ಕಾರವಾರ ನೌಕಾನೆಲೆ ಉದ್ಯೋಗಿಯಾಗಿರುವ ಪತಿ ನಾಪತ್ತೆ, ವರ್ಷಗಳಿಂದ ಪತ್ನಿಯ ಹುಡುಕಾಟ

By Suvarna NewsFirst Published May 24, 2023, 10:21 PM IST
Highlights

ಪ್ರೀತಿಸಿ ಮದುವೆಯಾಗಿದ್ದ ನೌಕಾನೆಲೆ ನೌಕರನೋರ್ವ ವರ್ಷದಿಂದ ನಾಪತ್ತೆಯಾಗಿದ್ದು, ಮಕ್ಕಳೊಂದಿಗೆ ಪತ್ನಿ ಹುಡುಕಾಟ ಮುಂದುವರಿಸಿದ್ದಾಳೆ.

ವರದಿ: ಭರತ್ ರಾಜ್ ಕಲ್ಲಡ್ಕ, ಏಷ್ಯಾನೆಟ್ ಸುವರ್ಣನ್ಯೂಸ್

ಕಾರವಾರ (ಮೇ.24): ಪ್ರೀತಿಸಿ ಮದುವೆಯಾಗಿದ್ದ ನೌಕಾನೆಲೆ ನೌಕರನೋರ್ವ ವರ್ಷದಿಂದ ನಾಪತ್ತೆಯಾಗಿದ್ದು, ಮಕ್ಕಳೊಂದಿಗೆ ಪತ್ನಿ ಹುಡುಕಾಟ ಮುಂದುವರಿಸಿದ್ದಾಳೆ. ಗಂಡ ನಾಪತ್ತೆಯಾದ ಬಗ್ಗೆ ದೂರು ದಾಖಲಿಸಿದರೂ ಯಾವುದೇ ಸುಳಿವು ಪತ್ತೆಯಾಗದ ಹಿನ್ನೆಲೆಯಲ್ಲಿ ಗಂಡನನ್ನು ಹುಡುಕಿಕೊಡುವಂತೆ ಇದೀಗ ಆತನ ಪತ್ನಿ ಜಿಲ್ಲಾಡಳಿತದ ಮೊರೆ ಹೋಗಿದ್ದಾಳೆ. ಕಾರವಾರ ತಾಲೂಕಿನ ಹಾರವಾಡ ಮೂಲದ ಮನೋಜ್ ಪೆಡ್ನೇಕರ್ (33) ನಾಪತ್ತೆಯಾದ ನೌಕರನಾಗಿದ್ದಾನೆ. ನೌಕಾನೆಲೆಯಲ್ಲಿ ಖಾಯಂ ನೌಕರನಾಗಿ ಕಳೆದ 10 ವರ್ಷದಿಂದ ಕೆಲಸ ನಿರ್ವಹಿಸುತ್ತಿದ್ದ ಈತ ಬೈತಖೋಲ ಮೂಲದ ರೇಷ್ಮಾ ಪೆಡ್ನೇಕರ್ ಎಂಬ ಯುವತಿಯನ್ನು 7 ವರ್ಷದ ಹಿಂದೆ ಪ್ರೀತಿಸಿ ಮದುವೆಯಾಗಿದ್ದ ಎನ್ನಲಾಗಿದೆ. ಅಲ್ಲದೇ, ಇವರಿಬ್ಬರಿಗೂ ಇಬ್ಬರು ಹೆಣ್ಣು ಮಕ್ಕಳು ಕೂಡ ಜನಿಸಿದ್ದರು. ಆದರೆ, ಎರಡನೇ ಮಗು ಜನಿಸಿ ಆರು ತಿಂಗಳಾಗಿರುವ ವೇಳೆಗೆ ಪತಿ ನಾಪತ್ತೆಯಾಗಿದ್ದು, ಈವರೆಗೂ ಪತ್ತೆಯಾಗಿಲ್ಲ.‌

ನೌಕಾನೆಲೆಯಲ್ಲಿ ಕೆಲಸಕ್ಕೆ ತೆರಳುವುದಾಗಿ ಹೇಳಿ ಹೋದವನು ಮರಳಿ ಬಾರದ ಹಿನ್ನೆಲೆಯಲ್ಲಿ ಆತನ ಪತ್ನಿ ಹಾಗೂ ತಾಯಿ ಕಾರವಾರ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ 2022ರ ಜುಲೈ 25 ರಂದು ದೂರು ದಾಖಲಿಸಿದ್ದಾರೆ. ಆಮದಳ್ಳಿಯ ಬಾಡಿಗೆ ರೂಮಿನಲ್ಲಿದ್ದಾಗ ಒಂದೂವರೆ ತಿಂಗಳಿಂದ ಕೆಲಸಕ್ಕೆ ತೆರಳದೇ ಇದ್ದವರು 2022ರ ಜುಲೈ 18 ರಂದು ಬೆಳಿಗ್ಗೆ 8 ಗಂಟೆಗೆ ಕೆಲಸಕ್ಕೆ ತೆರಳುವುದಾಗಿ ಹೇಳಿ ಹೋಗಿದ್ದರು. ಆದರೆ, ಮರಳಿ ಬಾರದೇ ಎರಡು ದಿನದ ಬಳಿಕ ಕರೆ ಮಾಡಿ‌ ತಾನು ಮುಂದಿನವಾರ ಬರುವುದಾಗಿ ತಿಳಿಸಿದ್ದರು. ಎಲ್ಲಿಗೆ ತೆರಳುತ್ತಿರುವುದಾಗಿ ಪ್ರಶ್ನಿಸಿದಾಗಲೂ ಏನು ಹೇಳದೆ ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡಿದ್ದು, ಈವರೆಗೆ ಸಂಪರ್ಕಕ್ಕೆ ಸಿಕ್ಕಿಲ್ಲ ಎಂದು ದೂರಿನಲ್ಲಿ ನಮೂದಿಸಿದ್ದಾರೆ.

