ದಾವಣಗೆರೆ: ಸಿಡಿಲು ಬಡಿದು ಜಗಳೂರಿನ ಇಬ್ಬರು ರೈತರು ಬಲಿ!

By Kannadaprabha News  |  First Published Jun 10, 2023, 10:15 AM IST

ಹೊಲದಲ್ಲಿ ಹತ್ತಿ ಬೀಜ ಬಿತ್ತನೆಗೆ ಸಂಬಂಧಿಗಳೊಂದಿಗೆ ತೆರಳಿದ್ದ ಇಬ್ಬರು ರೈತರು ಸಿಡಿಲು ಬಡಿದು ಸ್ಥಳದಲ್ಲೇ ದುರಂತ ಸಾವು ಕಂಡ ಘಟನೆ ಜಗಳೂರು ತಾಲೂಕಿನ ಅಣಬೂರು ಗೊಲ್ಲರಹಟ್ಟಿಗ್ರಾಮದಲ್ಲಿ ಶುಕ್ರವಾರ ಸಂಜೆ ಸಂಭವಿಸಿದೆ.


ದಾವಣಗೆರೆ (ಜೂ.10) ಹೊಲದಲ್ಲಿ ಹತ್ತಿ ಬೀಜ ಬಿತ್ತನೆಗೆ ಸಂಬಂಧಿಗಳೊಂದಿಗೆ ತೆರಳಿದ್ದ ಇಬ್ಬರು ರೈತರು ಸಿಡಿಲು ಬಡಿದು ಸ್ಥಳದಲ್ಲೇ ದುರಂತ ಸಾವು ಕಂಡ ಘಟನೆ ಜಗಳೂರು ತಾಲೂಕಿನ ಅಣಬೂರು ಗೊಲ್ಲರಹಟ್ಟಿಗ್ರಾಮದಲ್ಲಿ ಶುಕ್ರವಾರ ಸಂಜೆ ಸಂಭವಿಸಿದೆ.

ಅಣಬೂರು ಗೊಲ್ಲರಹಟಿ ಗ್ರಾಮದ ಕಾಟಲಿಂಗಪ್ಪ(35 ವರ್ಷ), ರಾಜಪ್ಪ(43) ಮೃತ ರೈತರು. ಜಗಳೂರು ತಾಲೂಕಿನಲ್ಲಿ ಒಂದಿಷ್ಟುಮಳೆಯಾಗಿದ್ದರಿಂದ ಹತ್ತಿ ಬೀಜ ಬಿತ್ತನೆ ಗೆಂದು ಕಾಟಲಿಂಗಪ್ಪ, ರಾಜಪ್ಪ ತಮ್ಮ ತಮ್ಮ ಕುಟುಂಬ ಐವರು ಸದಸ್ಯರ ಜೊತೆಗೆ ಹೊಲಗಳಿಗೆ ಹೋಗಿದ್ದರು. ಉಳಿದವರು ಮನೆಗಳಿಗೆ ಮರಳಿದ್ದು, ಕೆಲವರು ದೂರದಲ್ಲಿ ಕುಳಿತಿದ್ದರು. ಕಾಟಲಿಂಗಪ್ಪ, ರಾಜಪ್ಪ ಹೊಲದಲ್ಲೇ ಕೆಲಸ ಮಾಡುತ್ತಿದ್ದ ವೇಳೆ ನೋಡ ನೋಡುತ್ತಿದ್ದಂತೆ ಸಂಜೆ 5.30ರ ವೇಳೆ ದಟ್ಟಮೋಡಗಳು ಆವರಿಸಿ, ಗುಡುಗು-ಮಿಂಚು ಸಿಡಿಲನ ಆರ್ಭಟ ಜೋರಾಗಿದೆ.

Latest Videos

undefined

ಶಿವಮೊಗ್ಗದಲ್ಲಿ ಕುರಿ ಮೇಯಿಸಲು ಹೋದ ಮಹಿಳೆ ಸಿಡಿಲಿಗೆ ಬಲಿ

ಮಳೆಯಿಂದ ರಕ್ಷಣೆ ಪಡೆಯಲು ಕಾಟಲಿಂಗಪ್ಪ, ರಾಜಪ್ಪ ಇಬ್ಬರೂ ಮರವೊಂದರ ಕೆಳಗೆ ಹೋಗಿ ನಿಂತಿದ್ದಾರೆ. ಮರದಡಿ ಆಶ್ರಯ ಪಡೆದಿದ್ದ ಕಾಟಲಿಂಗಪ್ಪ, ರಾಜಪ್ಪಗೆ ಸಿಡಿಲು ಬಡಿದು, ಇಬ್ಬರೂ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಸಿಡಿಲು ಬಡಿದು ಸ್ಥಳದಲ್ಲೇ ಅಸುನೀಗಿದ ಇಬ್ಬರನ್ನೂ ಕಂಡ ಸಂಬಂಧಿಗಳ ರೋಧನ ಮುಗಿಲುಮುಟ್ಟುವಂತಿತ್ತು. ನೋಡ ನೋಡುತ್ತಿದ್ದಂತೆಯೇ ಸಿಡಿಲು ಇಬ್ಬರನ್ನೂ ಬಲಿ ತೆಗೆದುಕೊಂಡಿದ್ದರಿಂದ ಕುಟುಂಬ ವರ್ಗ ದಿಕ್ಕೇ ತೋಚದಂತೆ ರೋದಿಸ ತೊಡಗಿತು. ವಿಷಯ ತಿಳಿಸಿದ ಬಂಧುಗಳು, ಗ್ರಾಮಸ್ಥರು ಸ್ಥಳಕ್ಕೆ ದೌಡಾಯಿಸಿದ್ದಾರೆ.

