
ಉಡುಪಿ: ಕಳೆದ ಹತ್ತು ವರ್ಷಗಳಿಂದ ಉಡುಪಿಯಲ್ಲಿ ಕೃಷ್ಣ ಜನ್ಮಾಷ್ಟಮಿಯ ಸಂದರ್ಭದಲ್ಲಿ ವಿಭಿನ್ನ ವೇಷಭೂಷಣಗಳನ್ನು ಧರಿಸಿ ಹಣ ಸಂಗ್ರಹಿಸಿ, ತೀವ್ರ ಅನಾರೋಗ್ಯದಿಂದ ನರಳುವ ಬಡಕುಟುಂಬದ ಮಕ್ಕಳ ಚಿಕಿತ್ಸೆಗೆ ದಾನ ಮಾಡುವ ಸಮಾಜ ಸೇವಕ ರವಿ ಕಟಪಾಡಿ ಈ ಬಾರಿ ಸಂಗ್ರಹಿಸಿದ 42 ಲಕ್ಷ ರೂ.ಗಳನ್ನು 14 ಮಕ್ಕಳ ಚಿಕಿತ್ಸೆಗೆ ದಾನ ಮಾಡಿದ್ದಾರೆ.
ಈ ಬಾರಿ ರವಿ ಕಟಪಾಡಿ ಅವರು ಹಾಲಿವುಡ್ ಸಿನಿಮಾ ಮೆರ್ಮೈಡ್ ಎಂಬ ಫ್ಯಾಂಟಸಿ ಪಾತ್ರದ ಅತ್ಯಂತ ಕ್ಲಿಷ್ಟಕರ ವೇಷಧರಿಸಿ ಬೀದಿಬೀದಿ ಸುತ್ತಿ ಜನರಿಗೆ ಮನರಂಜನೆ ನೀಡಿ 42 ಲಕ್ಷ ರೂ.ಗಳನ್ನು ಸಂಗ್ರಹಿಸಿದ್ದರು. 2 ದಿನಗಳ ಕಾಲ ರಾತ್ರಿಹಗಲು ಅವರು ಇದೇ ವೇಷದಲ್ಲಿ ಅಗಾಧವಾಗಿದ್ದ ಕಷ್ಟವನ್ನೂ ಬಡ ಅನಾರೋಗ್ಯ ಮಕ್ಕಳಗಾಗಿ ಇಷ್ಟದಿಂದ ಅನುಭವಿಸುತ್ತಾ ಇಷ್ಟು ದೊಡ್ಡ ಮೊತ್ತವನ್ನು ಸಂಗ್ರಹಿಸಿದ್ದಾರೆ.
ಈ ಮೊತ್ತವನ್ನು ಕಟಪಾಡಿ ಶ್ರೀ ಕ್ಷೇತ್ರ ಪೇಟೆಬೆಟ್ಟುವಿನಲ್ಲಿ ಶುಕ್ರವಾರ ನಡೆದ ಸಮಾರಂಭದಲ್ಲಿ ಹಸ್ತಾಂತರಿಸಲಾಯಿತು. ಕೇಮಾರು ಸಾಂದೀಪನಿ ಸಾಧನಾಶ್ರಮದ ಶ್ರೀ ಈಶವಿಠಲದಾಸ ಸ್ವಾಮೀಜಿ ಸಮಾರಂಭವನ್ನು ಉದ್ಘಾಟಿಸಿ, ರವಿ ಮತ್ತುವರ ಬಳಗದವರು ದೇವರ ಪೂಜೆಯಂತೆ ಈ ಕಾರ್ಯವನ್ನು ನಡೆಸುತ್ತಾ ಕೃತಾರ್ಥರಾಗುತ್ತಿದ್ದಾರೆ. ಈ ಸಹಾಯವನ್ನು ಪಡೆದುಕೊಂಡವರು ರವಿ ಕಟಪಾಡಿ ಅವರಿಗೆ ಸದಾ ಕೃತಜ್ಞರಾಗಿರಿ ಎಂದು ಕರೆ ನೀಡಿದರು.
ರವಿ ಕಟಪಾಡಿ ಮಾತನಾಡಿ, ಇದುವರೆಗೆ ತಾವು ಗೆಳೆಯರ ಸಹಾಯದಿಂದ 2 ಕೋಟಿ ರೂ.ಗೂ ಹೆಚ್ಚು ಹಣವನ್ನು ಸಂಗ್ರಹಿಸಿದ್ದು, 216 ಅನಾರೋಗ್ಯ ಪೀಡಿತ ಮಕ್ಕಳ ವೈದ್ಯಕೀಯ ಚಿಕಿತ್ಸೆಗೆ ನೀಡಿದ್ದು, ತಮ್ಮಿಂದ ಈ ಕೆಲಸ ಮಾಡಿಸುತ್ತಿರುವ ಸಮಾಜದ ದಾನಿಗಳಿಗೆ ಸದಾ ಕೃತಜ್ಞನಾಗಿದ್ದೇನೆ ಎಂದರು. ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕ ಹರಿರಾಮ್ ಶಂಕರ್, ಅಪರ ಜಿಲ್ಲಾಧಿಕಾರಿ ಅಬೀದ್ ಗದ್ಯಾಳ, ತಾಪಂ ಕಾರ್ಯ ನಿರ್ವಹಣಾಧಿಕಾರಿ ವಿಜಯಾ, ಶ್ರೀ ಕ್ಷೇತ್ರ ಪೇಟೆಬೆಟ್ಟು ಬಬ್ಬುಸ್ವಾಮಿ ಕೊರಗಜ್ಜ ದೈವಸ್ಥಾನದ ಗುರಿಕಾರ ಹರೀಶ್ಚಂದ್ರ ಪಿಲಾರು ಅವರು ಮಕ್ಕಳಿಗೆ ಸಹಾಯಧನವನ್ನು ವಿತರಿಸಿದರು.
ಉದ್ಯಮಿ ರಾಜೇಶ್ ಮಾಬಿಯನ್, ಮಾರ್ಗದರ್ಶಕ ಮಹೇಶ್ ಶೆಟ್ಟಿ, ಜಿತೇಶ್ ಕುಮಾರ್ ಉಪಸ್ಥಿತರಿದ್ದರು. ರಘುಯಲ್ಲಪ್ಪ ಸ್ವಾಗತಿಸಿ, ನಿರೂಪಿಸಿದರು.