ಬಾಲಕಿ ದೇವಮ್ಮಳ ಚಿಕಿತ್ಸೆಗೆ ಬೇಕಿದೆ ನೆರವಿನ ಹಸ್ತ: ದಾನಿಗಳ ಮೊರೆ ಹೋದ ಬಡ ಕುಟುಂಬ

By Kannadaprabha NewsFirst Published Jun 24, 2022, 12:56 PM IST
Highlights

*   ದೇವಮ್ಮಳಿಗೆ ವಿಚಿತ್ರ ಕಾಯಿಲೆ
*   ದಿನಗೂಲಿಯಿಂದ ಕುಟುಂಬ ನಿರ್ವಹಣೆ, ಮಗಳಿಗೆ ಚಿಕಿತ್ಸೆ ಕೊಡಿಸಲಾಗದಷ್ಟು ಅಶಕ್ತರಾದ ತಾಯಿ
*  ವ್ಯಾಸಂಗದಲ್ಲಿ ಸಹಪಾಠಿಗಳ ಪ್ರೋತ್ಸಾಹ

ಮಲ್ಲಯ್ಯ ಪೋಲಂಪಲ್ಲಿ

ಶಹಾಪುರ(ಜೂ.24):  ಮಗಳು ವಿಚಿತ್ರ ಕಾಯಿಲೆಯಿಂದ ನರಳುತ್ತಿದ್ದು, ಸುಮಾರು ಹತ್ತು ವರ್ಷಗಳಿಂದ ಈ ಕಾಯಿಲೆ ಕಾಡುತ್ತಿದೆ. ದಿನಗೂಲಿಯಿಂದ ಕುಟುಂಬ ನಡೆಸುವುದೇ ಕಷ್ಟವಾಗಿದೆ. ಚಿಕಿತ್ಸೆಗೆ ಹಣ ಭರಿಸಲಾಗದಷ್ಟು ನಿಶಕ್ತರಾಗಿದ್ದು, ತಾಯಿ ಶಕುಂತಲಾ-ಮಲ್ಲಪ್ಪ ದಂಪತಿಗಳು ಮಗಳ ಚಿಕಿತ್ಸೆಗೆ ನೆರವಿಗಾಗಿ ದಾನಿಗಳತ್ತ ಮೊರೆ ಹೋಗಿದ್ದಾರೆ.

ವಿಚಿತ್ರ ಕಾಯಿಲೆಗೆ ತುತ್ತಾಗಿರುವ ಶಹಾಪುರ ನಗರದ ಹಳಿಸಗರ ಬಡಾವಣೆಯ ಗಂಗಾನಗರ ನಿವಾಸಿ ದೇವಮ್ಮ. ಮಗಳ ಚಿಕಿತ್ಸೆಗೆ ಹಣ ಭರಿಸಲಾಗದೆ ಇತ್ತ ಕುಟುಂಬ ನಿರ್ವಹಣೆ ಚಿಂತೆಯಿಂದ ದೇವಮ್ಮಳ ತಾಯಿ ಕಣ್ಣೀರನಲ್ಲಿ ಕೈ ತೊಳೆಯುವಂತಾಗಿದೆ.

YADGIR ಅಂಚೆ ಸಿಬ್ಬಂದಿಯಿಂದಲೇ ಫಲಾನುಭವಿಗಳಿಗೆ 1 ಕೋಟಿ 27 ಲಕ್ಷ ರೂ. ವಂಚನೆ!

ಚಿಕಿತ್ಸೆಗೆ ಇರೋ ಪ್ಲಾಟ್‌ ಮಾರಾಟ:

