ರಾಮಕೃಷ್ಣ ಹೆಗಡೆ ಮಾರ್ಗದಲ್ಲಿ ಸ್ಪೀಕರ್‌ ಕಾಗೇರಿ: ಪ್ರಹ್ಲಾದ್‌ ಜೋಶಿ

By Govindaraj S  |  First Published Jan 16, 2023, 9:31 PM IST

ರಾಮಕೃಷ್ಣ ಹೆಗಡೆ ಈ ಜಿಲ್ಲೆ, ರಾಜ್ಯಕ್ಕೆ ಅತ್ಯುತ್ತಮ ಕೊಡುಗೆಗಳನ್ನು ನೀಡಿದ್ದಾರೆ. ಅವರ ನಂತರದ ಸ್ಥಾನ ಮತ್ತು ವ್ಯಕ್ತಿತ್ವ ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಅವರದ್ದಾಗಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಹೇಳಿದರು.


ಶಿರಸಿ (ಜ.16): ರಾಮಕೃಷ್ಣ ಹೆಗಡೆ ಈ ಜಿಲ್ಲೆ, ರಾಜ್ಯಕ್ಕೆ ಅತ್ಯುತ್ತಮ ಕೊಡುಗೆಗಳನ್ನು ನೀಡಿದ್ದಾರೆ. ಅವರ ನಂತರದ ಸ್ಥಾನ ಮತ್ತು ವ್ಯಕ್ತಿತ್ವ ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಅವರದ್ದಾಗಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಹೇಳಿದರು. ನಗರದ ಮಾರಿಕಾಂಬಾ ಪದವಿಪೂರ್ವ ಮಹಾವಿದ್ಯಾಲಯದ ಆವರಣದಲ್ಲಿ ಆಯೋಜಿಸಲಾಗಿದ್ದ ಅಭಿನಂದನಾ ಕಾರ್ಯಕ್ರಮದಲ್ಲಿ ಕಾಗೇರಿ ಅವರನ್ನು ಸನ್ಮಾನಿಸಿ ಅವರು ಮಾತನಾಡಿದರು. ಚುನಾವಣೆಯನ್ನು ಎದುರಿಸಿ ಆರಿಸಿ ಬರುವುದು ಐಎಎಸ್‌ ಪರೀಕ್ಷೆಗಿಂತ ಕಠಿಣ. ಜನರ ಅಪೇಕ್ಷೆ ಈಡೇರಿಸಲು ಸಾಧ್ಯವಾಗದಿದ್ದರೂ ಮುಂದಿನ ಬಾರಿ ಸೋಲು ಕಾಣಬೇಕಾಗುತ್ತದೆ. 

ನಮ್ಮ ದೇಶದಲ್ಲಿ ರಾಜಕಾರಣಿಗಳಿಗೆ ಅಗತ್ಯಕ್ಕಿಂತ ಜಾಸ್ತಿ ಪ್ರಾಮುಖ್ಯ ಸಿಗುತ್ತಿದೆ. ಕುಖ್ಯಾತರಾದರೆ, ಅಹಂ ತಲೆಗೇರಿದರೆ ಶೇ. 50ರಷ್ಟುಜನ ಎರಡನೇ ಬಾರಿ ಆರಿಸಿ ಬರುವುದಿಲ್ಲ. ಕಾಗೇರಿ ಸತತ ಆರು ಬಾರಿ ಆರಿಸಿ ಬರಲು ಅವರ ಸಭ್ಯತೆಯೇ ಕಾರಣ ಎಂದರು. ರಾಜಕಾರಣ ಸೇವೆಗಾಗಿ ಇರುವ ವೇದಿಕೆ ಎಂಬುದನ್ನು ಕಾಗೇರಿ ತೋರಿಸಿಕೊಟ್ಟಿದ್ದಾರೆ. ರಾಜಕಾರಣಿಗಳನ್ನು ನೋಡುವ ಶೈಲಿಯೂ ಇಂದು ಬದಲಾಗಿದೆ. ಸಜ್ಜನಿಕೆ ಉಳಿಸಿಕೊಳ್ಳಲು ಅಪರೂಪದಲ್ಲಿ ಅಪರೂಪದವರಿಗೆ ಮಾತ್ರ ಸಾಧ್ಯವಾಗುತ್ತದೆ ಎಂದರು.

