ಗಂಗಾವತಿ: ತುಂಗಭದ್ರೆಯಲ್ಲಿ ಅನಧಿಕೃತ ತೆಪ್ಪಗಳ ಸಂಚಾರ ಅವ್ಯಾಹತ

By Kannadaprabha NewsFirst Published Nov 3, 2022, 10:00 AM IST
Highlights

ಅಪಾಯದ ಜಲಾಶಯದಲ್ಲಿ ಮೋಜು ಮಸ್ತಿಗಾಗಿ ತೆಪ್ಪಗಳಲ್ಲಿ ಪ್ರವಾಸಿಗರ ಸುತ್ತಾಟ

ರಾಮಮೂರ್ತಿ ನವಲಿ

ಗಂಗಾವತಿ(ನ.03):  ತಾಲೂಕಿನ ತುಂಗಭದ್ರಾ ನದಿ ಸೇರಿದಂತೆ ಸಣ್ಣಾಪುರದ ಎಡದಂಡೆ ಕಾಲುವೆ ಮೈಲ್‌ ನಂ. 14ರಲ್ಲಿನ ಸಮಾನಾಂತರ ಜಲಾಶಯದಲ್ಲಿ ಅನಧಿಕೃತವಾಗಿ ತೆಪ್ಪಗಳ ಸಂಚಾರ ನಡೆದಿದ್ದು, ಇದರಿಂದ ತೆಪ್ಪಗಳ ಮಾಲೀಕರು ಪ್ರವಾಸಿಗರಿಂದ ಹಣ ವಸೂಲಿ ಮಾಡುತ್ತಿದ್ದಾರೆ. ಜಿಲ್ಲಾಡಳಿತ ಸಣ್ಣಾಪುರ, ಋುಷಿಮುಖ ಬೆಟ್ಟ ಮತ್ತು ಸಣ್ಣಾಪುರ ಗ್ರಾಮದ ಹಳೆಯ ಪ್ರವಾಸಿ ಮಂದಿರದ ಹತ್ತಿರುವಿರುವ ನದಿಯಲ್ಲಿ ತೆಪ್ಪಗಳನ್ನು ಹಾಕುತ್ತಿದ್ದು, ಇದರಿಂದ ಪ್ರವಾಸಿಗರಿಗೆ ಜೀವಭಯ ಇಲ್ಲದಂತಾಗಿದೆ. ಈ ಹಿಂದೆ ತೆಪ್ಪಗಳನ್ನು ಹಾಕಬಾರದೆಂದು ಹಿಂದಿನ ಜಿಲ್ಲಾಧಿಕಾರಿ ಮತ್ತು ನೀರಾವರಿ ಇಲಾಖೆಯವರು ಎಚ್ಚರಿಕೆ ನೀಡಿದ್ದರು. ಆದರೆ ಈಗ ಜಿಲ್ಲಾಧಿಕಾರಿಗಳು ಮತ್ತು ನೀರಾವರಿ ಅಧಿಕಾರಿಗಳ ಸೂಚನೆ ಗಾಳಿಗೆ ತೂರಿದ ತೆಪ್ಪಗಳ ಮಾಲೀಕರು ಪ್ರವಾಸಿಗರಿಂದ ಅಧಿಕ ಹಣ ವಸೂಲಿ ಮಾಡಿ ತೆಪ್ಪದಲ್ಲಿ ಕೂರಿಸಿ ಸುತ್ತಾಡುತ್ತಿದ್ದಾರೆ.

