ಧಾರವಾಡ: ಸೀಟ್‌ ಬೆಲ್ಟ್‌ ಧರಿಸದೆ ಇಬ್ಬರು ಸ್ನೇಹಿತರು ಸಾವು

By Kannadaprabha News  |  First Published Sep 15, 2022, 9:35 AM IST

ಹಿಂಬದಿ ಸೀಟ್‌ ಬೆಲ್ಟ್‌ ಹಾಕಿದ್ದ ಇನ್ನೊಬ್ಬ ಸ್ನೇಹಿತ ಪ್ರಾಣಾಪಾಯದಿಂದ ಪಾರು, ಅಳ್ನಾವರ ಬಳಿ ಎರಡು ತಿಂಗಳ ಹಿಂದೆ ನಡೆದಿದ್ದು ಕಾರು-ಲಾರಿ ಅಪಘಾತ


ಶಶಿಕುಮಾರ ಪತಂಗೆ

ಅಳ್ನಾವರ(ಸೆ.15):  ಕಾರಿನ ಸೀಟ್‌ ಬೆಲ್ಟ್‌ ಹಾಕಿದ್ದಕ್ಕೆ ನನ್ನ ಜೀವ ಉಳೀತು. ಇಲ್ಲ ಅಂದಿದ್ದರೆ ನನ್ನ ಇಬ್ಬರು ಸ್ನೇಹಿತರಿಗಿಂತ ಮೊದಲು ನನ್ನ ಪ್ರಾಣವೇ ಹೋಗತ್ತಿತ್ತು. ನನ್ನ ಗೆಳೆಯರಿಬ್ಬರು ಮೃತರಾಗಿದ್ದು ಇಂದಿಗೂ ದುಃಖ ನೀಡುತ್ತಿದೆ.
ಸೀಟ್‌ ಬೆಲ್ಟ್‌, ಹೆಲ್ಮೆಟ್‌ನ ಮಹತ್ವದ ಬಗ್ಗೆ ಹಲವಾರು ಬಾರಿ ಓದಿದ್ದೆ, ಸಾಮಾಜಿಕ ಜಾಲತಾಣದಲ್ಲೂ ಅರಿವು ಮೂಡಿಸಲಾಗುತ್ತಿದೆ. ಆದರೆ ಪದೇ ಪದೇ ಪ್ರಜ್ಞಾವಂತ, ವಿದ್ಯಾವಂತ ಜನರೇ ಸೀಟ್‌ ಬೆಲ್ಟ್‌ ಧರಿಸದೇ ವಾಹನ ಚಲಾಯಿಸುವುದರಿಂದ ಅವಘಡ ಸಂಭವಿಸಿದಾಗ ಪ್ರಾಣ ಹೋಗುತ್ತಿದೆ. ಕಾರ್‌ ಅಪಘಾತದಲ್ಲಿ ಸೀಟ್‌ ಬೆಲ್ಟ್‌ ಧರಿಸಿದ್ದ ನಾನೂ ಸೇರಿದಂತೆ ಮೂವರು ಉಳಿದೆವು. ನಮ್ಮ ಪ್ರಾಣ ಸ್ನೇಹಿತರಿಬ್ಬರು ಮೃತರಾದರು. ಎರಡು ತಿಂಗಳ ಹಿಂದೆ ಅಳ್ನಾವರ ಸಮೀಪದ ಗೋವಾ ರಸ್ತೆಯಲ್ಲಿ ನಡೆದ ರಸ್ತೆ ಅಪಘಾತದಲ್ಲಿ ತನ್ನ ಸ್ನೇಹಿತರನ್ನು ಕಳೆದುಕೊಂಡ ಪ್ರೇಮನಾಥ ಪಾಲಕರ ಮಾತಿದು.

