
ಹಾಸನ (ನ.01): ವರ್ಷಕ್ಕೆ ಒಮ್ಮೆ ಮಾತ್ರ ಬಾಗಿಲು ತೆರೆಯುವ ಪ್ರಸಿದ್ಧ ಹಾಸನಾಂಬ ದೇವಾಲಯದ ದರ್ಶನ ಪಡೆಯಲು ರಾಜ್ಯದ ಮೂಲೆ ಮೂಲೆಯಿಂದ ಲಕ್ಷಾಂತರ ಭಕ್ತರು ಹರಿದುಬಂದಿದ್ದಾರೆ. ದೇವಿಯ ದರ್ಶನಕ್ಕಾಗಿ ಭಕ್ತರು ಸುಮಾರು 2 ರಿಂದ 3 ಕಿ.ಮೀ ದೂರದವರೆಗೆ ಸರತಿ ಸಾಲಿನಲ್ಲಿ ಗಂಟೆಗಟ್ಟಲೆ ಕಾದು ನಿಲ್ಲುತ್ತಿದ್ದಾರೆ. ಮಧ್ಯರಾತ್ರಿಯಾದರೂ ಸಾಲು ಕರಗದ ಕಾರಣ ಸಾವಿರಾರು ಜನರು ಸುಮಾರು 7 ರಿಂದ 8 ಗಂಟೆಗಳ ಕಾಲ ಸಾಲಿನಲ್ಲಿ ನಿಂತು ಹೈರಾಣಾಗಿದ್ದರು. ಇಂತಹ ಅಚ್ಚರಿಯ ಹಾಗೂ ದಣಿವಿನ ವಾತಾವರಣದ ನಡುವೆಯೇ ಭಕ್ತರು ಮಧ್ಯರಾತ್ರಿ 1 ಗಂಟೆಯ ಸುಮಾರಿಗೆ ಸರತಿ ಸಾಲಿನಲ್ಲಿಯೇ ಕನ್ನಡ ರಾಜ್ಯೋತ್ಸವವನ್ನು ಅತ್ಯಂತ ವಿಭಿನ್ನವಾಗಿ ಮತ್ತು ಸಡಗರದಿಂದ ಆಚರಿಸಿದ್ದಾರೆ.
ಅಕ್ಟೋಬರ್ 30ರಂದು ದರ್ಶನಕ್ಕೆಂದು ಸರತಿ ಸಾಲಿನಲ್ಲಿ ನಿಂತಿದ್ದ ಭಕ್ತಾದಿಗಳಿಗೆ ಮಧ್ಯರಾತ್ರಿ ಕಳೆದರೂ ದರ್ಶನ ಸಿಗುವುದು ವಿಳಂಬವಾಗಿತ್ತು. ಸತತವಾಗಿ ಸಾಲಿನಲ್ಲಿ ನಿಂತು ಸುಸ್ತಾಗಿದ್ದ ಭಕ್ತರ ಉತ್ಸಾಹವನ್ನು ಇಮ್ಮಡಿಸುವಂತೆ, ಕನ್ನಡ ರಾಜ್ಯೋತ್ಸವದ ನಿಮಿತ್ತ ಹಾಸನ ಜಿಲ್ಲಾಡಳಿತ ಹಾಗೂ ದೇವಾಲಯದ ಆಡಳಿತ ಮಂಡಳಿಯು ರಾತ್ರಿ 1 ಗಂಟೆ ಸುಮಾರಿಗೆ ಮೈಕ್‌ನಲ್ಲಿ 'ಹುಟ್ಟಿದರೇ ಕನ್ನಡ ನಾಡಿನಲ್ಲಿ ಹುಟ್ಟಬೇಕು' ಎಂಬ ಜನಪ್ರಿಯ ಗೀತೆಯನ್ನು ಪ್ರಸಾರ ಮಾಡಿದರು.
ಹಾಸನಾಂಬೆ ದೇವಿಯ ದರ್ಶನಕ್ಕೆ ಸುಮಾರು ಏಳೆಂಟು ಗಂಟೆಗಳ ಕಾಲ ಸರತಿ ಸಾಲಿನಲ್ಲಿ ನಿಂತುಕೊಂಡು ಆಗಿದ್ದ ದಣಿವನ್ನು ಮರೆಸಿ, ಕನ್ನಡದ ಧ್ವನಿ ಮೊಳಗುತ್ತಿದ್ದಂತೆ ಸರತಿ ಸಾಲಿನಲ್ಲಿ ನಿಂತಿದ್ದ ಸಾವಿರಾರು ಭಕ್ತರು ಮೈಮರೆತು ಕುಣಿಯುತ್ತಾ, ಹಾಡಿಗೆ ತಕ್ಕಂತೆ ಹೆಜ್ಜೆ ಹಾಕುತ್ತಾ ದೇವಿಯ ದರ್ಶನಕ್ಕೆ ಸಾಗಿದರು. ಕೇವಲ ಭಕ್ತರು ಮಾತ್ರವಲ್ಲದೆ, ದೇವಾಲಯದಲ್ಲಿ ಭಕ್ತರಿಗೆ ಸೌಲಭ್ಯ ಕಲ್ಪಿಸಲು ಹಾಗೂ ಭದ್ರತೆ ಒದಗಿಸಲು ನಿಯೋಜಿಸಲಾಗಿದ್ದ ನಿರ್ವಹಣಾ ಸಿಬ್ಬಂದಿ ಮತ್ತು ಪೊಲೀಸರು ಕೂಡ ಹಾಡಿಗೆ ತಕ್ಕಂತೆ ಹೆಜ್ಜೆ ಹಾಕಿ ತಮ್ಮ ಸಂತಸ ವ್ಯಕ್ತಪಡಿಸಿದರು.
ಸುದೀರ್ಘ ಸರತಿ ಸಾಲಿನ ದಣಿವನ್ನು ಮರೆಸಿ, ಕನ್ನಡ ರಾಜ್ಯೋತ್ಸವದ ಈ ಅಪರೂಪದ ಸಂಭ್ರಮವು ಭಕ್ತಾದಿಗಳಿಗೆ ಮತ್ತಷ್ಟು ಹರ್ಷ ಹಾಗೂ ರೋಮಾಂಚನವನ್ನುಂಟು ಮಾಡಿತು. ಈಮೂಲಕ ರಾಜ್ಯದಲ್ಲಿ ಮೊದಲ ಬಾರಿಗೆ ಮಧ್ಯರಾತ್ರಿಯಲ್ಲಿ ಕನ್ನಡ ರಾಜ್ಯೋತ್ಸವವನ್ನು ಆಚರಣೆ ಮಾಡಿದ ಸ್ಥಳವೆಂದರೆ ಹಾಸನಾಂಬ ದೇಗುಲದ ಆವರಣ ಎಂದರೂ ತಪ್ಪಾಗಲಾರದು.