* ದೇಶದಲ್ಲಿ ರಸಗೊಬ್ಬರ ಕೊರತೆ ಇಲ್ಲ
* ಅಧಿಕ ಮಳೆ ಹಾಗೂ ಬೇಗ ಮಳೆಯಾಗಿದ್ದರಿಂದ ರಸಗೊಬ್ಬರ ಬೇಡಿಕೆ ಹೆಚ್ಚಾಗಿದೆ
* ಗವಿಮಠಶ್ರೀಗಳ ದರ್ಶನ ಪಡೆದ ಖೂಬಾ
ಕೊಪ್ಪಳ(ಆ.20): ಅಕ್ರಮ ಗಣಿಗಾರಿಕೆ ಆರೋಪ ಎದುರಿಸುತ್ತಿದ್ದ ಮಾಜಿ ಸಚಿವ ಗಾಲಿ ಬಳ್ಳಾರಿ ಜಿಲ್ಲೆಗೆ ಆಗಮಿಸಲು ನ್ಯಾಯಾಲಯ ಅವಕಾಶ ನೀಡಿರುವುದು ಒಳ್ಳೆಯದು ಎಂದು ಕೇಂದ್ರ ರಸಗೊಬ್ಬರ ಖಾತೆ ರಾಜ್ಯ ಸಚಿವ ಭಗವಂತ ಖೂಬಾ ಹೇಳಿದ್ದಾರೆ.
undefined
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಹಳ ದಿನಗಳಿಂದಲೂ ಅವರು ಬಳ್ಳಾರಿಗೆ ಹೋಗಬೇಕು ಎಂದುಕೊಂಡಿದ್ದರು. ಆದರೆ ಆಗಿರಲಿಲ್ಲ , ಈಗ ಅವಕಾಶ ಸಿಕ್ಕಿರುವುದು ಒಳ್ಳೆಯದು ಎಂದು ನ್ಯಾಯಾಲಯದ ಆದೇಶವನ್ನು ಸ್ವಾಗತಿಸಿದ್ದಾರೆ.
ಯಾದಗಿರಿಯಲ್ಲಿ ನಾಡಬಂದೂಕಿನಿಂದ ತಮ್ಮನ್ನು ಸ್ವಾಗತ ಮಾಡಿದ ಹಿನ್ನೆಲೆಯಲ್ಲಿ ಮೂರು ಜನ ಪೊಲೀಸರ ಅಮಾನತು ಮಾಡಿರುವುದು ನನಗೇನು ಗೊತ್ತಿಲ್ಲ. ಬಿಡುವು ಆದ ನಂತರ ಕೇಳುತ್ತೇನೆ ಎಂದರು. ಬಾಬುರಾವ್ ಚಿಂಚಸನೂರು ಬೆಂಬಲಿಗರು ಎಂಬ ಆರೋಪದ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಲು ನಿರಾಕರಿಸಿದ ಅವರು, ಅದಕ್ಕೆ ಚಿಂಚಸನೂರು ಉತ್ತರಿಸುತ್ತಾರೆ ಎಂದಷ್ಟೇ ಹೇಳಿದರು. ದೇಶದಲ್ಲಿ ಯಾವುದೇ ರಸಗೊಬ್ಬರ ಕೊರತೆ ಇಲ್ಲ. ಆದರೆ ಈ ಬಾರಿ ಅಧಿಕ ಮಳೆ ಹಾಗೂ ಬೇಗ ಮಳೆಯಾಗಿದ್ದರಿಂದ ರಸಗೊಬ್ಬರ ಬೇಡಿಕೆ ಹೆಚ್ಚಾಗಿದೆ. ಅಗತ್ಯಕ್ಕೆ ತಕ್ಕಂತೆ ರಸಗೊಬ್ಬರ ಪೂರೈಸಲಾಗುವುದು ಎಂದಷ್ಟೇ ಹೇಳಿದರು.
ಯಾದಗಿರಿ; ನಾಡಬಂದೂಕಿನಿಂದ ಗುಂಡು ಪ್ರಕರಣ, ಮೂವರು ಪೊಲೀಸರು ಸಸ್ಪೆಂಡ್!
ಗವಿಮಠಶ್ರೀಗಳ ದರ್ಶನ
ಕೇಂದ್ರ ಸಚಿವ ಭಗವಂತ ಖೂಬಾ, ಸಚಿವ ಹಾಲಪ್ಪ ಆಚಾರ್, ಸಂಸದ ಸಂಗಣ್ಣ ಕರಡಿ ಹಾಗೂ ಶಾಸಕರು ಗವಿಮಠಕ್ಕೆ ಭೇಟಿ ನೀಡಿ, ಶ್ರೀ ಗವಿಸಿದ್ಧೇಶ್ವರ ಮಹಾಸ್ವಾಮಿಗಳ ಆಶೀರ್ವಾದ ಪಡೆದರು.
ಕೋವಿಡ್ ನಿಯಮ ಉಲ್ಲಂಘನೆ
ಜನಸಾಮಾನ್ಯರಿಗೆ ಹುಲಿಗೆಮ್ಮ ದೇವಿ ದರ್ಶನ ಬಂದ್ ಆದರೂ ಕೇಂದ್ರ ಸಚಿವ ಭಗವಂತ ಖೂಬಾ, ಸಚಿವ ಹಾಲಪ್ಪ ಆಚಾರ್ ಹಾಗೂ ಸಂಸದ ಸಂಗಣ್ಣ ಕರಡಿ ಸೇರಿದಂತೆ ಬಿಜೆಪಿ ಮುಖಂಡರು ದೇವಿ ದರ್ಶನ ಪಡೆದಿರುವುದು ವ್ಯಾಪಕ ಟೀಕೆಗೆ ಗುರಿಯಾಗಿದೆ. ಸಾಮಾನ್ಯರಿಗೊಂದು ನ್ಯಾಯ, ಜನಪ್ರತಿನಿಧಿಗಳಿಗೊಂದು ನ್ಯಾಯವೇ ಎನ್ನುವುದು ಸಾಮಾಜಿಕ ಜಾಲತಾಣಗಳಲ್ಲಿ ಸಹಜವಾಗಿಯೇ ಹರಿದಾಡುತ್ತಿದೆ.
ಆ. 31ರ ವರೆಗೂ ಜನಸಾಮಾನ್ಯರಿಗೆ ಹುಲಿಗೆಮ್ಮ ದೇವಿ ದರ್ಶನ ಬಂದ್ ಮಾಡಿ ಆದೇಶಿಸಿದ ಕೊಪ್ಪಳ ಸಹಾಯಕ ಆಯುಕ್ತರು ದೇವಸ್ಥಾನದ ಸುತ್ತಲೂ 2 ಕಿಮೀ ದೂರದವರೆಗೂ ನಿಷೇಧಾಜ್ಞೆ ಜಾರಿ ಮಾಡಿದ್ದಾರೆ. ಆದರೆ ಸರ್ಕಾರದ ಆದೇಶದಂತೆ ಜಿಲ್ಲಾಡಳಿತ ಮಾಡಿರುವ ಆದೇಶವನ್ನು ಉಲ್ಲಂಘನೆ ಮಾಡಿದಂತೆ ಆಗಿದೆ.