
ಬೆಂಗಳೂರು(ಏ.14): ಅಮೃತ ನಗರೋತ್ಥಾನ ಯೋಜನೆಯಡಿ ಕೋರಮಂಗಲದ ಮೇಸ್ತಿಪಾಳ್ಯ ಕೆರೆ ಸೇರಿದಂತೆ ಬೆಂಗಳೂರು(Bengaluru) ನಗರ ಜಿಲ್ಲೆಯ ಸುಮಾರು 75 ಕೆರೆಗಳನ್ನು ಪುನಶ್ಚೇತನಗೊಳಿಸಲು ಉದ್ದೇಶಿಸಲಾಗಿದೆ ಎಂದು ಕೇಂದ್ರ ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ ಸಚಿವ ರಾಜೀವ್ ಚಂದ್ರಶೇಖರ್(Rajeev Chandrasekhar) ಹೇಳಿದರು. ಮಂಗಳವಾರ ನಗರದ ಕನಕಪುರ ರಸ್ತೆಯ ಗುಬ್ಬಲಾಳ ಕೆರೆ, ಕೆಂಪೇಗೌಡ ನಗರದ ಐತಿಹಾಸಿಕ ಕೆಂಪಾಂಬುಧಿ ಕೆರೆ ಮತ್ತು ಕೋರಮಂಗಲದ ಮೇಸ್ತ್ರಿಪಾಳ್ಯದ ಕೆರೆಗಳ ಪ್ರದೇಶಕ್ಕೆ ಭೇಟಿ ನೀಡಿ ಅವರು ಅಭಿವೃದ್ಧಿಗೊಳಿಸುವ ಕುರಿತು ಪರಿಶೀಲಿಸಿದರು.
ಬೆಂಗಳೂರು ದಕ್ಷಿಣ ಕ್ಷೇತ್ರದ ಗುಬ್ಬಲಾಳ ಕೆರೆ ವೀಕ್ಷಿಸಿದ ಅವರು, ಕೆರೆಗೆ(Lake) ಸುತ್ತಮುತ್ತಲ ಪ್ರದೇಶದಿಂದ ಹರಿದು ಬರುವ ಕೊಳಚೆ ನೀರನ್ನು ಶುದ್ಧೀಕರಿಸಿ ವರ್ಷ ಪೂರ್ತಿ ನೀರು(Water) ಇರುವಂತೆ ಮಾಡಲು ‘ಅಮೃತಕೆರೆ’ ಯೋಜನೆಯಡಿ ಎಸ್‌ಟಿಪಿ ಘಟಕ ಸ್ಥಾಪನೆ ಕುರಿತು ಯೋಜನೆ ರೂಪಿಸುವಂತೆ ಬಿಬಿಎಂಪಿ(BBMP) ಅಧಿಕಾರಿಗಳಿಗೆ ಸೂಚನೆ ನೀಡಿದರು.
Bengaluru: ಐಟಿ ಕ್ಷೇತ್ರದಲ್ಲಿ ಭಾರತಕ್ಕೆ ವಿಫುಲ ಅವಕಾಶ: ಕೇಂದ್ರ ಸಚಿವ ರಾಜೀವ್ ಚಂದ್ರಶೇಖರ್
ಈ ಸಂದರ್ಭದಲ್ಲಿ ಸ್ಥಳೀಯ ಶಾಸಕ ಎಂ.ಕೃಷ್ಣಪ್ಪ ಅವರು, ಗುಬ್ಬಲಾಳ ಕೆರೆಯನ್ನು 2021ರಲ್ಲಿ ಸುಮಾರು 3.47 ಕೋಟಿ ರು. ವೆಚ್ಚದಲ್ಲಿ ಅಭಿವೃದ್ಧಿ ಪಡಿಸಲಾಗಿದೆ. ಸುಮಾರು 8.10 ಎಕರೆ ಪ್ರದೇಶದ ವಿಸ್ತೀರ್ಣದಲ್ಲಿ ಕೆರೆಯಿದ್ದು 1.50 ಎಂಎಲ್‌ಡಿಯ ಎಸ್‌ಟಿಪಿ ಘಟಕ ಸ್ಥಾಪನೆಗೆ ಅಂದಾಜು ಒಂದು ಕೋಟಿ ರು. ವೆಚ್ಚವಾಗಲಿದೆ. ಈ ಕುರಿತು ಈಗಾಗಲೇ ಅಧಿಕಾರಿಗಳು ಯೋಜನೆ ಸಿದ್ಧಪಡಿಸಿದ್ದಾರೆ ಎಂದು ತಿಳಿಸಿದರು.
