Covid Crisis: ಬೂಸ್ಟರ್‌ ಡೋಸ್‌ಗೆ ನಿರಾಸಕ್ತಿ..!

By Girish GoudarFirst Published Apr 13, 2022, 4:10 AM IST
Highlights

*   ಖಾಸಗಿಯಲ್ಲಿ ಆರಂಭವಾಗದ 3ನೇ ಲಸಿಕಾರಣ
*   4 ತಿಂಗಳಲ್ಲಿ ಫ್ರಂಟ್‌ಲೈನ್‌, ವೃದ್ಧರು ಸೇರಿ ಶೇ. 53.25 ಸಾಧನೆ
*  ಹಿಂದಿನಂತೆ ಲಸಿಕಾಕರಣಕ್ಕೆ ತರಾತುರಿ ಇಲ್ಲ
 

ಮಯೂರ ಹೆಗಡೆ

ಹುಬ್ಬಳ್ಳಿ(ಏ.13):  ಕೋವಿಡ್‌(Covid-19) ತಗ್ಗಿರುವುದು, ಎಕ್ಸ್‌ ಇ ತಳಿ ಕಾಣಿಸಿಕೊಳ್ಳದ ಕಾರಣ ಜಿಲ್ಲೆಯಲ್ಲಿ ಮೂರನೇ ಡೋಸ್‌ಗೆ ಅಷ್ಟಾಗಿ ಆಸಕ್ತಿ, ತರಾತುರಿ ಕಂಡುಬರುತ್ತಿಲ್ಲ. ಫ್ರಂಟ್‌ಲೈನ್‌ ವಾರಿಯರ್ಸ್‌ಗೆ, ವೃದ್ಧರಿಗೆ ಜನವರಿಯಿಂದ ಬೂಸ್ಟರ್‌ ಡೋಸ್‌(Booster Dose) ಆರಂಭವಾಗಿದ್ದರೂ 4 ತಿಂಗಳಲ್ಲಿ ಶೇ.53ರಷ್ಟು ಸಾಧನೆ ಆಗಿರುವುದೂ ಇದಕ್ಕೆ ನಿದರ್ಶನ.

ಭಾನುವಾರದಿಂದ ಖಾಸಗಿ ಆಸ್ಪತ್ರೆಯಲ್ಲಿ ಹಣ ನೀಡಿ 3ನೇ ಡೋಸ್‌ ಪಡೆಯಲು ಸರ್ಕಾರ ತಿಳಿಸಿದೆ. ಜಿಲ್ಲಾ ಆರೋಗ್ಯ ಇಲಾಖೆಗೆ ಈ ಬಗ್ಗೆ ಸ್ಪಷ್ಟಆದೇಶ ಬಂದಿಲ್ಲ. ನಗರದಲ್ಲಿ ಹಿಂದೆ ಲಸಿಕೆ(Vaccine) ನೀಡಿದ್ದ ಸುಚಿರಾಯು ಸೇರಿ ಇತರೆ ಪ್ರಮುಖ ಖಾಸಗಿ ಆಸ್ಪತ್ರೆಗಳಲ್ಲಿ 3ನೇ ಹಂತದ ಲಸಿಕಾರಣ ಶುರುವಾಗಿಲ್ಲ. ಅಷ್ಟಕ್ಕೂ ಹಿಂದೆ ಒಂದನೆ, ಎರಡನೇ ಡೋಸ್‌ ಬಂದ ಮೊದಲ ದಿನವೆ ಎಲ್ಲೆಡೆ ಮಾರುದ್ದ ಸರದಿಯಲ್ಲಿ ನಿಂತು ಲಸಿಕೆ ಪಡೆದಿದ್ದ ಜನತೆ ಈಗ ಅಷ್ಟು ಹರಿಬರಿ ತೋರುತ್ತಿಲ್ಲ.

Covid Crisis: ಕರ್ನಾಟಕದಲ್ಲಿ ಕೇವಲ 29 ಮಂದಿಗೆ ಕೋವಿಡ್: 23 ತಿಂಗಳಲ್ಲೇ ಕನಿಷ್ಠ

ಅಲ್ಲದೆ ಆರೋಗ್ಯ, ಪೊಲೀಸ್‌ ಇಲಾಖೆ ಸೇರಿ ಮುಂಚೂಣಿಯಲ್ಲಿ ನಿಲ್ಲುವ ವಾರಿಯರ್ಸ್‌ಗೆ ಹಾಗೂ 60 ವರ್ಷ ಮೇಲ್ಪಟ್ಟವರಿಗೆ ಜನವರಿಯಲ್ಲೆ 3ನೇ ಲಸಿಕೆ ತೆಗೆದುಕೊಳ್ಳಲು ತಿಳಿಸಿದ್ದರೂ ಈ ವರೆಗೆ ನಿಗದಿತ ಗುರಿ ಸಾಧಿಸಲು ಸಾಧ್ಯವಾಗಿಲ್ಲ. ಜಿಲ್ಲೆಯಲ್ಲಿ ಬೂಸ್ಟರ್‌ ಡೋಸ್‌ನ್ನು 81,256 ಜನರಿಗೆ ನೀಡುವ ಗುರಿ ಇತ್ತು. ಈ ವರೆಗೆ 43,273 ಡೋಸ್‌ ನೀಡಲಾಗಿದೆ. ಅಂದರೆ ಶೇ. 53.25 ಸಾಧನೆಯಾಗಿದೆ. ಈ ವರ್ಗ ಕೂಡ ವ್ಯಾಕ್ಸಿನೇಶನ್‌ ಕುರಿತು ಅಷ್ಟಾಗಿ ತಲೆಕೆಡೆಸಿಕೊಂಡಂತೆ ಕಾಣುತ್ತಿಲ್ಲ.