ಕಾಟಲಿಂಗಪ್ಪ, ರಾಜಪ್ಪ ನಿಂತಿದ್ದ ಮರಕ್ಕೆ, ಸುತ್ತಲಿನ ಪ್ರದೇಶಕ್ಕೆ ಸಿಡಿಲು ಬಡಿದು, ಇಬ್ಬರನ್ನೂ ಬಲಿ ಪಡೆದಿದೆ. ಅಲ್ಲಿಂದ ಕೂಗಳತೆ ದೂರದಲ್ಲಿದ್ದ ಬಂಧುಗಳು ಅಪಾಯದಿಂದ ಪಾರಾಗಿದ್ದಾರೆ. ವಿಷಯ ತಿಳಿದ ಜಗಳೂರು ಶಾಸಕ ಚಿಕ್ಕಮ್ಮನಹಟ್ಟಿಬಿ.ದೇವೇಂದ್ರಪ್ಪ, ತಹಸೀಲ್ದಾರ್‌ ಜಿ.ಸಂತೋಷಕುಮಾರ, ಪೊಲೀಸ್‌ ಅಧಿಕಾರಿಗಳು, ಕಂದಾಯ ಅಧಿಕಾರಿ, ಸಿಬ್ಬಂದಿ ಸ್ಥಳಕ್ಕೆ ದೌಡಾಯಿಸಿದರು. ಶಾಸಕ ದೇವೇಂದ್ರಪ್ಪ ಸಿಡಿಲು ಬಡಿದ ಮೃತಪಟ್ಟರೈತರಿಬ್ಬರ ಕುಟುಂಬ ವರ್ಗಕ್ಕೆ ಸಾಂತ್ವನ ಹೇಳಿದರು. ಇದೇ ವೇಳೆ ಶಾಸಕ ಬಿ.ದೇವೇಂದ್ರಪ್ಪ ಪ್ರಕೃತಿ ವಿಕೋಪ ಪರಿಹಾರ ನಿಧಿಯಡಿ ಇಬ್ಬರೂ ಮೃತ ರೈತರ ಕುಟುಂಬಗಳಿಗೆ ತಲಾ 5 ಲಕ್ಷ ರು. ಪರಿಹಾರ ನೀಡಿದರು. ಜಗಳೂರು ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 

Karnataka rains: ರಾಜ್ಯಾದ್ಯಂತ ಹಲವು ಜಿಲ್ಲೆಗಳಲ್ಲಿ ಮತ್ತೆ ಮಳೆ: ಸಿಡಿಲಿಗೆ ಮೂವರು ಬಲಿ!

ತಲಾ 50 ಲಕ್ಷ ರು. ಪರಿಹಾರಕ್ಕೆ ಒತ್ತಾಯ

ಜಗಳೂರು ತಾ. ಅಣಬೂರು ಗೊಲ್ಲರಹಟ್ಟಿಗ್ರಾಮದಲ್ಲಿ ಸಿಡಿಲಿಗೆ ಬಲಿಯಾದ ರೈತರಾದ ಕಾಟಲಿಂಗಪ್ಪ ಹಾಗೂ ರಾಜಪ್ಪನವರ ಕುಟುಂಬಗಳಿಗೆ ತಲಾ 50 ಲಕ್ಷ ರು. ಪರಿಹಾರ ನೀಡಬೇಕು. ಈ ಇಬ್ಬರೂ ರೈತರು ತಮ್ಮ ತಮ್ಮ ಕುಟುಂಬಗಳಿಗೆ ಜೀವನಾಧಾರವಾಗಿದ್ದರು. ಹತ್ತಿ ಬೀಜ ಬಿತ್ತನೆ ಕೆಲಸಕ್ಕೆ ಹೋಗಿದ್ದ ವೇಳೆ ಸಿಡಿಲು ಬಡಿದು, ಸಾವನ್ನಪ್ಪಿದ್ದಾರೆ. ಮೃತರ ಕುಟುಂಬಗಳಿಗೆ ಸರ್ಕಾರ ತಲಾ 50 ಲಕ್ಷ ರು. ಪರಿಹಾರ ನೀಡಲಿ ಎಂದು ಯಾದವ ಸಮಾಜದ ಯುವ ಮುಖಂಡ, ಕಾಂಗ್ರೆಸ್‌ ಪಕ್ಷದ ಕಿಸಾನ್‌ ಸೆಲ್‌ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಸ್‌.ಕೆ.ಪ್ರವೀಣಕುಮಾರ ಯಾದವ್‌ ರಾಜ್ಯ ಸರ್ಕಾರ, ಶಾಸಕರಿಗೆ ಒತ್ತಾಯಿಸಿದ್ದಾರೆ.

click me!