
ಬೆಂಗಳೂರು (ಮೇ.09): ರಾಜ್ಯದಲ್ಲಿನ (Karnataka) ಬಂಜರು ಭೂಮಿಯನ್ನು ಫಲವತ್ತಾಗಿಸಲು ವಿಶ್ವ ಬ್ಯಾಂಕ್ ಸಹಕಾರದಲ್ಲಿ ನೂತನವಾಗಿ ಆರಂಭಿಸಿರುವ ಜಲಾನಯನ ಉತ್ಕೃಷ್ಟತಾ ಕೇಂದ್ರದ (ಸಿಒಇ) ವೈಜ್ಞಾನಿಕ ಕಾರ್ಯಕ್ರಮ ಹಮ್ಮಿಕೊಳ್ಳಬೇಕು ಎಂದು ಕೇಂದ್ರ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಗಿರಿರಾಜ್ ಸಿಂಗ್ (Giriraj Singh) ಸಲಹೆ ನೀಡಿದರು.
ಭಾನುವಾರ ಗಾಂಧಿ ಕೃಷಿ ವಿಜ್ಞಾನ ಕೇಂದ್ರದಲ್ಲಿ (ಜಿಕೆವಿಕೆ) ಆಯೋಜಿಸಿದ್ದ ವಿಶ್ವ ಬ್ಯಾಂಕ್ ನೆರವಿನ ರಾಷ್ಟ್ರಮಟ್ಟದ ‘ರಿವಾರ್ಡ್’ ಯೋಜನೆ, ‘ಜಲಾನಯನ ಉತ್ಕೃಷ್ಟತಾ ಅಧ್ಯಯನ ಕೇಂದ್ರ’ ಉದ್ಘಾಟನೆ ಮತ್ತು ಎಫ್‌ಪಿಓಗಳ ಏಕರೂಪ ಬ್ರಾಂಡಿಂಗ್ ಸ್ಪರ್ಧೆಯ ಅನಾವರಣ ಹಾಗೂ ಅತ್ಯುತ್ತಮ ರೈತ ಉತ್ಪಾದಕರ ಸಂಸ್ಥೆಗಳಿಗೆ (ಎಫ್‌ಪಿಓ) ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಮಾತನಾಡಿದರು.
ಬಂಜರು ಭೂಮಿಗೆ ಯೋಜನೆಗಳ ಮೂಲಕ ನೀರು ಒದಗಿಸಿದ ನಂತರ ಫಲವತ್ತಾಗುವ ಭೂಮಿಯಲ್ಲಿ ತಜ್ಞರು, ವಿಜ್ಞಾನಿಗಳ ಸಲಹೆ ಮೇರೆಗೆ ಆಹಾರ ಧಾನ್ಯಗಳ ಜತೆಗೆ ಲಾಭದಾಯಕವಾದ ತೋಟಗಾರಿಕೆ ಬೆಳೆ ಬೆಳೆಯುವ ಪ್ರಯೋಗಕ್ಕೆ ಮುಂದಾಗಬೇಕು. 2050ರ ವೇಳೆಗೆ ಮನುಷ್ಯ ಸೇವಿಸುವಷ್ಟೇ ಆಹಾರ ಧಾನ್ಯಗಳನ್ನು ಜಾನುವಾರು, ಕೋಳಿ, ಮೀನುಗಳಿಗೆ ನೀಡುವ ಸವಾಲು ಎದುರಿಸುವ ಸಾಧ್ಯತೆ ಇದೆ. ಹೀಗಾಗಿ ಇಂದಿನಿಂದಲೇ ವೈಜ್ಞಾನಿಕ ಕೃಷಿಗೆ ಹೆಚ್ಚು ಒತ್ತು ನೀಡಬೇಕು ಎಂದು ತಿಳಿಸಿದರು.
Yadgir: ತಾಯಿಗಾಗಿ ದೇವಸ್ಥಾನ ಕಟ್ಟಿದ ಶಾಸಕ ರಾಜೂಗೌಡ: ಅಮೃತ ಶಿಲೆಯಿಂದ ನಿರ್ಮಾಣ
ಸುಜಲಾ ಫಲಿತಾಂಶ ಪರಿಶೀಲಿಸಿ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಾತನಾಡಿ, ಜಲಾನಯನ ಅಭಿವೃದ್ಧಿ ಯೋಜನೆಯ (ಸುಜಲಾ) ಸಮರ್ಪಕ ಅನುಷ್ಠಾನ, ಫಲಿತಾಂಶ, ಆಗಿರುವ ಸುಧಾರಣೆ ಕುರಿತು ಅಧಿಕಾರಿಗಳು ಪರಿಶೀಲಿಸಬೇಕು. ಕೃಷಿ ವಿವಿ ತಜ್ಞರು, ವಿದ್ಯಾರ್ಥಿಗಳು ಕ್ಯಾಂಪಸ್ ಆಧಾರಿತ ಸಂಶೋಧನೆ ಬಿಟ್ಟು ಭೂಮಿ, ರೈತರ ಭೂಮಿ ಆಧಾರಿತ ಸಂಶೋಧನೆ ನಡೆಸಬೇಕು. ಆಗ ಬೆಳೆರೋಗ, ಕೀಟಬಾಧೆ, ಗೊಬ್ಬರ ತಳಿ ಮತ್ತಿತರ ಕೃಷಿ ಸಮಸ್ಯೆಗಳಿಗೆ ಪರಿಹಾರ ಒದಗಿಸಲು ಸಹಾಯವಾಗುತ್ತದೆ ಎಂದರು.
ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ಖಾತೆ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ, ಸಚಿವರಾದ ಬಿ.ಸಿ.ಪಾಟೀಲ್, ಎಸ್.ಟಿ.ಸೋಮಶೇಖರ್, ಮುನಿರತ್ನ, ಒಡಿಶಾ ರಾಜ್ಯದ ಕೃಷಿ ಮತ್ತು ರೈತರ ಸಬಲೀಕರಣ ಸಚಿವ ಅರುಣ್ ಕುಮಾರ್ ಸಾಹೋ, ಪರಿಷತ್ ಸದಸ್ಯ ಪಿ.ಆರ್.ರಮೇಶ್, ಜಲಾನಯನ ಅಭಿವೃದ್ಧಿ ಮತ್ತು ಕೃಷಿ ಇಲಾಖೆ ಅಧಿಕಾರಿಗಳು, ಕೇಂದ್ರ ಹಾಗೂ ರಾಜ್ಯ ಸರ್ಕಾರದ ಕಾರ್ಯದರ್ಶಿಗಳು ಮತ್ತಿತರರು ಉಪಸ್ಥಿತರಿದ್ದರು.
ನಕಲಿ ಬೀಜದ ಹಾವಳಿ ವಿರುದ್ಧ ನಿಗಾ: ನಕಲಿ ಕೃಷಿ ಬೀಜ ಪೂರೈಸುವ ಕಂಪನಿಗಳ ವಿರುದ್ಧ ಸರ್ಕಾರ ನಿಗಾ ವಹಿಸಲಿದೆ. ರಾಜ್ಯದಲ್ಲಿ ಕೇಂದ್ರದ ಪ್ರತಿ ಜಿಲ್ಲೆಯಲ್ಲಿ 75 ಕೆರೆ ಪುನಶ್ಚೇತನದ ‘ಅಮೃತ ಸರೋವರ ಮಿಷನ್’ ಯೋಜನೆಯನ್ನು ಅನುಷ್ಠಾನಕ್ಕೆ ತರಲಿದ್ದೇವೆ. ಸುಜಲಾ ಯೋಜನೆಯಡಿ ಕಲಬುರಗಿ, ರಾಯಚೂರು, ಬೀದರ್ ಹಾಗೂ ಚಿಕ್ಕಬಳ್ಳಾಪುರ, ಕೋಲಾರದ ಭಾಗದ ಬಂಜರು ಭೂಮಿ ಮತ್ತು ಜವಳು ಭೂಮಿಯನ್ನು ಫಲವತ್ತಾಗಿಸಬೇಕು.
Chikkamagaluru: ಕಾಫಿನಾಡಿನಲ್ಲಿ ಪ್ರೇಕ್ಷಕರ ಮನಸೂರೆಗೊಂಡ ಆಟೋ ಕ್ರಾಸ್ ರ್ಯಾಲಿ
ಈಗಾಗಲೇ ರಾಜ್ಯದಲ್ಲಿದ್ದ ಸುಮಾರು 4ಲಕ್ಷ ಹೆಕ್ಟೇರ್‌ಗೂ ಹೆಚ್ಚು ಬಂಜರು ಭೂಮಿಯಲ್ಲಿ 1.5 ಲಕ್ಷ ಹೆಕ್ಟೇರ್ ಪ್ರದೇಶ ಫಲವತ್ತುಗೊಳಿಸಲಾಗಿದೆ. ಸಮಗ್ರ ಕೃಷಿಯಲ್ಲಿ ಕೃಷಿ ಅರಣ್ಯ, ತೋಟಗಾರಿಕೆ, ಹೈನುಗಾರಿಕೆಯಲ್ಲಿ ಪರಿಸ್ಪರ ಸಂಪರ್ಕ ಸಾಧಿಸಿ ಮಣ್ಣಿನ ಫಲವತ್ತತೆ ಹೆಚ್ಚಿಸಬೇಕು ಎಂದು ಬೊಮ್ಮಾಯಿ ಹೇಳಿದರು. ಕಾರ್ಯಕ್ರಮದಲ್ಲಿ ಕೃಷಿ ಮಾಹಿತಿ ಒದಗಿಸುವ 100 ಕೃಷಿ ಸಂಜೀವಿನಿ ವಾಹನಗಳನ್ನು ಮುಖ್ಯಮಂತ್ರಿ ಬೊಮ್ಮಾಯಿ ಲೋಕಾರ್ಪಣೆ ಮಾಡಿದರು.