Latest Videos

undefined

ಸ್ಪೀಕರ್‌ ಕಾಗೇರಿ ಅಭಿನಂದನಾ ಸಮಾರಂಭಕ್ಕೆ ಶಿರಸಿಯಲ್ಲಿ ಸಿದ್ಧತೆ: ಬಿಜೆಪಿಗೆ ತಟ್ಟುತ್ತಾ ಕಪ್ಪುಪಟ್ಟಿ ಪ್ರದರ್ಶನ?

ಭಾರತ ಜಗತ್ತಿನಲ್ಲಿ ಮಹತ್ವದ ಪಾತ್ರ ನಿರ್ವಹಿಸುವ ಸ್ಥಿತಿಗೆ ಸಾಗುತ್ತಿದೆ. ಕೆಲವು ವರ್ಷಗಳಲ್ಲಿಯೇ ಆರ್ಥಿಕವಾಗಿ ಪ್ರಪಂಚದ ಮೂರು ದೇಶಗಳಲ್ಲಿ ಒಂದಾಗಲಿದೆ. ಜಿಡಿಪಿ 5 ಟ್ರಿಲಿಯನ್‌ ಆರ್ಥಿಕತೆ ಸಾಧಿಸುವ ಸಿದ್ಧತೆಯಲ್ಲಿದ್ದಾಗ ದೇಶಕ್ಕೆ ಆರೋಗ್ಯವಂತ ಸಮಾಜ ನಿರ್ಮಾಣಕ್ಕೆ ಉತ್ತಮ ನಾಯಕರ ಅಗತ್ಯತೆಯೂ ಇದೆ ಎಂದರು. ಸನ್ಮಾನ ಸ್ವೀಕರಿಸಿ ಮಾತನಾಡಿದ ವಿಶ್ವೇಶ್ವರ ಹೆಗಡೆ ಕಾಗೇರಿ, ಈ ಸನ್ಮಾನ ಮುಂದೆ ಇನ್ನಷ್ಟುಜವಾಬ್ದಾರಿಯಾಗಿ ಕಾರ್ಯ ನಿರ್ವಹಿಸಬೇಕು ಎಂಬುದನ್ನು ತೋರಿಸಿಟ್ಟಿದೆ. ಸಮಾಜದ ಚಿತ್ರಣ ಸಿಂಹಾವಲೋಕನ ನೋಡಿದರೆ ಒಳ್ಳೆಯ ಸಂಗತಿಗಳು ಎಲ್ಲ ಕ್ಷೇತ್ರಗಳಲ್ಲಿ ಕಾಣಸಿಗುತ್ತದೆ. 

