ಪುತ್ತೂರು: ಊಟಕ್ಕೆ ಹೊರಹೋಗಲು ಬಿಡದ್ದಕ್ಕೆ ವಿದ್ಯಾರ್ಥಿಗಳ ಪ್ರತಿಭಟನೆ

By Web DeskFirst Published Jul 17, 2019, 11:21 PM IST
Highlights

ಕರಾಳ ಪ್ರಕರಣವೊಂದು ನಡೆದು ಮಾಸಿಹೋಗಿದೆ. ಆದರೆ ಅದರ ಪರಿಣಾಮವನ್ನು ವಿದ್ಯಾರ್ಥಿ ಸಮುದಾಯ ಅನುಭವಿಸುವಂತಾಗಿದೆ.

ಪುತ್ತೂರು([ಜು. 17]  ಮಧ್ಯಾಹ್ನ ಊಟದ ವಿರಾಮದ ವೇಳೆಯಲ್ಲಿ ವಿದ್ಯಾರ್ಥಿಗಳು ಕಾಲೇಜ್ ಕ್ಯಾಂಪಸ್ ಬಿಟ್ಟು ಹೊರಗಡೆಗೆ ಹೋಗದಂತೆ ಕಾಲೇಜ್‌ನ ಆಡಳಿತ ಮಂಡಳಿ ನಿರ್ಬಂಧ ವಿಧಿಸಿರುವುದನ್ನು ಖಂಡಿಸಿ ಪುತ್ತೂರಿನ ವಿವೇಕಾನಂದ ಕಾಲೇಜು ವಿದ್ಯಾರ್ಥಿಗಳು ಮಂಗಳವಾರ ಮಧ್ಯಾಹ್ನ ಕಾಲೇಜು ಆವರಣದಲ್ಲಿ ಪ್ರತಿಭಟನೆ ನಡೆಸಿದರು. 

ಕೆಲ ದಿನಗಳ ಹಿಂದೆ ನಡೆದ ವಿದ್ಯಾರ್ಥಿನಿಯ ಸಾಮೂಹಿಕ ಅತ್ಯಾಚಾರ ಘಟನೆಯ ಹಿನ್ನಲೆಯಲ್ಲಿ ಕಾಲೇಜ್ ಆಡಳಿತ ಮಂಡಳಿ ಶಿಸ್ತು ಕ್ರಮ ಕೈಗೊಂಡಿದ್ದು, ವಿದ್ಯಾರ್ಥಿಗಳು ಕಾಲೇಜ್‌ನಿಂದ ಹೊರಹೋಗದಂತೆ ಪ್ರಧಾನ ಗೇಟ್‌ಗೆ ಬೀಗ ಹಾಕಿ ಕಟ್ಟು ನಿಟ್ಟಿನ ಕ್ರಮ ಕೈಗೊಂಡಿತ್ತು. 

ಇದರಿಂದಾಗಿ ಬೆಳಗ್ಗೆ ಕಾಲೇಜ್‌ಗೆ ಹಾಜರಾದ ವಿದ್ಯಾರ್ಥಿಗಳು ಸಂಜೆ ತರಗತಿ ಮುಕ್ತಾಯವಾಗುವ ಸಂಜೆ 4 ಗಂಟೆಯ ತನಕ ಕ್ಯಾಂಪಸ್‌ನಿಂದ ಹೊರ ಹೋಗಲು ಅವಕಾಶವಿಲ್ಲದಾಗಿದೆ. ಮಧ್ಯಾಹ್ನದ ಊಟಕ್ಕೆ ಮನೆಯಿಂದ ಬುತ್ತಿ ತರಬೇಕು ಇಲ್ಲವೇ ಕಾಲೇಜ್ ಕ್ಯಾಂಟೀನ್‌ನಲ್ಲಿ ಊಟ ಮಾಡಬೇಕು ಎಂಬ ಸೂಚನೆ ನೀಡಲಾಗಿತ್ತು ಎನ್ನಲಾಗಿದೆ. 

