ತಂತಿ ಮೇಲಿನ ನಡಿಗೆ: ಸಿಎಂ ಹೇಳಿಕೆಗೆ ಸಂಸದೆ ಸಮರ್ಥನೆ

By Kannadaprabha NewsFirst Published Oct 1, 2019, 8:47 AM IST
Highlights

ಉಪ ಚುನಾವಣೆಯಲ್ಲಿ ಬಿಜೆಪಿ ಶಾಸಕರನ್ನು ಗೆಲ್ಲಿಸುವ ಪ್ರಯತ್ನ ಮಾಡಬೇಕಿದೆ, ಸರ್ಕಾರ ಸ್ಥಿರವಾದ ಬಳಿಕ ಯಾವುದೇ ಸಮಸ್ಯೆ ಇರುವುದಿಲ್ಲ ಎಂದು ಉಡುಪಿ-ಚಿಕ್ಕಮಗಳೂರು ಸಂಸದೆ ಶೋಭಾ ಕರಂದ್ಲಾಜೆ ಹೇಳಿದ್ದಾರೆ. ಈ ಮೂಲಕ ಸಿಎಂ ಯಡಿಯೂರಪ್ಪ ಹೇಳಿಕೆಯನ್ನು ಶೋಭಾ ಕರಂದ್ಲಾಜೆ ಸಮರ್ಥಿಸಿಕೊಂಡಿದ್ದಾರೆ.

ಉಡುಪಿ(ಅ.01): ರಾಜ್ಯ ಸರ್ಕಾರಕ್ಕೆ ಪೂರ್ಣ ಬಹುಮತ ದೊರಕುವ ತನಕ ನಮ್ಮದು ತಂತಿ ಮೇಲಿನ ನಡಿಗೆ ಹೌದು, ಉಪ ಚುನಾವಣೆಯಲ್ಲಿ ಬಿಜೆಪಿ ಶಾಸಕರನ್ನು ಗೆಲ್ಲಿಸುವ ಪ್ರಯತ್ನ ಮಾಡಬೇಕಿದೆ, ಸರ್ಕಾರ ಸ್ಥಿರವಾದ ಬಳಿಕ ಯಾವುದೇ ಸಮಸ್ಯೆ ಇರುವುದಿಲ್ಲ ಎಂದು ಉಡುಪಿ-ಚಿಕ್ಕಮಗಳೂರು ಸಂಸದೆ ಶೋಭಾ ಕರಂದ್ಲಾಜೆ ಹೇಳಿದ್ದಾರೆ.

‘ನನ್ನದು ತಂತಿ ಮೇಲಿನ ನಡಿಗೆ’ ಎಂಬ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರ ಹೇಳಿಕೆಯನ್ನು ಸಮರ್ಥಿಸಿ ಸೋಮವಾರ ಉಡುಪಿಯಲ್ಲಿ ಮಾತನಾಡಿದ ಶೋಭಾ, ಮುಖ್ಯಮಂತ್ರಿ ಅವರ ಹೇಳಿಕೆ ಸಹಜ. ಯಾಕೆಂದರೆ ಉಪಚುನಾವಣೆ ಇನ್ನಷ್ಟೇ ಆಗಬೇಕಿದೆ. ನಮ್ಮಲ್ಲಿ ಕೇವಲ 106 ಮಂದಿ ಶಾಸಕರಿದ್ದಾರೆ. ಬಹುಮತ ಸಾಧಿಸಲು 113 ಶಾಸಕರು ಆಗಲೇಬೇಕು ಎಂದರು.

ಬೊಕೆ ಕೊಟ್ರೆ ನೋ ಪ್ಲಾಸ್ಟಿಕ್ ಎಂದ್ರು ಕೇಂದ್ರ ಸಚಿವ..!

ಮಂತ್ರಿಗಿರಿ ಅಪೇಕ್ಷೆ ತಪ್ಪಲ್ಲ: ಬಿಜೆಪಿಯ ಹಿರಿಯ ಮುಖಂಡ ಉಮೇಶ್‌ ಕತ್ತಿ ಹಾಗೂ ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಅವರ ಪರಸ್ಪರ ಆಕ್ಷೇಪದ ಹೇಳಿಕೆ ಕುರಿತು ಮಾತನಾಡಿದ ಶೋಭಾ ಕರಂದ್ಲಾಜೆ, ಸರ್ಕಾರದಲ್ಲಿ ಸಚಿವರಾಗಿರುವವ ಸಂಖ್ಯೆ ಕಡಿಮೆ ಇದೆ. ಹಿರಿಯ ಶಾಸಕರಿಗೆಲ್ಲಾ ಮಂತ್ರಿಗಳಾಗುವ ಅಪೇಕ್ಷೆ ಇದೆ, ಅಪೇಕ್ಷೆ ತಪ್ಪಲ್ಲ. ಯಾಕೆಂದರೆ ಹಿರಿಯ ಶಾಸಕರೆಲ್ಲ ತಮ್ಮ ಸ್ಥಾನಗಳಲ್ಲಿ ಅನೇಕ ಬಾರಿ ಗೆದ್ದಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಅತೃಪ್ತರ ಬೇಡಿಕೆಗಳನ್ನು ತೃಪ್ತಿಪಡಿಸುವು ಸಹಜವಾಗಿ ಕಷ್ಟದ ಕೆಲಸ ಎಂದು ಹೇಳಿದರು.

