ಸಂಸದ ಪ್ರತಾಪ್ ಸಿಂಹ ಅವರ ಮನೆಯಿಂದ ಉರಿಗೌಡ, ವಿರಾಜಪೇಟೆ ಶಾಸಕರ ಮನೆಯಿಂದ ನಂಜೇಗೌಡ ಬಂದಿದ್ದಾರೆ ಎಂದು ಕೊಡವ ನ್ಯಾಷನಲ್ ಕೌನ್ಸಿಲ್ ಅಧ್ಯಕ್ಷ ಎನ್.ಯು ನಾಚಪ್ಪ ಕಿಡಿ.
ವರದಿ: ರವಿ.ಎಸ್ ಹಳ್ಳಿ ಏಷ್ಯಾನೆಟ್ ಸುವರ್ಣ ನ್ಯೂಸ್
ಕೊಡಗು (ಮಾ.27): ಟಿಪ್ಪುವನ್ನು ಕೊಂದಿದ್ದು ಕೊಡವರು, ಆ ಕ್ರೆಡಿಟ್ ಕೊಡವರಿಗೆ ಸಲ್ಲಬೇಕು ಎಂದು ಕೊಡವ ನ್ಯಾಷನಲ್ ಕೌನ್ಸಿಲ್ ಅಧ್ಯಕ್ಷ ಎನ್.ಯು ನಾಚಪ್ಪ ಹೇಳಿದ್ದಾರೆ. ಆ ಮೂಲಕ ಟಿಪ್ಪುವನ್ನು ಕೊಂದಿದ್ದು ಉರಿಗೌಡ, ನಂಜೇಗೌಡ ಎನ್ನುವ ವಿವಾದಕ್ಕೆ ಹೊಸ ತಿರುವು ನೀಡಿದ್ದಾರೆ. ಈ ಕುರಿತು ಮಾತನಾಡಿರುವ ಕೊಡವ ನ್ಯಾಷನಲ್ ಕೌನ್ಸಿಲ್ ಅಧ್ಯಕ್ಷ ಎನ್.ಯು ನಾಚಪ್ಪ, ಕೊಡವರು ಉತ್ತಮ ಗುರಿ ಹೊಂದಿರುವವರಾಗಿದ್ದು, ಟಿಪ್ಪುವಿನ ವಿರುದ್ಧ ನಡೆದ ಮೊದಲನೇ ಆಂಗ್ಲೋ ಮೈಸೂರು ಯುದ್ಧ, ಎರಡನೇ ಆಂಗ್ಲೋ ಮೈಸೂರು, ಮೂರನೇ ಆಂಗ್ಲೋ ಮೈಸೂರು ಯುದ್ಧ ಹಾಗೆಯೇ ನಾಲ್ಕನೇ ಆಂಗ್ಲೋ ಮೈಸೂರು ಯುದ್ಧಗಳಲ್ಲಿ ಕೊಡವರು ಭಾಗವಹಿಸಿದ್ದರು.
undefined
ಈ ಸಂದರ್ಭ ಕೊಡವರೇ ಟಿಪ್ಪುವನ್ನು ಕೊಂದಿರಬಹದು. ಹೀಗಾಗಿ ಆ ಕ್ರೆಡಿಟ್ ಕೊಡವರಿಗೆ ಸಲ್ಲಬೇಕು ಎಂದಿದ್ದಾರೆ. ಉರಿಗೌಡ ನಂಜೇಗೌಡ ಹೆಸರು ಹೇಳಿಕೊಂಡು ಅವರಿಗೆ ಕ್ರೆಡಿಟ್ ಕೊಡುತ್ತಿರುವುದು ರಾಜಕೀಯ ಉದ್ದೇಶಕ್ಕಾಗಿ. ಉರಿಗೌಡ, ನಂಜೇಗೌಡ ಒಕ್ಕಲಿಗರಾಗಿದ್ದು, ಬಹುಸಂಖ್ಯಾತರಾಗಿರುವ ಒಕ್ಕಲಿಗರಿಗೆ ಕ್ರೆಡಿಟ್ ಕೊಟ್ಟು ರಾಜಕೀಯ ಲಾಭ ಪಡೆಯಲು ಯತ್ನಿಸಲಾಗುತ್ತಿದೆ. ಆದರೆ ಅಲ್ಪಸಂಖ್ಯಾತರಾಗಿರುವ ಕೊಡವರಿಂದ ರಾಜಕೀಯವಾಗಿ ಲಾಭವಿಲ್ಲ ಎಂದು ಈ ರೀತಿಯ ರಾಜಕೀಯ ದುರಾಲೋಚನೆಗಳನ್ನು ಮಾಡಲಾಗಿದೆ ಎಂದು ದೂರಿದರು.
