‘ಕಮ್ಯುನಿಸ್ಟರ ಹಾವಳಿ ನಡುವೆಯೂ ಕೇರಳದಲ್ಲಿ ಬಿಜೆಪಿ ಬಲಿಷ್ಠ’

By Kannadaprabha News  |  First Published Mar 2, 2020, 12:27 PM IST


ಕಮ್ಯುನಿಸ್ಟರ ಹಾವಳಿ ನಡುವೆಯೂ ಕೇರಳದಲ್ಲಿ ಬಿಜೆಪಿ ದಿನದಿನಕ್ಕೆ ಶಕ್ತಿಯುತವಾಗಿ ಬೆಳೆಯುತ್ತಿದೆ| ದತ್ತೋಪಂತ ಠೇಂಗಡಿ ಜನ್ಮಶತಮಾನೋತ್ಸವ ಸಮಾರಂಭದಲ್ಲಿ ಜೋಶಿ|ದತ್ತೋಪಂತ ಠೇಂಗಡಿ ಅವರು ರಾಷ್ಟ್ರೀಯ ಸ್ವಯಂ ಸೇವಕ ಸಂಘ ಕಟ್ಟಲು ಸಾಕಷ್ಟು ಶ್ರಮಿಸಿದ್ದಾರೆ|


ಬಳ್ಳಾರಿ(ಮಾ.02]: ಕೇರಳದಲ್ಲಿ ಬಿಜೆಪಿ ಕಡಿಮೆ ಸ್ಥಾನ ಗಳಿಸಿರಬಹುದು. ಆದರೆ, ಸಂಘ ಶಕ್ತಿ ಬಲಿಷ್ಠವಾಗಿದೆ. ಕಮ್ಯುನಿಸ್ಟರ ಹಾವಳಿ ನಡುವೆಯೂ ಕೇರಳದಲ್ಲಿ ಬಿಜೆಪಿ ದಿನದಿನಕ್ಕೆ ಶಕ್ತಿಯುತವಾಗುತ್ತಿದ್ದು, ಲಕ್ಷಾಂತರ ಕಾರ್ಯಕರ್ತರು ಪಕ್ಷ ಕಟ್ಟುವ ಕೆಲಸದಲ್ಲಿ ನಿರತರಾಗಿದ್ದಾರೆ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಹೇಳಿದ್ದಾರೆ.

ಇಲ್ಲಿನ ಗಾಂಧಿಭವನದಲ್ಲಿ ಭಾರತೀಯ ಮಜ್ದೂರ್‌ ಸಂಘ (ಬಿಎಂಎಸ್‌) ಸಂಸ್ಥಾಪಕ ದತ್ತೋಪಂತ ಠೇಂಗಡಿ ಅವರ ಜನ್ಮಶತಮಾನೋತ್ಸವ ಸಮಾರಂಭದಲ್ಲಿ ಅವರು ಮಾತನಾಡಿದರು. ದತ್ತೋಪಂತ ಠೇಂಗಡಿ ಅವರು ರಾಷ್ಟ್ರೀಯ ಸ್ವಯಂ ಸೇವಕ ಸಂಘ ಕಟ್ಟಲು ಸಾಕಷ್ಟು ಶ್ರಮಿಸಿದರು. ಅವರ ಅಪಾರ ಪರಿಶ್ರಮದಿಂದಾಗಿಯೇ ದೇಶದ ಎಲ್ಲ ರಾಜ್ಯಗಳಲ್ಲಿ ಸಂಘ ಬೆಳವಣಿಗೆಯಾಯಿತು. ಕೇರಳ, ಪಶ್ಚಿಮ ಬಂಗಾಳ ಸೇರಿದಂತೆ ಅನೇಕ ರಾಜ್ಯಗಳಲ್ಲಿ ಕಮ್ಯುನಿಸ್ಟರು ಹಾಗೂ ಇಸ್ಲಾಮಿಕ್‌ ಮತೀಯವಾದಿಗಳ ಹಾವಳಿ ಇತ್ತು. ಇದನ್ನು ಲೆಕ್ಕಿಸದೆ ಸ್ವಯಂ ಸೇವಕ ಸಂಘವನ್ನು ಕಟ್ಟಿಬೆಳೆಸಲು ಶ್ರಮಿಸಿದರು. ಸಂಘ ಕಟ್ಟುವ ಆರಂಭದಲ್ಲಿ ಠೇಂಗಡಿ ಅವರು ಸಾಕಷ್ಟು ಸಮಸ್ಯೆಯನ್ನು ಎದುರಿಸಿದ್ದಾರೆ. ಕಾಂಗ್ರೆಸ್‌ ಹಾಗೂ ರಾಷ್ಟ್ರೀಯ ಕಾರ್ಮಿಕ ಸಂಘಟನೆಯಾದ ಎಐಟಿಯುಸಿ ಎಂದಿಗೂ ಕಾರ್ಮಿಕರ ಹಿತ ಕಾಯುವ ಕೆಲಸ ಮಾಡಲಿಲ್ಲ. ಎಐಟಿಯುಸಿ ಬರೀ ಸಂಘರ್ಷದ ಉದ್ದೇಶ ಹೊಂದಿತ್ತು. ಆ ಸಂಘಟನೆಯಲ್ಲಿ ನಾಲ್ಕೈದು ವರ್ಷ ಇದ್ದು ಕಾರ್ಮಿಕರ ಸಂಕಷ್ಟಗಳನ್ನು ಅರ್ಥ ಮಾಡಿಕೊಂಡ ಠೇಂಗಡಿ ಅವರು, ಬಳಿಕ ಅದರಿಂದ ಹೊರ ಬಂದು ಭಾರತೀಯ ಮಜ್ದೂರ್‌ ಸಂಘ ಬೆಳೆಸಿದರು. ಸ್ವಯಂ ಸೇವಕ ಸಂಘ, ಭಾರತೀಯ ಮಜ್ದೂರ್‌ ಸಂಘದಂತೆ ಸ್ವದೇಶಿ ಜಾಗರಣ ಮಂಚ್‌, ಕಿಸಾನ್‌ ಸಂಘವನ್ನು ಕಟ್ಟಿಬೆಳೆಸಿದರು ಎಂದು ತಿಳಿಸಿದರು.