ಪ್ರವಾಸಿಗರಿಗೆ ಮೋಜು:

ಹಂಪಿ ಮತ್ತು ಸಣ್ಣಾಪುರ, ಋುಷಿಮುಖ ಬೆಟ್ಟ, ಹನುಮಹಳ್ಳಿ, ಜಂಗ್ಲಿ ಪ್ರದೇಶದಲ್ಲಿರುವ ರೆಸಾರ್ಚ್‌ಗಳಲ್ಲಿ ತಂಗುತ್ತಿದ್ದ ಪ್ರವಾಸಿಗರಿಗೆ ರೆಸಾರ್ಚ್‌ ಮಾಲೀಕರು ಮತ್ತು ಅವರ ಏಜೆಂಟರು ಪ್ರವಾಸಿಗರಿಗೆ ನದಿಯಲ್ಲಿ ತೆಪ್ಪ ಹಾಕಿ ಮೋಜು ನೀಡುವುದಾಗಿ ಹೇಳಿ ಜಲಾಶಯಕ್ಕೆ ಕರೆದುಕೊಂಡು ಹೋಗಿ ತೆಪ್ಪ ಹಾಕುತ್ತಿದ್ದಾರೆ. ಒಬ್ಬಬ್ಬೊರಿಗೆ 500ರಿಂದ 1000 ವಸೂಲಿ ಮಾಡುತ್ತಿದ್ದಾರೆಂಬ ದೂರು ಇದೆ.

ಕೊಪ್ಪಳ ತಾಲೂಕಿನ ಶಿವಪುರವೇ ಆಂಜನೇಯ ತಾಯಿ ಜನ್ಮಸ್ಥಳ!

ಅಪಾಯದ ಜಲಾಶಯ:

ತುಂಗಭದ್ರಾ ನದಿಯಿಂದ ನೀರು ಹರಿದು ಬರುತ್ತಿರುವ ಸಣ್ಣಾಪುರ ಸಮಾನಾಂತರ ಜಲಾಶಯ ಆಳವಾಗಿದ್ದು, ಗುಡ್ಡ ಬೆಟ್ಟಗಳ ಮಧ್ಯೆ ಜಲಾಶಯ ನಿರ್ಮಿಸಲಾಗಿದೆ. ಈ ಪ್ರದೇಶದಲ್ಲಿ ಒಂದಿಲ್ಲ ಒಂದು ಅವಘಡ ಸಂಭವಿಸಿರುವ ಉದಾಹರಣೆಗಳಿವೆ. ಕಳೆದ ನಾಲ್ಕು ವರ್ಷಗಳಲ್ಲಿ 6 ಪ್ರವಾಸಿಗರು ಮೃತಪಟ್ಟಿದ್ದಾರೆ.

ಮದುವೆ ಶೂಟಿಂಗ್‌:

ಬೆಟ್ಟಗುಡ್ಡಗಳು ಮತ್ತು ನದಿ, ಜಲಾಶಯದ ಸುತ್ತಮತ್ತ ರಮಣೀಯ ಸ್ಥಳವಿದ್ದು, ಇಲ್ಲಿ ಮದುವೆ ಶೂಟಿಂಗ್‌ಗಾಗಿ ಹೊರ ಜಿಲ್ಲೆಗಳಿಂದ ಮದುವೆಯಾಗುವರು ಬರುತ್ತಿದ್ದಾರೆ. ಇಂತಹ ಜೋಡಿಗಳಿಂದ ತೆಪ್ಪ ಮಾಲೀಕರು .5ರಿಂದ .10 ಸಾವಿರ ವಸೂಲಿ ಮಾಡುತ್ತಿದ್ದು, ಬೆಳಗ್ಗೆಯಿಂದ ಸಂಜೆಯವರೆಗೂ ತೆಪ್ಪದಲ್ಲಿ ಸುತ್ತಾಡಿಸುತ್ತಾರೆ. ಈ ಪ್ರದೇಶ ಅಪಾಯ ಸ್ಥಳ ಎಂದು ಪೊಲೀಸ್‌ ಮತ್ತು ಅರಣ್ಯ ಇಲಾಖೆಯವರು ಎಚ್ಚರಿಕೆ ನಾಮಫಲಕ ಹಾಕಿದ್ದರೂ ಗಮನ ಹರಿಸದೆ ಜಲಾಶಯಕ್ಕೆ ಇಳಿಯುತ್ತಿದ್ದಾರೆ.

