
ಮಂಗಳೂರು: ಈ ಭಾಗದಲ್ಲಿ ರೈಲ್ವೆ, ಬಂದರು ಮತ್ತು ಕೈಗಾರಿಕೆಗಳ ಸಮಗ್ರ ಅಭಿವೃದ್ಧಿಗಾಗಿ 25 ವರ್ಷಗಳ ಮಾಸ್ಟರ್ ಪ್ಲಾನ್ ರೂಪಿಸಬೇಕು. ಮಾಸ್ಟರ್‌ಪ್ಲಾನ್ ಸಿದ್ಧವಾದ ನಂತರ ನಾವು ಅದನ್ನು ಹಂತಹಂತವಾಗಿ ಕಾರ್ಯಗತಗೊಳಿಸಬಹುದು ಎಂದು ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಸಲಹೆ ನೀಡಿದರು. ಅವರು ಶುಕ್ರವಾರ ಮಂಗಳೂರಿನ ಜಿಲ್ಲಾಧಿಕಾರಿ ಕಚೇರಿಯಲ್ಲಿ ಅಧಿಕಾರಿಗಳ ಹಾಗೂ ಪ್ರಮುಖರ ಸಭೆ ನಡೆಸಿ ಮಾತನಾಡಿದರು.
ಇಲ್ಲಿನ ಸ್ಥಳೀಯ ಕೈಗಾರಿಕೆಗಳು, ಮಂಗಳೂರು ಬಂದರು ಮತ್ತು ಸಾರ್ವಜನಿಕರೊಂದಿಗೆ ಸಮಗ್ರ ಸಮಾಲೋಚನೆ ನಡೆಸಿ ಸಂಸದರ ಮುಂದಾಳತ್ವದಲ್ಲಿ ಮಾಸ್ಟರ್ ಪ್ಲಾನ್ ರೂಪಿಸುವಂತೆ ಹಾಗೂ ಅದನ್ನು ಮುನ್ನಡೆಸುವಂತೆ ಮತ್ತು ಇದಕ್ಕೆ ನಮ್ಮ ಸಹಕಾರ ನೀಡುವುದಾಗಿ ಅವರು ತಿಳಿಸಿದರು.
ಮಂಗಳೂರು ಜಂಕ್ಷನ್, ಮಂಗಳೂರು ಸೆಂಟ್ರಲ್, ಉಡುಪಿ ನಿಲ್ದಾಣ ಹಾಗೂ ಈ ಮಾರ್ಗದ ಇತರ ಹಲವು ನಿಲ್ದಾಣಗಳ ಅಭಿವೃದ್ಧಿ ಕಾಮಗಾರಿಯನ್ನು ನಾವು ಕೈಗೆತ್ತಿಕೊಂಡಿದ್ದೇವೆ. ಇದರ ಜೊತೆಗೆ ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಸಮೀಪ ಹೊಸ ರೈಲು ನಿಲ್ದಾಣವನ್ನು ನಿರ್ಮಿಸಲಾಗುವುದು. ಈ ಅಭಿವೃದ್ಧಿ ಕಾರ್ಯಗಳ ಕುರಿತು ಸಂಸದರು ಕಾಲಕಾಲಕ್ಕೆ ಮಾಹಿತಿ ನೀಡಲಿದ್ದಾರೆ ಎಂದರು.
ದಕ್ಷಿಣ ರೈಲ್ವೆ ಮತ್ತು ನೈಋತ್ಯ ರೈಲ್ವೆ ನಡುವಿನ ಹಳೆಯ ಗೊಂದಲ ಮತ್ತು ಸಮನ್ವಯದ ಕೊರತೆಯಿಂದ ಹಲವು ಸಮಸ್ಯೆಗಳಿಗೆ ಕಾರಣವಾಗಿತ್ತು ಮತ್ತು ಮಂಗಳೂರಿನ ಅಭಿವೃದ್ಧಿ ಕುಂಠಿತವಾಗಲು ಮುಖ್ಯ ಕಾರಣವಾಗಿತ್ತು. ಇತ್ತೀಚೆಗೆ ಬಗೆಹರಿಸಲಾಗಿದೆ. ಇದೀಗ ಮಂಗಳೂರು ಅಧಿಕೃತವಾಗಿ ನೈಋತ್ಯ ರೈಲ್ವೆ ವ್ಯಾಪ್ತಿಗೆ ಒಳಪಟ್ಟಿದೆ. ಕಳೆದ 35 ವರ್ಷಗಳಿಂದ ಇದಕ್ಕಾಗಿ ಪ್ರಯತ್ನಿಸಲಾಗುತ್ತಿತ್ತು, ಅದು ಈಗ ಅಂತಿಮವಾಗಿ ಸಾಕಾರಗೊಂಡಿದೆ. ಇಂತಹ ದೃಢ ನಿರ್ಧಾರ ನಮ್ಮ ಸರ್ಕಾರದಿಂದ ಸಾಧ್ಯವಾಗಿದೆ ಎಂದರು.
