ಬಿಬಿಎಂಪಿ ವ್ಯಾಪ್ತಿಯಲ್ಲಿ ಆಸ್ತಿ ತೆರಿಗೆ ಪರಿಷ್ಕರಣೆಗೆ ಚಿಂತನೆ ನಡೆಸಲಾಗುತ್ತಿದೆ. ಆದರೂ, ಬೆಂಗಳೂರಿನ ಆಸ್ತಿ ಮಾಲೀಕರಿಗೆ ಸದ್ಯಕ್ಕೆ ತೆರಿಗೆ ಹೊರೆ ಹೆಚ್ಚಾಗುವ ಸಾಧ್ಯತೆ ಇಲ್ಲ. ಕಳೆದ 23 ವರ್ಷದಲ್ಲಿ 2008 ಹಾಗೂ 2016ರಲ್ಲಿ ಆಸ್ತಿ ತೆರಿಗೆ ಪರಿಷ್ಕರಣೆ ಮಾಡಲಾಗಿತ್ತು.
ವಿಶ್ವನಾಥ ಮಲೇಬೆನ್ನೂರು
ಬೆಂಗಳೂರು (ಜೂ.10): ಬಿಬಿಎಂಪಿ ವ್ಯಾಪ್ತಿಯಲ್ಲಿ ಆಸ್ತಿ ತೆರಿಗೆ ಪರಿಷ್ಕರಣೆಗೆ ಚಿಂತನೆ ನಡೆಸಲಾಗುತ್ತಿದೆ. ಆದರೂ, ಬೆಂಗಳೂರಿನ ಆಸ್ತಿ ಮಾಲೀಕರಿಗೆ ಸದ್ಯಕ್ಕೆ ತೆರಿಗೆ ಹೊರೆ ಹೆಚ್ಚಾಗುವ ಸಾಧ್ಯತೆ ಇಲ್ಲ. ಕಳೆದ 23 ವರ್ಷದಲ್ಲಿ 2008 ಹಾಗೂ 2016ರಲ್ಲಿ ಆಸ್ತಿ ತೆರಿಗೆ ಪರಿಷ್ಕರಣೆ ಮಾಡಲಾಗಿತ್ತು. ಅದಾದ ಬಳಿಕ ಕಳೆದ ಎಂಟು ವರ್ಷದಿಂದ ಆಸ್ತಿ ತೆರಿಗೆ ಹೆಚ್ಚಳ ಮತ್ತು ಪರಿಷ್ಕರಣೆ ಮಾಡಿಲ್ಲ. ಕಳೆದ ಜನವರಿಯಲ್ಲಿ ಆಸ್ತಿ ತೆರಿಗೆ ಹೆಚ್ಚಳ ಮಾಡುವ ಬಗ್ಗೆ ಬಿಬಿಎಂಪಿ ಚಿಂತನೆ ನಡೆಸಿತ್ತು. ಜತೆಗೆ, ಆಸ್ತಿ ತೆರಿಗೆ ಲೆಕ್ಕಾಚಾರ ಮಾಡುವ ವಿಧಾನವನ್ನೂ ಬದಲಾವಣೆ ಮಾಡುವುದಕ್ಕೆ ಚರ್ಚೆ ನಡೆಸಲಾಗಿತ್ತು.
ಈ ಬಗ್ಗೆ ವಿಧಾನಸಭಾ ಚುನಾವಣೆ ಪೂರ್ವದಲ್ಲಿಯೇ ಪಾಲಿಕೆ ಕಂದಾಯ ವಿಭಾಗದಿಂದ ಪ್ರಸ್ತಾವನೆ ಸಿದ್ಧಪಡಿಸಲಾಗಿತ್ತು. ಈ ನಡುವೆ ಚುನಾವಣೆ ಎದುರಾದ ಹಿನ್ನೆಲೆಯಲ್ಲಿ ಪ್ರಸ್ತಾವನೆ ರಾಜ್ಯ ಸರ್ಕಾರಕ್ಕೆ ಸಲ್ಲಿಕೆ ಮಾಡಿರಲಿಲ್ಲ. ಇನ್ನು ಈಗಾಗಲೇ 2023-24ನೇ ಆರ್ಥಿಕ ವರ್ಷ ಆರಂಭಗೊಂಡಿದೆ. ಆರ್ಥಿಕ ವರ್ಷದ ಮಧ್ಯದಲ್ಲಿ ಬಿಬಿಎಂಪಿ ಆಸ್ತಿ ತೆರಿಗೆ ಹೆಚ್ಚಳ ಮಾಡುವ ಸಾಧ್ಯತೆಗಳಿಲ್ಲ ಎಂದು ಬಿಬಿಎಂಪಿ ಅಧಿಕಾರಿಗಳು ‘ಕನ್ನಡಪ್ರಭ’ಕ್ಕೆ ಮಾಹಿತಿ ನೀಡಿದ್ದಾರೆ.
