ಕಾರು ಅಪಘಾತ: ರಸ್ತೆ ಮಧ್ಯೆ ವಿದ್ಯಾರ್ಥಿಗಳ ಹೊಡೆದಾಟ!

By Kannadaprabha NewsFirst Published Mar 11, 2020, 8:24 AM IST
Highlights

ರಸ್ತೆ ಮಧ್ಯೆ ಅಪಘಾತವಾಗಿದ್ದು ಬಳಿಕ ವಿದ್ಯಾರ್ಥಿಗಳ ನಡುವೆ ಗಲಾಟೆ ನಡೆದು ಕೈ ಕೈ ಮಿಲಾಯಿಸಿದ ಘಟನೆ ನಡೆದಿದ್ದು, ಈ ವೇಳೆ ವಿದ್ಯಾರ್ಥಿಗಳಿಬ್ಬರನ್ನು ಬಂಧಿಸಿದ ಘಟನೆ ಬೆಂಗಳೂರಿನಲ್ಲಿ ನಡೆದಿದೆ. 

ಬೆಂಗಳೂರು [ಮಾ.11]: ಕಾರು ಅಪಘಾತ ವಿಚಾರವಾಗಿ ಪಂಚತಾರಾ ಹೋಟೆಲ್‌ನಲ್ಲಿ ಹೋಳಿ ಹಬ್ಬದ ಸಂಭ್ರಮ ಮುಗಿಸಿ ತೆರಳುತ್ತಿದ್ದ ಇಬ್ಬರು ವಿದ್ಯಾರ್ಥಿಗಳು ಬೀದಿ ಕಾಳಗ ಮಾಡಿಕೊಂಡಿರುವ ಘಟನೆ ರೇಸ್‌ ಕೋರ್ಸ್‌ ರಸ್ತೆಯಲ್ಲಿ ಮಂಗಳವಾರ ಸಂಜೆ ನಡೆದಿದೆ.

ರಾಜಾಜಿನಗರದ ಆಕಾಶ್‌ ಹಾಗೂ ಬಿಟಿಎಂ ಲೇಔಟ್‌ನ ರಾಹುಲ್‌ ಎಂಬುವರೇ ಬಡಿದಾಡಿಕೊಂಡಿದ್ದು, ಈ ವಿದ್ಯಾರ್ಥಿಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಹೋಟೆಲ್‌ನಲ್ಲಿ ಹೋಳಿ ಸಂಭ್ರಮಾಚರಣೆ ಮುಗಿಸಿ ಸಂಜೆ ಅವರು ಮನೆಗೆ ಮರಳುವಾಗ ಈ ಘರ್ಷಣೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಆಕಾಶ್‌ ಹಾಗೂ ರಾಹುಲ್‌, ಖಾಸಗಿ ಕಾಲೇಜಿನಲ್ಲಿ ಎಂಜಿನಿಯರಿಂಗ್‌ ಓದುತ್ತಿದ್ದಾರೆ. ತಮ್ಮ ಸ್ನೇಹಿತರ ಜತೆ ರೇಸ್‌ ಕೋರ್ಸ್‌ ರಸ್ತೆಯ ತಾಜ್‌ ವೆಸ್ಟ್‌ ಎಂಡ್‌ ಹೋಟೆಲ್‌ನಲ್ಲಿ ನಡೆದ ಹೋಳಿ ಸಡಗರದಲ್ಲಿ ಅವರು ಪಾಲ್ಗೊಂಡಿದ್ದರು. ಸಂಜೆ ಸಂಭ್ರಮಾಚರಣೆ ಮುಗಿಸಿ ಕಾರಿನಲ್ಲಿ ಪ್ರತ್ಯೇಕವಾಗಿ ವಿದ್ಯಾರ್ಥಿಗಳು ತೆರಳುತ್ತಿದ್ದರು. ಆಗ ರಾಹುಲ್‌, ಹಿಂದಿನಿಂದ ಆಕಾಶ್‌ ಕಾರಿಗೆ ಕಾರು ಗುದ್ದಿಸಿದ್ದಾನೆ. ಆಗ ಆಕಾಶ್‌ ಕಾರು ಜಖಂಗೊಂಡಿದೆ. ಇದರಿಂದ ಕೆರಳಿದ ಆತ, ಕಾರಿನಿಂದಿಳಿದು ಬಂದು ರಾಹುಲ್‌ ಜತೆ ಜಗಳ ಶುರು ಮಾಡಿದ್ದಾನೆ. ಈ ಹಂತದಲ್ಲಿ ಇಬ್ಬರ ಮಧ್ಯೆ ಮಾತಿಗೆ ಮಾತು ಬೆಳೆದು ಪರಿಸ್ಥಿತಿ ವಿಕೋಪಕ್ಕೆ ತಿರುಗಿ ಕೊನೆಗೆ ಕೈ ಕೈ ಮಿಲಾಯಿಸಿದ್ದಾರೆ.

