ರಾಜ್ಯ ಸರ್ಕಾರ ನಮ್ಮ ಬೇಡಿಕೆಗೆ ಸ್ಪಂದಿಸಿಲ್ಲ, ನಾನು ದೇಹ ತ್ಯಾಗ ಮಾಡಿಯೇ ತೀರುತ್ತೇನೆ: ಜೈನ ಮುನಿ ಗುಣಧರನಂದಿ!

Published : Nov 14, 2026, 12:58 PM IST
Jain Acharya Sri Gunadharanandi Maharaja

ಸಾರಾಂಶ

ಜೈನ ನಿಗಮ ಮಂಡಳಿ ಸ್ಥಾಪನೆ ಸೇರಿದಂತೆ ಐದು ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಜೈನ ಮುನಿ ಬೃಹತ್ ಪಾದಯಾತ್ರೆ. ಬೇಡಿಕೆ ಈಡೇರದಿದ್ದರೆ ಸಲ್ಲೇಖನ ವ್ರತದ ಮೂಲಕ ದೇಹತ್ಯಾಗದ ಎಚ್ಚರಿಕೆ ಕೊಟ್ಟ ಗುಣಧರನಂದಿ ಮಹಾರಾಜರ.

ಹುಬ್ಬಳ್ಳಿ: ಜೈನ ಸಮುದಾಯದ ಬಹುದಿನಗಳ ನ್ಯಾಯಯುತ ಬೇಡಿಕೆಗಳನ್ನು ಈಡೇರಿಸುವಲ್ಲಿ ರಾಜ್ಯ ಸರ್ಕಾರ ತೀವ್ರ ನಿರ್ಲಕ್ಷ್ಯವಹಿಸುತ್ತಿದೆ. ಜೈನ ನಿಗಮ ಮಂಡಳಿ ಸ್ಥಾಪನೆ ಸೇರಿದಂತೆ ಐದು ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಡಿ.4ರಂದು ಚಿಕ್ಕೋಡಿಯಿಂದ ಬೆಳಗಾವಿಯ ಸುವರ್ಣಸೌಧದ ವರೆಗೆ ಬೃಹತ್ ಪಾದಯಾತ್ರೆ ಹಮ್ಮಿಕೊಳ್ಳಲಾಗಿದ್ದು, ಬೇಡಿಕೆ ಈಡೇರದಿದ್ದರೆ ಸುವರ್ಣಸೌಧದ ಎದುರು ಸಲ್ಲೇಖನ ವ್ರತ ಕೈಗೊಳ್ಳಲಾಗುವುದು ಎಂದು ವರೂರಿನ ಆಚಾರ್ಯ ಗುಣಧರನಂದಿ ಮಹಾರಾಜರು ಎಚ್ಚರಿಕೆ ನೀಡಿದ್ದಾರೆ.

ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಜೈನ ನಿಗಮ ಮಂಡಳಿ ಸ್ಥಾಪನೆ, ಸಾಧು-ಸಂತರಿಗೆ ರಕ್ಷಣೆ, ಬಡ ಜೈನ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿನಿಲಯ ಹಾಗೂ ಜೈನ ಸಾಧು-ಸಂತರ ರಾತ್ರಿ ವಾಸ್ತವ್ಯಕ್ಕೆ ವ್ಯವಸ್ಥೆ ಸೇರಿದಂತೆ ಐದು ಬೇಡಿಕೆಗಳ ಈಡೇರಿಕೆಗೆ ಹಲವು ಬಾರಿ ಸರ್ಕಾರದ ಗಮನ ಸೆಳೆಯಲಾಗಿದೆ. ಆದರೂ ಸ್ಪಂದನೆ ದೊರೆತಿಲ್ಲ. ಬೇಡಿಕೆ ಈಡೇರುವವರೆಗೂ ಹೋರಾಟ ಕೈಬಿಡುವುದಿಲ್ಲ. ಡಿಸೆಂಬರ್ 4ರಂದು ಚಿಕ್ಕೋಡಿಯಿಂದ ಬೆಳಗಾವಿಯ ಸುವರ್ಣ ಸೌಧದವರೆಗೆ ಬೃಹತ್ ಪಾದಯಾತ್ರೆ ನಡೆಸಲಾಗುವುದು. ಮೂರು ದಿನಗಳಲ್ಲಿ ಪಾದಯಾತ್ರೆ ಬೆಳಗಾವಿ ತಲುಪಲಿದ್ದು, ಗಡುವಿನೊಳಗೆ ಸರ್ಕಾರ ಬೇಡಿಕೆಗಳಿಗೆ ಸ್ಪಂದಿಸದಿದ್ದರೆ, ಸುವರ್ಣಸೌಧದ ಎದುರು ಆಮರಣಾಂತ ಸತ್ಯಾಗ್ರಹ ನಡೆಸಿ, ದೇಹತ್ಯಾಗಕ್ಕೂ ಸಿದ್ಧ ಎಂದು ಎಚ್ಚರಿಕೆ ನೀಡಿದರು.