ಬೆಂಗಳೂರು-ಮಂಗಳೂರು ರೈಲು ಮಾರ್ಗದ ದ್ವಿಪಥೀಕರಣ ನಾವು ಕೈಗೆತ್ತಿಕೊಂಡಿರುವ ಇನ್ನೊಂದು ಪ್ರಮುಖ ಯೋಜನೆ. ಇದು ಅತ್ಯಂತ ಮಹತ್ವದ್ದಾಗಿದೆ. ಸವಾಲಿನ ಘಾಟ್ ಪ್ರದೇಶದ ನಡುವೆಯೂ, ಈ ಭಾಗದ ವಿಸ್ತೃತ ಯೋಜನಾ ವರದಿ ಸಿದ್ಧಪಡಿಸುವ ಕಾರ್ಯ ಪ್ರಗತಿಯಲ್ಲಿದೆ. ಪೂರ್ಣ ಡಿಪಿಆರ್‌ಗಾಗಿ ಕಾಯುವ ಅಗತ್ಯವಿಲ್ಲ, ಎಲ್ಲಿ ಯಾವುದೇ ದೊಡ್ಡ ಅಡೆತಡೆಗಳಿಲ್ಲದ ಸಮತಟ್ಟಾದ ಪ್ರದೇಶವಿದೆಯೋ, ಅಲ್ಲಿ ಕಾಮಗಾರಿ ಶೀಘ್ರವಾಗಿ ಪ್ರಾರಂಭಿಸುವ ಬಗ್ಗೆ ಕ್ರಮ ವಹಿಸಲಾಗುವುದು ಎಂದರು.
ಸಬೆಯಲ್ಲಿ ಮಂಗಳೂರು ಭಾಗದ ಸಮಗ್ರ ಅಭಿವೃದ್ಧಿ ಬಗ್ಗೆ ಸಮಾಲೋಚನೆ, ಚರ್ಚೆ ನಡೆಸಲಾಯಿತು. ದ.ಕ. ಸಂಸದ ಕ್ಯಾ.ಬ್ರಿಜೇಶ್ ಚೌಟ, ಉಡುಪಿ ಸಂಸದ ಕೋಟ ಶ್ರೀನಿವಾಸ ಪೂಜಾರಿ, ಜಿಲ್ಲಾಧಿಕಾರಿ ದರ್ಶನ್, ರೈಲ್ವೆ ಅಧಿಕಾರಿಗಳು, ಶಾಸಕರು, ವಿಧಾನ ಪರಿಷತ್ ಸದಸ್ಯರು, ಮತ್ತಿತರರು ಇದ್ದರು.
ಮಂಗಳೂರು- ಬೆಂಗಳೂರು ನಡುವಿನ ರೈಲು ಹಳಿಯನ್ನು ದ್ವಿಗುಣಗೊಳಿಸುವ ಡಿಪಿಆರ್ ಪ್ರಕ್ರಿಯೆ ಈಗಾಗಲೇ ಆರಂಭಗೊಂಡಿದ್ದು, ಶೀಘ್ರವೇ ಡಿಪಿಆರ್ ಅನ್ನು ಸಿದ್ಧಪಡಿಸಿ ಕಾಮಗಾರಿಯನ್ನು ಆರಂಭಿಸಲಾಗುವುದು. ಈ ರೈಲ್ವೆ ಲೈನ್ ಅಭಿವೃದ್ಧಿಪಡಿಸಲು ಇಲಾಖೆ ಬದ್ಧವಾಗಿದೆ. ಮುಂದಿನ ದಿನಗಳಲ್ಲಿ ಮಂಗಳೂರಿನ ರೈಲ್ವೇ ಅಭಿವೃದ್ಧಿಗೆ ಕೇಂದ್ರದಿಂದ ಎಲ್ಲಾ ರೀತಿಯ ಸಹಕಾರಗಳನ್ನು ನೀಡಲಾಗುವುದು ಎಂದು ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಹೇಳಿದರು.
ಅವರು ಶುಕ್ರವಾರ ಅಪರಾಹ್ನ 2.55ಕ್ಕೆ ವಂದೇ ಭಾರತ್ ಎಕ್ಸ್ ಪ್ರೆಸ್ ರೈಲಿನ ಮೂಲಕ ಕಬಕ ಪುತ್ತೂರು ರೈಲ್ವೇ ನಿಲ್ದಾಣಕ್ಕೆ ಆಗಮಿಸಿದರು. ನಿಲ್ದಾಣದಲ್ಲಿ ಸುಮಾರು 20 ನಿಮಿಷಗಳ ಕಾಲ ಉಪಸ್ಥಿತರಿದ್ದ ಅವರು ಕಬಕ ಪುತ್ತೂರು ರೈಲು ನಿಲ್ದಾಣದಿಂದ ನೂತನವಾಗಿ ಪುನರಾಭಿವೃದ್ಧಿಗೊಂಡ ಸುಬ್ರಹ್ಮಣ್ಯ ರೋಡ್ ರೈಲು ನಿಲ್ದಾಣಕ್ಕೆ ಚಾಲನೆ ನೀಡಿದರು.
