ವರ್ಷಧಾರೆಗೆ ತುಂಬಿದ ನರೇಗಾ ಕಂದಕಗಳು: ಗಜೇಂದ್ರಗಡ ತಾಲೂಕಿನ ರೈತರ ಮೊಗದಲ್ಲಿ ಮಂದಹಾಸ!

Published : Jun 10, 2026, 07:40 AM IST
Gajendragad Nrega

ಸಾರಾಂಶ

ಗಜೇಂದ್ರಗಡ ತಾಲೂಕಿನಲ್ಲಿ ನರೇಗಾ ಯೋಜನೆಯಡಿ ಕೈಗೊಂಡ ಸಾಮೂಹಿಕ ಬದು ನಿರ್ಮಾಣ ಕಾಮಗಾರಿಯಿಂದಾಗಿ, ಇತ್ತೀಚಿನ ಮಳೆಗೆ ಸಾವಿರಾರು ಕಂದಕಗಳು ಜಲಾವೃತಗೊಂಡಿವೆ. ಇದು ಮಣ್ಣಿನ ಸವಕಳಿಯನ್ನು ತಡೆಯುವುದರ ಜೊತೆಗೆ ಅಂತರ್ಜಲ ಮಟ್ಟ ಹೆಚ್ಚಿಸಲು ನೆರವಾಗಿದ್ದು, ರೈತರಲ್ಲಿ ಸಂತಸ ಮೂಡಿಸಿದೆ.

ಎಸ್.ಎಂ. ಸೈಯದ್

ಗದಗ: ಗಜೇಂದ್ರಗಡ ತಾಲೂಕಿನಲ್ಲಿ ನರೇಗಾ ಯೋಜನೆಯಡಿ ಕೈಗೊಂಡಿದ್ದ ಸಾಮೂಹಿಕ ಬದು ನಿರ್ಮಾಣ ಕಾಮಗಾರಿ ಪರಿಣಾಮ ಕಳೆದ ಒಂದು ವಾರದಿಂದ ಸುರಿದ ಮಳೆಯಿಂದಾಗಿ ಕಂದಕಗಳು ತುಂಬಿದ್ದು, ರೈತರ ಮೊಗದಲ್ಲಿ ಮಂದಹಾಸ ಮೂಡಿದೆ.

ತಾಲೂಕಿನಾದ್ಯಂತ ಮೇ ಮತ್ತು ಜೂನ್ ತಿಂಗಳಲ್ಲಿ "ವಲಸೆ ಯಾಕೆ ನಿಮ್ಮೂರಲ್ಲಿಯೇ ಕೆಲಸ" ಅಭಿಯಾನದಡಿ 13 ಗ್ರಾಪಂಗಳಲ್ಲಿ ಕೈಗೊಂಡಿದ್ದ ಸಾಮೂಹಿಕ ಬದು ನಿರ್ಮಾಣ ಕಾಮಗಾರಿ ರೈತ ಕಾರ್ಮಿಕರಿಗೆ ಕೆಲಸ ಕೊಡುವುದರ ಜತೆಗೆ ಜಮೀನುಗಳಲ್ಲಿ ಬದು ನಿರ್ಮಿಸಿಕೊಂಡಿದ್ದರು. ಪರಿಣಾಮ ಸದ್ಯ ಮಳೆ ನೀರು ಬದು ಬದಿಯ ಕಂದಕಗಳಲ್ಲಿ ತುಂಬಿ ಹರಿಯುತ್ತಿವೆ.

ತಾಲೂಕಿನ ಶಾಂತಗೇರಿ ಗ್ರಾಪಂ ವ್ಯಾಪ್ತಿಯಲ್ಲಿ 2025-26ನೇ ಸಾಲಿನ ಕ್ರಿಯಾಯೋಜನೆಯಲ್ಲಿ ಅನುಮೋದನೆಗೊಂಡ ಉದ್ಯೋಗ ಖಾತ್ರಿ ಯೋಜನೆಯಡಿ ಬದು ನಿರ್ಮಾಣ ಕಾರ್ಯ ಯಶಸ್ಸಿನ ಹಾದಿಯಲ್ಲಿ ಸಾಗಿದೆ. ಬದು ನಿರ್ಮಾಣ ಕಾಮಗಾರಿ ಅಂದಾಜು 9 ಲಕ್ಷ ರು. ಮೊತ್ತದಲ್ಲಿ 2675 ಮಾನವ ದಿನಗಳ ಸೃಜಿಸಿ, ಬರೊಬ್ಬರಿ 1337ಕ್ಕೂ ಅಧಿಕ ಕಂದಕಗಳನ್ನು ನಿರ್ಮಾಣ ಮಾಡಲಾಗಿದೆ.

