ಉಪನಗರ ರೈಲ್ವೆ ಯೋಜನೆ : ಸಿಗುತ್ತಿಲ್ಲ ಅನುಮೋದನೆ!

By Kannadaprabha NewsFirst Published Oct 1, 2019, 8:51 AM IST
Highlights

ಬೆಂಗಳೂರಿನ ಬಹು ನಿರೀಕ್ಷಿತ ಉಪನಗರ ರೈಲು ಯೋಜನೆಯ ಪರಿಷ್ಕೃತ ವಿಸ್ತೃತ ಯೋಜನಾ ವರದಿಗೆ (ಡಿಪಿಆರ್‌) ಕೇಂದ್ರ ಸಚಿವ ಸಂಪುಟ ಈವರೆಗೂ ಅನುಮೋದನೆ ನೀಡದ ಹಿನ್ನೆಲೆಯಲ್ಲಿ ಯೋಜನೆ ಅನುಷ್ಠಾನ ಮತ್ತಷ್ಟು ವಿಳಂಬವಾಗುವ ಸಾಧ್ಯತೆ ಇದೆ.
 

ಬೆಂಗಳೂರು [ಸೆ.01]:  ರಾಜಧಾನಿ ಬೆಂಗಳೂರಿನ ಮೇಲೆ ಒತ್ತಡ ಕಡಿಮೆ ಮಾಡುವ ಉದ್ದೇಶ ಹೊಂದಿರುವ ಬಹು ನಿರೀಕ್ಷಿತ ಉಪನಗರ ರೈಲು ಯೋಜನೆಯ ಪರಿಷ್ಕೃತ ವಿಸ್ತೃತ ಯೋಜನಾ ವರದಿಗೆ (ಡಿಪಿಆರ್‌) ಕೇಂದ್ರ ಸಚಿವ ಸಂಪುಟ ಈವರೆಗೂ ಅನುಮೋದನೆ ನೀಡದ ಹಿನ್ನೆಲೆಯಲ್ಲಿ ಯೋಜನೆ ಅನುಷ್ಠಾನ ಮತ್ತಷ್ಟು ವಿಳಂಬವಾಗುವ ಸಾಧ್ಯತೆ ಇದೆ.

ನಗರದ ಸಂಚಾರ ದಟ್ಟಣೆ ತಗ್ಗಿಸುವ ಉದ್ದೇಶದಿಂದ ರಾಜ್ಯ ಹಾಗೂ ಕೇಂದ್ರ ಸರ್ಕಾರ ರೂಪಿಸಿರುವ ಉಪನಗರ ರೈಲು ಯೋಜನೆಗೆ ಸಂಬಂಧಿಸಿದಂತೆ ಎರಡು ಬಾರಿ ಡಿಪಿಆರ್‌ ಸಿದ್ಧಪಡಿಸಲಾಗಿದೆ. ಪರಿಷ್ಕೃತ ಡಿಪಿಆರ್‌ ಅನುಮೋದನೆಗೆ ಕೇಂದ್ರ ಸರ್ಕಾರಕ್ಕೆ ಕಳುಹಿಸಿದ್ದು, ಕೇಂದ್ರ ಸಚಿವ ಸಂಪುಟದ ಒಪ್ಪಿಗೆ ಅಗತ್ಯವಿದೆ. ಈವರೆಗೂ ಸಚಿವ ಸಂಪುಟ ಒಪ್ಪಿಗೆ ನೀಡದ ಪರಿಣಾಮ ವಿಶೇಷ ಉದ್ದೇಶ ವಾಹನ(ಎಸ್‌ಪಿವಿ) ಸ್ಥಾಪನೆಗೆ ಹಿನ್ನಡೆಯಾಗಿದೆ.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಈ ಎಸ್‌ಪಿವಿ ಅಡಿಯಲ್ಲಿ ರಾಜ್ಯ ಹಾಗೂ ಕೇಂದ್ರ ಸರ್ಕಾರ ಯೋಜನಾ ವೆಚ್ಚದ ತಲಾ ಶೇ.20ರಷ್ಟುಹಣ ಭರಿಸಬೇಕು. ಉಳಿದ ಶೇ.60ರಷ್ಟುಹಣವನ್ನು ಬ್ಯಾಂಕ್‌ ಅಥವಾ ಹಣಕಾಸು ಸಂಸ್ಥೆಯಿಂದ ಸಾಲ ಪಡೆಯಬೇಕು. ಪರಿಷ್ಕೃತ ಡಿಪಿಆರ್‌ಗೆ ಕೇಂದ್ರ ಸಚಿವ ಸಂಪುಟ ಇನ್ನೂ ಒಪ್ಪಿಗೆ ನೀಡದ ಪರಿಣಾಮ ಎಸ್‌ಪಿವಿ ರಚನೆ ನೆನೆಗುದಿಗೆ ಬಿದ್ದಿದೆ. ಹಾಗಾಗಿ ಉಪನಗರ ರೈಲು ಯೋಜನೆ ಅನುಷ್ಠಾನ ವಿಳಂಬವಾಗುತ್ತಿದೆ.