ಕೊಪ್ಪಳ: ದೀಪಾವಳಿ ಮಹಾಲಕ್ಷ್ಮಿ ಪೂಜೆಯೊಂದಿಗೆ ಕುಮಾರಸ್ವಾಮಿ ಫೋಟೋಗೂ ಪೂಜೆ..!

ಕಾಡುಪ್ರಾಣಿಗಳ ಹಾವಳಿ:

ಸಮಾನಾಂತರ ಜಲಾಶಯದ ಸುತ್ತಲು ಬೆಟ್ಟಗುಡ್ಡಗಳಿದ್ದು, ಈ ಪ್ರದೇಶದ ಸುತ್ತಲು ಚಿರತೆ ಮತ್ತು ಕರಡಿಗಳು ಸಂಚಾರ ಮಾಡುತ್ತಿವೆ. ಕಳೆದ ವರ್ಷ ಜಲಾಶಯದ ಸುತ್ತಮುತ್ತಲಿರುವ ಜಂಗ್ಲಿ ಮತ್ತು ವಿರೂಪಾಪುರಗಡ್ಡೆ, ದುರ್ಗಾ ಬೆಟ್ಟಗಳಲ್ಲಿ ಇಬ್ಬರನ್ನು ತಿಂದು ಹಾಕಿರುವ ಚಿರತೆ ಹಲವಾರು ಜನರ ಮೇಲೆ ದಾಳಿ ನಡೆಸಿವೆ. ದನಕರುಗಳ ಮೇಲೆಯೂ ದಾಳಿ ಮಾಡಿವೆ. ಈ ಪ್ರದೇಶದಲ್ಲಿ ಯಾರೂ ಹೋಗಬಾರದೆಂದು ಅರಣ್ಯ ಇಲಾಖೆ ಸೂಚನೆ ನೀಡಿದೆ. ಆದರೆ ತೆಪ್ಪ ಹಾಕುವರು ಮಾತ್ರ ಇಲಾಖೆಯವರ ಸೂಚನೆ ಧಿಕ್ಕರಿಸುತ್ತಿದ್ದಾರೆ.

ಸಣ್ಣಾಪುರದ ಎಡದಂಡೆ ಕಾಲುವೆ ಮೈಲ್‌ ನಂ. 14ರಲ್ಲಿನ ಸಮಾನಾಂತರ ಜಲಾಶಯದಲ್ಲಿ ಅನಧಿಕೃತವಾಗಿ ತೆಪ್ಪಗಳ ಸಂಚಾರ ನಡೆದಿದ್ದು, ಇದರ ಬಗ್ಗೆ ಮೌಖಿಕವಾಗಿ ತೆಪ್ಪ ಮಾಲೀಕರಿಗೆ ಸೂಚನೆ ನೀಡಲಾಗಿದೆ. ಅಲ್ಲದೆ ಈ ಜಲಾಶಯದ ರಸ್ತೆ ಮೇಲೆ ವಾಹನಗಳ ಸಂಚಾರ ನಿಷೇಧಿಸಲಾಗಿದೆ. ತೆಪ್ಪ ಮಾಲೀಕರ ವಿರುದ್ಧ ದೂರು ದಾಖಲಿಸಲಾಗುತ್ತಿದೆ. ನೀರಾವರಿ ಇಲಾಖೆಯ ವ್ಯಾಪ್ತಿ ಬರುವ ಈ ಜಲಾಶಯದಲ್ಲಿ ಯಾರು ತೆಪ್ಪ ಮತ್ತು ಮೀನು ಹಿಡಿಯಬಾರದೆಂದು ಸೂಚನೆ ನೀಡಿದೆ ಅಂತ ನೀರಾವರಿ ಇಲಾಖೆ ಕಿರಿಯ ಅಭಿಯಂತರ ಅಮರೇಶ ಸಿಂಧನೂರು ತಿಳಿಸಿದ್ದಾರೆ.  
 

click me!