ರಾಜ್ಯದಲ್ಲಿ ಅತ್ಯಧಿಕ ಹೆಚ್ಚು ಮಳೆ ಉಡುಪಿ ಜಿಲ್ಲೆಯಲ್ಲಿ ಸುರಿದಿದೆ. ಮುಂಗಾರಿನ ಅಬ್ಬರ ಬೇರೆಲ್ಲಾ ಜಿಲ್ಲೆಗಳಿಗಿಂತ ಉಡುಪಿಯಲ್ಲಿ ಅಧಿಕವಾಗಿದೆ.
ವರದಿ-ಶಶಿಧರ ಮಾಸ್ತಿಬೈಲು, ಏಷ್ಯಾನೆಟ್ ಸುವರ್ಣ ನ್ಯೂಸ್, ಉಡುಪಿ
ಉಡುಪಿ(ಅ.06): ಕೊನೆಗೂ ಕರಾವಳಿ ಜಿಲ್ಲೆ ಉಡುಪಿಯಲ್ಲಿ ಮುಂಗಾರು ವಿರಾಮ ಕೊಟ್ಟಿದೆ. ಪ್ರತಿದಿನ ಅಪರೂಪಕ್ಕೊಮ್ಮೆ ತುಂತುರು ಮಳೆಯಾಗುವುದು ಬಿಟ್ಟರೆ ಬಹುತೇಕ ಬಿಸಿಲಿನ ವಾತಾವರಣ ತೆರೆದುಕೊಂಡಿದೆ. ಈ ಋತುವಿನ ಮಳೆಯ ಲೆಕ್ಕಾಚಾರದಲ್ಲಿ ಉಡುಪಿ ಜಿಲ್ಲೆ ಮುಂಚೂಣಿಯಲ್ಲಿದೆ. ರಾಜ್ಯದಲ್ಲಿ ಅತ್ಯಧಿಕ ಹೆಚ್ಚು ಮಳೆ ಉಡುಪಿ ಜಿಲ್ಲೆಯಲ್ಲಿ ಸುರಿದಿದೆ. ಮುಂಗಾರಿನ ಅಬ್ಬರ ಬೇರೆಲ್ಲಾ ಜಿಲ್ಲೆಗಳಿಗಿಂತ ಉಡುಪಿಯಲ್ಲಿ ಅಧಿಕವಾಗಿದೆ.
ಕಳೆದ ಕೆಲವು ವರ್ಷಗಳಿಂದ ಉಡುಪಿ ಜಿಲ್ಲೆಯಲ್ಲಿ ಅತಿ ಹೆಚ್ಚು ಮಳೆ ಸುರಿಯುತ್ತಿದೆ. ಜೂನ್ ನಿಂದ ಸೆಪ್ಟೆಂಬರ್ ತನಕ ಮುಂಗಾರು ಮಳೆ ಸುರಿದಿದ್ದು ಉಡುಪಿ ಜಿಲ್ಲೆ ರಾಜ್ಯದಲ್ಲೇ ಅತ್ಯಧಿಕ, 3998 ಮಿಮೀ ಮಳೆ ಕಂಡಿದೆ. ಈ ಅವಧಿಗೆ ಉಡುಪಿ ಜಿಲ್ಲೆಯ ವಾಡಿಕೆಯ ಮಳೆ, 4022 ಮಿ.ಮೀ ಆಗಿದ್ದು ವಾಡಿಕೆ ಗಿಂತ ಸ್ವಲ್ಪ ಮಟ್ಟಿನ ಮಳೆ ಕೊರತೆಯಾಗಿದೆ. ಆದರೆ ಜನವರಿ ಒಂದರಿಂದ ಸೆಪ್ಟಂಬರ್ 30ರವರೆಗಿನ ವಾಡಿಕೆಯ ಮಳೆ, 4223 ಮಿಮೀ ಗೆ ಹೊಲಿಸಿದರೆ ಉಡುಪಿ ಜಿಲ್ಲೆಯಲ್ಲಿ ಈ ಬಾರಿ ಶೇ.4.92 ಹೆಚ್ಚು ಅಂದರೆ, 4431 ಮಿಮೀ ಮಳೆ ಸುರಿದಿದ್ದು ಇದು ಕೂಡ ರಾಜ್ಯದಲ್ಲಿ ಅತ್ಯಧಿಕವೆನಿಸಿದೆ.