ವರ್ಷಧಾರೆಗೆ ತುಂಬಿದ ನರೇಗಾ ಕಂದಕಗಳು!

ಶಾಂತಗೇರಿ ಗ್ರಾಮದಲ್ಲಿ ಈಗಾಗಲೇ 5350 ಕಂದಕಗಳನ್ನು ನಿರ್ಮಾಣ ಮಾಡಿದ್ದು, ಭಾನುವಾರ, ಸೋಮವಾರ ಸುರಿದ ಮಳೆಯಿಂದಾಗಿ ಕಂದಕಗಳು ಭರ್ತಿಯಾಗಿವೆ. 95 ಹೆಕ್ಟೇರ್ ಪ್ರದೇಶದಲ್ಲಿ ಸುಮಾರು 456 ಜನ ಅಕುಶಲ ಕೂಲಿಕಾರರು ಸೇರಿ ಕಳೆದ ಮೇ ಮತ್ತು ಜೂನ್ ತಿಂಗಳಲ್ಲಿ ಕೆಲಸ ಮಾಡಿದ್ದಾರೆ. 5350 ಕಂದಕಗಳನ್ನು ನಿರ್ಮಾಣ ಮಾಡಿದ್ದಾರೆ. ಇದರಿಂದ ಜಮೀನಿನ ಸುತ್ತ ಬದು ನಿರ್ಮಾಣವಾಗಿದೆ. ಮಳೆಯಿಂದ ನೀರು ಭೂಮಿಯಲ್ಲಿ ಇಂಗಿದ ನಂತರ ಕಂದಕಗಳಲ್ಲಿ ಸಂಗ್ರಹಗೊಂಡಿವೆ. ಇದರಿಂದಾಗಿ ತಮ್ಮ ಜಮೀನಿನಲ್ಲಿನ ಮಣ್ಣಿನ ಸವಕಳಿ ತಪ್ಪಿದೆ. ಬದುವಿನ ಹತ್ತಿರ ಕಂದಕಗಳನ್ನು ನಿರ್ಮಾಣ ಮಾಡಿದ್ದರಿಂದ ಬದು ಬೇಸಾಯ ಮಾಡಲು ಉಪಯುಕ್ತವಾಗಲಿದೆ.

ಎಲ್ಲೆಲ್ಲಿ ಕಂದಕಗಳಲ್ಲಿ ನೀರು?

ತಾಲೂಕಿನ ರಾಜೂರು, ಸೂಡಿ, ಕುಂಟೋಜಿ, ರಾಂಪೂರು, ನಿಡಗುಂದಿ, ಇಟಗಿ ಗ್ರಾಪಂ ವ್ಯಾಪ್ತಿಯಲ್ಲಿ 2025-26ನೇ ಸಾಲಿನ ನರೇಗಾ ಯೋಜನೆಯಡಿ ವೈಜ್ಞಾನಿಕವಾಗಿ ಯೋಜನೆ ರೂಪಿಸಿ ಭೌಗೊಳಿಕವಾಗಿ ಮೇಲ್ಮಟ್ಟದಿಂದ ಕೆಳಮಟ್ಟದವರೆಗೂ ಹಂತ- ಹಂತವಾಗಿ ಜಮೀನಿನಲ್ಲಿ ಸಾಮೂಹಿಕ ಬದು ನಿರ್ಮಾಣ ಕಾರ್ಯ ನಡೆಸಲಾಗಿದೆ. ಹೀಗಾಗಿ ಮುಂಗಾರು ಬಿತ್ತನೆಯಲ್ಲಿ ಮಗ್ನವಾಗಿರುವ ರೈತರಿಗೆ ಜಮೀನುಗಳಲ್ಲಿ ನಿಂತ ಮಳೆ ನೀರು ಹರ್ಷ ತಂದಿದೆ.

