* ಅಸ್ಪೃಶ್ಯತೆ ಇಂದಿಗೂ ಜೀವಂತ
* ದಲಿತರು ಹೊಟೇಲ್, ಸಲೂನ್, ಮಠ-ಮಂದಿರ ಪ್ರವೇಶಿಸುವಂತಿಲ್ಲ
* ಗದಗ ಜಿಲ್ಲೆಯ ಶಿರಹಟ್ಟಿ ಮತಕ್ಷೇತ್ರದ ಬಿಜೆಪಿ ಶಾಸಕ ರಾಮಣ್ಣ ಲಮಾಣಿ
ಅಶೋಕ ಸೊರಟೂರ
ಲಕ್ಷ್ಮೇಶ್ವರ(ಮೇ.13):ಶಿರಹಟ್ಟಿ ಮತಕ್ಷೇತ್ರದ ಶಾಸಕ ರಾಮಣ್ಣ ಲಮಾಣಿ ಅವರ ಸ್ವಗ್ರಾಮ ಕುಂದ್ರಳ್ಳಿಯಲ್ಲಿಯೇ ಅಸ್ಪೃಶ್ಯತೆ ಇಂದಿಗೂ ಜೀವಂತವಾಗಿದ್ದು, ಅಲ್ಲಿನ ದಲಿತರು ಹೊಟೇಲ್, ಸಲೂನ್, ಮಠ-ಮಂದಿರ ಪ್ರವೇಶಿಸುವಂತಿಲ್ಲ!
undefined
ತಾಲೂಕಿನ ಬಟ್ಟೂರ ಗ್ರಾಪಂ ವ್ಯಾಪ್ತಿಯಲ್ಲಿನ ಕುಂದ್ರಳ್ಳಿ ಚಿಕ್ಕ ಗ್ರಾಮ. 300ಕ್ಕೂ ಹೆಚ್ಚು ಕುಟುಂಬಗಳಿದ್ದು, ಅದರಲ್ಲಿ ಸುಮಾರು 50 ದಲಿತ ಕುಟುಂಬಗಳಿವೆ. ಅಲ್ಲಿನ 2 ಕ್ಷೌರಿಕರ ಅಂಗಡಿಗಳಲ್ಲೂ ಮಾದಿಗ ಸಮಾಜದವರ ಕ್ಷೌರಿಕ ಮಾಡುವುದಿಲ್ಲ. ಈ ವಿಷಯವಾಗಿ ಊರ ಹಿರಿಯರ ಮುಂದೆ ಏನೆಲ್ಲ ಪಂಚಾಯತಿ, ದೂರು, ಮನವಿ ಸಲ್ಲಿಕೆಯಾದರೂ ಅಲ್ಲಿನ ಅಸ್ಪೃಶ್ಯತೆ ನೀಗದಿರುವುದು ದಲಿತರನ್ನು ಆಕ್ರೋಶಗೊಳ್ಳುವಂತೆ ಮಾಡಿದೆ.
ಕಳೆದ ಮಂಗಳವಾರ ಗ್ರಾಮದ ಕ್ಷೌರಿಕರ ಅಂಗಡಿಗೆ ದಲಿತ ಯುವಕರು ಹೋಗಿ ಕ್ಷೌರ ಮಾಡುವಂತೆ ಕೇಳಿದ್ದಾರೆ. ಆಗ ಕ್ಷೌರಿಕನು ನಾನು ನಿಮ್ಮ ಜನಾಂಗದವರ ಕ್ಷೌರ ಮಾಡುವುದಿಲ್ಲ ಎಂದು ನಿರಾಕರಿಸಿದ್ದಾನೆ. ಆಗ ದಲಿತ ಯುವಕರು ಆಕ್ಷೇಪಿಸಿದ್ದಾರೆ. ಉಭಯರ ಮಧ್ಯೆ ಮಾತಿಗೆ ಮಾತು ಬೆಳೆದು ಸಣ್ಣ ಪ್ರಮಾಣದಲ್ಲಿ ಜಗಳವೂ ಆಗಿದೆ.
ಮುಂಡರಗಿ: ದಲಿತರು ಚಹಾ ಕುಡಿದ ಕಪ್ ತೊಳೆದ ತಹಸೀಲ್ದಾರ್
ಆಗ ಕ್ಷೌರಿಕನು ಗ್ರಾಮದ ಹಿರಿಯರ ಒಪ್ಪಿಗೆ ಪಡೆದುಕೊಂಡು ಬಂದಲ್ಲಿ ಮಾತ್ರ ನಿಮ್ಮ ಕ್ಷೌರ ಮಾಡುವುದಾಗಿ ಹೇಳಿದ್ದಾನೆ. ನಾವೇಕೆ ಅವರ ಒಪ್ಪಿಗೆ ಪಡೆದು ಬರಬೇಕು ? ಎಂದು ಆ ಯುವಕರು ಕ್ಷೌರಿಕನಿಗೆ ತರಾಟೆಗೆ ತೆಗೆದುಕೊಂಡಿದ್ದಾರೆ.
ಶಾಸಕರ ಸ್ವಗ್ರಾಮದಲ್ಲಿ ದಲಿತರ ಕ್ಷೌರ ಮಾಡುವುದಿಲ್ಲ ಎಂದರೆ ಬೇರೆ ಗ್ರಾಮಗಳಲ್ಲಿನ ದಲಿತರ ಸ್ಥಿತಿ ಹೇಗಿರಬೇಡ ಎನ್ನುವುದು ಅಲ್ಲಿನ ದಲಿತರ ಪ್ರಶ್ನೆ.
ಕುಂದ್ರಳ್ಳಿ ಗ್ರಾಮದಲ್ಲಿ ದಲಿತರ ಕ್ಷೌರ ಮಾಡದಿರುವ ಬಗ್ಗೆ ನನ್ನ ಗಮನಕ್ಕೆ ಬಂದಿಲ್ಲ. ಇಂತಹ ಸಮಸ್ಯೆಗಳು ಏನಾದರು ಕಂಡುಬಂದಲ್ಲಿ ಗ್ರಾಮದ ಎಲ್ಲ ಸಮಾಜದ ಹಿರಿಯರೊಂದಿಗೆ ಚರ್ಚಿಸಿ ಸಮಸ್ಯೆ ಪರಿಹರಿಸಲಾಗುವುದು ಎಂದು ಶಿರಹಟ್ಟಿ ಶಾಸಕ ರಾಮಣ್ಣ ಲಮಾಣಿ ತಿಳಿಸಿದ್ದಾರೆ.