ಯೂರಿಯಾ ಗೊಬ್ಬರವನ್ನು ನಿಗದಿತ ಪ್ರಮಾಣ ಬಿಟ್ಟು ಹೆಚ್ಚಿಗೆ ಹಾಕಬಾರದು| ಮಳೆ ಬೀಳುವಾಗ ಯೂರಿಯಾ ಗೊಬ್ಬರವನ್ನು ಚೆಲ್ಲಿದರೆ ಬಹುತೇಕ ಗೊಬ್ಬರ ಬೀಳುತ್ತಲೇ ಆವಿಯಾಗಿ ಹೋಗಿ, ಬೆಳೆಗಳಿಗೆ ದೊರಕುವುದಿಲ್ಲ| ಯೂರಿಯಾ ಹಾಕಿದ ಮೇಲೆ ಮಳೆ ಕೈ ಕೊಟ್ಟರೂ ಸಮಸ್ಯೆ| ನಿಗದಿ ಪ್ರಮಾಣ ಬಿಟ್ಟು ಹೆಚ್ಚಿಗೆ ಯೂರಿಯಾ ಹಾಕಬೇಡಿ-ಕೃಷಿ ಇಲಾಖೆ ಸಲಹೆ|
ಹರಪನಹಳ್ಳಿ(ಆ.14): ತಾಲೂಕಿನಾದ್ಯಂತ ಉತ್ತಮ ಮಳೆ ಬೀಳುತ್ತಲಿದ್ದು, ಕೋವಿಡ್ ನಂತಹ ಸಂಕಷ್ಟದಲ್ಲೂ ಬೆಳೆಗಳು ನಳ ನಳಿಸುತ್ತಿವೆ. ಇದರಿಂದ ಯೂರಿಯಾ ಗೊಬ್ಬರಕ್ಕೆ ಭಾರಿ ಬೇಡಿಕೆ ಉಂಟಾಗಿದೆ.
ವಾಡಿಕೆಯಂತೆ ತಾಲೂಕಿಗೆ 5500 ಟನ್ ಯೂರಿಯಾಗೆ ಬೇಡಿಕೆ ಇತ್ತು, ಆದರೆ ಬಂದಿದ್ದು, 6300 ಟನ್, ಗುರಿ ಮೀರಿ ಬಂದರೂ ಅಷ್ಟೆಬೇಗ ಯೂರಿಯಾ ಖಾಲಿಯಾಗಿ ರೈತರು ಯೂರಿಯಾ ಬೇಕು ಎಂದು ಅಂಗಡಿ ಅಂಗಡಿ ಸುತ್ತುತ್ತಿದ್ದಾರೆ.
ರೈತರ ಬೇಡಿಕೆ ಕಂಡ ಶಾಸಕ ಜಿ. ಕರುಣಾಕರರೆಡ್ಡಿ ಅವರು ಬಳ್ಳಾರಿ, ಹೊಸಪೇಟೆ, ದಾವಣಗೆರೆ ಫೆಡರೇಷನ್‌ಗಳಿಂದ ಹೆಚ್ಚುವರಿ 500 ಟನ್ ಯೂರಿಯಾ ಗೊಬ್ಬರ ತಾಲೂಕಿಗೆ ತರುವ ವ್ಯವಸ್ಥೆ ಮಾಡಿದ್ದಾರೆ. ಆ ಪ್ರಕಾರ ಈಗಾಗಲೇ 100 ಟನ್ ಯೂರಿಯಾ ಹರಪನಹಳ್ಳಿ ತಾಲೂಕಿಗೆ ಬಂದಿದ್ದು, ಅದರಲ್ಲಿ ಹಲುವಾಗಲು ವಿಎಸ್‌ಎಸ್‌ಎನ್‌ಗೆ 25 ಟನ್ ಹಾಗೂ ಅದೇ ಗ್ರಾಮದ ಬಸವೇಶ್ವರ ಟ್ರೇಡರ್ಸಗೆ 15 ಟನ್, ಬಾಗಳಿ ಸೊಸೈಟಿಗೆ 20 ಟನ್, ಹರಪನಹಳ್ಳಿ ಪಟ್ಟಣದ ಟಿಎಪಿಸಿಎಂಎಸ್‌ಗೆ 25 ಟನ್ , ಪಾಟೀಲ್ ಟ್ರೇಡರ್ಸ್‌ಗೆ 15 ಟನ್ ಹೀಗೆ ಕೃಷಿ ಇಲಾಖೆಯಿಂದ ಹಂಚಿಕೆ ಮಾಡಲಾಗಿದೆ ಎಂದು ಇಲ್ಲಿಯ ಸಹಾಯಕ ಕೃಷಿ ನಿರ್ದಶಕ ಮಂಜುನಾಥ ಗೊಂದಿ ತಿಳಿಸಿದ್ದಾರೆ.
'ಬೆಂಗಳೂರು ಹಿಂಸಾಚಾರಕ್ಕೆ ಮಾಜಿ ಸಿಎಂ ಸಿದ್ದರಾಮಯ್ಯ ಕಾರಣಿಕರ್ತ'
ಇನ್ನೂ 400 ಟನ್ ಯೂರಿಯಾ ಭಾನುವಾರದೊಳಗೆ ತಾಲೂಕಿಗೆ ಆಗಮಿಸುತ್ತಲಿದೆ ಎಂದು ಅವರು ಹೇಳಿದರು. ಯೂರಿಯಾ ಗೊಬ್ಬರವನ್ನು ನಿಗದಿತ ಪ್ರಮಾಣ ಬಿಟ್ಟು ಹೆಚ್ಚಿಗೆ ಹಾಕಬಾರದು, ಅದರಲ್ಲೂ ಮೆಕ್ಕೆಜೋಳ ಸೂಲಂಗಿ ಬರುವ ಸಂದರ್ಭದಲ್ಲಿ ಹಾಕಲೇಬಾರದು ಎಂದು ಅವರು ಸಲಹೆ ನೀಡುತ್ತಾರೆ.
ಮಳೆ ಬೀಳುವಾಗ ಯೂರಿಯಾ ಗೊಬ್ಬರವನ್ನು ಚೆಲ್ಲಿದರೆ ಬಹುತೇಕ ಗೊಬ್ಬರ ಬೀಳುತ್ತಲೇ ಆವಿಯಾಗಿ ಹೋಗಿ, ಬೆಳೆಗಳಿಗೆ ದೊರಕುವುದಿಲ್ಲ, ಯೂರಿಯಾ ಹಾಕಿದ ಮೇಲೆ ಮಳೆ ಕೈ ಕೊಟ್ಟರೂ ಸಮಸ್ಯೆಯಾಗುತ್ತದೆ. ಆದ್ದರಿಂದ ನಮ್ಮ ಕೃಷಿ ಅಧಿಕಾರಿಗಳ ಸಲಹೆ ಪ್ರಕಾರ ನಿಗದಿತ ಪ್ರಮಾಣದಲ್ಲಿ ಮಾತ್ರ ಹಾಕಬೇಕು ಎಂದು ಅವರು ರೈತರಿಗೆ ತಿಳಿಸಿದ್ದಾರೆ.