ಪುತ್ತೂರು ಘಟನೆ ವಿಡಿಯೋ ವೈರಲ್ ಹಿಂದಿನ ಕಾರಣ ಬಹಿರಂಗ, ಮತ್ತೆ 8 ಜನರ ಬಂಧನ

ಏಕಾಏಕಿ ಕಾಲೇಜು ಆಡಳಿತ ಮಂಡಳಿ ಜಾರಿಗೊಳಿಸಿದ ನಿಯಮದಿಂದ ಆಕ್ರೋಶಗೊಂಡ ವಿದ್ಯಾರ್ಥಿಗಳು ಮಧ್ಯಾಹ್ನದ ಅವಧಿಯಲ್ಲಿ ಕಾಲೇಜು ಆವರಣದೊಳಗೆ ಕಾಲೇಜ್‌ನ ಪ್ರಧಾನ ಗೇಟ್ ಬಳಿಯಲ್ಲಿ ಮಧ್ಯಾಹ್ನ 1 ಗಂಟೆಯಿಂದ 3 ಗಂಟೆಯ ತನಕ ಪ್ರತಿಭಟನೆ ನಡೆಸಿದರು. ಈ ನಡುವೆ ಕಾಲೇಜ್‌ನ ಸಂಚಾಲಕರು, ಪ್ರಾಂಶುಪಾಲರು ಹಾಗೂ ಉಪನ್ಯಾಸಕರು ಸ್ಥಳಕ್ಕೆ ಆಗಮಿಸಿ ಪ್ರತಿಭಟನಾ ನಿರತ ವಿದ್ಯಾರ್ಥಿಗಳ ಮನವೊಲಿಸಲು ಪ್ರಯತ್ನ ನಡೆಸಿದರೂ ಕೇಳದ ವಿದ್ಯಾರ್ಥಿಗಳು ಪ್ರತಿಭಟನೆಯನ್ನು ಮುಂದುವರಿಸಿದ್ದರು. 

ವಿದ್ಯಾರ್ಥಿಗಳ ಆರೋಪವೇನು?: ಮಧ್ಯಾಹ್ನ ಕೇವಲ ಒಂದು ಗಂಟೆಯ ಅವಧಿಗೆ ಊಟದ ವಿರಾಮವಿದೆ. ಕ್ಯಾಂಪಸ್ ಒಳಗಡೆ ಕೇವಲ 2 ಕ್ಯಾಂಟೀನ್ ಮಾತ್ರವಿದೆ. ಇಲ್ಲಿ ಸಾವಿರಾರು ವಿದ್ಯಾರ್ಥಿಗಳು ಊಟ ಮಾಡುವುದು ಸಾಧ್ಯವಿಲ್ಲ. ಅಲ್ಲದೆ ಬೆಳಗ್ಗೆ 9 ಗಂಟೆಗೆ ತರಗತಿಗೆ ಹಾಜರಾದರೆ 4 ಗಂಟೆಯ ತನಕ ಹೊರಗಡೆ ಹೋಗುವಂತಿಲ್ಲ. ನಾವು ಪೇಯಿಂಗ್ ಗೆಸ್ಟ್‌ಗೆ ಮುಂಗಡ ಹಣ ಪಾವತಿಸಿದ್ದು, ಕಾಲೇಜ್‌ನ ನಿರ್ಬಂಧದಿಂದಾಗಿ ಮಧ್ಯಾಹ್ನದ ಊಟಕ್ಕಾಗಿ ಪ್ರತಿದಿನ 30 ರುಪಾಯಿ ವ್ಯಯಿಸಬೇಕಾಗುತ್ತದೆ. ನಾವು ಯಾವುದೇ ರೀತಿಯ ಅನ್ಯಾಯ ಮಾಡಿಲ್ಲ ಹಾಗಿದ್ದರೂ ನಮ್ಮ ಮೇಲೆ ಇಂತಹ ಕ್ರಮ ಸರಿಯಲ್ಲ ಎಂದು ವಿದ್ಯಾರ್ಥಿ ಸುದೀಪ್ ಅಳಲು ತೋಡಿಕೊಂಡರು.

ಕಾಲೇಜ್‌ನಲ್ಲಿ ಪ್ರತಿಭಟನೆ ನಡೆಯುತ್ತಿದ್ದ ಮಾಹಿತಿ ಅರಿತು ನಾವು ಅಲ್ಲಿಗೆ ಹೋಗಿದ್ದೆವು. ಆದರೆ ಕ್ಯಾಂಪಸ್ ಒಳಗಡೆ ವಿದ್ಯಾರ್ಥಿಗಳು ಶಾಂತಿಯುತವಾಗಿ ಪ್ರತಿಭಟನೆ ನಡೆಸುತ್ತಿದ್ದರು. ಕಾಲೇಜ್ ಕ್ಯಾಂಪಸ್‌ನ ಒಳಗಡೆ ಪ್ರತಿಭಟನೆ ನಡೆಯುತ್ತಿರುವುದರಿಂದ ನಾವು ಅಲ್ಲಿಗೆ ಪ್ರವೇಶಿಸಿಲ್ಲ ಎಂದು  ಪುತ್ತೂರು ನಗರ ಠಾಣೆ ಇನ್ಸ್ ಪೆಕ್ಟರ್ -ತಿಮ್ಮಪ್ಪ ನಾಯ್ಕ್ ತಿಳಿಸಿದ್ದಾರೆ.

click me!