Latest Videos

undefined

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಆರ್‌ಎಸ್‌ಎಸ್‌ನ ಅಖಿಲ ಭಾರತ ವ್ಯವಸ್ಥಾ ಪ್ರಮುಖ ಮಂಗೇಶ ಭೆಂಡೆ ಮಾತನಾಡಿ, ಅಪಾರ ದೇಶಪ್ರೇಮಿಯಾಗಿದ್ದ ದತ್ತೋಪಂತ ಠೇಂಗಡಿ ಅವರು ಕಾರ್ಮಿಕರು ಸೇರಿದಂತೆ ಎಲ್ಲ ಸಮುದಾಯಗಳ ಸಂಕಟಗಳನ್ನು ಅರ್ಥ ಮಾಡಿಕೊಂಡಿದ್ದರು. ದುಡಿಯುವ ಜನರ ಹಿತ ಕಾಯಬೇಕು ಎಂಬುದು ಅವರ ಕಾಳಜಿಯಾಗಿತ್ತು ಎಂದು ಹೇಳಿದರು. ನಗರ ಬಿಜೆಪಿ ಶಾಸಕ ಜಿ. ಸೋಮಶೇಖರ ರೆಡ್ಡಿ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಸಂಸದ ವೈ. ದೇವೇಂದ್ರಪ್ಪ, ಬಿಎಂಎಸ್‌ ಪ್ರಧಾನ ಕಾರ್ಯದರ್ಶಿ ಸಿ.ವಿ. ಲೋಕೇಶ, ಕರ್ನಾಟಕ ಗ್ರಾಮೀಣ ಬ್ಯಾಂಕ್‌ನ ಅಧ್ಯಕ್ಷ ಶ್ರೀನಾಥ ಎಚ್‌. ಜೋಶಿ, ಸಂಚಾಲಕರಾದ ಡಿ. ನೀಲಕಂಠ ರೆಡ್ಡಿ, ಅನಿಲ್‌ ನಾಯ್ಡು ಮೋಕಾ, ಕರ್ನಾಟಕ ಗ್ರಾಮೀಣ ಬ್ಯಾಂಕ್‌ ನೌಕರರು ಹಾಗೂ ಸಿಬ್ಬಂದಿ ನೌಕರರು ಸಮಾರಂಭದಲ್ಲಿ ಪಾಲ್ಗೊಂಡಿದ್ದರು.

ವೇದಿಕೆ ಕಾರ್ಯಕ್ರಮಕ್ಕೆ ಮುನ್ನ ನಗರದಲ್ಲಿ ಶೋಭಾಯಾತ್ರೆ ನಡೆಯಿತು. ಬಿಎಂಎಸ್‌ನ ನೂರಾರು ಸದಸ್ಯರು ಶೋಭಾಯಾತ್ರೆಯಲ್ಲಿ ಪಾಲ್ಗೊಂಡಿದ್ದರು. ರಾಘವ ಕಲಾಮಂದಿರದಿಂದ ಶುರುವಾಗಿ ಗಾಂಧಿಭವನ ತಲುಪಿತು.

click me!