ಜೈನ ಸಮಾಜದಲ್ಲಿ ಎಲ್ಲರೂ ಶ್ರೀಮಂತರಲ್ಲ. ಶೇ.90ರಷ್ಟು ಜನರು ಬಡವರ್ಗಕ್ಕೆ ಸೇರಿದವರಾಗಿದ್ದಾರೆ. ಅವರ ಶೈಕ್ಷಣಿಕ ಹಾಗೂ ಸಾಮಾಜಿಕ ಅಭಿವೃದ್ಧಿಗಾಗಿ ಹಲವು ವರ್ಷಗಳಿಂದ ಪ್ರಯತ್ನಿಸಲಾಗುತ್ತಿದೆ. ಬಡವರ ಪರ ಇರಬೇಕಾದ ಸರ್ಕಾರವೇ ನಿರ್ಲಕ್ಷ್ಯ ವಹಿಸಿರುವುದು ಬೇಸರದ ಸಂಗತಿ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಈ ಹಿಂದೆಯೂ ಬೇಡಿಕೆಗಳ ಈಡೇರಿಕೆಗಾಗಿ ಹೋರಾಟ ಹಾಗೂ ಸಲ್ಲೇಖನ ವ್ರತ ಆರಂಭಿಸುವುದಾಗಿ ತಿಳಿಸಿದ್ದೆ. ಆಗ ಸಚಿವರಾದ ಸಂತೋಷ ಲಾಡ್‌, ಸತೀಶ ಜಾರಕಿಹೊಳಿ ಹಾಗೂ ಲಕ್ಷ್ಮೀ ಹೆಬ್ಬಾಳಕರ ಕರೆ ಮಾಡಿ ಸಮಸ್ಯೆ ಪರಿಹರಿಸುವ ಭರವಸೆ ನೀಡಿದ್ದರು. ಆದರೆ, ನಂತರ ಯಾವುದೇ ಬೆಳವಣಿಗೆಯಾಗಿಲ್ಲ. ಹೀಗಾಗಿ ನ.19ರಂದು ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲೂಕಿನ ತೇರದಾಳದಲ್ಲಿ ಜೈನ ಸಮಾಜದ ಪ್ರಮುಖರ ಮಹತ್ವದ ಪೂರ್ವಭಾವಿ ಸಭೆ. ಮತ್ತು ಕಾಗವಾಡ ಮತ್ತು ಅಥಣಿ ಕ್ಷೇತ್ರಗಳ ಶಾಸಕರಿಗೆ ಸಮುದಾಯದ ಬೇಡಿಕೆಗಳ ಕುರಿತು ಹಕ್ಕೊತ್ತಾಯದ ಮನವಿ ಪತ್ರ ಸಲ್ಲಿಸಲಾಗುವುದು.ಡಿ.4ರಂದು ಚಿಕ್ಕೋಡಿಯಿಂದ ಬೆಳಗಾವಿ ಸುವರ್ಣ ಸೌಧದವರೆಗೆ ನಿರ್ಣಾಯಕ ಬೃಹತ್ ಪಾದಯಾತ್ರೆ ನಡೆಸಲಾಗುವುದು ಎಂದು ಗುಣಧರನಂದಿ ಮುನಿಮಹಾರಾಜರು ಸರ್ಕಾರಕ್ಕೆ ಅಂತಿಮ ಎಚ್ಚರಿಕೆ ನೀಡಿದರು.