ಮಳೆನೀರು ಸಂಗ್ರಹ

ನರೇಗಾ ಯೋಜನೆಯಡಿ ಬದು ನಿರ್ಮಾಣ ಹೆಚ್ಚಿನ ಆದ್ಯತೆ ನೀಡಲಾಗಿದೆ. ಮೇ ಮತ್ತು ಜೂನ್ ತಿಂಗಳಲ್ಲಿ ಕೂಲಿಕಾರರಿಗೆ ಕೆಲಸ ನೀಡಲಾಗಿದೆ. ತಾಲೂಕಿನ 13 ಗ್ರಾಮ ಪಂಚಾಯಿತಿಗಳಲ್ಲಿ ಕಾಮಗಾರಿ ಪ್ರಾರಂಭಗೊಂಡಿವೆ. ಕೂಲಿಕಾರರು ರೈತರ ಜಮೀನಿನಲ್ಲಿ ಕಂದಕ ಬದುಗಳನ್ನು ನಿರ್ಮಾಣ ಮಾಡಿದ್ದರಿಂದ ಮುಂಗಾರು ಹಂಗಾಮಿನ ಮಳೆಗೆ ಕಂದಕಗಳಲ್ಲಿ ಮಳೆನೀರು ಸಂಗ್ರಹವಾಗಿದೆ. ಸರ್ಕಾರದ ಯೋಜನೆ ಈಡೇರಿದೆ ಎಂದು ತಾಪಂ ಸಹಾಯಕ ನಿರ್ದೇಶಕ ಶರಣಪ್ಪ ನರೇಗಲ್ ಸಂತಸ ವ್ಯಕ್ತಪಡಿಸಿದರು.

ಇದನ್ನೂ ಓದಿ: ಗಜೇಂದ್ರಗಡದಲ್ಲಿ 'ಥರ್ಡ್ ಐ' ತಪ್ಪಿಸಲು ವಾಹನ ಸವಾರರ ವಾಮಮಾರ್ಗ! ಸಫಲವಾಗದ ಸುಗಮ ಸಂಚಾರ

ನರೇಗಾ ಯೋಜನೆಯಡಿ ವೈಜ್ಞಾನಿಕವಾಗಿ ಯೋಜನೆ ರೂಪಿಸಿ ಭೌಗೊಳಿಕವಾಗಿ ಮೇಲ್ಮಟ್ಟದಿಂದ ಸಮುದಾಯ ಬದು ನಿರ್ಮಾಣ ಮಾಡಲಾಗುವುದು. ಬೇಸಿಗೆಯಲ್ಲಿ ಕೂಲಿಕಾರರಿಗೆ ಕೆಲಸ ನೀಡುವುದರ ಜತೆಗೆ ರೈತರ ಜಮೀನಿನಲ್ಲಿ ಬದು ನಿರ್ಮಾಣ ಮಾಡಲಾಗಿದೆ. ಕಳೆದ ಎರಡು ದಿನಗಳಿಂದ ತಾಲೂಕಿನಲ್ಲಿ ಉತ್ತಮ ಮಳೆಯಾಗಿದ್ದು, ಕಂದಕದಲ್ಲಿ ಮಳೆನೀರು ತುಂಬಿರುವುದು ಯೋಜನೆ ಯಶಸ್ವಿಯಾಗಿದೆ  ಎಂದು ಗಜೇಂದ್ರಗಡ ತಾ.ಪಂ. ಇಒ  ಚಂದ್ರಶೇಖರ ಬಿ. ಕಂದಕೂರು ಹೇಳುತ್ತಾರೆ.

ಇದನ್ನೂ ಓದಿ: Gadag: ಜಲಸಂಕಷ್ಟಕ್ಕೆ ಮುಕ್ತಿ; ಬರೋಬ್ಬರಿ ₹115 ಕೋಟಿ ವೆಚ್ಚದಲ್ಲಿ ಕೆರೆಗಳಿಗೆ ನೀರು ತುಂಬಿಸುವ ಮಹಾ ಯೋಜನೆ

PREV
Read more Articles on
click me!

Recommended Stories

4 ವಿಧಗಳಲ್ಲಿ ತ್ಯಾಜ್ಯ ವಿಂಗಡಿಸದಿದ್ದರೆ ಪ್ರಕರಣ ದಾಖಲಿಸಿ ದಂಡ ಹಾಕಿ; ಮುಖ್ಯಾಧಿಕಾರಿ ಎಚ್ಚರಿಕೆ
ಶ್ರವಣಬೆಳಗೊಳದಲ್ಲಿ ಮತ್ತೊಂದು ಕನ್ನಡ ಶಾಸನ ಪತ್ತೆ; 12ನೇ ಶತಮಾನದಲ್ಲಿನ ವೃತ್ತಿ ಉಲ್ಲೇಖ