ಶರಾವತಿ ಹಿನ್ನೀರಿನ ಕಣ್ಣೀರ ಕತೆ ದೃಶ್ಯ ಕಾವ್ಯವಾಗಿಇ ಅನಾವರಣ!

By Kannadaprabha NewsFirst Published Jun 10, 2023, 6:15 AM IST
Highlights

ನೆನಪುಗಳು ಎಲ್ಲೆಲ್ಲಿಯೋ ಇರುತ್ತದೆ. ಅದು ಆಗಾಗ್ಗೆ ಮರಳಿ ಬರುತ್ತದೆ. ಖುಷಿ, ದುಃಖ ಎಲ್ಲವನ್ನೂ ತರುತ್ತದೆ. ಆದರೀಗ ಲಿಂಗನಮಕ್ಕಿ ಜಲಾಶಯದ ಹಿನ್ನೀರಿನಲ್ಲಿ ಮುಳುಗಿ ಹೋದ ಹಲವು ದಶಕಗಳ ಊರ ಇತಿಹಾಸ, ಮನೆಯ, ತಮ್ಮ ಕುಟುಂಬ ಎಲ್ಲದರ ನೆನಪುಗಳೆಲ್ಲವೂ ಬಟಾ ಬಯಲಾಗಿ ಹೊರಗೆ ಬಂದು ಹರಡಿಕೊಂಡಿದೆ. ಹಲವು ದಶಕಗಳ ನೋವುಂಡ ಶರಾವತಿ ಸಂತ್ರಸ್ಥರಿಗೆ ಈ ನೆನಪುಗಳು ಮತ್ತೆ ಮರಳಿ ಬರುವಂತೆ ಪ್ರಕೃತಿ ಮಾಡಿದೆ.

ಗೋಪಾಲ್‌ ಯಡಗೆರೆ

ಶಿವಮೊಗ್ಗ (ಜೂ.10) ನೆನಪುಗಳು ಎಲ್ಲೆಲ್ಲಿಯೋ ಇರುತ್ತದೆ. ಅದು ಆಗಾಗ್ಗೆ ಮರಳಿ ಬರುತ್ತದೆ. ಖುಷಿ, ದುಃಖ ಎಲ್ಲವನ್ನೂ ತರುತ್ತದೆ. ಆದರೀಗ ಲಿಂಗನಮಕ್ಕಿ ಜಲಾಶಯದ ಹಿನ್ನೀರಿನಲ್ಲಿ ಮುಳುಗಿ ಹೋದ ಹಲವು ದಶಕಗಳ ಊರ ಇತಿಹಾಸ, ಮನೆಯ, ತಮ್ಮ ಕುಟುಂಬ ಎಲ್ಲದರ ನೆನಪುಗಳೆಲ್ಲವೂ ಬಟಾ ಬಯಲಾಗಿ ಹೊರಗೆ ಬಂದು ಹರಡಿಕೊಂಡಿದೆ. ಹಲವು ದಶಕಗಳ ನೋವುಂಡ ಶರಾವತಿ ಸಂತ್ರಸ್ಥರಿಗೆ ಈ ನೆನಪುಗಳು ಮತ್ತೆ ಮರಳಿ ಬರುವಂತೆ ಪ್ರಕೃತಿ ಮಾಡಿದೆ.

ಶರಾವತಿ ಹಿನ್ನೀರಿನ ಕಣ್ಣೀರ ಕತೆ ದೃಶ್ಯ ಕಾವ್ಯವಾಗಿ ಹೊರ ಜಗತ್ತಿನೆದುರು ಅನಾವರಣಗೊಳ್ಳುತ್ತಿದೆ. ವರುಣನ ಅವಕೃಪೆಯಿಂದ ಮುಳುಗಿದ ಊರುಗಳು ಮೇಲೆದ್ದು ಕತೆ ಹೇಳಲು ಆರಂಭಿಸಿದೆ. ಈ ಬಾರಿ ಜಲಾಶಯದಲ್ಲಿ ಶೇ. 13ರಷ್ಟುಮಾತ್ರ ನೀರಿದ್ದು, ಜಲಾಶಯದ ನೀರು ಹಿಂದಕ್ಕೆ ಸರಿದಂತೆ ಮುಳುಗಿದ ಊರುಗಳು ಮೇಲೆದ್ದು ಬಂದು ತಮ್ಮ ಕತೆಯನ್ನು ಜಗತ್ತಿಗೆ ಬಿತ್ತರಿಸುವಂತೆ ಭಾಸವಾಗುತ್ತಿದೆ. ಈ ದೃಶ್ಯವೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗುತ್ತಿದ್ದು, ನೂರಾರು ಜನ ಆಗಮಿಸುತ್ತಿದ್ದಾರೆ. ಒಂದರ್ಥದಲ್ಲಿ ಲಿಂಗನಮಕ್ಕಿ ಹಿನ್ನೀರಿನ ನೀರಿಳಿದ ಪ್ರದೇಶ ಪ್ರವಾಸಿ ಕ್ಷೇತ್ರವಾಗುತ್ತಿದೆ.

ಶರಾ​ವತಿ ಹಿನ್ನೀರು ಕುಸಿ​ತ; ಲಾಂಚ್‌​ನಲ್ಲಿ ವಾಹನ ಸಾಗಣೆ ಬಂದ್‌ ಆತಂಕ!

