ಸಮಾಜದಲ್ಲಿ ಈಗ ತಾನೇ ಅರಳುತ್ತಿದ್ದ ನವ ಯುವಕರಿಬ್ಬರು ಪಾಪಿಗಳ ಅಕ್ರಮ ದಂಧೆಗೆ ಬಲಿಯಾಗಿದ್ದಾರೆ.
ಕೊಪ್ಪಳ, [ಅ.10]: ರಾಜ್ಯದಲ್ಲಿ ನಾನಾ ಕಡೆ ಮರಳು ದಂಧೆ ಹೆಗ್ಗಿಲ್ಲದೆ ನಡೆದಿದೆ. ಕೊಪ್ಪಳದಲ್ಲಿ ಮರಳು ದಂಧೆಯಿಂದ ಪರಿಸರವನ್ನು ಹಾಳು ಮಾಡುವುದರ ಜೊತೆಗೆ ಇಬ್ಬರು ಅಮಾಯಕ ಯುವಕರನ್ನು ಬಲಿ ಪಡೆದಿದ್ದಾರೆ.
ಹೌದು..ಕೊಪ್ಪಳ ತಾಲೂಕಿನ ನರೇಗಲ್‌ನಲ್ಲಿ ಮಿತಿ ಮೀರಿ ನಡೆದಿರುವ ಮರಳು ದಂಧೆಗೆ ಇಬ್ಬರು ಬಾಲಕರು ಬಲಿಯಾಗಿದ್ದಾರೆ. ನಾಗರಾಜ ಕುಳ್ಳಳ್ಳಿ(16), ಬಸವರಾಜ ಗುಡಿ(14) ಮೃತ ಬಾಲಕರು.
ಹೆಗ್ಗಿಲ್ಲದೆ ನಡೆದ ಮರಳು ದಂಧೆಗೆ ನರೇಗಲ್ ಸಮೀಪದ ಹಿರೇ ಹಳ್ಳದಲ್ಲಿ ದೊಡ್ಡ ದೊಡ್ಡ ಗುಂಡಿಗಳಾಗಿದ್ದು, ಇತ್ತೀಚೆಗೆ ಮಳೆಯಿಂದಾಗಿ ಹಳ್ಳ ಭರ್ತಿಯಾಗಿದ್ದರಿಂದ ಆ ಗುಂಡಿಗಳಲ್ಲಿ ನೀರು ಸಂಗ್ರಹವಾಗಿದೆ.
ಆದರೆ ಇದನ್ನು ಅರಿಯದ ಈ ಬಾಲಕರು ಹಳ್ಳಕ್ಕೆ ಈಜಾಡಲು ಹೋಗಿ ಗುಂಡಿಯೊಳಗೆ ಸಿಲುಕಿಕೊಂಡು ಮೃತಪಟ್ಟಿದ್ದಾರೆ. ಬಾಲಕ ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿದ್ದು, ಈ ಬಗ್ಗೆ ಕೊಪ್ಪಳ ಗ್ರಾಮೀಣ ಪೊಲೀಸ್ ಠಾಣಾ ಪ್ರಕರಣ ದಾಖಲಾಗಿದೆ.