ಅಲ್ಲಿ ಮಾಜಿ ಸಿಎಂ ಕುಮಾರಸ್ವಾಮಿ ಅವರು ಅಶ್ವತ್ಥನಾರಾಯಣ ಮತ್ತು ಸಿ. ಟಿ. ರವಿ ಅವರ ಹೆಸರು ಹೇಳಿ ಅವರೇ ಉರಿಗೌಡ, ನಂಜೇಗೌಡ ಎಂದರು. ಹಾಗೆಯೇ ಕೊಡಗಿನಲ್ಲಿ ಇಲ್ಲಿನ ಎಂಪಿ ಮತ್ತು ವಿರಾಜಪೇಟೆ ಶಾಸಕರ ಸೃಷ್ಟಿ ಇದು. ವಿರಾಜಪೇಟೆ ಎಂಎಲ್ಎ ಮನೆಯಿಂದ ನಂಜೇಗೌಡ ಬಂದಿದ್ದರೆ, ಎಂಪಿ ಮನೆಯಿಂದ ಉರಿಗೌಡ ಬಂದಿದ್ದಾನೆ. ಸಂಸದರಿಗೆ ಮತ್ತು ಶಾಸಕರಿಗೆ ಕೊಡವರ ಬಗ್ಗೆ ನೈಜ ಕಾಳಜಿ ಇದ್ದರೆ, ಟಿಪ್ಪುವಿನ ಮೇಲೆ ಅಷ್ಟೊಂದು ರೋಷ ಇದ್ದರೆ, ಕೊಡಗಿನ ದೇವಟು ಪರಂಬುವಿನಲ್ಲಿ ಕೊಡವ ಸ್ಮಾರಕ ಮಾಡಬೇಕಾಗಿತ್ತು. ಅದರ ಬದಲಾಗಿ ಆ ಸ್ಥಳದ ವಿರುದ್ಧವೇ ಪ್ರಕರಣ ಹಾಕಿಸಿ ಅದು ಸುಮ್ಮನೇ ಎಳೆಕೊಂಡು ಹೋಗುವಂತೆ ಮಾಡುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ನನ್ನ ಖಡ್ಗ ಕಾಫಿಗರ ರಕ್ತಕ್ಕಾಗಿ ತಹತಹಿಸುತ್ತಿದೆ: ಟಿಪ್ಪು ಖಡ್ಗದ ಮೇಲಿನ ಬರಹ ರಿವೀಲ್
ಉರಿಗೌಡ ನಂಜೇಗೌಡ ಅವರ ದ್ವಾರ ಮಾಡುತ್ತೇವೆ ಎನ್ನುವವರು ಕೊಡವ ಸ್ಮಾರಕಗಳನ್ನು ಕಟ್ಟಲಿ ಇದು ಸವಾಲು ಹಾಕಿದ್ದಾರೆ. ಸುಂಟಿಕೊಪ್ಪದ ಉಲಿಗುಲಿ, ಕುಶಾಲನಗರದ ಮುಳ್ಳುಸೋಗೆಯಲ್ಲಿ ಟಿಪ್ಪುವನ್ನು ತಡೆದು ಅಲ್ಲಿಂದ ವಾಪಸ್ ಓಡಿಸಿದ್ದೆವು. ಹೀಗಾಗಿ ಅಲ್ಲಿ ಕೊಡವ ಯುದ್ಧ ಸ್ಮಾರಕ ಮಾಡಬೇಕಾಗಿತ್ತು. ಇನ್ನು ದೇವಟು ಪರಂಬುವಿನಲ್ಲಿ ಹತ್ಯಾಕಾಂಡದ ಸ್ಮಾರಕ ಮಾಡಬೇಕಾಗಿತ್ತು. ಇದರ ಬಗ್ಗೆ ಯಾಕೆ ಕಾಳಜಿ ವಹಿಸುತ್ತಿಲ್ಲ ಎಂದು ನಾಚಪ್ಪ ಪ್ರಶ್ನಿಸಿದ್ದಾರೆ. ರಾಜಕೀಯಕ್ಕಾಗಿ ಕಾಲ್ಪನಿಕ ಪಾತ್ರಗಳನ್ನು ಸೃಷ್ಟಿ ಮಾಡಿ ಲಾಭ ಪಡೆದುಕೊಳ್ಳಲಾಗುತ್ತಿದೆ ಎಂದು ಕೊಡವ ನ್ಯಾಷನಲ್ ಕೌನ್ಸಿಲ್ ಅಧ್ಯಕ್ಷ ನಾಚಪ್ಪ ಹೇಳಿದ್ದಾರೆ.
Actor Kishore: ಒಕ್ಕಲಿಗರಿಗೂ ದೇಶದ್ರೋಹಿ ಪಟ್ಟಕಟ್ಟುವ ಹುನ್ನಾರವೇ ಎಂದು ಪ್ರಶ್ನಿಸಿದ ಕಿಶೋರ್!
ಆ ಮೂಲಕ ಉರಿಗೌಡ ನಂಜೇಗೌಡ ವಿವಾದಕ್ಕೆ ಹೊಸ ತಿರುವು ನೀಡಿದ್ದಾರೆ. ಇನ್ನು ಕೊಡಗಿನವರು ಮತ್ತು ನಿಮ್ಮದೇ ಸಮುದಾಯವರಾದ ರಂಗಾಯಣದ ನಿರ್ದೇಶಕರಾಗಿರುವ ಅಡ್ಡಂಡ ಕಾರ್ಯಪ್ಪ ಅವರು ತಮ್ಮ ಕೃತಿ ಟಿಪ್ಪುವಿನ ನಿಜ ಕನಸುಗಳು ನಾಟಕದಲ್ಲಿ ಉರಿಗೌಡ, ನಂಜೇಗೌಡರನ್ನು ಪ್ರಸ್ತಾಪಿಸಿದ್ದಾರೆ ಎನ್ನುವ ಪ್ರಶ್ನೆಗೆ ಪ್ರತಿಕ್ರಿಯಿಸಿದ ಕೊಡವ ನ್ಯಾಷನಲ್ ಕೌನ್ಸಿಲ್ ಅಧ್ಯಕ್ಷ ಎನ್.ಯು. ನಾಚಪ್ಪ ಅವರು ರಾಜಕೀಯ ಪಕ್ಷದಲ್ಲಿ ಗುರುತ್ತಿಸಿಕೊಂಡಿರುವ ನಾಟಕಗಾರ. ಹೀಗಾಗಿ ಅವರದು ಅದೇ ದಾಟಿಯಲ್ಲಿ ಬರೆದಿರಬಹುದು ಎಂದು ಹೇಳಿದ್ದಾರೆ.