ಶೀಘ್ರ ಜೆಡಿಎಸ್ ಸೇರ್ತಾರೆ ರಾಜಕೀಯ ಚಾಣಾಕ್ಷ?

By Kannadaprabha NewsFirst Published Mar 2, 2020, 12:12 PM IST
Highlights

ರಾಜಕೀಯ ಕ್ಷೇತ್ರದ ಚಾಣಾಕ್ಷ ಎಂದೇ ಕರೆಸಿಕೊಳ್ಳುವ ದೊಡ್ಡ ಚುನಾವಣೆಗಳಲ್ಲಿ ಗೆಲುವು ತಂದುಕೊಡುವಷ್ಟು ನೖಪುಣ್ಯ ಹೊಂದಿರುವ ವ್ಯಕ್ತಿಯೋರ್ವರು ಶೀಘ್ರ ಜೆಡಿಎಸ್ ಸೇರ್ಪಡೆಯಾಗುವ ಸಾಧ್ಯತೆ ಇದೆ. 

ಹಾಸನ [ಮಾ.02]:  ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಜೆಡಿಎಸ್‌ಅನ್ನು ಪೂರ್ಣ ಪ್ರಮಾಣದಲ್ಲಿ ಅಧಿಕಾರಕ್ಕೆ ತರುವ ಹಿನ್ನೆಲೆಯಲ್ಲಿ ರಾಜಕೀಯ ಚಾಣಾಕ್ಷ ಪ್ರಶಾಂತ್‌ ಕಿಶೋರ್‌ ಅವರನ್ನು ಜೆಡಿಎಸ್‌ಗೆ ಕರೆತರುವ ವಿಚಾರ ಸದ್ಯದಲ್ಲೇ ಪರಿಪೂರ್ಣವಾಗಲಿದೆ ಎಂದು ಮಾಜಿ ಪ್ರಧಾನಿ ಎಚ್‌.ಡಿ. ದೇವೇಗೌಡ ಹೇಳಿದ್ದಾರೆ.

ಭಾನುವಾರ ಹಾಸನ ನಗರದ ರೇಲ್ವೆ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಾಜಿ ಸಿಎಂ ಎಚ್‌.ಡಿ. ಕುಮಾರಸ್ವಾಮಿ ಈಗಾಗಲೇ ಕಿಶೋರ್‌ ಅವರ ಜೊತೆ ಮಾತುಕತೆ ನಡೆಸಿದ್ದಾರೆ. ಈ ವಿಚಾರವನ್ನು ನನಗೂ ತಿಳಿಸಿದ್ದಾರೆ. ಶೀಘ್ರದಲ್ಲೇ ಆ ವಿಚಾರ ಅಂತಿಮವಾಗಲಿದೆ ಎಂದು ಹೇಳಿದರು.

ಎಲ್ಲರೂ ಒದ್ದಾಗ ನಾನೊಬ್ಬನೇ ಎದ್ದೆ:

ಪ್ರಶಾಂತ್‌ ಕಿಶೋರ್‌ ಬರುವುದಕ್ಕಿಂತ ಹೆಚ್ಚಾಗಿ ನಾನೇ ರಾಜ್ಯದ ಮೂಲೆಮೂಲೆಗಳಿಗೂ ಹೋಗಿ ಪಕ್ಷ ಸಂಘಟಿಸುವುದು ಗೊತ್ತಿದೆ. ಸಂಘಟನೆ ಮಾಡುವ ಉತ್ಸಾಹ ಇನ್ನೂ ಕುಗ್ಗಿಲ್ಲ. 1989ರಲ್ಲಿ ಎಲ್ಲರೂ ಒದ್ದರು. ಆಗ ನಾನೊಬ್ಬನೇ ಎದ್ದೆ. ಆಗ ನನ್ನ ಜೊತೆ ಬಿ.ಎಲ್‌. ಶಂಕರ್‌, ವೈ.ಎಸ್‌.ವಿ. ದತ್ತ, ಉಗ್ರಪ್ಪ ಮಾತ್ರ. ಈ ವೇಳೆ ಮತ್ತೆ ಪಕ್ಷ ಕಟ್ಟಲಿಲ್ಲವೇ?. ನನ್ನ ಉತ್ಸಾಹ ಬತ್ತಿಲ್ಲ. ಮತ್ತೆ ಪಕ್ಷ ಕಟ್ಟುತ್ತೇನೆ. ನನಗೆ 87 ವರ್ಷ ವಯಸ್ಸಾದರೂ ಮತ್ತೆ ರಾಜ್ಯದ ಮೂಲೆ ಮೂಲೆ ಸುತ್ತುತ್ತೇನೆ. ಕೆ.ಆರ್‌. ಪೇಟೆಯಲ್ಲಿ ಕಾರ್ಯಕರ್ತರಿಗೆ ಅನ್ಯಾಯವಾಗಿದೆ ಅಂತಾ ಅಲ್ಲಿಗೆ ಹೋಗಿದ್ದೆ. ಆದರೆ ವಿರೋಧ ಪಕ್ಷದವರು ತಾತ ಮತ್ತು ಮೊಮ್ಮಗ ಪಕ್ಷ ಕಟ್ಟೋಕೆ ಬಂದಿದ್ದಾರೆಂದು ಅಪಹಾಸ್ಯ ಮಾಡಿದ್ದಾರೆ. ಆ ಬಗ್ಗೆ ಕಿವಿಗೊಡಲ್ಲ. ಪಕ್ಷ ಸಂಘಟನೆಯತ್ತ ಮಾತ್ರ ನನ್ನ ಚಿತ್ತ ಎಂದು ಹೇಳಿದರು.

ಒಬ್ಬಿಬ್ಬರು ಹೋದರೆ ಪಕ್ಷಕ್ಕೆ ನಷ್ಟವಿಲ್ಲ ಅಂದ ಗೌಡ್ರು : ಯಾರಿದ್ದಾರೆ JDS ಲಿಸ್ಟ್ ನಲ್ಲಿ?...

ಅಮೆರಿಕ ಅಧ್ಯಕ್ಷ ಟ್ರಂಪ್‌ ಅವರು ಬಂದಿದ್ದಾಗ ನಡೆದ ದೆಹಲಿ ಹಿಂಸಾಚಾರವನ್ನು ತಡೆಯುವಲ್ಲಿ ಗುಪ್ತದಳ ಮತ್ತು ಕೇಂದ್ರ ಸರ್ಕಾರ ಎರಡೂ ವಿಫಲವಾಗಿವೆ ಎಂದು ಟೀಕಿಸಿದರು.

click me!