ಈ ಪ್ರದೇಶದಲ್ಲಿ ವಾಯುವಿಹಾರಕ್ಕೆ ನಿಗದಿತ ಜಾಗ ಇರಲಿಲ್ಲ. ಕೆರೆ ಅಭಿವೃದ್ಧಿಯಿಂದ ಸುತ್ತಮುತ್ತಲಿನ ನಿವಾಸಿಗಳು ವಾಕಿಂಗ್ ಮಾಡಲು ಅನುಕೂಲವಾಗಿದೆ. ಸ್ಥಳೀಯ ಶಾಸಕರು ಮತ್ತು ಸರ್ಕಾರಗಳು ಕೆರೆ ಅಭಿವೃದ್ಧಿಪಡಿಸಿದ್ದರಿಂದ ಗುಬ್ಬಲಾಳ ಕೆರೆ ಪುನಶ್ಚೇತನಗೊಂಡು ಆಕರ್ಷಣೀಯವಾಗಿದೆ. ಹಾಗೆಯೇ ಈ ಕೆರೆಯಲ್ಲಿ ನೀರು ನಿಲ್ಲುವಂತೆ ಕೊಳವೆ ಬಾವಿ ಅಥವಾ ಎಸ್‌ಟಿಪಿ ಘಟಕ ಸ್ಥಾಪಿಸಲು ನೆರವು ನೀಡಬೇಕೆಂದು ಸ್ಥಳೀಯ ನಿವಾಸಿಗಳು ಮನವಿ ಮಾಡಿದರು.
ಟೂರಿಸ್ಟ್ ಹೆರಿಟೇಜ್ ಕಾರಿಡಾರ್:
ಕೆಂಪೇಗೌಡ ನಗರದ ಐತಿಹಾಸಿಕ ಕೆಂಪಾಂಬುದಿ ಕೆರೆಗೆ ಭೇಟಿ ನೀಡಿದ ರಾಜೀವ್ ಚಂದ್ರಶೇಖರ್, ಕೆರೆ ಅಭಿವೃದ್ಧಿಗೆ ಕೈಗೊಳ್ಳಬೇಕಾದ ಯೋಜನೆಗಳ ಕುರಿತು ಸ್ಥಳೀಯ ಶಾಸಕರಾದ ರವಿ ಸುಬ್ರಹ್ಮಣ್ಯ ಹಾಗೂ ಉದಯ ಬಿ.ಗರುಡಾಚಾರ್ ಹಾಗೂ ಬಿಬಿಎಂಪಿ ಅಧಿಕಾರಿಗಳೊಂದಿಗೆ ಚರ್ಚಿಸಿದರು.
ಈ ಸಂದರ್ಭದಲ್ಲಿ ಶಾಸಕರಾದ ರವಿ ಸುಬ್ರಹ್ಮಣ್ಯ ಮತ್ತು ಉದಯ ಬಿ.ಗರುಡಾಚಾರ್ ಅವರು, ನಗರೋತ್ಥಾನ ಯೋಜನೆಯಡಿ 2018ರಲ್ಲಿ ಸುಮಾರು 48 ಎಕರೆ ಪ್ರದೇಶದಲ್ಲಿರುವ ಕೆಂಪಾಂಬುಧಿ ಕೆರೆಯನ್ನು ಅಭಿವೃದ್ಧಿಪಡಿಸಲಾಗಿದೆ. ಕೆರೆಗೆ ಸೇರ್ಪಡೆಯಾಗುತ್ತಿದ್ದ ಐದು ಪ್ರದೇಶಗಳ ಕೊಳಚೆ ನೀರನ್ನು ಶುದ್ಧೀಕರಿಸಿ ಕೆರೆಗೆ ಹರಿಯುವಂತೆ ವ್ಯವಸ್ಥೆ ಮಾಡಲಾಗಿದೆ. ಬಸವನಗುಡಿ ವ್ಯಾಪ್ತಿಯಲ್ಲಿ ಹಲವು ದೇವಾಲಯಗಳು, ಗುಡ್ಡಗಳು ಇವೆ. ಅವುಗಳೊಂದಿಗೆ ಕೆಂಪಾಂಬುಧಿ ಕೆರೆಯನ್ನು ಸೇರಿಸಿಕೊಂಡು ಟೂರಿಸ್ಟ್ ಹೆರಿಟೇಜ್ ಕಾರಿಡಾರ್ ಮಾಡುವ ಯೋಜನೆ ಇದೆ. ಕೇಬಲ್ ಕಾರು ಅಳವಡಿಸುವುದು ಸೇರಿದಂತೆ ಬೋಟಿಂಗ್, ಲೈಟಿಂಗ್, ಸಂಗೀತ ಕಾರಂಜಿಗಳನ್ನು ನಿರ್ಮಿಸಬೇಕೆಂಬ ಚಿಂತನೆ ನಡೆಸಲಾಗಿದೆ ಎಂದು ಮಾಹಿತಿ ನೀಡಿದರು.