Bus Accident: ರಾಮದುರ್ಗದಲ್ಲಿ ಕೆಎಸ್‌ಆರ್‌ಟಿಸಿ ಬಸ್ ಪಲ್ಟಿ, 7 ಜನ ಆಸ್ಪತ್ರೆಗೆ ದಾಖಲು

ಪೊಲೀಸ್ ಠಾಣೆ ಹಾಗೂ ನೌಕಾನೆಲೆ ಅಧಿಕಾರಿಗಳಿಗೆ ಕಳೆದೊಂದು ವರ್ಷದಿಂದ ಅಲೆದಾಡಿದ್ದು, ಯಾವುದೇ ಪರಿಹಾರ ಸಿಗದ ಹಿನ್ನೆಲೆಯಲ್ಲಿ ಬುಧವಾರ ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ ಅವರನ್ನು ಇಬ್ಬರು ಪುಟ್ಟ ಮಕ್ಕಳೊಂದಿಗೆ ಭೇಟಿ ಮಾಡಿದ ರೇಷ್ಮಾ ಪೆಡ್ನೇಕರ್ ಕಣ್ಣೀರು ಹಾಕಿದ್ದಾರೆ. ಪತಿ ಕೆಲಸಕ್ಕೆ ತೆರಳಿದವರು ಮನೆಗೆ ಮರಳಿ ಬಂದಿಲ್ಲ. ಆದರೆ, ಮನೆಬಿಟ್ಟು ತೆರಳುವ ಮುನ್ನ ಮನೆಯ ಆಸ್ತಿ ಒಡವೆ ಎಲ್ಲವನ್ನೂ ಸಾಲ ತುಂಬುವುದಕ್ಕಾಗಿ ಮಾರಾಟ ಮಾಡಿದ್ದರು. ಬಳಿಕ ಬಾಡಿಗೆ ಮನೆಯಲ್ಲಿದ್ದ ನಮಗೆ ಪತಿ ನಾಪತ್ತೆಯಾದ ಬಳಿಕ ಜೀವನ ನಡೆಸುವುದೇ ಕಷ್ಟವಾಗಿದೆ. ಸದ್ಯ ತಾಯಿ ಮನೆಯಲ್ಲಿದ್ದು, ನನಗೆ ಗಂಡನನ್ನು ಹುಡುಕಿ ಕೊಡುವಂತೆ ರೇಷ್ಮಾ ಪೆಡ್ನೇಕರ್ ಮನವಿ ಮಾಡಿದ್ದಾಳೆ.

ಪಿತ್ರಾರ್ಜಿತ ಆಸ್ತಿಗಾಗಿ ಸಿನಿಮೀಯ ರೀತಿಯಲ್ಲಿ ಮಚ್ಚು ಹಿಡಿದು ಅಟ್ಟಾಡಿಸಿ ಹಲ್ಲೆ!

ರೇಷ್ಮಾ ಪತಿ ನಾಪತ್ತೆಯಾಗಿ ವರ್ಷ ಸಮೀಪಿಸಿದರೂ ಪೊಲೀಸರು ಹಾಗೂ ನೌಕಾನೆಲೆ ಅಧಿಕಾರಿಗಳು ಹುಡುಕಾಟಕ್ಕೆ ನಿರ್ಲಕ್ಷ್ಯ ಮಾಡುತ್ತಿದ್ದಾರೆ. ಇದರಿಂದ ಪುಟ್ಟ ಮಕ್ಕಳಿರುವ ಕುಟುಂಬ ಸಂಕಷ್ಟಕ್ಕೆ ಸಿಲುಕಿದೆ. ಜಿಲ್ಲಾಡಳಿತ ಕೂಡಲೇ ಆ ಕುಟುಂಬದ ನೆರವಿಗೆ ದಾವಿಸಬೇಕು. ಪತಿ ಹುಡುಕಿಕೊಡುವುದರ ಜತೆಗೆ ಅವರ ಜೀವನಕ್ಕೆ ಅನುಕೂಲವಾಗುವಂತೆ ನೌಕಾನೆಲೆಯಲ್ಲಿ ಕೆಲಸ ನೀಡಲು ಪ್ರಯತ್ನಿಸಬೇಕು. ಒಂದೊಮ್ಮೆ ಈಗಲೂ ನಿರ್ಲಕ್ಷ್ಯ ಮುಂದುವರಿಸಿದಲ್ಲಿ ನಮ್ಮ ಸಂಘಟನೆಯಿಂದ ನೌಕಾನೆಲೆ ಗೇಟ್ ಎದುರು ಕುಟುಂಬಸ್ಥರ ಜತೆಗೂಡಿ ಹೋರಾಟ ನಡೆಸುವುದಾಗಿ ಎಚ್ಚರಿಸಿದ್ದಾರೆ.

click me!