ಕಾಮನ ದಹನಕ್ಕೆ ಬೆಂಕಿ ತರುವ ವೇಳೆ ಸವರ್ಣೀಯರು ಹಾಗೂ ದಲಿತರ ನಡುವೆ ಗಲಾಟೆ| ಕೊಪ್ಪಳ ಜಿಲ್ಲೆಯ ಗುಡದಳ್ಳಿ ಗ್ರಾಮದಲ್ಲಿ ನಡೆದ ಘಟನೆ| 41 ಜನರ ಬಂಧನ| ದಲಿತರ ಮೇಲಿನ ಹಲ್ಲೆಗೆ ಖಂಡನೆ|
ಮುನಿರಾಬಾದ(ಮಾ.11): ಹೋಳಿ ಹಬ್ಬದ ಪ್ರಯುಕ್ತ ಕಾಮನ ದಹನಕ್ಕೆ ಬೆಂಕಿ ತರುವ ವೇಳೆ ಸವರ್ಣೀಯರು ಹಾಗೂ ದಲಿತರ ನಡುವೆ ಸೋಮವಾರ ತಡರಾತ್ರಿ ಗುಡದಳ್ಳಿ ಗ್ರಾಮದಲ್ಲಿ ನಡೆದ ಗಲಾಟೆ ತಾರಕಕ್ಕೇರಿದ್ದು, ಹಲವರಿಗೆ ಗಾಯವಾಗಿದೆ. ಘಟನೆಗೆ ಸಂಬಂಧಿಸಿದಂತೆ 41 ಜನರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಕಾಮನ ದಹನಕ್ಕಾಗಿ ಬೆಂಕಿಯನ್ನು ಮೆರವಣಿಗೆಯಲ್ಲಿ ತರುವ ವೇಳೆ ಯಾರೋ ಒಬ್ಬರಿಗೆ ಬೆಂಕಿ ತಾಗಿದೆ. ಇದು ವಿವಾದಕ್ಕೆ ತಿರುಗಿ ಮಾರಾಮಾರಿಯಾಗಿದೆ. ರಾತ್ರಿ ವೇಳೆ ಪರಸ್ಪರ ಮಾರಾಮಾರಿಯಾಗಿದ್ದರಿಂದ ಮಹಿಳೆಯರು ಸೇರಿದಂತೆ ಹಲವರಿಗೆ ಗಾಯವಾಗಿದ್ದು, ಮುನಿರಾಬಾದ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
ದಲಿತ ಬಾಲಕನ ಮೇಲೆ ಗ್ರಾಪಂ ಅಧ್ಯಕ್ಷ ಹಂದಿಗಾಲೆಪ್ಪ ಅವರು ಹಲ್ಲೆ ಮಾಡಿದ್ದರಿಂದಲೇ ವಿವಾದದ ಕಿಡಿ ಹೊತ್ತಿದೆ ಎನ್ನಲಾಗಿದೆ. ಆದರೆ, ಇದು ಹಿಂದಿನ ದ್ವೇಷವಾಗಿದ್ದು, ಈಗ ಹೋಳಿಯ ನೆಪದಲ್ಲಿ ಸ್ಥಳೀಯ ಗ್ರಾಮ ಪಂಚಾಯಿತಿ ಅಧ್ಯಕ್ಷ ಹಂದಿಗಾಲೆಪ್ಪ ಅವರನ್ನು ಟಾರ್ಗೆಟ್ ಮಾಡಿ, ಗಲಾಟೆ ಮಾಡಲಾಗಿದೆ ಎನ್ನುವ ಆರೋಪವೂ ಕೇಳಿ ಬರುತ್ತಿದೆ. ಇದರ ಹಿಂದೆ ಸೇಡಿನ ರಾಜಕೀಯ ಇದ್ದು, ತನಿಖೆಯ ನಂತರವೇ ಬೆಳಕಿಗೆ ಬರಬೇಕಾಗಿದೆ.
ಅಂಬೇಡ್ಕರ್ ಭಾವಚಿತ್ರಕ್ಕೆ ಅಪಚಾರ:
ಘಟನೆಯ ವೇಳೆ ಯಾರೋ ಕಿಡಿಗೇಡಿಗಳು ಗ್ರಾಮದಲ್ಲಿರುವ ಅಂಬೇಡ್ಕರ್ ಭಾವಚಿತ್ರಕ್ಕೆ ಅಪಚಾರ ಎಸಗಿದ್ದಾರೆ. ಸೆಗಣಿ ಎಸೆದು ಅಮಾನವೀಯತೆ ಮೆರೆದಿದ್ದಾರೆ. ಗಲಾಟೆಯನ್ನು ಇನ್ನಷ್ಟು ಹೆಚ್ಚಿಸಲು ಈ ಕೃತ್ಯ ಎಸಗಿದ್ದಾರೆ ಎನ್ನಲಾಗಿದೆ. ಗುಡದಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಹಂದಿಗಾಲೆಪ್ಪ ಹೊಳೆಯಾಚಿ ಹಾಗೂ ಅದೇ ಗ್ರಾಮದ 12 ಜನರ ವಿರುದ್ಧ ಮರಿಯಮ್ಮ ಅವರು ನೀಡಿದ ದೂರಿನ ಹಿನ್ನೆಲೆಯಲ್ಲಿ ಮುನಿರಾಬಾದ ಪೊಲೀಸ್ ಠಾಣೆಯಲ್ಲಿ ದೊಂಬಿ, ಮಾನಭಂಗ ಹಾಗೂ ಜಾತಿ ನಿಂದನೆ ಪ್ರಕರಣ ದಾಖಲಾಗಿದೆ.