ದೇವಮ್ಮಳ ಮುಖದಲ್ಲಿ ಹಾಗೂ ಎಡಬಾಗದ ರಟ್ಟೆಗೆ ಮಾಂಸ ಬೆಳೆದು ವಿಚಿತ್ರ ಕಾಯಿಲೆಗೆ ತುತ್ತಾಗಿದ್ದು, ಈಕೆಗೆ ಶಸ್ತ್ರಚಿಕಿತ್ಸೆ ಮಾಡಬೇಕು ಎಂದು ತಜ್ಞ ವೈದ್ಯರು ತಿಳಿಸಿದಾಗ, ಕೂಲಿ ಮಾಡಿ, ಆಪ್ತರಿಂದ ಪಡೆದ ಸಾಲ ಹಾಗೂ ಇರುವ ಒಂದು ಫ್ಲಾಟ್‌ ಮಾರಿ ಮಗಳಿಗೆ ಚಿಕಿತ್ಸೆ ಇದ್ದಬದ್ದ ಹಣ ಖರ್ಚಾಗಿದೆ. ಇದು ಒಂದೇ ಬಾರಿಗೆ ಆಗುವ ಶಸ್ತ್ರಚಿಕಿತ್ಸೆ ಅಲ್ಲ. ಕನಿಷ್ಠ ಎರಡ್ಮೂರು ಬಾರಿ ಆಪರೇಷನ್‌ ಮಾಡಬೇಕೆಂದು ಡಾಕ್ಟರ್‌ ತಿಳಿಸಿದ್ದು, ಚಿಕಿತ್ಸೆಗೆ 5, 6 ಲಕ್ಷ ರು.ಗಳ ಅಗತ್ಯವಿದೆ. ಮಗಳ ಜೀವನ ಚಿಕಿತ್ಸೆ ಮೇಲೆ ಅವಲಂಬಿತವಾಗಿದೆ. ಮಗಳನ್ನು ವಿಕಾರ ರೂಪದಲ್ಲಿ ಬಿಡಲು ಸಾಧ್ಯವೇ? ಎಂದು ಹೆತ್ತ ಕರುಳು ಮರಗುತಿದೆ.

ವ್ಯಾಸಂಗದಲ್ಲಿ ಸಹಪಾಠಿಗಳ ಪ್ರೋತ್ಸಾಹ:

ಮಗಳಲ್ಲಿ ಧೈರ್ಯ ಮತ್ತು ಆತ್ಮವಿಶ್ವಾಸ ತುಂಬಿ ಮಗಳನ್ನು ಶಾಲೆಗೆ ಕಳುಹಿಸಿಕೊಟ್ಟರೆ ಚಿಕ್ಕ ಮಕ್ಕಳು ಗೇಲಿ ಮಾಡಿ ನಗುತ್ತಿದ್ದರು. ಇದರಿಂದ ಮಗಳು ದಿನಾಲು ತುಂಬಾ ಚಿತ್ರಹಿಂಸೆ ಅನುಭವಿಸುತ್ತಿದ್ದಳು. ಆದರೆ, ಮಗಳು ದೊಡ್ಡವಳಾಗಿ 10 ನೇ ತರಗತಿಯಲ್ಲಿ ಓದುತ್ತಿರುವಾಗ ಶಾಲೆಯಲ್ಲಿ ಶಿಕ್ಷಕರು ಮತ್ತು ವಿದ್ಯಾರ್ಥಿನಿಯರು ಈಕೆಯನ್ನು ಎಲ್ಲರೂ ಪ್ರೀತಿಯಿಂದ ಕಾಣುತ್ತಿದ್ದರು. ಕಾಯಿಲೆಗೆ ತುತ್ತಾಗಿರುವ ನನಗೆ ಶಿಕ್ಷಕರು ಹಾಗೂ ಸಹಪಾಠಿಗಳ ಪ್ರೋತ್ಸಾಹ ಮತ್ತು ಸಹಕಾರದಿಂದ ನನ್ನ ಓದಿಗೆ ಯಾವುದೇ ಅಡ್ಡಿಯಾಗಲಿಲ್ಲ ಎನ್ನುತ್ತಾಳೆ ದೇವಮ್ಮ.