ನೇತ್ರಾವತಿ ಸೇತುವೆಯಲ್ಲಿ ಮತ್ತೊಂದು ಆತ್ಮಹತ್ಯೆ: ಮಕ್ಕಳೊಂದಿಗೆ ನದಿಗೆ ಹಾರಿದ ಮಹಿಳೆ

‘ಉಪ ಚುನಾವಣೆ ಬಳಿಕ ರಾಜ್ಯ ಸರ್ಕಾರ ಪತನವಾಗಲಿದೆ’ ಎಂಬ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿಕೆಗೆ ಪ್ರತಿಕ್ರಿಯಿಸಿದ ಶೋಭಾ, ಸರ್ಕಾರ ಪತನ ಸಿದ್ದರಾಮಯ್ಯ ಕಾಣುತ್ತಿರುವ ಕನಸು. ನರಿಗೆ ದ್ರಾಕ್ಷಿ ಹುಳಿಯಾಗಿಯೇ ಇರುತ್ತೆ, ಬಾಯಿಗೆ ಸಿಗಲ್ಲ ಎಂದು ವ್ಯಂಗ್ಯವಾಡಿದರು.

ನಳಿನ್‌-ಬಿಎಸ್‌ವೈ ಭಿನ್ನಾಭಿಪ್ರಾಯವಿಲ್ಲ:

ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಹಾಗೂ ರಾಜ್ಯಾಧ್ಯಕ್ಷ ನಳಿನ್‌ ಕುಮಾರ್‌ ಕಟೀಲು ನಡುವಿನ ಸಮನ್ವಯ ಕೊರತೆ ವಿಚಾರದಲ್ಲಿ ಮಾತನಾಡಿದ ಅವರು, ಯಡಿಯೂರಪ್ಪ 40 ವರ್ಷಗಳ ರಾಜಕಾರಣ ಮಾಡಿದ್ದಾರೆ. ನಳಿನ್‌ ಕುಮಾರ್‌ ಸಂಘ ಪರಿವಾರದ ಹಿನ್ನೆಲೆಯಿಂದ ಬಂದವರು. ಬಿಜೆಪಿ ಮತ್ತು ಸರ್ಕಾರ ಎರಡೂ ಒಟ್ಟು ಸೇರಿ ರಾಜ್ಯದ ಅಭಿವೃದ್ಧಿ ಮಾಡುತ್ತದೆ. ನಮ್ಮಲ್ಲಿ ಯಾವುದೇ ಭಿನ್ನಾಭಿಪ್ರಾಯ, ಭಿನ್ನಮತ ಇಲ್ಲ ಎಂದು ಸ್ಪಷ್ಟಪಡಿಸಿದರು.

ಬಿಬಿಎಂಪಿ-ಎಲ್ಲವೂ ಸರಿ ಹೋಗುತ್ತದೆ:

ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ ಮೇಯರ್‌ ಆಯ್ಕೆ ವಿಚಾರದ ಕುರಿತು ಮಾತನಾಡಿದ ಸಂಸದೆ, ಪ್ರಾಮಾಣಿಕವಾಗಿ ಒಪ್ಪಿಕೊಳ್ಳಬೇಕೆಂದರೆ ಬಿಬಿಎಂಪಿಯಲ್ಲಿ ಬಿಜೆಪಿ ಬಹುಮತ ಇಲ್ಲ. ಏನಾದರೂ ಮಾಡಿ ಬಹುಮತ ಸಾಬೀತು ಮಾಡಬೇಕು. ಬೆಂಗಳೂರಿನ ನಾಯಕರ ವಿಶೇಷ ಪ್ರಯತ್ನದಿಂದ ಎಲ್ಲಾ ಸರಿಯಾಗುತ್ತೆ ಎಂದರು.

click me!