ಗ್ರಾಮದ ವಸಂತ ಕುರಿ ಎಂಬವರು ನೀಡಿದ ದೂರಿನ ಹಿನ್ನೆಲೆ ಮರಿಯಮ್ಮ ಹಾಗೂ 13 ಜನರ ವಿರುದ್ಧ ದೊಂಬಿ ಹಾಗೂ ಮಾನಭಂಗದ ದೂರು ಸಹ ದಾಖಲಿಸಲಾಗಿದೆ. ಗ್ರಾಮದಲ್ಲಿ ಪರಿಸ್ಥಿತಿ ಬಿಗುವಿನಿಂದ ಕೂಡಿದ್ದು ಪೊಲೀಸ್ ಭದ್ರತೆ ಏರ್ಪಡಿಸಲಾಗಿದೆ.
ಸೋಮವಾರ ರಾತ್ರಿ ಘಟನೆ ನಡೆದ ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಂಗೀತಾ, ಗಂಗಾವತಿ ಡಿವೈಎಸ್‌ಪಿ ಚಂದ್ರಶೇಖರ, ಸಶಸ್ತ್ರ ಮೀಸಲು ಪಡೆಯ ಡಿವೈಎಸ್‌ಪಿ ಶಶಿಧರ, ಇನ್‌ಸ್ಪೆಕ್ಟರ್‌ಗಳಾದ ರವಿ ಉಕ್ಕುಂದ, ವಹಾಂತೇಶ ಸಜ್ಜನ್ ಹಾಗೂ ಮುನಿರಾಬಾದ ಠಾಣಾ ಪಿಎಸ್‌ಐ ಸುಪ್ರೀತ ವಿರುಪಾಕ್ಷಪ್ಪ ಸ್ಥಳಕ್ಕೆ ಭೇಟಿ ನೀಡಿದರು. ಮುಂಜಾಗ್ರತೆ ಕ್ರಮವಾಗಿ ಗ್ರಾಮದಲ್ಲಿ ಮೀಸಲು ಪಡೆಯನ್ನು ನಿಯೋಜಿಸಲಾಗಿದೆ.
ದಲಿತರ ಮೇಲಿನ ಹಲ್ಲೆಗೆ ಖಂಡನೆ
ಗುಡದಳ್ಳಿ ಗ್ರಾಮದಲ್ಲಿ ಅಂಬೇಡ್ಕರ ಭಾವಚಿತ್ರಕ್ಕೆ ಕಲ್ಲು ತೂರಲಾಗಿದ್ದು ಅಲ್ಲದೇ ದಲಿತರ ಮೇಲೆ ಹಲ್ಲೆ ಘಟನೆಯನ್ನು ದಲಿತ ಸಂಘರ್ಷ ಸಮಿತಿ(ಭೀಮವಾದ) ರಾಜ್ಯ ಸಂಘಟನೆ ಸಂಚಾಲಕರಾದ ಆರತಿ ತಿಪ್ಪಣ್ಣ ಖಂಡಿಸಿದ್ದಾರೆ. ಡಾ. ಬಿ.ಅರ್. ಅಂಬೇಡ್ಕರ ಅವರು ನಮ್ಮ ಪಾಲಿಗೆ ದೇವರು. ಅ ದೇವರ ಭಾವಚಿತ್ರದ ಮೇಲೆ ಕಲ್ಲು ತೂರಾಟ ನಡೆಸಿದ್ದು ಸರಿಯಲ್ಲ. ಕೂಡಲೇ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೆ ಉಗ್ರ ಹೋರಾಟ ನಡೆಸುವುದಾಗಿ ಎಚ್ಚರಿಸಿದ್ದಾರೆ.
ಕಾಂಗ್ರೆಸ್ ಮುಖಂಡ ಭರಮಪ್ಪ ಬೆಲ್ಲದ ಮಾತನಾಡಿ, ಗುಡದಳ್ಳಿ ಗ್ರಾಮದ ದಲಿತರು ಸ್ವಾಭಿಮಾನದಿಂದ ಬದುಕುತ್ತಿದ್ದಾರೆ. ಕಳೆದ 11 ವರ್ಷದಿಂದ ಗ್ರಾಮದ ದಲಿತರು ಎಲ್ಲ ವರ್ಗದ ಜನರಿಗಾಗಿ ಗ್ರಾಮದಲ್ಲಿ ಸಾಮೂಹಿಕ ವಿವಾಹಗಳನ್ನು ನಡೆಸುತ್ತಾ ಬಂದಿದ್ದಾರೆ. ಇದನ್ನು ಸಹಿಸದ ಕೆಲವರು ಇಂತಹ ಕೃತ್ಯ ಎಸಗಿದ್ದಾರೆ ಎಂದು ಆರೋಪಿಸಿದರು.