ಇದರ ಜತೆಯೇ ಸಮಾಜದ ನೈತಿಕತೆಯೂ ಕಳೆ ಗುಂದುತ್ತಿದೆ. ಇದರ ಪರಿಣಾಮ ಎಲ್ಲ ಕ್ಷೇತ್ರಗಳಲ್ಲಿ ಅನುಭವಿಸುತ್ತಿದ್ದೇವೆ ಎಂದರು. ವಿಷ ವರ್ತುಲದಿಂದ ಹೊರ ಬರಬೇಕೆಂದರೆ ಎಲ್ಲವನ್ನೂ ಆತ್ಮಾವಲೋಕನ ಮಾಡಿ ನಮ್ಮ ನಮ್ಮ ಕ್ಷೇತ್ರದ ಒಳಿತಿಗಾಗಿ ನಾವು ಪ್ರಯತ್ನಿಸಬೇಕಿದೆ. ಅಭಿವೃದ್ಧಿ ನಿರಂತರ. ಅಭಿವೃದ್ಧಿಯನ್ನು ನಾನು ಎಂದಿಗೂ ನಿರ್ಲಕ್ಷಿಸಿಲ್ಲ. ಜನಪ್ರತಿನಿಧಿಗಳು ಸಮಾಜದ ವಾತಾವರಣ ಕೆಡಿಸಿ ಬೇಳೆ ಬೇಯಿಸಿಕೊಳ್ಳುವವರು ಆಗಬಾರದು. ಪ್ರೀತಿ ವಿಶ್ವಾಸದ ಸಾಮರಸ್ಯ ಸ್ಥಾಪಿಸಬೇಕಾದುದು ಜನಪ್ರತಿನಿಧಿಯ ಕಾರ್ಯ ಎಂದರು. ಶಾಸಕರಾದ ಶಾಂತಾರಾಮ ಸಿದ್ದಿ, ರೂಪಾಲಿ ನಾಯ್ಕ, ಕಾಗೇರಿಯವರ ಪತ್ನಿ ಭಾರತಿ ಹೆಗಡೆ, ಅಭಿನಂದನಾ ಸಮಿತಿ ಅಧ್ಯಕ್ಷ ಕೆ.ಎನ್‌. ಹೊಸ್ಮನಿ, ಕಾಗೇರಿಯವರ ತಾಯಿ ಸರ್ವೇಶ್ವರಿ ಹೆಗಡೆ ಇತರರಿದ್ದರು.

ಎಲ್ಲರ ಮನೆಯ ಮದುವೆ, ಮುಂಜಿಗೆ ಬರ್ತಾರೆ ಎಂಬ ಆರೋಪ ನನ್ನ ಮೇಲಿದೆ. ಯಾರು ಏನೇ ಹೇಳಲಿ, ನಾನು ಮದುವೆ ಮನೆಗೆ ಬಂದೇ ಬರುತ್ತೇನೆ. ನನ್ನ ಜನತೆಯ ಸಂಬಂಧ ಕೇವಲ ಮತ ರಾಜಕಾರಣಕ್ಕೆ ಸಂಬಂಧಿಸಿದ್ದಲ್ಲ. ನನ್ನನ್ನು ಕ್ಷೇತ್ರದ ಜನತೆ ಮನೆ ಮಗನಾಗಿ ನೋಡಿದೆ.
-ವಿಶ್ವೇಶ್ವರ ಹೆಗಡೆ ಕಾಗೇರಿ, ವಿಧಾನ ಸಭಾಧ್ಯಕ್ಷ

ಬಂಟ ಸಮಾಜದವರು ಶಿಸ್ತಿನ ಸಂಕೇತ: ಕೇಂದ್ರ ಸಚಿವ ಪ್ರಹ್ಲಾದ್‌ ಜೋಶಿ

ರಾಜಕಾರಣಕ್ಕೆ ಬಂದವರಿಗೆ ರಾಜಕಾರಣದ ಚಟ ಬಿಡಿಸಲು ಸಾಧ್ಯವಿಲ್ಲ. ಹೀಗಾಗಿ, ಹಲವರು ಸ್ಪೀಕರ್‌ ಆಗಲು ಒಪ್ಪುವುದಿಲ್ಲ. ಕಾಗೇರಿ ಸ್ಪೀಕರ್‌ ಹೇಗಿರಬಹುದು ಎಂಬುದಕ್ಕೆ ಒಂದು ಮಾದರಿ.
-ಪ್ರಹ್ಲಾದ ಜೋಶಿ, ಕೇಂದ್ರ ಸಚಿವ

ವಿಧಾನಸಭೆಯ ಸುದ್ದಿಗಳನ್ನು ‘ಕನ್ನಡಪ್ರಭ’ ದಿನಪತ್ರಿಕೆಯಲ್ಲಿ ಓದುತ್ತಿದ್ದೆ. ಕಾಗೇರಿಯವರ ಸುದ್ದಿಗಳನ್ನು ಓದಿ ನಾನು ಸ್ಫೂರ್ತಿ ಪಡೆದಿದ್ದೆ.
-ಸುನೀಲಕುಮಾರ, ಇಂಧನ ಸಚಿವ

click me!