ಮದುವೆಯಾಗಿ 25 ವರ್ಷದ ನಂತ್ರ ಗಂಡ ಇನ್ನೊಬ್ಬಳಿಗೆ ಸೈಟ್ ಕೊಡಿಸೋಕೆ ಹೋದ!..

ಘಟನಾ ಸ್ಥಳಕ್ಕೆ ಸಮೀಪದಲ್ಲಿದ್ದ ಹೈಗ್ರೌಂಡ್ಸ್‌ ಸಂಚಾರ ಠಾಣೆ ಪೊಲೀಸರು, ಕೂಡಲೇ ಆಗಮಿಸಿ ವಿದ್ಯಾರ್ಥಿಗಳನ್ನು ವಶಕ್ಕೆ ಪಡೆದು ಜೀಪಿನಲ್ಲಿ ಠಾಣೆಗೆ ಕರೆ ತಂದಿದ್ದಾರೆ. ಈ ಬಗ್ಗೆ ಅಜಾಗರೂಕತೆ ವಾಹನ ಚಾಲನೆ ಆರೋಪದಡಿ ಹೈಗ್ರೌಂಡ್ಸ್‌ ಸಂಚಾರ ಠಾಣೆಯಲ್ಲಿ ದಾಖಲಾಗಿದೆ. ಬಳಿಕ ಸಾರ್ವಜನಿಕ ಸ್ಥಳದಲ್ಲಿ ಅವಾಚ್ಯ ಶಬ್ದಗಳ ನಿಂದಿಸಿ ಗಲಾಟೆ ಮಾಡಿದ ಆರೋಪದ ಮೇರೆಗೆ ಅವರನ್ನು ವಶಕ್ಕೆ ಪಡೆದು ಹೈಗ್ರೌಂಡ್ಸ್‌ ಕಾನೂನು ಮತ್ತು ಸುವ್ಯವಸ್ಥೆ ಠಾಣೆ ಪೊಲೀಸರು ವಿಚಾರಣೆ ನಡೆಸಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.

 ಪಾನಮತ್ತ ವಿದ್ಯಾರ್ಥಿ?

ಈ ವಿದ್ಯಾರ್ಥಿಗಳ ಪೈಕಿ ಒಬ್ಬಾತ ಮದ್ಯ ಸೇವಿಸಿ ಕಾರು ಓಡಿಸುತ್ತಿದ್ದ ಆರೋಪ ಕೇಳಿ ಬಂದಿದೆ. ಈ ಬಗ್ಗೆ ಹೈಗ್ರೌಂಡ್ಸ್‌ ಸಂಚಾರ ಠಾಣೆ ಪೊಲೀಸರು, ಮದ್ಯ ಸೇವಿಸಿದ್ದ ವಿದ್ಯಾರ್ಥಿ ಮೇಲೆ ಪ್ರತ್ಯೇಕ ಪ್ರಕರಣ ದಾಖಲಿಸಿ ದಂಡ ವಿಧಿಸಿದ್ದಾರೆ ಎಂದು ತಿಳಿದು ಬಂದಿದೆ.

click me!