ಕೋವಿಡ್‌ ಕಡಿಮೆ ಇರುವ ಕಾರಣ ಬೂಸ್ಟರ್‌ ಡೋಸ್‌ ಪಡೆಯಲು ಮುಂದೆ ಬರುವವರ ಪ್ರಮಾಣವೂ ಅದರಂತೆ ಇದೆ. 2ನೇ ಲಸಿಕೆ ಪಡೆದು 9 ತಿಂಗಳು ಅಥವಾ 39 ವಾರ ಆದ ಫ್ರಂಟ್‌ಲೈನ್‌ ವರ್ಕರ್ಸ್‌ 3ನೇ ಡೋಸ್‌ ಪಡೆಯಬೇಕಾಗುತ್ತದೆ. ಮಧ್ಯೆ ಕೋವಿಡ್‌ ಬಾಧಿಸಿದ ಹಲವರು 3ತಿಂಗಳ ಬಳಿಕ ಲಸಿಕೆ ತೆಗೆದುಕೊಳ್ಳಬೇಕಿದೆ. ಹೀಗಾಗಿ ನಿಗದಿತ ಗುರಿ ತಲುಪಲು ಕಾಲಾವಧಿ ತೆಗೆದುಕೊಳ್ಳಲಿದೆ’ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ. ಬಸನಗೌಡ ಕರಿಗೌಡರ ತಿಳಿಸಿದರು.

ಜಿಲ್ಲೆಯಲ್ಲಿ ಲಸಿಕೆ ಲಭ್ಯತೆ ಸಾಕಷ್ಟಿದ್ದು, ಕೊರತೆಯಿಲ್ಲ. ಖಾಸಗಿಯವರು ಫಾಮ್‌ರ್‍ಸಿಗಳಿಂದ ಲಸಿಕೆ ಖರೀದಿ ಮಾಡಿ ನಮ್ಮಿಂದ ಪರವಾನಗಿ ಪಡೆದ ಬಳಿಕ ಲಸಿಕೆ ನೀಡಬೇಕು. ಈ ವರೆಗೆ 3ನೇ ಡೋಸ್‌ಗೆ ಯಾರೂ ಪರವಾನಗಿ ಕೇಳಿಲ್ಲ. ಮೊದಲೆರಡು ಡೋಸ್‌ ನೀಡಿಕೆ ವೇಳೆ ಕೆಲವು ಖಾಸಗಿ ಆಸ್ಪತ್ರೆಗಳು ಮುಂದೆ ಬಂದಿದ್ದವು. ಆಗ ಸರ್ಕಾರ ಉಚಿತವಾಗಿ ನೀಡಿದ್ದ ಕಾರಣ ಖಾಸಗಿಗೆ ತೆರಳಿ ಹಣ ತೆತ್ತು ಲಸಿಕೆ ಪಡೆಯುವವರ ಸಂಖ್ಯೆಯೂ ಕಡಿಮೆಯಿತ್ತು. ಈಗ ಖಾಸಗಿ ಆಸ್ಪತ್ರೆಗಳು ಅನುಮತಿ ಕೇಳಿದರೆ ಪರಿಶೀಲಿಸಿ ನೀಡುತ್ತೇವೆ ಎಂದು ಧಾರವಾಡ ಆರ್‌ಸಿಎಚ್‌ ಅಧಿಕಾರಿ ಎಸ್‌.ಎಂ. ಹೊನಕೇರಿ ಹೇಳಿದರು.

ಜಿಲ್ಲೆಯ ಔಷಧ ಉಗ್ರಾಣಕ್ಕೆ 2021ರಿಂದ ಈ ವರೆಗೆ ಕೋವಿಶಿಲ್ಡ್‌, ಕೋವ್ಯಾಕ್ಸಿನ್‌, ಕೋರ್ಬೆವ್ಯಾಕ್ಸ್‌ ಸೇರಿ 28,04,330 ಪೂರೈಕೆ ಆಗಿದೆ. ಒಟ್ಟೂ31,52,559 ಡೋಸ್‌ ನೀಡಲಾಗಿದೆ. ಈ ಏಪ್ರಿಲ್‌ಗಾಗಿ 50 ಸಾವಿರ ಕೊವ್ಯಾಕ್ಸಿನ್‌, 16 ಸಾವಿರ ಕೋರ್ಬೆವ್ಯಾಕ್ಸ್‌ ಸೇರಿ 66 ಸಾವಿರ ಡೋಸ್‌ ಇದೆ. ಮೊದಲೆರಡು ಡೋಸ್‌ ಸೇರಿ ಖಾಸಗಿಯವರು ಏ. 10ರ ವರೆಗೆ 79,770 ಜನರಿಗೆ ಲಸಿಕೆ ನೀಡಿದ್ದರು.

