ಬಸವಕಲ್ಯಾಣ: ರಸ್ತೆ ಅಪಘಾತದಲ್ಲಿ ಪತಿ-ಪತ್ನಿ ಸಾವು, ಮಗು ಬಚಾವ್‌

By Kannadaprabha News  |  First Published May 24, 2023, 10:36 PM IST

ಬೀದರ್‌ ಜಿಲ್ಲೆಯ ಬಸವಕಲ್ಯಾಣ ತಾಲೂಕಿನ ಜೋಗೆವಾಡಿ ಗ್ರಾಮದಲ್ಲಿ ದಂಪತಿ ಅಂತ್ಯಕ್ರಿಯೆ 


ಬಸವಕಲ್ಯಾಣ(ಮೇ.24): ವಿಧಿಯ ಆಟದ ಮುಂದೆ ಏನೂ ಮಾಡಲು ಸಾಧ್ಯವಿಲ್ಲ ಎಂಬ ಮಾತಿನಂತೆ ತಾಲೂಕಿನ ಸಸ್ತಾಪುರ ಬಂಗ್ಲಾ ಸಮೀಪದ ರಾಷ್ಟ್ರೀಯ ಹೆದ್ದಾರಿ ಮೇಲೆ ಸಂಭವಿಸಿದ ರಸ್ತೆ ಅಪಘಾತದಲ್ಲಿ ಬೈಕ್‌ ಮೇಲೆ ಬರುತ್ತಿದ್ದ ಪತಿ, ಪತ್ನಿ ಮೃತಪಟ್ಟಿದ್ದರೆ ಜೊತೆಯಲ್ಲಿದ್ದ ಎರಡು ವರ್ಷದ ಮಗು ಪವಾಡದ ರೀತಿಯಲ್ಲಿ ಬದುಕುಳಿದಿದೆ.

ತಾಲೂಕಿನ ಜೋಗೆವಾಡಿಯ ಗುಂಡಪ್ಪ ಬಲಭೀಮ ಚಿಟ್ಟಂಪಲ್ಲೆ (33) ಹಾಗೂ ಪತ್ನಿ ಸುಜಾತಾ (29) ಮೃತಪಟ್ಟಿದ್ದು, ಮೂರು ವರ್ಷದ ಶ್ರೀಹರಿ ಎಂಬ ಹೆಸರಿನ ಮಗು ಬದುಕುಳಿದಿದೆ. ತೀವ್ರವಾಗಿ ಗಾಯಗೊಂಡಿದ್ದ ಗುಂಡಪ್ಪ ಅವರನ್ನು ಬಸವಕಲ್ಯಾಣ ಆಸ್ಪತ್ರೆಗೆ ಚಿಕಿ​ತ್ಸೆ​ಗಾಗಿ ಸಾಗಿ​ಸು​ತ್ತಿ​ದ್ದಾಗ ಮಾರ್ಗ​ ಮಧ್ಯ ಕೊನೆಯುಸಿರೆಳಿದಿದ್ದು, ಪತ್ನಿ ಸುಜಾತಾ ಕಲಬುರಗಿ ಖಾಸಗಿ ಆಸ್ಪತ್ರೆಯಲ್ಲಿ ಸೋಮವಾರ ಬೆಳಗ್ಗೆ ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾರೆ. ಇನ್ನು ಅಪ​ರಿ​ಚಿ​ತ ವಾಹನ ಡಿಕ್ಕಿ ಹೊಡೆದ ರಭಸಕ್ಕೆ ಮಗು ಬೈಕ್‌ ಮೇಲಿಂದ ಹಾರಿ ರಸ್ತೆ ಮಗ್ಗಲಿಗೆ ಬಿದ್ದಿದೆ. ಹೀಗಾಗಿ ಯಾವುದೇ ಗಾಯವೂ ಇಲ್ಲದೇ ಸುರಕ್ಷಿತವಾಗಿದೆ.

