಹಾಗೂ ಬಿರುಗಾಳಿಯ ಅಬ್ಬರಕ್ಕೆ ಸಿಲುಕಿ ಕುಸಿದು ಬಿದ್ದಿದೆ.
ಸ್ವಾತಂತ್ರ್ಯ ಪೂರ್ವದಲ್ಲಿ ಬ್ರಿಟಿಷರ ಕಾಲದಲ್ಲಿ ಕಡವಾಡ ಪ್ರಮುಖ ವ್ಯಾಪಾರ ವಹಿವಾಟಿನ ಕೇಂದ್ರವಾಗಿತ್ತು. ಸೇತುವೆಗಳಿರದ ಆ ಕಾಲದಲ್ಲಿ ಕಡವಾಡ ಹಾಗೂ ಸುಂಕೇರಿಗೆ ಹೋಗಿ ಬರಲು ದೋಣಿಗಳೇ ಆಸರೆಯಾಗಿದ್ದವು. ಜನರ ಈ ಕಷ್ಟವನ್ನು ಅರಿತ ಅಂದಿನ ಹಣಕಾಸು ಸಚಿವರಾಗಿದ್ದ ದಿ. ರಾಮಕೃಷ್ಣ ಹೆಗಡೆ 1964ರಲ್ಲಿ ₹69 ಲಕ್ಷ ವೆಚ್ಚದಲ್ಲಿ ಈ ಸೇತುವೆ ನಿರ್ಮಾಣಕ್ಕೆ ಅಡಿಗಲ್ಲು ಹಾಕಿ, ಉದ್ಘಾಟಿಸಿದ್ದರು. ಅಂದಿನಿಂದ ಈ ಸೇತುವೆ ಕಡವಾಡ ಭಾಗದ ಜನರ ದೈನಂದಿನ ಸಂಚಾರಕ್ಕೆ ಪ್ರಮುಖ ಸಂಪರ್ಕ ಮಾರ್ಗವಾಗಿತ್ತು.
ಕಾಲಕ್ರಮೇಣ ಸೇತುವೆ ದುರ್ಬಲಗೊಂಡು ಜೀರ್ಣಾವಸ್ಥೆ ತಲುಪಿದ ಹಿನ್ನೆಲೆಯಲ್ಲಿ, ನೂತನ ಸೇತುವೆ ನಿರ್ಮಾಣವಾಗಿದ್ದು, ಮುಂಜಾಗ್ರತಾ ಕ್ರಮವಾಗಿ ಇದರ ಮೇಲೆ ವಾಹನ ಹಾಗೂ ಸಾರ್ವಜನಿಕ ಸಂಚಾರವನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಲಾಗಿತ್ತು. ಆದರೂ, ಕಡವಾಡ ಭಾಗದ ಮೀನುಗಾರರ ಪಾಲಿಗೆ ಈ ಸೇತುವೆ ಇನ್ನೂ ಜೀವಂತ ನೆನಪಿನ ಹಾಗೂ ಬದುಕಿನ ಆಸರೆಯ ತಾಣವಾಗಿಯೇ ಉಳಿದುಕೊಂಡಿತ್ತು.
ಮಳೆಯ ಪರಿಣಾಮ ಸೇತುವೆಯ ಮಧ್ಯಭಾಗ ಸಂಪೂರ್ಣವಾಗಿ ಕುಸಿದು ಜಲಸಮಾಧಿಯಾಗಿದ್ದು, ಘಟನೆಯ ಮಾಹಿತಿ ತಿಳಿದ ತಕ್ಷಣ ಸ್ಥಳಕ್ಕೆ ಸಂಬಂಧಪಟ್ಟ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸೇತುವೆಯ ಉಳಿದ ಭಾಗಗಳೂ ಕುಸಿಯುವ ಅಪಾಯವಿರುವುದರಿಂದ, ಸುರಕ್ಷತಾ ದೃಷ್ಟಿಯಿಂದ ಸಾರ್ವಜನಿಕರು ಹಾಗೂ ಮೀನುಗಾರರು ಸೇತುವೆ ಬಳಿ ತೆರಳದಂತೆ ಕಟ್ಟುನಿಟ್ಟಿನ ಎಚ್ಚರಿಕೆ ನೀಡಲಾಗಿದೆ.
ಸೇತುವೆಯ ಕೆಳಗೆ 54 (ಗಾಲಿ) ಭಾಗಗಳಿದ್ದು, ಕಾಳಿ ನದಿಯ ಮೇಲ್ಭಾಗದಲ್ಲಿ ನಿರ್ಮಾಣವಾಗಿದ್ದ ಈ ಸೇತುವೆ ಮೀನುಗಾರಿಕೆಗೆ ಹೇಳಿ ಮಾಡಿಸಿದ ಸ್ಥಳವಾಗಿತ್ತು. ಪ್ರತಿದಿನ ನೀರಿನ ಇಳಿತದ ಸಮಯದಲ್ಲಿ, ಸಂಜೆಯಾಗುತ್ತಿದ್ದಂತೆ ಇಲ್ಲಿನ ನೂರಕ್ಕೂ ಅಧಿಕ ಕುಟುಂಬದ ಮೀನುಗಾರರು ಸಿಗಡಿ ಹಿಡಿದು ಮಾರಾಟ ಮಾಡಿ ಜೀವನೋಪಾಯ ನಡೆಸುತ್ತಿದ್ದರು. ಮಳೆಗಾಲದಲ್ಲಿಯೂ ಇಲ್ಲಿ ಮೀನುಗಾರರ ಚಟುವಟಿಕೆ ಬಿರುಸಿನಿಂದ ಸಾಗುತ್ತಿತ್ತು.
ಸೇತುವೆ ಮೇಲೆ ಸಂಚಾರ ಮುಚ್ಚಿದ್ದರೂ ಮೀನುಗಾರರ ಬದುಕಿಗೆ ಅದು ಅತಿದೊಡ್ಡ ಆಸರೆಯಾಗಿತ್ತು. ಹಲವು ಕುಟುಂಬಗಳ ದಿನನಿತ್ಯದ ಜೀವನ ಈ ಸೇತುವೆ ಸುತ್ತಲೇ ಸಾಗುತ್ತಿತ್ತು ಎಂದು ಸ್ಥಳೀಯರು ಬೇಸರ ವ್ಯಕ್ತಪಡಿಸಿದ್ದಾರೆ.