ಲಸಿಕಾಕರಣ ಸಾಧನೆಯೆಷ್ಟು? 

ಮೊದಲ ಡೋಸ್‌ ಜಿಲ್ಲೆಯಲ್ಲಿ ನಿಗದಿತ ಗುರಿ ಮೀರಿ 104.07 ಸಾಧನೆ ಮಾಡಿದೆ. 14,44,000 ಗುರಿ ಇತ್ತು. 15,02,824 ಡೋಸ್‌ ನೀಡಲಾಗಿದೆ. 2ನೇ ಡೋಸ್‌ 14,44,000 ಗುರಿ ಇತ್ತು. 14,15,023 ಜನ ಡೋಸ್‌ ಪಡೆದಿದ್ದು ಶೇ. 97.99 ಸಾಧನೆಯಾಗಿದೆ. 15ರಿಂದ17 ವರ್ಷದ ಮಕ್ಕಳ ಮೊದಲ ಡೋಸ್‌ ಗುರಿ ಇದ್ದಿದ್ದು 95,774. ಅದರಲ್ಲಿ ಶೇ.84.07 ಸಾಧನೆ ಆಗಿದ್ದು, 80,524 ಡೋಸ್‌ ಹಾಗೂ 64,894 ಮಕ್ಕಳಿಗೆ 2ನೇ ಡೋಸ್‌ ನೀಡಲಾಗಿದೆ. ಇನ್ನು, 12ರಿಂದ14 ವರ್ಷದ ಮಕ್ಕಳಿಗೆ ಮೊದಲ ಡೋಸ್‌ 60,020 ಗುರಿ ಇತ್ತು. 46,021 ಮಕ್ಕಳಿಗೆ ನೀಡಿ ಶೇ. 76.67 ಸಾಧನೆಯಾಗಿದೆ.

Covid Mask ಮಾಸ್ಕ್ ಕಡ್ಡಾಯ ನಿಮಯ ಹಿಂತೆಗೆಯಬೇಕೆ? ಜನಸಾಮಾನ್ಯರ ಅಭಿಪ್ರಾಯವೇನು?

ಮೂರನೇ ಡೋಸ್‌ ಖಾಸಗಿಯಿಂದ ಪಡೆಯುವ ಬಗ್ಗೆ ಈ ವರೆಗೆ ನಮಗೆ ಆದೇಶ ಬಂದಿಲ್ಲ. ಫ್ರಂಟ್‌ಲೈನ್‌ ವರ್ಕ್ರ್ಸ್‌ ಹಾಗೂ 60 ವರ್ಷ ಮೇಲ್ಪಟ್ಟವರಿಗೆ ನೀಡುತ್ತಿದ್ದೇವೆ. 12ರಿಂದ14 ವರ್ಷ, 15ರಿಂದ17 ವರ್ಷದ ಮಕ್ಕಳು ಹಾಗೂ ಮೂರನೇ ಡೋಸ್‌ಗೆ ಅರ್ಹರಿರುವ ಫ್ರಂಟ್‌ಲೈನ್‌ ವರ್ಕರ್ಸ್‌(Frontline Workers) ಕೆಲವರು ಬಾಕಿ ಇದ್ದಾರೆ ಅಂತ ಧಾರವಾಡ ಆರ್‌ಸಿಎಚ್‌ ಅಧಿಕಾರಿ ಎಸ್‌.ಎಂ. ಹೊನಕೇರಿ ತಿಳಿಸಿದ್ದಾರೆ. 

ಮೂರನೆ ಡೋಸ್‌ ಪಡೆಯಬೇಕಿರುವ ಹಲವು ಫ್ರಂಟ್‌ಲೈನ್‌ ವರ್ಕರ್ಸ್‌ ಕೋವಿಡ್‌ಗೆ ತುತ್ತಾಗಿದ್ದು, ಚೇತರಿಸಿಕೊಂಡ ಮೂರು ತಿಂಗಳ ಬಳಿಕ ಲಸಿಕೆ ಪಡೆಯಬೇಕಿರುವ ಕಾರಣ ಸ್ವಲ್ಪ ಕಡಿಮೆ ರೀತಿ ಕಾಣಿಸುತ್ತಿದೆ ಅಂತ ಧಾರವಾಡ ಡಿಎಚ್‌ಒ ಡಾ. ಬಸನಗೌಡ ಕರಿಗೌಡರ ಹೇಳಿದ್ದಾರೆ. 
 

click me!