ಮಗಳಿಗೆ 15 ವರ್ಷ ಕಳೆದಿವೆ. ಈಗಲೂ ನಮ್ಮ ಮಗಳ ಚಿಕಿತ್ಸೆಗೆ ಅಗತ್ಯ ಹಣವನ್ನು ಭರಿಸಲು ನಮಗೆ ಸಾಧ್ಯವಾಗುತ್ತಿಲ್ಲ. ಕಳೆದ ಕೆಲ ವರ್ಷಗಳಲ್ಲಿ ನಮ್ಮ ಮಗಳ ಸರ್ಜರಿಗಾಗಿ ಅಗತ್ಯವಿರುವ ಹಣವನ್ನು ಸಂಗ್ರಹಿಸಲು ಸಾಧ್ಯವಿರುವ ಎಲ್ಲ ದಾರಿಗಳಲ್ಲಿಯೂ ಪ್ರಯತ್ನಿಸಿದ್ದೇವೆ. ಆದರೆ, ಅದರಿಂದ ಫಲ ಸಿಗಲಿಲ್ಲ. ನಾನು ಕೂಲಿ ಕೆಲಸ ಮಾಡುತ್ತಿದ್ದು, ನನ್ನ ಸಂಪಾದನೆ ಕೂಡ ತೀರಾ ಕಡಿಮೆ. ಅಲ್ಪ ಗಳಿಕೆಯೊಂದಿಗೆ ಜೀವನ ನಡೆಯುತ್ತಿದೆ. ಹಣ ಹೊಂದಿಸಲಾಗುತ್ತಿಲ್ಲ. ಅಗತ್ಯವಾಗಿ ದಾನಿಗಳು ನೆರವಾದರೆ ಮಗಳ ಜೀವ ಉಳಿಯಬಲ್ಲದು. ಸಹಾಯ ಹಸ್ತ ನೀಡುವಂತೆ ದೇವಮ್ಮಳ ತಂದೆ ಮಲ್ಲಪ್ಪ ನೋವಿನಿಂದ ನುಡಿಯುತ್ತಾರೆ.

'ಕೈ' ನಾಯಕರು ಬ್ಯಾರಿಕೇಡ್, ಮನೆ ಹಾರಲು ಪ್ರಾಕ್ಟೀಸ್ ಮಾಡ್ತಿದ್ದಾರೆ: ಶಾಸಕ ರಾಜೂಗೌಡ ಲೇವಡಿ

ಫೈಬ್ರಸ್‌ ಡಿಸ್ಪಾಲಸಿಯಾವು ಅಥವಾ ಹೆಮಾಂಜಿಯೋಮಾ ಕಾಯಿಲೆ ಇರಬಹುದು. ಇದು ದೇಹದಲ್ಲಿ ಎಲ್ಲಿಯಾದರೂ ಸಂಭವಿಸಬಹುದು. ಆದರೆ, ಸಾಮಾನ್ಯವಾಗಿ ಮುಖ, ನೆತ್ತಿ, ಎದೆ ಅಥವಾ ಬೆನ್ನಿನ ಮೇಲೆ ಕಾಣಿಸಿಕೊಳ್ಳುತ್ತದೆ. ಮಗುವಿನ ಹೆಮಾಂಜಿಯೋಮಾ (ಶಿಶುವಿನ ಹೆಮಾಂಜಿಯೋಮಾ) ಗಾಗಿ ಚಿಕಿತ್ಸೆಯು ಸಾಮಾನ್ಯವಾಗಿ ಅಗತ್ಯವಿರುವುದಿಲ್ಲ. ಏಕೆಂದರೆ ಅದು ಕಾಲಾನಂತರದಲ್ಲಿ ಮಸುಕಾಗುತ್ತದೆ. ಶೈಶವಾವಸ್ಥೆಯಲ್ಲಿ ಈ ಸ್ಥಿತಿಯನ್ನು ಹೊಂದಿರುವ ಮಗುವಿಗೆ ಸಾಮಾನ್ಯವಾಗಿ 10ನೇ ವಯಸ್ಸಿನಲ್ಲಿ ಬೆಳವಣಿಗೆಯ ಸ್ವಲ್ಪ ಗೋಚರ ಕುರುಹು ಇರುತ್ತದೆ. ಹೆಮಾಂಜಿಯೋಮಾವು ನೋಡುವಿಕೆ, ಉಸಿರಾಟ ಅಥವಾ ಇತರ ಕಾರ್ಯಗಳಿಗೆ ಅಡ್ಡಿಪಡಿಸಿದರೆ ಚಿಕಿತ್ಸೆ ಮಾಡಬೇಕಾಗುತ್ತದೆ. ಇದು ಒಂದೇ ಸಲಕ್ಕೆ ಶಸ್ತ್ರಚಿಕಿತ್ಸೆಯಿಂದ ಗುಣಪಡಿಸಲಾಗುವುದಿಲ್ಲ. ಈಗಾಗಲೇ ಒಂದು ಸಲ ಆಪರೇಷನ್‌ ಆಗಿದ್ದು, ಬಹುಶಃ ಇನ್ನು ಒಂದೆರಡು ಸಲ ಆಪರೇಷನ್‌ ಮಾಡಬೇಕಾಗುತ್ತದೆ ಎಂದು ವೈದ್ಯರೊಬ್ಬರು ತಿಳಿಸಿದ್ದಾರೆ.