ಬಳಿಕ ನಿಲ್ದಾಣದಲ್ಲಿ ಸೇರಿದ್ದ ಪಕ್ಷದ ಕಾರ್ಯಕರ್ತ ಹಾಗೂ ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡಿ, ಮಂಗಳೂರು ಜಿಲ್ಲೆಯವರು ಒಬ್ಬ ಧೀಮಂತ ಸಂಸದರನ್ನು ಹೊಂದಿದ್ದೀರಿ. ಕ್ಯಾ. ಬ್ರಿಜೇಶ್ ಚೌಟ ಅವರು ಡೈನಾಮಿಕ್ ಸಂಸತ್ ಸದಸ್ಯರಾಗಿ ಕೆಲಸ ಮಾಡುತ್ತಿದ್ದಾರೆ ಎಂದು ಅಭಿನಂದಿಸಿದರು.
ದ.ಕ. ಸಂಸದ ಕ್ಯಾ.ಬ್ರಿಜೇಶ್ ಚೌಟ ಮಾತನಾಡಿ, ರೈಲ್ವೇ ಸಚಿವ ಅಶ್ವಿನಿ ವೈಷ್ಣವ್ ಕಳೆದ ಒಂದೆರಡು ವರ್ಷಗಳಲ್ಲಿ ಅನೇಕ ಐತಿಹಾಸಿಕ ನಿರ್ಧಾರಗಳನ್ನು ಕೈಗೊಂಡಿದ್ದಾರೆ. ಮಂಗಳೂರು-ಸುಬ್ರಹ್ಮಣ್ಯ ಪ್ಯಾಸೆಂಜರ್ ರೈಲಿನ ನಿರ್ಧಾರ ಕೈಗೊಂಡಿರುವ ಸಚಿವರು ಈಗ ಸುಬ್ರಹ್ಮಣ್ಯ- ಸಕಲೇಶಪುರ ನಡುವಿನ ಘಾಟಿ ಸೆಕ್ಷನ್‌ನಲ್ಲಿ ಪೂರ್ತಿ ಹಳಿ ವಿದ್ಯುದೀಕರಣ ಮಾಡಿ ವಂದೇ ಭಾರತ್ ರೈಲು ಬರಲು ಅವಕಾಶ ಮಾಡಿಕೊಟ್ಟಿದ್ದಾರೆ. ರು. 98 ಕೋಟಿ ವೆಚ್ಚದಲ್ಲಿ ಮಂಗಳೂರು ಸೆಂಟ್ರಲ್ ನಿಲ್ದಾಣ ಅಭಿವೃದ್ಧಿ ಮಾಡುವುದಾಗಿ ಸಚಿವರು ಘೋಷಿಸಿದ್ದಾರೆ ಎಂದರು.
ಮುಂದೆ ಮಂಗಳೂರು-ಬೆಂಗಳೂರು ಮಧ್ಯೆ ಹಳಿ ದ್ವಿಗುಣ ಯೋಜನೆ ಮಾಡಲಿದ್ದಾರೆ. ಇದಕ್ಕಾಗಿ ಡಿಪಿಆರ್ ಆರಂಭಗೊಂಡಿದ್ದು, ಅದು ಪೂರ್ತಿಯಾಗುವವರೆಗೆ ಕಾಯದೆ ಹಂತ ಹಂತವಾಗಿ ಹಳಿ ಡಬಲಿಂಗ್ ಯೋಜನೆ ಕಾರ್ಯಗತಗೊಳಿಸುವುದಾಗಿ ತಿಳಿಸಿದ್ದಾರೆ ಎಂದು ತಿಳಿಸಿದರು.
ಕಾರ್ಯಕ್ರಮ ಮುಗಿಸಿ ತೆರಳುವ ಸಂದರ್ಭದಲ್ಲಿ ಸಚಿವ ಅಶ್ವಿನಿ ವೈಷ್ಣವ್ ಅವರು ನಿಲ್ದಾಣದಲ್ಲಿನ ಫ್ಲಾಟ್‌ಫಾರಂ ಸ್ಟಾಲ್‌ಗ್ ತೆರಳಿ ಅಲ್ಲಿನ ಸಿಬ್ಬಂದಿ ಜೊತೆಗೆ ಮಾತನಾಡಿದರು. ಬಳಿಕ ಸುಬ್ರಹ್ಮಣ್ಯ ರೋಡ್ ರೈಲ್ವೇ ನಿಲ್ದಾಣಕ್ಕೆ ರೈಲಿನಲ್ಲಿ ಪ್ರಯಾಣ ಮುಂದುವರಿಸಿದರು.