ಕೈಕೊಟ್ಟವರುಣನಿಂದಾಗಿ ಈ ಸಂತ್ರಸ್ಥರ ಪಾಲಿಗೆ ತಮ್ಮೂರ, ಮನೆಯ ಪಳೆಯುಳಿಗೆಯನ್ನು ನೋಡುವ, ತಮ್ಮ ಮಕ್ಕಳು, ಮೊಮ್ಮಕ್ಕಳಿಗೆ ತೋರಿಸಲು ಕೈ ಬೀಸಿ ಕರೆದಿದೆ. ಅವರ ನೋವು ನಲಿವುಗಳ ಕತೆಯನ್ನು ತಮ್ಮ ಮುಂದಿನ ತಲೆಮಾರಿಗೆ ತೋರಿಸುತ್ತಾ, ತಮ್ಮ ತೋಟವಿತ್ತಿಲ್ಲಿ, ತಮ್ಮೂರ ದೇವಸ್ಥಾನವಿದು, ನಮ್ಮ ಆರಂಕಣದ ಮನೆಯ ಅಂಗಳವಿದು ಎಂದೆಲ್ಲ ಮಾಹಿತಿಯನ್ನು ತೋರಿಸುತ್ತಿದ್ದಾರೆ.

ಅಂದಿನ ಕಾಲದ ಖಾರ ರುಬ್ಬುವ ಒಳಕಲ್ಲು ಸೇರಿದಂತೆ ಅಂದು ಬಳಸುತ್ತಿದ್ದ ಗೃಹಬಳಕೆಯ ಕೆಲ ವಸ್ತುಗಳು ಕಾಣುತ್ತಿವೆ. ಇದನ್ನು ನೋಡಲು ಅಲ್ಲಿನ ಜನ ಆಗಮಿಸುತ್ತಿರುವ ಜನರು, ಇಲ್ಲಿ ನಮ್ಮ ಮನೆ, ಜಮೀನು ಇತ್ತು ಎಂದು ಗುರುತಿಸಿ ಖುಷಿಪಡುತ್ತಿದ್ದಾರೆ. ಸುಮ್ಮನೆ ನಿಂತು ವಿಷಾದ ಯೋಗದಿಂದ ಬಳಲುವವರೂ ಇದ್ದಾರೆ!

 

ಶರಾವತಿ ನದಿಗೆ ಹಾರಿ ಪ್ರೇಮಿಗಳಿಬ್ಬರು ಆತ್ಮಹತ್ಯೆ

ಸಾಗರ ತಾಲೂಕಿನ ಶರಾವತಿ ನದಿಗೆ ಅಡ್ಡಲಾಗಿ ನಿರ್ಮಿಸಿರುವ ಲಿಂಗನಮಕ್ಕಿ ಜಲಾಶಯದಲ್ಲಿ ಮುಳುಗಿದ ನೂರಾರು ಹಳ್ಳಿಗಳು, ಸಾವಿರಾರು ಎಕರೆ ತೋಟ, ಮನೆಗಳು ಅದರ ಮಾಲೀಕರನ್ನು ಕೈ ಬೀಸಿ ಕರೆಯುತ್ತಿವೆ ಎಂಬ ಮಾತು ಈ ಸಂತ್ರಸ್ಥರ ಬಾಯಿಂದ ಬರುತ್ತಿವೆ. ಜಲಾಶಯ ನಿರ್ಮಾಣದ ವೇಳೆ ಒಂದು ಸಂಸ್ಕೃತಿಯೇ ಮುಳುಗಿ ಹೋದ ಕತೆಗಳು ಇಲ್ಲಿದೆ. ನೂರಾರು ಗೋಳಿನ, ಸಂಕಷ್ಟದ ಕತೆಗಳು, ಕಣ್ಣೀರು ಜಲಾಶಯದ ನೀರಿನಲ್ಲಿ ಕರಗಿ ಹೋಗಿದ್ದು ಕೂಡ ಇತಿಹಾಸ. ಇಲ್ಲಿಂದ ವಲಸೆ ಹೋದ ಸಾವಿರಾರು ಮಂದಿ ತಮ್ಮ ಸಂಬಂಧಗಳು, ಭಾವನೆಗಳ ಕೊಂಡಿಗಳನ್ನು ಕಳೆದುಕೊಂಡು ಎಲ್ಲೆಲ್ಲಿಯೋ ಛಿದ್ರವಾಗಿ ಹೋದರು. ಸಾವಿರಾರು ಜನರ ಬದುಕು ಬೀದಿ ಪಾಲಾಯಿತು. ಸಂತ್ರಸ್ಥರಿಗೆ ಇನ್ನೂ ಸೂಕ್ತ ಪರಿಹಾರ ಸಿಗದೆ, ಸೂಕ್ತ ನೆಲೆ ಸಿಗದೆ ಅನಾಥರಂತೆ ಬದುಕುತ್ತಿರುವ ಕತೆಗಳು ಒಂದರ ಹಿಂದೆ ಒಂದು ಜೋಡಿಸಿ ನಿಂತಿವೆ.

ಲಿಂಗನಮಕ್ಕಿ ಜಲಾಶಯದ ಹನ್ನೀರು 336 ಕಿ.ಮೀ ವ್ಯಾಪಿಸಿದೆ. ಒಟ್ಟು 79 ಸಾವಿರ ಎಕರೆ ಭೂಮಿ ಜಲದೊಡಲು ಸೇರಿತ್ತು. ಅದರಲ್ಲಿ 965 ಎಕರೆ ಅಡಕೆ ತೋಟ, 12500 ಎಕರೆ ಭತ್ತದ ಗದ್ದೆ. 1750 ಎಕರೆ ಖುಷ್ಕಿ ಜಮೀನು, 2500 ಕುಟುಂಬಗಳ 15 ಸಾವಿರ ಜನರು ಸಂತ್ರಸ್ತರು ಚದುರಿ ಹೋದರು.

click me!