ಉಡುಪಿ ಶ್ರೀಕೃಷ್ಣನ ದರ್ಶನಕ್ಕೆ ಕಂಡೀಶನ್ ಅನ್ವಯ

By Kannadaprabha NewsFirst Published Sep 20, 2020, 7:27 AM IST
Highlights

ಉಡುಪಿ ಕೃಷ್ಣ ಮಠಕ್ಕೆ ತೆರಳುವ ಭಕ್ತರಿಗೆ ಕೆಲವೊಂದು ನಿರ್ಬಂಧಗಳನ್ನು ತಿಳಿಸಲಾಗಿದೆ. ಇದೇ ಸೆಪ್ಟೆಂಬರ್ 28 ರಿಂದ ಭಕ್ತರ ಪ್ರವೇಶಕ್ಕೆ ಅವಕಾಶ ಕಲ್ಪಿಸಲಾಗುತ್ತದೆ. 

ಉಡುಪಿ (ಸೆ.20):  ಕೊರೋನಾ ಪ್ರಯುಕ್ತ 6 ತಿಂಗಳಿಂದ ಭಕ್ತರ ಪ್ರವೇಶ ನಿಷೇಧಿಸಲಾಗಿದ್ದ ಕೃಷ್ಣಮಠಕ್ಕೆ ಸೆ. 28ರಿಂದ, ಕೆಲವು ನಿಬಂಧನೆಗಳೊಂದಿಗೆ ಪ್ರವೇಶಕ್ಕೆ ಅವಕಾಶ ನೀಡಲಾಗುತ್ತಿದೆ.

ಶನಿವಾರ ಸುದ್ದಿಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ ಪರ್ಯಾಯ ಅದಮಾರು ಮಠದ ವ್ಯವಸ್ಥಾಪಕ ಗೋವಿಂದ ರಾಜ್‌, ಈಗಲೂ ಕೊರೋನಾ ಸೋಂಕು ಹೆಚ್ಚುತ್ತಿದೆ. ಆದರೆ ಪರವೂರಿನ ಭಕ್ತರಿಗೆ ಕೃಷ್ಣನ ದರ್ಶನಕ್ಕೆ ಅನನುಕೂಲವಾಗುತ್ತಿರುವ ಕಾರಣಕ್ಕೆ ಕೆಲವು ಷರತ್ತುಗಳನ್ವಯ ಕೃಷ್ಣ ದರ್ಶನಕ್ಕೆ ಅದಮಾರು ಮಠದ ಶ್ರೀ ವಿಶ್ವಪ್ರಿಯ ತೀರ್ಥ ಶ್ರೀಪಾದರ ಮಾರ್ಗದರ್ಶನದಂತೆ ಪರ್ಯಾಯ ಶ್ರೀ ಈಶಪ್ರಿಯ ತೀರ್ಥ ಶ್ರೀಪಾದರು ನಿರ್ಧರಿಸಿದ್ದಾರೆ ಎಂದರು.

ಗೊವಂಶ ಹತ್ಯೆ ನಿಷೇಧ ಕಾಯ್ದೆಗೆ ಪೇಜಾವರ ಶ್ರೀ ಆಗ್ರಹ: ಸಿಎಂಗೆ ಪತ್ರ ..

ಮಧ್ಯಾಹ್ನ 2ರಿಂದ ಸಂಜೆ 5 ಗಂಟೆಯವರೆಗೆ ಮಾತ್ರ ಭಕ್ತರಿಗೆ ಕೃಷ್ಣ ಮಠಕ್ಕೆ ಪ್ರವೇಶಕ್ಕೆ ಅವಕಾಶ ಇದೆ. ಪ್ರಸ್ತುತ ಕೇವಲ ದರ್ಶನಕ್ಕೆ ಮಾತ್ರ ಅವಕಾಶ ಕಲ್ಪಿಸಲಾಗಿದೆ, ಸೇವೆಗಳಿಗೆ ಅವಕಾಶ ಇಲ್ಲ. ಎಲ್ಲರೂ ಕಡ್ಡಾಯ ಮಾಸ್ಕ್ ಧರಿಸಬೇಕು, ಸಾಮಾಜಿಕ ಅಂತರ ಕಾಪಾಡಬೇಕು, ಸ್ಯಾನಿಟೈಸರ್‌ ವ್ಯವಸ್ಥೆಯನ್ನು ಬಳಸಬೇಕು. ಮಠದಲ್ಲಿ ಯಾವುದೇ ವಸ್ತು, ಗೋಡೆ ಇತ್ಯಾದಿಗಳನ್ನು ಮುಟ್ಟಬಾರದು. ಮಠದೊಳಗೆ ಮಂತ್ರ, ಪಾರಾಯಣ ಮಾಡದೆ ಮೌನವನ್ನು ಪಾಲಿಸಬೇಕು. ಪರವೂರಿನ ಭಕ್ತರು ರಾಜಾಂಗಣ ಬಳಿ ಇರುವ ಉತ್ತರ ದ್ವಾರದಿಂದ ಪ್ರವೇಶಿಸಿ, ಭೋಜನಶಾಲೆಯ ಮೇಲ್ಗಡೆಯಿಂದ ಸಾಗಿ ಗರುಡ ದೇವರ ಬಳಿ ಕೆಳಗಿಳಿದು ದೇವರದರ್ಶನ ಮಾಡಿ, ಮುಖ್ಯಪ್ರಾಣ ದೇವರ ಬಳಿ ಇರುವ ಮೆಟ್ಟಿಲುಗಳ ಮೂಲಕ ನಿರ್ಗಮಿಸಬೇಕು.

ನಿತ್ಯ ಕೃಷ್ಣಮಠಕ್ಕೆ ಬರುವ ಸ್ಥಳೀಯರು ರಥಬೀದಿಯಿಂದ ಮಧ್ವ ಸರೋವರದ ಮೇಲಿರುವ ದಾರಿಯಿಂದ ಸೇವಾಕಚೇರಿ ಬಳಿ ಮುಂದೆ ಸಾಗಿ ಶ್ರೀಕೃಷ್ಣ ಮಠ ಪ್ರವೇಶಿಸಬಹುದು. ಅವರು ಕಡ್ಡಾಯವಾಗಿ ಮಠದಿಂದ ಪ್ರವೇಶ ಪತ್ರ ಪಡೆಯಬೇಕು. ಹಿರಿಯ ನಾಗರಿಕರು, ಚಿಕ್ಕ ಮಕ್ಕಳ ಶರೀರ ಸೂಕ್ಷ ್ಮವಾಗಿರುವುದರಿಂದ ಅವರೆಲ್ಲರೂ ಮನೆಯಲ್ಲೇ ಇದ್ದು, ದೇವರ ಪ್ರಾರ್ಥನೆ ಮಾಡುವುದು ಉತ್ತಮ ಎಂದವರು ಹೇಳಿದರು. ಸದ್ಯ ಭೋಜನ ಪ್ರಸಾದ, ತೀರ್ಥ ಪ್ರಸಾದ ಇರುವುದಿಲ್ಲ, ಪರಿಸ್ಥಿತಿಗಳನ್ನು ಗಮನಿಸಿ ಮುಂದಿನ ದಿನಗಳಲ್ಲಿ ಆರಂಭಿಸಲಾಗುವುದು. ಸೇವಾ ಕೌಂಟರಿನಲ್ಲಿ ಪ್ರಸಾದವನ್ನು ಪಡೆಯಬಹುದು ಎಂದರು.

click me!