ಉಚ್ಚಿಲ ದಸರಾ: ಸಮುದ್ರ ತೀರದಲ್ಲಿ ನವದೇವಿಯರಿಗೆ ಕಡಲಾರತಿ
ಮಳೆ ಹೆಚ್ಚಾದಂತೆ ಕೃಷಿಹಾನಿಯ ಪ್ರಮಾಣವೂ ಉಡುಪಿ ಜಿಲ್ಲೆಯಲ್ಲಿ ಹೆಚ್ಚಾಗಿದೆ. ಮುಂಗಾರು ಕಾಲದಲ್ಲಿ 3926 ಹೆಕ್ಟೇರ್ ಭತ್ತ ಕೃಷಿ ಮುಳಗಡೆ ಯಾಗಿದೆ. ಈ ಪೈಕಿ 1342 ಹೆಕ್ಟೇರ್ ಸಂಪೂರ್ಣ ಹಾನಿಯಾಗಿದೆ. ಬಿತ್ತನೆ ನಾಟಿ ತಡವಾದ ಕಾರಣ ಅಕ್ಟೋಬರ್ ಮೂರನೇ ವಾರಕ್ಕೆ ಆರಂಭವಾಗಬೇಕಾಗಿದ್ದ ಭತ್ತದ ಕೊಯ್ಲು ನವಂಬರ್ ಅಂತ್ಯದವರೆಗೂ ಮುಂದುವರೆಯುವ ಸಾಧ್ಯತೆ ಇದೆ. ಈ ನಡುವೆ ಸುಮಾರು 50 ಹೆಕ್ಟೇರ್ ತೋಟಗಾರಿಕಾ ಬೆಳೆ ಹಾನಿಯಾಗಿದ್ದು, ಪರಿಹಾರ ಪಾವತಿಗೆ ಕಂದಾಯ ಇಲಾಖೆಗೆ ಶಿಫಾರಸು ಮಾಡಲಾಗಿದೆ.
ವಿಪರೀತ ಮಳೆಯಿಂದಾಗಿ ಭತ್ತದ ಕೃಷಿ ಚಟುವಟಿಕೆ ಬಹಳಷ್ಟು ತಡವಾಗಿದೆ. 15 ದಿನಗಳಿಂದ ಒಂದು ತಿಂಗಳವರೆಗೆ ತಡವಾಗಿ ಕೃಷಿ ಆರಂಭವಾಗಿದ್ದು, ಮಳೆಯ ವಾತಾವರಣ ಅಕಸ್ಮಾತ್ ಮುಂದುವರಿದಿದರೆ ಭತ್ತದ ಕೊಯ್ಲು ನಷ್ಟವಾಗುವ ಅಪಾಯವಿದೆ.
ಉಡುಪಿ: ಕಡಿಯಾಳಿ ಮಹಿಷ ಮರ್ದಿನಿ ಸನ್ನಿಧಾನದಲ್ಲಿ ಶಮಿ ವೃಕ್ಷ ಪೂಜೆ
ಇತ್ತೀಚಿನ ವರ್ಷಗಳಲ್ಲಿ ಮಳೆಯ ಪ್ರಮಾಣ ಹೆಚ್ಚುತ್ತಿದ್ದು, ವಾರ್ಷಿಕ ಲೆಕ್ಕಾಚಾರ ಈ ರೀತಿ ಇದೆ. 2017ರಲ್ಲಿ 3734 ಮಿಮೀ, 2018 ರಲ್ಲಿ 4,095 ಮಿಮೀ, 2019ರಲ್ಲಿ 5,071 ಮಿಮೀ, 2020 ರಲ್ಲಿ 5,118 ಮಿಮೀ, 2021 ರಲ್ಲಿ 4,797ಮಿಮೀ, 2022 ರಲ್ಲಿ 4,431 ಮಳೆ ಸುರಿದಿದೆ. 2021 ರಲ್ಲಿ ಅತಿ ಹೆಚ್ಚು ಅಂದರೆ 152 ದಿನಗಳ ಕಾಲ ಉಡುಪಿ ಜಿಲ್ಲೆ ಮಳೆಕಂಡಿದೆ. 2012 ರಲ್ಲಿ ಅತಿ ಕಡಿಮೆ ಅಂದರೆ 105 ದಿನ ಮಾತ್ರ ಮಳೆ ಸುರಿದಿದೆ.
ಇನ್ನು ಮುಂದೆ ಹಿಂಗಾರು ಮಳೆಯ ಸಮಯ. ಸಾಧಾರಣ ಹಿಂಗಾರು ಮಳೆ ಬಂದರೆ ಕೃಷಿಗೆ ಅಷ್ಟೊಂದು ಸಮಸ್ಯೆಯಾಗುವುದಿಲ್ಲ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಕಾಳುಕಟ್ಟಿ ಬಲಿಯುವ ಹಂತದಲ್ಲಿ ನೀರಿನ ಅಗತ್ಯವಿದ್ದು ಸಾಧಾರಣ ಮಳೆಯಿಂದ ದೊಡ್ಡ ಪ್ರಮಾಣದ ಹಾನಿ ಆಗುವುದಿಲ್ಲ ಎಂದಿದ್ದಾರೆ.