ಅವ್ಯವಸ್ಥೆ ಕಂಡು ಆರ್‌ಸಿ ಗರಂ:
ಬಿಟಿಎಂ ಲೇಔಟ್ ವಿಧಾನಸಭಾ ಕ್ಷೇತ್ರದ ಕೋರಮಂಗಲದ ಮೇಸ್ತ್ರಿಪಾಳ್ಯ ಕೆರೆಗೆ ಭೇಟಿ ನೀಡಿದ ಕೇಂದ್ರ ಸಚಿವರು, ನಿರ್ವಹಣೆ ಇಲ್ಲದ ಕೆರೆಯ ದುಸ್ಥಿತಿ ಕಂಡು ಗರಂ ಆದರು. ಕೂಡಲೇ ಕೆರೆಗೆ ಸಂಬಂಧಿಸಿದಂತೆ ಮಾಸ್ಟರ್ ಪ್ಲಾನ್ ಸಿದ್ಧಪಡಿಸುವಂತೆ ಅಧಿಕಾರಿಗಳಿಗೆ ಸೂಚಿಸಿದ ಅವರು, ವಾರದೊಳಗೆ ಈ ಕುರಿತು ಬಿಬಿಎಂಪಿ ಮುಖ್ಯ ಆಯುಕ್ತರೊಂದಿಗೆ ಮಾತುಕತೆ ನಡೆಸಲಾಗುವುದು. ಅಮೃತ ಕೆರೆ ಯೋಜನೆಯಡಿ ಈ ಕೆರೆಯನ್ನೂ ಸೇರಿಸಿಕೊಂಡು ಅಭಿವೃದ್ಧಿಪಡಿಸಲು ಬೇಕಾದ ಕ್ರಮಗಳನ್ನು ಕೈಗೊಳ್ಳುವಂತೆ ಅಧಿಕಾರಿಗಳಿಗೆ ತಿಳಿಸಿದರು.
ಗ್ರೀವಿಯನ್ಸ್ ಪೋರ್ಟಲ್ ಉದ್ಘಾಟಿಸಿದ ಕೇಂದ್ರ ಸಚಿವ ರಾಜೀವ್ ಚಂದ್ರಶೇಖರ್!
ಇದಕ್ಕೂ ಮುನ್ನ ವಿಧಾನ ಪರಿಷತ್ ಸದಸ್ಯ ಗೋಪಿನಾಥ್ ಹಾಗೂ ಸ್ಥಳೀಯ ಮುಖಂಡರು, ಈಗಾಗಲೇ ಈಜೀಪುರ ಮೇಲ್ಸೇತುವೆ ನಿರ್ಮಾಣದ ವಿಷಯದಲ್ಲಿ ಸರ್ಕಾರಕ್ಕೆ ಕೆಟ್ಟಹೆಸರು ಬಂದಿದೆ. ಇದೀಗ ಮೇಸ್ತ್ರಿಪಾಳ್ಯದ ಕೆರೆ ಪುನಶ್ಚೇತನದಲ್ಲೂ ಬಿಬಿಎಂಪಿ ನಿರ್ಲಕ್ಷ್ಯ ವಹಿಸಿದ್ದು ಕೋರಮಂಗಲದ ನಿವಾಸಿಗಳ ಆಕ್ರೋಶಕ್ಕೆ ಗುರಿಯಾಗಿದೆ ಎಂದು ಆರೋಪಿಸಿದರು.
ಲಸಿಕಾ ಕೇಂದ್ರಗಳಿಗೂ ಭೇಟಿ
ನಗರದ ಪ್ರಮುಖ ಮೂರು ಕೆರೆಗಳ ಅಭಿವೃದ್ಧಿ ಪರಿಶೀಲನಾ ಸಂದರ್ಭದಲ್ಲಿ ಕೇಂದ್ರ ಸಚಿವ ರಾಜೀವ್ ಚಂದ್ರಶೇಖರ್, ಬಸವನಗುಡಿಯ ನ್ಯಾಷನಲ್ ಹೈಸ್ಕೂಲ್ ಮತ್ತು ಬಿಟಿಎಂ ಲೇಔಟ್ ವಿಧಾನಸಭಾ ಕ್ಷೇತ್ರದ ತಾವರೆಕೆರೆ ಆರೋಗ್ಯ ಕೇಂದ್ರದ ಕೋವಿಡ್ ಲಸಿಕಾ ಕೇಂದ್ರಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಆರೋಗ್ಯ ಸಿಬ್ಬಂದಿ, ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರಿಂದ ಲಸಿಕಾಕರಣದ ಕುರಿತು ಮಾಹಿತಿ ಪಡೆದ ಅವರು, ಪ್ರತಿಯೊಬ್ಬರು ಕೋವಿಡ್ ಮುನ್ನೆಚ್ಚರಿಕೆ ಕ್ರಮಗಳನ್ನು ಅನುಸರಿಸುವಂತೆ ತಿಳಿಸಿದರು.