ಪರಿಷ್ಕೃತ ಡಿಪಿಆರ್‌:  ಉಪನಗರ ರೈಲು ಯೋಜನೆಯ ಪರಿಷ್ಕೃತ ಡಿಪಿಆರ್‌ ಅನ್ವಯ 161 ಕಿ.ಮೀ. ಉದ್ದದ ರೈಲು ಸಂಪರ್ಕ ಮಾರ್ಗ ನಿರ್ಮಾಣವಾಗಲಿದೆ. ಇದು 60 ಕಿ.ಮೀ. ಉದ್ದದ ಎಲಿವೇಟೆಡ್‌ ಮಾರ್ಗ ಮತ್ತು 101 ಕಿ.ಮೀ. ಉದ್ದದ ನೆಲಮಟ್ಟದ ಮಾರ್ಗ ಹಾಗೂ ಹಳೆಯ ಮಾರ್ಗದ ಅಭಿವೃದ್ಧಿ ಒಳಗೊಂಡಿದೆ. ಪ್ರಮುಖವಾಗಿ ಕೆಂಗೇರಿ- ವೈಟ್‌ಫೀಲ್ಡ್‌, ಬೆಂಗಳೂರು ನಗರ ನಿಲ್ದಾಣ- ರಾಜನುಕುಂಟೆ, ನೆಲಮಂಗಲ- ಬೈಯ್ಯಪ್ಪನಹಳ್ಳಿ ಮತ್ತು ಬೊಮ್ಮಸಂದ್ರ- ದೇವನಹಳ್ಳಿ ಕಾರಿಡಾರ್‌ ಇರಲಿದೆ. ಈ ಡಿಪಿಆರ್‌ ಪ್ರಕಾರ 53 ಹೊಸ ನಿಲ್ದಾಣ ನಿರ್ಮಾಣವಾಗಲಿದೆ. ಉಳಿದಂತೆ ಹಾಲಿ ಇರುವ 29 ನಿಲ್ದಾಣಗಳು ಯೋಜನೆ ವ್ಯಾಪ್ತಿಗೆ ಬರಲಿವೆ. ಯೋಜನೆ ಅನುಷ್ಠಾನಕ್ಕೆ .18 ಸಾವಿರ ಕೋಟಿ ವೆಚ್ಚವಾಗಲಿದೆ ಎಂದು ಅಂದಾಜಿಸಲಾಗಿದೆ.

ಬೆಂಗಳೂರು ಉಪನಗರ ರೈಲು ಯೋಜನೆಯ ಪರಿಷ್ಕೃತ ಡಿಪಿಆರ್‌ ಕೇಂದ್ರ ಸರ್ಕಾರಕ್ಕೆ ಸಲ್ಲಿಸಲಾಗಿದೆ. ಕೇಂದ್ರ ಸಚಿವ ಸಂಪುಟದ ಅನುಮೋದನೆ ದೊರೆತರಷ್ಟೇ ಎಸ್‌ಪಿವಿ ರಚನೆ ಸೇರಿದಂತೆ ಮುಂದಿನ ತೀರ್ಮಾನ ಕೈಗೊಳ್ಳಲು ಸಾಧ್ಯ.

-ಅಶೋಕ್‌ಕುಮಾರ್‌ ವರ್ಮಾ, ಬೆಂಗಳೂರು ರೈಲ್ವೆ ವಿಭಾಗೀಯ ವ್ಯವಸ್ಥಾಪಕ.

click me!