ಪರಿಶಿಷ್ಟ ಸಮುದಾಯಗಳಲ್ಲಿ ಒಳ ಮೀಸಲಾತಿ ವಿಂಗಡಣೆ ವಿರೋಧಿಸಿ ನಡೆಯುತ್ತಿದ್ದ ಪ್ರತಿಭಟನೆ ತಾರಕಕ್ಕೇರಿದ್ದು, ಶಿಕಾರಿಪುರದ ಮಾಜಿ ಸಿಎಂ ಬಿಎಸ್ ವೈ ನಿವಾಸಕ್ಕೆ ಪ್ರತಿಭಟನಾಕಾರರು ಮುತ್ತಿಗೆ ಹಾಕಿ ಕಲ್ಲೆಸೆದಿದ್ದಾರೆ.
ಶಿವಮೊಗ್ಗ (ಮಾ.27): ಪರಿಶಿಷ್ಟ ಸಮುದಾಯಗಳಲ್ಲಿ ಒಳ ಮೀಸಲಾತಿ ವಿಂಗಡಣೆ ವಿರೋಧಿಸಿ ನಡೆಯುತ್ತಿದ್ದ ಪ್ರತಿಭಟನೆ ತಾರಕಕ್ಕೇರಿದ್ದು, ಶಿಕಾರಿಪುರದ ಮಾಜಿ ಸಿಎಂ ಬಿಎಸ್ ವೈ ನಿವಾಸಕ್ಕೆ ಪ್ರತಿಭಟನಾಕಾರರು ಮುತ್ತಿಗೆ ಹಾಕಿದ ಘಟನೆ ನಡೆದಿದೆ. ಮನೆ ಮುಂದೆ ಪೊಲೀಸರು ಅಳವಡಿಸಿದ್ದ ಬ್ಯಾರಿಕೇಡ್ ಗಳನ್ನು ತಳ್ಳಿ ಪ್ರತಿಭಟನಾಕಾರರು ಯಡಿಯೂರಪ್ಪ ಮನೆಗೆ ಮುತ್ತಿಗೆ ಹಾಕಿದ್ದು ಮಾತ್ರವಲ್ಲ ಅವರ ನಿವಾಸದ ಬಿಜೆಪಿ ಗೃಹ ಕಚೇರಿಯ ಮೇಲಿದ್ದ ಬಿಜೆಪಿ ಬಾವುಟವನ್ನ ತೆರವುಗೊಳಿಸಿದ ಪ್ರತಿಭಟನಾಕಾರರು ಬಂಜಾರ, ಭೋವಿ ಹಾಗೂ ಕೊರಚ ಸಮುದಾಯದ ಬಾವುಟಗಳನ್ನು ಹಾಕಿ ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮಾತ್ರವಲ್ಲ ಬಿಎಸ್‌ವೈ ಮನೆಗೆ ಕಲ್ಲು ಹೊಡೆದು ಪೊಲೀಸರು ಅಳವಡಿಸಿದ್ದ ಬ್ಯಾರಿಕೇಡ್ ಗಳನ್ನು ತಳ್ಳಿ ಮನೆಯೊಳಗೆ ನುಗ್ಗಲು ಯತ್ನಿಸಿದ ಕಾರಣ ಪ್ರತಿಭಟನಾಕಾರರ ವಿರುದ್ಧ ಪೊಲೀಸರು ಲಾಠಿ ಚಾರ್ಜ್ ಮಾಡಿದ್ದಾರೆ. ಪೊಲೀಸರ ವಿರುದ್ಧ ಕೂಡ ಪ್ರತಿಭಟನಾಕಾರರು ಕಲ್ಲು ತೂರಿದ್ದಾರೆ. ಭಿಗುವಿನ ಪರಿಸ್ಥಿತಿ ನಿಯಂತ್ರಿಸಲು ಶಿಕಾರಿಪುರ ಪಟ್ಟಣದಾದ್ಯಂತ ಸೆಕ್ಷನ್ 144 ಜಾರಿಯಾಗಿದೆ. ಶಿಕಾರಿಪುರ ತಹಶೀಲ್ದಾರ್ ವಿಶ್ವನಾಥ್ ರಿಂದ ಆದೇಶದ ಹಿನ್ನೆಲೆಯಲ್ಲಿ ಸೆಕ್ಷನ್ 144 ಜಾರಿಗೊಳಿಸಲಾಗಿದೆ.