Tap to resize

Latest Videos

undefined

ರಾಯಚೂರಿನಲ್ಲಿ ಭೀಕರ ಅಪಘಾತ: ಕಾರ್-ಬೈಕ್‌ ಮಧ್ಯೆ ಡಿಕ್ಕಿ, ಸಿಸಿಟಿವಿಯಲ್ಲಿ ದೃಶ್ಯ ಸೆರೆ

ಜೋಗೆವಾಡಿಯ ಗುಂಡಪ್ಪ ಕಳೆದ ಒಂದು ವಾರದಿಂದ ಪತ್ನಿಯ ತವರು ಹುಮನಾಬಾದ್‌ ತಾಲೂಕಿನ ಹುಡಗಿ ಗ್ರಾಮದಲ್ಲಿದ್ದರು. ಭಾನುವಾರ ಬೆಳಗ್ಗೆ ಸಂಬಂಧಿಕರ ಮದುವೆಯಲ್ಲಿ ಭಾಗವಹಿಸಲು ಬೈಕ್‌ ಮೇಲೆ ಕೊಂಗೆವಾಡಿಗೆ ಬಂದಿದ್ದರು ಎನ್ನಲಾಗಿದೆ. ಮದುವೆ ಮುಗಿದ ನಂತರ ಊಟ ಮಾಡಿ, ಹುಡಗಿ ಗ್ರಾಮಕ್ಕೆ ಹೋಗುವಾಗ ದುರ್ಘಟನೆ ನಡೆದಿದೆ ಎಂದು ಹೇಳಲಾಗುತ್ತಿದೆ.

ಬಸವಕಲ್ಯಾಣ ಆಸ್ಪತ್ರೆಯಲ್ಲಿ ಮರಣೋತ್ತರ ಶವ ಪರೀಕ್ಷೆ ನಡೆಸಿದ ನಂತರ ರಾತ್ರಿ ಗುಂಡಪ್ಪ ಅವರ ಮೃತ​ದೇ​ಹ​ವ​ನ್ನು ಗ್ರಾಮಕ್ಕೆ ತರಲಾಗಿತ್ತು. ಮಧ್ಯ ರಾತ್ರಿ 2ರ ಸುಮಾರಿಗೆ ಕಲಬುರಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಸುಜಾತಾ ಅವರೂ ಮೃತಪಟ್ಟಿದ್ದು, ದಂಪತಿಯ ಅಂತ್ಯ ಸಂಸ್ಕಾರವ​ನ್ನು ಒಂದೇ ಸಮಯಕ್ಕೆ ಒಂದೇ ಕಡೆ ನೆರವೇರಿಸಲಾಗಿದೆ.

Bus Accident: ರಾಮದುರ್ಗದಲ್ಲಿ ಕೆಎಸ್‌ಆರ್‌ಟಿಸಿ ಬಸ್ ಪಲ್ಟಿ, 7 ಜನ ಆಸ್ಪತ್ರೆಗೆ ದಾಖಲು

ಘಟನೆ ಹಿನ್ನೆಲೆಯಲ್ಲಿ ಜೋಗೆವಾಡಿಯಲ್ಲಿರುವ ಗುಂಡಪ್ಪ ಅವರ ಮನೆಯಲ್ಲಿ ಸಂಬಂಧಿಕರ ಅಕ್ರಂದನ ಮನ ಮಿಡಿಯುವಂತಿತ್ತು. ವಾಡಿಯಲ್ಲಿ ಸೂತಕದ ಛಾಯೆ ಆವರಿಸಿತ್ತು. ಆದರೆ ತಂದೆ ತಾಯಿಯನ್ನು ಕಳೆದುಕೊಂಡ ಪುಟ್ಟಮಗು ಶ್ರೀಹರಿ ಇದಾವುದರ ಅರಿವೆಯೂ ಇಲ್ಲದಂತಿತ್ತು. ಜನ ಸೇರಿದ್ದನ್ನು ಗಮನಿಸಿ ಅತ್ತಿತ್ತ ನೋಡುತ್ತಿತ್ತು. ಘಟನೆಗೆ ಸಂಬಂಧಪಟ್ಟಂತೆ ನಗರದ ಸಂಚಾರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪಿಎಸ್‌ಐ ಸಿದ್ದರಾಯ ಬೆಳ್ಳೂರಗಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ.

ಶಾಸಕರಿಂದ 1ಲಕ್ಷ ರು. ನೆರವು:

ಜೋಗೆವಾಡಿಯಲ್ಲಿ ನಡೆದ ದಂಪತಿ ಅಂತ್ಯ ಸಂಸ್ಕಾರದಲ್ಲಿ ಶಾಸಕ ಶರಣು ಸಲಗರ ಭಾಗವಹಿಸಿದ್ದರು. ಕುಟುಂಬದವರಿಗೆ ಸಾಂತ್ವನ ಹೇಳಿ, ಮೃತನ ತಂದೆಗೆ ವೈಯಕ್ತಿಕವಾಗಿ 1 ಲಕ್ಷ ರು. ನೆರವು ನೀಡಿದ ಶಾಸಕರು, ಸರ್ಕಾರದಿಂದ ಸಿಗುವ ಪರಿಹಾರ ಮತ್ತು ಸೌಲಭ್ಯ ಕಲ್ಪಿಸಲು ಪ್ರಯತ್ನಿಸುವುದಾಗಿ ತಿಳಿಸಿದ್ದಾರೆ.

click me!