* ವಶಪಡಿಸಿಕೊಂಡ ಅಪಾರ ಪ್ರಮಾಣದ ಮಾದಕ ವಸ್ತುಗಳು ನಾಶ
* ಗಾಂಜಾ -ಚರಸ್ ಸುಟ್ಟ ಉಡುಪಿ ಪೊಲೀಸರು
* ಒಟ್ಟು 3,27,135 ಮೌಲ್ಯದ, ಮಾದಕ ವಸ್ತುಗಳನ್ನು ಸುಟ್ಟು ಭಸ್ಮ
ಉಡುಪಿ, (ಜೂನ್.26): ಉಡುಪಿ ಜಿಲ್ಲೆಯಲ್ಲಿ ಮಾದಕ ವಸ್ತುಗಳ ದಾಸರಾಗುವ ಯುವಕ- ಯುವತಿಯರ ಸಂಖ್ಯೆ ಹೆಚ್ಚುತ್ತಿದೆ. ಅವರಲ್ಲೂ ಅಂತರಾಷ್ಟ್ರೀಯ ಖ್ಯಾತಿಯ ವಿದ್ಯಾನಗರ ಎಂದು ಕರೆಸಿಕೊಳ್ಳುವ ಮಣಿಪಾಲದಲ್ಲಂತೂ ಪದೇಪದೇ ಅಮಲೇರಿಸಿಕೊಂಡ ವಿದ್ಯಾರ್ಥಿಗಳು ಕಾನೂನಿನ ಕುಣಿಕೆಗೆ ಸಿಲುಕುತ್ತಿದ್ದಾರೆ. ಈ ರೀತಿ ವಿವಿಧ ಪ್ರಕರಣಗಳಲ್ಲಿ ವಶಪಡಿಸಿಕೊಂಡ ಅಪಾರ ಪ್ರಮಾಣದ ಮಾದಕ ವಸ್ತುಗಳನ್ನು ಇಂದು(ಭಾನುವಾರ) ನಾಶಪಡಿಸಲಾಯಿತು.
ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ಪತ್ತೆಯಾದ 19 ಪ್ರಕರಣಗಳಲ್ಲಿ ವಶಪಡಿಸಿಕೊಳ್ಳಲಾದ ವಿವಿಧ ಅಮಲು ಪದಾರ್ಥಗಳನ್ನು ನಾಶಪಡಿಸಲಾಗಿದೆ. ಅಂದಾಜು 2,72,135 ರೂಪಾಯಿ ಮೌಲ್ಯದ 9 ಕೆಜಿ 686 ಗ್ರಾಂ ಗಾಂಜಾ, 55 ಸಾವಿರ ರೂಪಾಯಿ ಮೌಲ್ಯದ 410 ಗ್ರಾಂ ಚರಸ್, ಹೀಗೆ ಒಟ್ಟು 3,27,135 ಮೌಲ್ಯದ, ಮಾದಕ ವಸ್ತುಗಳನ್ನು ವಿಲೇವಾರಿ ಮಾಡಲಾಗಿದೆ. ಜಿಲ್ಲಾ ಡ್ರಗ್ ವಿಲೇವಾರಿ ಸಮಿತಿಯ ಅಧ್ಯಕ್ಷರಾಗಿರುವ ಪೊಲೀಸ್ ಅಧೀಕ್ಷಕ ಎನ್ ವಿಷ್ಣುವರ್ಧನ್ ಹಾಗೂ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಎಸ್ ಟಿ ಸಿದ್ದಲಿಂಗಪ್ಪ ಅವರ ಮಾರ್ಗದರ್ಶನದಲ್ಲಿ ಕಾರ್ಯಾಚರಣೆ ನಡೆಸಲಾಯಿತು.
ಕಾಯ್ದೆ ಬಂದ್ರೂ ಉಡುಪಿಯಲ್ಲಿ ನಿಲ್ಲದ ಗೋಹತ್ಯೆ, 1 ತಿಂಗ್ಳಲ್ಲೇ 4 ಪ್ರಕರಣಗಳು ಉದಾಹರಣೆ!