ಪಂಚಮಸಾಲಿಗೆ 2ಡಿ ಮೀಸಲಾತಿ: ಹೋರಾಟ ಸಮಿತಿ ಇಬ್ಭಾಗದಿಂದ ಕಣ್ಣೀರಿಟ್ಟ ಸ್ವಾಮೀಜಿ
ಟೈರ್, ಸೀರೆಗಳಿಗೆ ಬೆಂಕಿ ಹಚ್ಚಿ ಆಕ್ರೋಶ: ಶಿಕಾರಿಪುರದ ಮಿನಿ ವಿಧಾನಸೌಧ, ಬಸ್ ನಿಲ್ದಾಣದ ಬಳಿ ಬಂಜಾರ ಸಮುದಾಯದ ಯುವಕರು ಪ್ರತಿಭಟನೆ ನಡೆಸಿದರು. ಸರ್ಕಾರ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಘೋಷಣೆ ಕೂಗಿದರು. ಈ ವೇಳೆ ಪಟ್ಟಣದಲ್ಲಿ ಬಿಜೆಪಿ, ಪ್ರಧಾನಿ ಮೋದಿ, ಮುಖ್ಯಮಂತ್ರಿ ಬೊಮ್ಮಾಯಿ ಸೇರಿದಂತೆ ಬಿಜೆಪಿ ನಾಯಕರ ಬ್ಯಾನರ್, ಫ್ಲೆಕ್ಸ್‌ಗಳನ್ನು ಕಿತ್ತೊಗೆದಿದ್ದಾರೆ. ಟೈರ್, ಸೀರೆಗಳಿಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ದಲಿತರಿಗೆ ಒಳ ಮೀಸಲಾತಿ, ಮುಸ್ಲಿಮರ ಒಬಿಸಿ ರದ್ದು, ಎಸ್‌ಟಿಗೆ ಕುರುಬರ ಶಿಫಾರಸು; ಯಾರಿಗೆ ಎಷ್ಟೆಷ್ಟು?
ಪ್ರತಿಭಟನಾಕಾರರು ಅಂಬೇಡ್ಕರ್ ಸರ್ಕಲ್‌ನಿಂದ ತಾಲೂಕು ಕಚೇರಿಯವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿದರು. ಘಟನೆಯಲ್ಲಿ ಪ್ರತಿಭಟನಾಕಾರರು ಮತ್ತು ಕೆಲವು ಪೊಲೀಸರು ಗಾಯಗೊಂಡಿದ್ದಾರೆ ಎಂದು ತಿಳಿದು ಬಂದಿದೆ. ಸದ್ಯ ಶಿಕಾರಿಪುರದಲ್ಲಿ ಪರಿಸ್ಥಿತಿ ನಿಯಂತ್ರಣಕ್ಕೆ ಬಂದಿದೆ ಎಂದು ತಿಳಿದುಬಂದಿದೆ.
ದಲಿತ ಒಳ ಮೀಸಲಾತಿ ಒಟ್ಟು 17% ಹಂಚಿಕೆ:
ದಲಿತ ಎಡ ಸಮುದಾಯಕ್ಕೆ (ಮಾದಿಗ + ) 6% ಮೀಸಲಾತಿ
ದಲಿತ ಬಲ ಸಮುದಾಯಕ್ಕೆ ( ಹೊಲೆಯ + ) 5.5% ಮೀಸಲಾತಿ
ಬೋವಿ, ಲಂಬಾಣಿ ಸಮುದಾಯಕ್ಕೆ (sc) 4.5% ಮೀಸಲಾತಿ
ಅಲೆಮಾರಿ ಸಣ್ಣ ಜಾತಿಗಳಿಗೆ 1% ಮೀಸಲಾತಿ