ಕೊರೋನಾ ಹಿನ್ನೆಲೆಯಲ್ಲಿ ಈ ಬಾರಿ ಮೈಸೂರು ದಸರಾ ಸರಳ ಆಚರಣೆ| ವೈದ್ಯರು, ನರ್ಸ್, ಪೌರಕಾರ್ಮಿಕರು, ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಆಶಾ ಕಾರ್ಯಕರ್ತೆಯರು ಉದ್ಘಾಟಕರಾಗಿರುವ ಹಿನ್ನೆಲೆಯಲ್ಲಿ ಆಯಾ ಇಲಾಖೆಯ ಮುಖ್ಯಸ್ಥರಿಗೆ ಒಬ್ಬೊಬ್ಬರ ಹೆಸರುಗಳನ್ನು ಆಯ್ಕೆ ಮಾಡಿ ಕಳುಹಿಸುವಂತೆ ಸೂಚಿಸಲಾಗಿದೆ: ಸಚಿವರು|
ಮಂಡ್ಯ(ಸೆ.19): ಆಲೆಮನೆಯಲ್ಲಿ ಬೆಲ್ಲದ ಉತ್ಪನ್ನಗಳು ಯಾವ ರೀತಿಯಾಗುತ್ತದೆ. ಇದಕ್ಕೆ ಯಾವ ತಂತ್ರಜ್ಞಾನವನ್ನು ಅಳವಡಿಸಲಾಗಿದೆ. ಹೊಸ ತಂತ್ರಜ್ಞಾನಗಳನ್ನು ಅಳವಡಿಸಬಹುದೇ? ಇದಕ್ಕೆ ಎಷ್ಟು ಸಾಲ ತಗುಲುತ್ತದೆ ಎಂಬಿತ್ಯಾದಿ ವಿಷಯಗಳನ್ನು ತಿಳಿದುಕೊಳ್ಳಲು ಇಲ್ಲಿಗೆ ಭೇಟಿ ನೀಡಿದ್ದೇನೆ ಎಂದು ಸಹಕಾರ ಸಚಿವರಾದ ಎಸ್.ಟಿ. ಸೋಮಶೇಖರ್ ತಿಳಿಸಿದ್ದಾರೆ.
ಸಾವಯವ ಬೆಲ್ಲಕ್ಕೆ ಆತ್ಮನಿರ್ಭರ ಯೋಜನೆಯಡಿ ಪ್ರೋತ್ಸಾಹ ನೀಡಲು ಕೇಂದ್ರ ಸರ್ಕಾರ ನಿರ್ಧರಿಸಿದೆ. ಈ ನಿಟ್ಟಿನಲ್ಲಿ ನಾವು ಕಾರ್ಯಪ್ರವೃತ್ತರಾಗಿದ್ದೇವೆ. ಜೊತೆಗೆ ಗುಣಮಟ್ಟದ ಬೆಲ್ಲ ತಯಾರಿಗೆ ಎಷ್ಟು ಅನುದಾನ ಕೊಡಬಹುದು? ಎಂಬ ನಿಟ್ಟಿನಲ್ಲಿಯೂ ತೀರ್ಮಾನ ತೆಗೆದುಕೊಳ್ಳಲಾಗುವುದು ಎಂದು ಸಚಿವರು ತಿಳಿಸಿದ್ದಾರೆ.
ಸಹಕಾರ ಇಲಾಖೆಯಿಂದ ನಾಲ್ಕು ವಿಭಾಗಕ್ಕೆ ಆರ್ಥಿಕ ಸ್ಪಂದನೆ ಕಾರ್ಯಕ್ರಮಕ್ಕೆ ಚಾಲನೆ ಕೊಟ್ಟಿದ್ದೇವೆ. ಮಂಗಳವಾರ ಬೆಂಗಳೂರಿನಲ್ಲಿ ಮುಖ್ಯಮಂತ್ರಿಗಳು ಚಾಲನೆ ಕೊಟ್ಟಿದ್ದಾರೆ. ಅಕ್ಟೋಬರ್ 2 ರಂದು ಮೈಸೂರು ವಿಭಾಗದಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಈ ನಿಟ್ಟಿನಲ್ಲಿ ಅಂದು ಈ ಭಾಗದ ರೈತರು, ಸಣ್ಣ ಉದ್ದಿಮೆಗಳು ಸೇರಿದಂತೆ ಯಾವೆಲ್ಲ ಕ್ಷೇತ್ರಗಳಿಗೆ ಯಾವ ರೀತಿಯ, ಯಾವ ಯೋಜನೆಯಡಿ ಸಾಲಗಳನ್ನು, ಯಾವ ಪ್ರಮಾಣದಲ್ಲಿ ಕೊಡಬಹುದು ಎಂದು ಚರ್ಚಿಸಿ ತೀರ್ಮಾನ ತೆಗೆದುಕೊಳ್ಳಲಾಗುವುದು ಎಂದು ಸಚಿವರು ತಿಳಿಸಿದರು.
15 ದಿನಕ್ಕೊಮ್ಮೆ ರೈತರಿಗೆ ಹಣ ಪಾವತಿ
ಮೈಸೂರು ದಸರಾವನ್ನು ಪ್ರಸಕ್ತ ಬಾರಿ ಕೋವಿಡ್ 19 ರ ಹಿನ್ನೆಲೆಯಲ್ಲಿ ಸರಳವಾಗಿಯೇ ಆಚರಿಸುತ್ತೇವೆ. ವೈದ್ಯರು, ನರ್ಸ್, ಪೌರಕಾರ್ಮಿಕರು, ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಆಶಾ ಕಾರ್ಯಕರ್ತೆಯರು ಉದ್ಘಾಟಕರಾಗಿರುವ ಹಿನ್ನೆಲೆಯಲ್ಲಿ ಆಯಾ ಇಲಾಖೆಯ ಮುಖ್ಯಸ್ಥರಿಗೆ ಒಬ್ಬೊಬ್ಬರ ಹೆಸರುಗಳನ್ನು ಆಯ್ಕೆ ಮಾಡಿ ಕಳುಹಿಸುವಂತೆ ಸೂಚಿಸಲಾಗಿದೆ. ಕಾರ್ಯಕ್ರಮವನ್ನು ವೈದ್ಯರಿಂದ ಉದ್ಘಾಟಿಸಿ ಉಳಿದವರಿಗೆ ಸನ್ಮಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು ಎಂದು ಸಚಿವರು ತಿಳಿಸಿದರು.
ಸಚಿವರಿಂದ ಆಲೆಮನೆ ವೀಕ್ಷಣೆ
ಸಚಿವ ಸೋಮಶೇಖರ್ ಅವರು, ಆಲೆಮನೆಗೆ ಭೇಟಿ ನೀಡಿ ಬೆಲ್ಲದ ಉತ್ಪನ್ನಗಳ ತಯಾರಿಕಾ ಹಂತಗಳನ್ನು ಖುದ್ದು ಪರಿಶೀಲನೆ ನಡೆಸಿ, ಮಾಹಿತಿ ಪಡೆದುಕೊಂಡಿದ್ದಾರೆ.