
ಉಡುಪಿ: ಅರಬ್ಬಿ ಸಮುದ್ರದಲ್ಲಿ ಸತತ 3 ಗಂಟೆಗಳಿಂದ ಈಜುತ್ತಿದ್ದ ಮಾನಸಿಕ ಅಸ್ವಸ್ಥರೊಬ್ಬರನ್ನು ಭಾನುವಾರ ರಕ್ಷಿಸಲಾಗಿದೆ. ಕಾಡಿಪಟ್ಟ ನಿವಾಸಿ ಯತೀಶ್ (38) ರಕ್ಷಣೆಗೊಳಗಾದವರು. ಯತೀಶ್ ಈ ಹಿಂದೆ ಕೂಡ ಎರಡು ಬಾರಿ ಇದೇ ರೀತಿಯ ಕೃತ್ಯಗಳಿಗೆ ಪ್ರಯತ್ನಿಸಿದ್ದರು. ಆದರೆ ನಿವಾಸಿಗಳು ಸುರಕ್ಷಿತವಾಗಿ ದಡಕ್ಕೆ ಕರೆತಂದಿದ್ದರು.
ಭಾನುವಾರ ಮಧ್ಯಾಹ್ನ ಯತೀಶ್ ಅರಬಿ ಸಮುದ್ರಕ್ಕೆ ಇಳಿದು ಈಜಲಾರಂಭಿಸಿದ್ದರು. ಸಮುದ್ರ ಪ್ರಕ್ಷುಬ್ದವಾಗಿದ್ದು ಅವರಿಗೆ ಅಪಾಯವಾಗುವ ಸಾಧ್ಯತೆ ಇತ್ತು. ದೋಣಿಯಲ್ಲಿ ಹೋಗಿ ಮೀನುಗಾರರು ಅವರನ್ನು ದೋಣಿಗೆ ಎಳೆಯಲು ಅರ್ಧ ಗಂಟೆಗೂ ಹೆಚ್ಚು ಕಾಲ ಪ್ರಯತ್ನಿಸಿದರು, ಆದರೆ ಆತ ತಪ್ಪಿಸಿಕೊಳ್ಳುತಿದ್ದರು.
ಈ ಬಗ್ಗೆ ಮಾಹಿತಿ ಪಡೆದ ಉಡುಪಿ ಶಾಸಕ ಯಶ್ಪಾಲ್ ಸುವರ್ಣ ಅವರು ಆಪತ್ಬಾಂಧವ ಈಶ್ವರ್ ಮಲ್ಪೆ ಅವರಿಗೆ ಮಾಹಿತಿ ನೀಡಿದರು. ಸ್ಥಳಕ್ಕೆ ಧಾವಿಸಿದ ಈಶ್ವರ್ ಮೂರು ನಾಟಿಕಲ್ ಮೈಲು ದೂರದಲ್ಲಿ ಈಜುತ್ತಿದ್ದ ಯತೀಶ್ ಇರುವಲ್ಲಿ ಈಜುತ್ತಾ ತೆರಳಿ, ಆತ ದಡಕ್ಕೆ ಬರುವಂತೆ ಮನವೊಲಿಸಿದರು.
ನಂತರ ಈಶ್ವರ್ ಅವರು ಯತೀಶ್ ಜೊತೆಗೆ ಈಜುತ್ತಾ ಮಧ್ಯಾಹ್ನ 3.15ರ ಸುಮಾರಿಗೆ ದಡಕ್ಕೆ ಕರೆತಂದರು. ಪಡುಬಿದ್ರಿ ಬ್ಲೂ ಫ್ಲ್ಯಾಗ್ ಬೀಚ್ ಲೈಫ್‌ಗಾರ್ಡ್‌ಗಳಾದ ಪ್ರಜ್ವಲ್, ಸುಶಾಂತ್ ಮತ್ತು ಬಾದಲ್ ಸಹಕರಿಸಿದರು. ನಂತರ ಹೆಚ್ಚಿನ ಚಿಕಿತ್ಸೆಗಾಗಿ ಯತೀಶ್ ಅವರನ್ನು ಉಡುಪಿಯ ಡಾ. ಎ.ವಿ. ಬಾಳಿಗಾ ಆಸ್ಪತ್ರೆಗೆ ಕರೆದೊಯ್ಯಲಾಯಿತು.
ಸ್ಥಳಕ್ಕೆ ಕರಾವಳಿ ಕಾವಲು ಪೊಲೀಸರು ಮತ್ತು ಗೃಹರಕ್ಷಕ ದಳದವರು ಕೂಡ ಭೇಟಿ ನೀಡಿದ್ದರು. ಆದರೆ ಅವರ ಬಳಿ ತುರ್ತು ರಕ್ಷಣಾ ಕಾರ್ಯಾಚರಣೆಗಾಗಿ ಸ್ಪೀಡ್ ಬೋಟ್ ಇಲ್ಲದಿರುವ ಬಗ್ಗೆ ಸ್ಥಳೀಯರು ಆಸಮಾಧಾನ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ಎಡಕುಮೇರಿ ಘಾಟ್‌ನಲ್ಲಿ ವಂದೇ ಭಾರತ್; ಸೋಮೇಶ್ವರ ರೈಲ್ವೇ ಗೇಟ್ ಬಂದ್, ಬದಲಿ ಮಾರ್ಗ