Latest Videos

undefined

ಈ ದುರಂತದಲ್ಲಿ ನನ್ನ ಬಾಲ್ಯ ಗೆಳೆಯ, ಪ್ರಾಣ ಸ್ನೇಹಿತ ವಿಠ್ಠಲ ಕಾಕಡೆ (27), ಅಳ್ನಾವರದ ಸಾಗರ ಬೀಡಿಕರ (28) ಸಾವನ್ನಪ್ಪಿದರು. ಅವರು ಬೆಂಗಳೂರಿನ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು. ಸಾಗರ ಬೀಡಿಕರ ಹೊಸದಾಗಿ ಟಾಟಾ ನೆಕ್ಸಾನ್‌ ಖರೀದಿಸಿ ತಿಂಗಳಾಗಿತ್ತು. ವರ್ಕ್ ಫ್ರಂ ಹೋಂ ಹಿನ್ನೆಲೆಯಲ್ಲಿ ಮನೆಯಲ್ಲಿ ಕೆಲಸ ಮಾಡುತ್ತಿದ್ದ. ಹೀಗೆ ಒಂದು ದಿನ ಲಾಂಗ್‌ ಡ್ರೈವ್‌ ಹೋಗಲು ತೀರ್ಮಾನಿಸಿದ್ದೆವು. ಐವರು ಗೋವಾ ರಸ್ತೆಯಲ್ಲಿ ಹೋಗುತ್ತಿದ್ದೆವು. ಚಾಲಕ ಹಾಗೂ ಪಕ್ಕದ ಸೀಟ್‌ನಲ್ಲಿ ಮೃತರಾದ ಸ್ನೇಹಿತರು ಕುಳಿತಿದ್ದರು. ಇಬ್ಬರೂ ಸೀಟ್‌ ಬೆಲ್ಟ್‌ ಹಾಕಿರಲಿಲ್ಲ. ಹೀಗಾಗಿ ಅಪಘಾತವಾದಾಗ ಏರ್‌ಬ್ಯಾಗ್‌ ತೆರೆದುಕೊಳ್ಳದೆ ಗಂಭೀರ ಗಾಯಗೊಂಡು ಕಣ್ಣೆದುರೆ ಅಸುನೀಗಿದರು. ನಾನು ಚಾಲಕನ ಹಿಂಬದಿ ಸೀಟ್‌ ಬೆಲ್ಟ್‌ ಧರಿಸಿ ಕುಳಿತಿದ್ದರಿಂದ ಸಣ್ಣಪುಟ ಗಾಯಗಳು ಮಾತ್ರ ಆಗಿವೆ. ನನ್ನ ಕಣ್ಣೆದುರಿಗೇ ಪ್ರಾಣ ಸ್ನೇಹಿತರಿಬ್ಬರನ್ನು ಸಣ್ಣ ನಿರ್ಲಕ್ಷ್ಯದಿಂದ ಕಳೆದುಕೊಳ್ಳಬೇಕಾಯಿತು.

ಸೀಟ್‌ ಬೆಲ್ಟ್‌ ನನ್ನ ಜೀವ ಉಳಿಸಿತು, ಅಪಘಾತವಾದರೂ ಬದುಕುಳಿದ ವ್ಯಕ್ತಿಯ ಅನುಭವ ಕಥನ

ಇನ್ನಿಬ್ಬರಿಗೆ ಸಹ ಸಣ್ಣಪುಟ್ಟಗಾಯಗಳಾಗಿವೆ. ಸವಾರರು ಪೊಲೀಸರಿಂದ ತಪ್ಪಿಸಿಕೊಳ್ಳಲು ಮಾತ್ರ ಸೀಟ್‌ಬೆಲ್ಟ್‌ ಮತ್ತು ಹೆಲ್ಮೇಟ್‌ ಧರಿಸುತ್ತಾರೆ. ಆದರೆ, ಅವುಗಳೇ ನಮ್ಮ ಪ್ರಾಣ ಕಾಪಾಡುತ್ತವೆ ಎಂಬುದಕ್ಕೆ ನಾನೇ ಸಾಕ್ಷಿ. ಆದರಿಂದ ಪ್ರತಿಯೊಬ್ಬರು ಸೀಟ್‌ ಬೆಲ್ಟ್‌, ಹೆಲ್ಮೇಟ್‌ ಧರಿಸಿ. ನಾನು ನನ್ನ ಸ್ನೇಹಿತರನ್ನು ಕಳೆದುಕೊಂಡಿದ್ದೇನೆ. ಇಂತಹ ಯಾತನೆ ಮತ್ತ್ಯಾರಿಗೂ ಬರುವುದು ಬೇಡ ಎನ್ನುವಾಗ ಮಾತು ಗದ್ಗದಿತವಾಗಿತ್ತು.
 

click me!