ಮಣಿಪಾಲ ಠಾಣೆಯ 4, ಸೆನ್ ಅಪರಾಧ ಠಾಣೆಯ 4, ಕುಂದಾಪುರ ಹಾಗೂ ಕಾಪು ಠಾಣೆಯ ತಲಾ ಮೂರು ಪ್ರಕರಣಗಳು, ಕೋಟ ಹಾಗೂ ಗಂಗೊಳ್ಳಿ ಠಾಣೆಯ ತಲಾ ಎರಡು ಪ್ರಕರಣಗಳು ಹಾಗೂ ಮಲ್ಪೆ ಠಾಣೆಯಿಂದ ವರದಿಯಾದ ಒಂದು ಹೀಗೆ ಒಟ್ಟು 19 ಪ್ರಕರಣಗಳಲ್ಲಿ
ವಶಪಡಿಸಿಕೊಳ್ಳಲಾದ ಮಾದಕ ವಸ್ತುಗಳನ್ನು ಒಳಗೊಳ್ಳಲಾಗಿತ್ತು.
ಕಳೆದ ಹತ್ತು ವರ್ಷಗಳಲ್ಲಿ ಸಂಗ್ರಹವಾದ ಮಾದಕ ದ್ರವ್ಯಗಳನ್ನು ಈ ಮೂಲಕ ನಾಶಪಡಿಸಲಾಗಿದೆ ಎಂದು ಹೆಚ್ಚುವರಿ ಪೊಲೀಸ್ ಅಧೀಕ್ಷಕ ಸಿದ್ಧ ಲಿಂಗಪ್ಪ ತಿಳಿಸಿದ್ದಾರೆ .
ಪ್ರಕರಣಗಳ ಆರೋಪಿಗಳ ಕಥೆ ಏನು?
ಒಟ್ಟು 19 ಪ್ರಕರಣ ಪೈಕಿ ನಾಲ್ಕು ಪ್ರಕರಣಗಳಿಗಲ್ಲಿ ಆರೋಪಿಗಳಿಗೆ ಶಿಕ್ಷೆಯಾಗಿದೆ. ಉಳಿದ ನಾಲ್ಕು ಪ್ರಕರಣಗಳಲ್ಲಿ ಆರೋಪಿಗಳು ಖುಲಾಸೆ ಗೊಂಡಿದ್ದಾರೆ. ಓರ್ವ ಆರೋಪಿ ಮೃತನಾಗಿದ್ದು, ಎಂಟು ಪ್ರಕರಣಗಳು ನ್ಯಾಯಾಲಯದಲ್ಲಿ ವಿಚಾರಣೆಯಲ್ಲಿವೆ.ಇತ್ತೀಚಿನ ಎರಡು ಪ್ರಕರಣಗಳು ತನಿಖೆಯಲ್ಲಿವೆ.
ಪಡುಬಿದ್ರಿ ಠಾಣಾ ವ್ಯಾಪ್ತಿಯಲ್ಲಿ ಇರುವ ಆಯುಷ್ ಎನ್ವಿರಾಟೆಕ್ ಪ್ರೈವೇಟ್ ಲಿಮಿಟೆಡ್ ಆವರಣದಲ್ಲಿ ಈ ಮಾದಕ ವಸ್ತುಗಳನ್ನು ಕುಲುಮೆಯೊಳಗೆ ಹಾಕಿ ನಾಶಪಡಿಸಲಾಗಿದೆ. ಈ ವೇಳೆ ಪೊಲೀಸ್ ನಿರೀಕ್ಷಕ ಮಂಜುನಾಥ್, ವೃತ್ತ ನಿರೀಕ್ಷಕ ಪ್ರಕಾಶ್, ಪಿಎಸ್ಐ ಗಳಾದ ಸುಂದರ ತೋನ್ಸೆ, ಮಧು ಬಿಇ, ಭರತೇಶ್, ವಿನಯ್, ಪುರುಷೋತ್ತಮ,ಮಹೇಶ್, ಸತೀಶ್, ಪ್ರಕಾಶ್, ಶಕ್ತಿವೇಲು ಮತ್ತಿತರ ಸಿಬ್ಬಂದಿಗಳು ಉಪಸ್ಥಿತರಿದ್ದರು.