
ಬೆಂಗಳೂರು (ಆ.18): ಬೆಂಗಳೂರಿನಲ್ಲಿ ಕರ್ತವ್ಯನಿರತ ಸಂಚಾರ ಪೊಲೀಸ್ ಸಿಬ್ಬಂದಿಯ ಕಾಲರ್‌ಪಟ್ಟಿ ಹಿಡಿದು, ಮುಖಕ್ಕೆ ಗುದ್ದಿ ಹಲ್ಲೆ ನಡೆಸಿದ ಆರೋಪದಡಿ ಜೆಡಿಎಸ್ ಮುಖಂಡ ಗೊಟ್ಟಿಗೆರೆ ಮಂಜಣ್ಣ (65) ಅವರನ್ನು ಹುಳಿಮಾವು ಠಾಣೆ ಪೊಲೀಸರು ಬಂಧಿಸಿದ್ದರು. ಬಂಧಿತ ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ವಿಚಾರಣೆ ನಡೆಸಿದ ಕೋರ್ಟ್ ಜಾಮೀನು ಮಂಜೂರು ಮಾಡಿದೆ.
ಹಲ್ಲೆಗೊಳಗಾದ ಹುಳಿಮಾವು ಸಂಚಾರ ಪೊಲೀಸ್ ಠಾಣೆಯ ಕಾನ್‌ಸ್ಟೇಬಲ್ ಅರುಣ್ ಮಂಜಪ್ಪ ಬಡಗೌಡ್ರ ಅವರು ನೀಡಿದ ದೂರಿನ ಮೇರೆಗೆ ಕಾರ್ಯಾಚರಣೆ ನಡೆಸಿದ ಪೊಲೀಸರು ಆರೋಪಿಯನ್ನು ಬಂಧಿಸಿದ್ದರು.
ಭಾನುವಾರ ಮಧ್ಯಾಹ್ನ 3 ಗಂಟೆಯ ಸುಮಾರಿಗೆ ಬನ್ನೇರುಘಟ್ಟ ರಸ್ತೆಯ (BG Road) ಗೊಟ್ಟಿಗೆರೆ ಜಂಕ್ಷನ್‌ನಲ್ಲಿ ಕಾನ್‌ಸ್ಟೇಬಲ್ ಅರುಣ್ ಕರ್ತವ್ಯ ನಿರ್ವಹಿಸುತ್ತಿದ್ದರು. ಈ ವೇಳೆ ಸಂಚಾರ ದಟ್ಟಣೆ ನಿಯಂತ್ರಿಸಲು ಸಿಗ್ನಲ್ ಬಳಿ ಬಂದ ಗೊಟ್ಟಿಗೆರೆ ಮಂಜಣ್ಣ ಅವರ ಬೆಂಜ್ (Benz) ಕಾರನ್ನು ಕೈ ಸನ್ನೆ ಮೂಲಕ ತಡೆದು ನಿಲ್ಲಿಸಿದ್ದಾರೆ. ಇದರಿಂದ ತೀವ್ರ ಕೆರಳಿದ ಮಂಜಣ್ಣ ಕಾರಿನಿಂದ ಕೆಳಗಿಳಿದು, 'ನನ್ನ ಕಾರನ್ನೇ ಅಡ್ಡ ಹಾಕ್ತೀಯಾ? ಎಷ್ಟು ಧೈರ್ಯ ನಿಂಗೆ, ನಾನು ಯಾರು ಅಂತ ಗೊತ್ತಿಲ್ವಾ?' ಎಂದು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾನೆ.
ಅಷ್ಟಕ್ಕೇ ನಿಲ್ಲದೆ, ಪೇದೆ ಅರುಣ್ ಅವರ ಕಾಲರ್‌ಪಟ್ಟಿ ಹಿಡಿದು ತಲೆಯಿಂದ ಮುಖಕ್ಕೆ ಗುದ್ದಿ (Headbutt), ಕೈಯಿಂದಲೂ ಹಲ್ಲೆ ನಡೆಸಿದ್ದಾನೆ. ಸಾರ್ವಜನಿಕರು ಜಗಳ ಬಿಡಿಸಲು ಬಂದಾಗ ಟ್ರಾಫಿಕ್ ಸಿಬ್ಬಂದಿಗೆ ಕಾಲಿನಿಂದ ಒದೆಯಲು ಯತ್ನಿಸಿ, ನಂತರ ಸ್ಥಳದಿಂದ ಕಾರಿನಲ್ಲಿ ಪರಾರಿಯಾಗಿದ್ದನು.
ಘಟನೆ ಬೆನ್ನಲ್ಲೇ ತಲೆಮರೆಸಿಕೊಂಡಿದ್ದ ಗೊಟ್ಟಿಗೆರೆ ಮಂಜಣ್ಣನಿಗಾಗಿ ಹುಳಿಮಾವು ಠಾಣೆ ಪೊಲೀಸರು ವಿಶೇಷ ಕಾರ್ಯಾಚರಣೆ ನಡೆಸಿದ್ದರು. ಸೋಮವಾರ ಮುಂಜಾನೆ ಬನ್ನೇರುಘಟ್ಟ ರಸ್ತೆಯ ಮೀನಾಕ್ಷಿ ಮಾಲ್ ಬಳಿ ಆರೋಪಿಯನ್ನು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾದರು. ಬಳಿಕ ಆರೋಪಿಯನ್ನು ನ್ಯಾಯಾಧೀಶರ ಮುಂದೆ ಹಾಜರುಪಡಿಸಲಾಗಿದ್ದು, ನ್ಯಾಯಾಲಯವು ವಿಚಾರಣೆ ನಡೆಸಿ ಆರೋಪಿಗೆ ಜಾಮೀನು ಮಂಜೂರು ಮಾಡಿದೆ.
ಈ ಕುರಿತು ಮಾಹಿತಿ ನೀಡಿರುವ ಎಲೆಕ್ಟ್ರಾನಿಕ್ ಸಿಟಿ ವಿಭಾಗದ ಡಿಸಿಪಿ ಎಂ. ನಾರಾಯಣ, 'ಕರ್ತವ್ಯದಲ್ಲಿದ್ದ ಪೊಲೀಸ್ ಕಾನ್‌ಸ್ಟೇಬಲ್ ಮೇಲೆ ಹಲ್ಲೆ ನಡೆಸಿರುವ ಸಂಪೂರ್ಣ ದೃಶ್ಯಾವಳಿಗಳು ಸಿಬ್ಬಂದಿಯ ಬಾಡಿ ವೋರ್ನ್ ಕ್ಯಾಮೆರಾದಲ್ಲಿ (Body Worn Camera) ಸೆರೆಯಾಗಿವೆ. ಹಲ್ಲೆ ನಡೆಸಿರುವುದು ಸ್ಪಷ್ಟವಾಗಿ ದೃಢಪಟ್ಟ ಹಿನ್ನೆಲೆಯಲ್ಲಿ ಆರೋಪಿಯನ್ನು ಬಂಧಿಸಿ ಕಾನೂನು ಕ್ರಮ ಕೈಗೊಳ್ಳಲಾಗಿದೆ' ಎಂದು ತಿಳಿಸಿದ್ದಾರೆ.