ಬೈಕ್‌ಗೆ ಬಿಬಿಎಂಪಿ ಕಸದ ಲಾರಿ ಗುದ್ದಿ ಇಬ್ಬರು ಯುವಕರು ಬಲಿ

By Kannadaprabha NewsFirst Published Nov 29, 2022, 9:30 AM IST
Highlights

ದೊಡ್ಡಬಳ್ಳಾಪುರ ತಾಲೂಕಿನ ಮೂಗೇನಹಳ್ಳಿ ಬಳಿ ಸಂಭವಿಸಿದ ಘಟನೆ  

ದೊಡ್ಡಬಳ್ಳಾಪುರ(ನ.29):  ಬಿಬಿಎಂಪಿ ತ್ಯಾಜ್ಯ ವಿಲೇವಾರಿ ಲಾರಿ ಅವಾಂತರಕ್ಕೆ ತಾಲೂಕಿನಲ್ಲಿ ಮತ್ತೆರಡು ಅಮಾಯಕ ಜೀವಗಳು ಬಲಿಯಾಗಿದ್ದು, ಬಿಬಿಎಂಪಿ ವಿರುದ್ಧ ಗ್ರಾಮಸ್ಥರ ಆಕ್ರೋಶ ಮತ್ತೆ ಕೆರಳಿದೆ. ದ್ವಿಚಕ್ರ ವಾಹನಕ್ಕೆ ಬಿಬಿಎಂಪಿ ಕಸದ ಲಾರಿ ಡಿಕ್ಕಿ ಹೊಡೆದ ಪರಿಣಾಮ ಸೋಮವಾರ ಸಂಜೆ ಇಬ್ಬರು ಯುವಕರು ಸ್ಥಳದಲ್ಲೇ ಸಾವನಪ್ಪಿರುವ ಘಟನೆ ನಡೆದಿದೆ. ಮೃತರನ್ನು ನೆಲಮಂಗಲ ತಾಲೂಕಿನ ಮರಳುಕುಂಟೆ ಗ್ರಾಮದ ಮಹೇಶ್‌ (27 ವರ್ಷ), ಮಾರುತಿ (24 ವರ್ಷ) ಎಂದು ಗುರುತಿಸಲಾಗಿದ್ದು, ತಾಲೂಕಿನ ಮಧುರೆ ದೇವಾಲಯದಲ್ಲಿ ಪೂಜೆ ಸಲ್ಲಿಸಿ ಹಿಂತಿರುಗಿ ಗ್ರಾಮಕ್ಕೆ ತೆರಳುತ್ತಿದ್ದ ವೇಳೆ ದೊಡ್ಡಬಳ್ಳಾಪುರ ತಾಲೂಕಿನ ಮೂಗೇನಹಳ್ಳಿ ಬಳಿ ಘಟನೆ ಸಂಭವಿಸಿದೆ.

ದ್ವಿಚಕ್ರ ವಾಹನ ಸವಾರರಿಗೆ ಡಿಕ್ಕಿ ಹೊಡೆದ ಬಿಬಿಎಂಪಿ ತ್ಯಾಜ್ಯ ಲಾರಿ ಮೇಲೆ ಹರಿದ ಪರಿಣಾಮ ಸವಾರರಿಬ್ಬರು ನಡು ರಸ್ತೆಯಲ್ಲಿಯೇ ಸಾವಿಗೀಡಾಗಿದ್ದಾರೆ. ಈ ವೇಳೆ ಚಾಲಕ ಸ್ಥಳದಿಂದ ಪರಾರಿಯಾಗುತ್ತಿದ್ದು, ಹಿಂಬಂದಿಯಲ್ಲಿ ಬರುತ್ತಿದ್ದ ಕಾರಿನ ಚಾಲಕ ಬೆನ್ನತ್ತಿ ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆಂದು ತಿಳಿದುಬಂದಿದೆ. ಈ ವೇಳೆ ಲಾರಿಯ ಚಾಲಕ ಪಾನಮತ್ತನಾಗಿದ್ದು, ತಡೆಯಲು ಹೋದ ಕಾರಿಗೂ ಡಿಕ್ಕಿ ಹೊಡೆಯಲು ಯತ್ನಿಸಿದ್ದಾನೆಂದು ಸ್ಥಳೀಯರು ಆರೋಪಿಸಿದ್ದಾರೆ.

ಬಿಬಿಎಂಪಿ ಕಸದ ಲಾರಿಗೆ ಮತ್ತೊಂದು ಬಲಿ: ಫುಡ್‌ ಡೆಲಿವರಿ ಬಾಯ್‌ ಸಾವು

ಘಟನಾ ಸ್ಥಳದಲ್ಲಿ ಪ್ರತಿಭಟನೆ; ಉದ್ವಿಗ್ನ

ಘಟನಾ ಸ್ಥಳದಲ್ಲಿ ಮೃತ ಯುವಕರ ಶವವನ್ನು ತೆರವು ಮಾಡಲು ಬಿಡದೆ, ಗ್ರಾಮಸ್ಥರು ಪ್ರತಿಭಟನೆಗೆ ಮುಂದಾಗಿದ್ದಾರೆ. ಬಿಬಿಎಂಪಿ ತ್ಯಾಜ್ಯ ಲಾರಿಗಳ ವಿರುದ್ದ ಆಕ್ರೋಶ ಮುಗಿಲು ಮುಟ್ಟಿದೆ. ಕಳೆದ ಸೆಪ್ಟೆಂಬರ್‌ 4ರಂದು ದ್ವಿಚಕ್ರ ವಾಹನದಲ್ಲಿ ತೆರಳುವ ವೇಳೆ, ಮೂಗೇನಹಳ್ಳಿ ಗೇಟ್‌ ಸಮೀಪ ಮಾವಿನಕುಂಟೆ ಗ್ರಾಮದ ರಾಜು (28 ವರ್ಷ) ಎನ್ನುವವರು ಸಾವನಪ್ಪಿದ ಬೆನ್ನಲ್ಲೇ, ಈ ಘಟನೆ ನಡೆದಿರುವುದು ಗ್ರಾಮಸ್ಥರನ್ನು ಕೆರಳಿಸಿದೆ.
ಸ್ಥಳಕ್ಕೆ ಶಾಸಕ ಟಿ.ವೆಂಕಟರಮಣಯ್ಯ, ಬೆಂಗಳೂರು ಗ್ರಾಮಾಂತರ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ, ಸರ್ಕಲ್‌ ಇನ್‌ಸ್ಪೆಕ್ಟರ್‌ ಹರೀಶ್‌ ಮತ್ತಿತರರು ಭೇಟಿ ನೀಡಿದ್ದು, ಸ್ಥಳದಲ್ಲಿ ಉದ್ವಿಗ್ನ ಸ್ಥಿತಿ ನಿರ್ಮಾಣವಾಗಿದೆ.
 

click me!