* ಕುಶಾಲನಗರ ಸಮೀಪದ ಗುಡ್ಡೆಹೊಸೂರು ಬಳಿ ನಡೆದ ಘಟನೆ
* ಸ್ಥಳದಲ್ಲೇ ರಂಜಿತ್ ಸಾವು
* ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಪೊಲೀಸರು
ಕುಶಾಲನಗರ(ಜೂ.24): ಬೈಕಿನಲ್ಲಿ ಕುಶಾಲನಗರ ಕಡೆಗೆ ರಾತ್ರಿ ವೇಳೆ ತೆರಳುತ್ತಿದ್ದ ಸಂದರ್ಭ ಎದುರಿನಿಂದ ಬಂದ ಕಾರಿಗೆ ಮುಖಾಮುಖಿ ಡಿಕ್ಕಿಯಾಗಿ ಇಬ್ಬರು ಬೈಕ್ ಸವಾರರು ಮೃತಪಟ್ಟ ಘಟನೆ ಬುಧವಾರ ತಡರಾತ್ರಿ ಕುಶಾಲನಗರ ಸಮೀಪದ ಗುಡ್ಡೆಹೊಸೂರು ಬಳಿ ನಡೆದಿದೆ.
ಗುಡ್ಡೆಹೊಸೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಸವನಹಳ್ಳಿಯ ನಿವಾಸಿ ರಂಜಿತ್(26) ಮತ್ತು ಗೋಣಿಕೊಪ್ಪದ ನಿವಾಸಿ ಸಚಿನ್ ಅಲಿಯಾಸ್ ದೀಕ್ಷಿತ್ (24 ) ಎಂಬವರು ಮೃತಪಟ್ಟವ್ಯಕ್ತಿಗಳು.
Tumakuruನಲ್ಲಿ ಕಾರು - ಸರಕಾರಿ ಬಸ್ ಭೀಕರ ಅಪಘಾತ, ಇಬ್ಬರು ಬಲಿ
ಬಸವನಹಳ್ಳಿ ಗ್ರಾಮದ ರಂಜಿತ್ ತನ್ನ ಪುತ್ರಿಯ ನಾಮಕರಣ ಸಮಾರಂಭದ ನಂತರ ರಾತ್ರಿ ವೇಳೆ ನೆಂಟರನ್ನು ಆಟೋರಿಕ್ಷಾ ಮೂಲಕ ಕುಶಾಲನಗರಕ್ಕೆ ಕಳುಹಿಸಿಕೊಡುವ ಸಂದರ್ಭ ರಂಜಿತ್ ತನ್ನ ಚಿಕ್ಕಪ್ಪನ ಮಗ ಸಚಿನ್ ಜೊತೆಗೆ ಬೈಕ್ನಲ್ಲಿ ಕುಶಾಲನಗರಕ್ಕೆ ತೆರಳುತ್ತಿದ್ದ ಸಂದರ್ಭ ಕುಶಾಲನಗರದಿಂದ ಸುಂಟಿಕೊಪ್ಪದ ಕಡೆಗೆ ಸಾಗುತ್ತಿದ್ದ ಕಾರಿಗೆ ಗುಡ್ಡೆಹೊಸೂರು ಬಳಿ ಹೆದ್ದಾರಿಯಲ್ಲಿ ಮುಖಾಮುಖಿ ಡಿಕ್ಕಿ ಆಗಿದೆ. ಈ ಸಂದರ್ಭ ರಂಜಿತ್ ಸ್ಥಳದಲ್ಲೇ ಮೃತಪಟ್ಟಿದ್ದು, ತೀವ್ರ ಗಾಯಗೊಂಡ ಸಚಿನ್ ಕುಶಾಲನಗರದಲ್ಲಿ ಪ್ರಥಮ ಚಿಕಿತ್ಸೆ ನೀಡಿ ನಂತರ ಮಡಿಕೇರಿಗೆ ಸಾಗಿಸಲಾಗಿದೆ. ಮಡಿಕೇರಿ ಆಸ್ಪತ್ರೆಯಲ್ಲಿ ಮೃತಪಟ್ಟಿರುವ ಬಗ್ಗೆ ಪೊಲೀಸರು ಮಾಹಿತಿ ನೀಡಿದ್ದಾರೆ.
ಕುಶಾಲನಗರ ಸಂಚಾರಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಸ್ಥಳ ಮಹಜರು ನಡೆಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.