ನೆರವಿಗೆ ದಾನಿಗಳ ಮೊರೆ:

ದೇವಮ್ಮಳ ಕಾಯಿಲೆಗೆ ಔಷಧಗಳು ಕೇವಲ ತಾತ್ಕಾಲಿಕ ಪರಿಹಾರವಷ್ಟೇ ಆಗಬಲ್ಲವು ಎಂದು ವೈದ್ಯರು ಹೇಳಿದ್ದಾರೆ. ಆಕೆಯ ಸ್ಥಿತಿಯನ್ನು ಶಾಶ್ವತವಾಗಿ ಗುಣಪಡಿಸಬೇಕೆಂದರೆ ಚಿಕಿತ್ಸೆ ಒಂದೇ ಮಾರ್ಗ. ಅದಕ್ಕೆ ತಗುಲುವ ವೆಚ್ಚ 5,6 ಲಕ್ಷ ರು.ಗಳಾಗುತ್ತದೆ. ಅಷ್ಟೊಂದು ಹಣ ಹೊಂದಿಸಲಾಗದೆ ಶಕುಂತಲಾ ಮಲ್ಲಪ್ಪ ದಂಪತಿಗಳು ದಾನಿಗಳತ್ತ ಮೊರೆ ಹೋಗಿದ್ದಾರೆ. ಅಗತ್ಯವಾಗಿ ದಾನಿಗಳು ಸಹಾಯ ಮಾಡಿ ನೆರವಾಗಬೇಕಿದೆ.

ನೆರವು ನೀಡಬೇಕಾದ ಖಾತೆ ವಿವರ: 

ಎಸ್‌ಬಿಐ ಖಾತೆ ಸಂಖ್ಯೆ: 64145928709, ಖಾತೆದಾರರ ಹೆಸರು: ದೇವಮ್ಮ ಡಿ/ಓ ಶಕುಂತಲಾ, ಖಾತೆ ಮಾದರಿ: ಚಾಲ್ತಿ, ಐಎಫ್‌ಎಸ್‌ಸಿ: ಎಸ್‌ಬಿಐಎನ್‌0011270, ಮೊ: 8971043849.

ಮಗಳ ಚಿಕಿತ್ಸೆಗೆ ಭರಿಸುವಷ್ಟುಹಣ, ಆಸ್ತಿ-ಪಾಸ್ತಿ ಯಾವುದು ಇಲ್ಲ. ಮಗಳಿಗೆ ಚಿಕಿತ್ಸೆ ಕೊಡಿಸಲಾಗದಷ್ಟು ನಿಶಕ್ತರಾಗಿದ್ದೇವೆ. ನಮ್ಮ ಮಗಳ ಚಿಕಿತ್ಸೆಗೆ ಅಗತ್ಯವಾಗಿ ದಾನಿಗಳು ನೆರವಾಗುತ್ತಾರೆಂಬ ಏಕೈಕ ಭರವಸೆ ಉಳಿದುಕೊಂಡಿದೆ. ಪುಣ್ಯಾತ್ಮರು ಸಹಾಯಮಾಡುವಂತೆ ಕೇಳಿಕೊಳ್ಳುತ್ತೇನೆ ಅಂತ ವಿಚಿತ್ರ ಕಾಯಿಲೆಗೆ ತುತ್ತಾಗಿರುವ ದೇವಮ್ಮಳ ತಾಯಿ ಶಕುಂತಲಾ ಕುಂಡೆಕಲ್‌ ತಿಳಿಸಿದ್ದಾರೆ. 
 

click me!