ಶಿಕ್ಷಣ ಸಚಿವರನ್ನು ವಜಾಗೊಳಿಸಿ:

ಜೈನ ಸನ್ಯಾಸಿಗಳು ವಿಹಾರ (ಪಾದಯಾತ್ರೆ) ನಡೆಸುವ ಸಂದರ್ಭದಲ್ಲಿ ಸ್ಥಳೀಯ ಸರ್ಕಾರಿ ಶಾಲೆಗಳಲ್ಲಿ ರಾತ್ರಿ ವಾಸ್ತವ್ಯಕ್ಕೆ ಅನುಮತಿ ನೀಡುವಂತೆ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರಿಗೆ ಮನವಿ ಮಾಡಲಾಗಿತ್ತು. ಆದರೆ, ಸಚಿವರು ಇದಕ್ಕೆ ಕಿಂಚಿತ್ತೂ ಸ್ಪಂದಿಸದೆ, ಸನ್ಯಾಸಿಗಳಿಗೆ ಅಗೌರವ ತೋರಿದ್ದಾರೆ. ಇಂತಹ ಸಚಿವರನ್ನು ತಕ್ಷಣ ಸಂಪುಟದಿಂದ ವಜಾಗೊಳಿಸಬೇಕು, ಇಲ್ಲದಿದ್ದರೆ ಅವರ ವಿರುದ್ಧವೇ ರಾಜ್ಯಾದ್ಯಂತ ಹೋರಾಟ ರೂಪಿಸಬೇಕಾಗುತ್ತದೆ ಎಂದು ಎಚ್ಚರಿಸಿದರು. ಮತ್ತು ವಿಹಾರ ನಡೆಸುವ ಜೈನ ಸನ್ಯಾಸಿಗಳಿಗೆ ಸೂಕ್ತ ಪೊಲೀಸ್ ಭದ್ರತೆ ಒದಗಿಸುವಂತೆ ಗೃಹ ಸಚಿವರಿಗೂ ಆಗ್ರಹಿಸಿದರು.

ಪ್ರಮುಖ ಬೇಡಿಕೆಗಳು ಏನು?

ಜೈನ ನಿಗಮ ಮಂಡಳಿ ಸ್ಥಾಪನೆ ಮಾಡಬೇಕು

ಜೈನ ಸಾಧು-ಸಂತರಿಗೆ ಸರ್ಕಾರ ರಕ್ಷಣೆ ನೀಡಬೇಕು

ಬಡ ಜೈನ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿನಿಲಯ ಕಟ್ಟಿಸಿ

ಶ್ರೀಗಳಿಗೆ ಶಾಲೆಗಳಲ್ಲಿ ರಾತ್ರಿ ವಾಸ್ತವ್ಯಕ್ಕೆ ವ್ಯವಸ್ಥೆ ಬೇಕು

ಬೇಡಿಕೆಗೆ ಸ್ಪಂದಿಸದ ಸಚಿವ ಮಧು ವಜಾ ಮಾಡಬೇಕು

ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಡಿ.4ರಿಂದ ಪಾದಯಾತ್ರೆ

PREV
Read more Articles on
click me!

Recommended Stories

ಕಾರವಾರ: ಹೇರ್ ಕಟಿಂಗ್ ಶಾಪ್‌ಗೆ ಬಂದ 10 ವರ್ಷದ ಬಾಲಕಿಗೆ ಕಿರುಕುಳ, ಪೊಕ್ಸೊ ಕೇಸ್ ದಾಖಲಾಗುತ್ತಿದ್ದಂತೆ ಆರೋಪಿ ಎಸ್ಕೇಪ್!
ಉಡುಪಿಗೆ ಬಂದ ಭೂಗತ ಪಾತಕಿ ರವಿ ಪೂಜಾರಿ, ತಾಯಿಯ ಮೃತದೇಹದ ಮುಂದೆ ಬಿಕ್ಕಿ ಬಿಕ್ಕಿ ಅತ್ತ ಗ್ಯಾಂಗ್‌ಸ್ಟರ್