ಮನೆ ಬಾಗಿಲಿಗೆ ಬಂದು ಗೃಹಲಕ್ಷ್ಮೀ ಅರ್ಜಿ ಸ್ವೀಕಾರ: ಸಚಿವ ಕೃಷ್ಣ ಬೈರೇಗೌಡ
ಸಿವಿಎಸ್ ವ್ಯವಸ್ಥೆಗೆ ಸಿದ್ಧತೆ: ಸದ್ಯ ಬಿಬಿಎಂಪಿ ವ್ಯಾಪ್ತಿಯಲ್ಲಿ ಆಸ್ತಿಗಳ ವಾರ್ಷಿಕ ಬಾಡಿಗೆ ಮೌಲ್ಯ (ಎಆರ್‌ವಿ)ವನ್ನಾಧರಿಸಿ ತೆರಿಗೆ ಮೊತ್ತ ನಿಗದಿ ಮಾಡಲಾಗುತ್ತಿದೆ. ಎಸ್‌ಎಎಸ್ ಅಡಿಯಲ್ಲಿ ನೀಡಲಾಗುವ ಮಾಹಿತಿಯಲ್ಲಿ ಕಟ್ಟಡದ ಸ್ವರೂಪ, ಉಪ ಯೋಗದ ಮಾಹಿತಿಯನ್ನು. ಅದನ್ನಾಧರಿಸಿ ಪಾಲಿಕೆಯ ವತಿಯಿಂದ ಬೆಂಗಳೂರಿನ ವಿವಿಧ ಪ್ರದೇಶಗಳಲ್ಲಿ ಪಡೆಯಬಹುದಾದ ಬಾಡಿಗೆಯನ್ನು ಅಂದಾಜಿಸಿ ಆಸ್ತಿ ತೆರಿಗೆ ನಿಗದಿ ಮಾಡಲಾಗುತ್ತದೆ. ಹೀಗಾಗಿಯೇ ಖಾಲಿ ನಿವೇಶನಗಳಿಗೆ ತೆರಿಗೆ ಮೊತ್ತ ಕಡಿಮೆಯಿದೆ.
ಇದೀಗ ಎಆರ್‌ವಿ ಪದ್ಧತಿ ಬದಲು ಕ್ಯಾಪಿಟಲ್ ವ್ಯಾಲ್ಯೂ ಸಿಸ್ಟಂ (ಸಿವಿಎಸ್) ಜಾರಿಗೊಳಿಸಲು ಬಿಬಿಎಂಪಿ ಕಂದಾಯ ವಿಭಾಗ ಸಿದ್ಧತೆ ನಡೆಸಿದೆ. ನಿವೇಶನದ ಮಾರ್ಗಸೂಚಿ ದರದ ಶೇ. 0.01ರಿಂದ 0.1ರಷ್ಟುತೆರಿಗೆ ರೂಪದಲ್ಲಿ ವಸೂಲಿ ಮಾಡಲಾಗುತ್ತದೆ. ಅದರ ಜತೆಗೆ ನಿವೇಶನದಲ್ಲಿ ಕಟ್ಟಡದ ಬಿಲ್ಟ್ ಅಪ್ ಏರಿಯಾವನ್ನೂ ಪಿಡಬ್ಲ್ಯೂಡಿ ದರವನ್ನಾಧಿರಿಸಿ ತೆರಿಗೆ ಮೊತ್ತ ನಿಗದಿ ಪಡಿಸಲಾಗುತ್ತದೆ. ಇದರಿಂದ ಈಗಿರುವ ಎ ಯಿಂದ ಎಫ್‌ವರೆಗಿನ 6 ವಲಯಗಳಲ್ಲಿ ಇರುವ ಆಸ್ತಿಗಳು ಆಯಾ ವಲಯದ ಆಸ್ತಿಗಳಿಗೆ ಸರ್ಕಾರ ನಿಗದಿಪಡಿಸಿದ ಮಾರ್ಗಸೂಚಿದರ ಆಧರಿಸಿ ತೆರಿಗೆ ಪಾವತಿ ಮಾಡಬೇಕಾಗಲಿದೆ.
ಹೊಸ ವ್ಯವಸ್ಥೆಗೆ ಸಮಯ ಬೇಕಿದೆ: ಮಾರ್ಗಸೂಚಿ ದರ ಆಧರಿಸಿ ತೆರಿಗೆ ವಿಧಿಸುವ ವ್ಯವಸ್ಥೆ ಬೆಂಗಳೂರು ನಗರ ಹೊರತು ಪಡಿಸಿ ಉಳಿದ ಎಲ್ಲೆಡೆ ಜಾರಿಯಲ್ಲಿದೆ. ಈ ವ್ಯವಸ್ಥೆಯನ್ನು ಜಾರಿಗಳಿಸಬೇಕಾದರೆ, ಪರಿಶೀಲನೆ ನಡೆಸಬೇಕಿದೆ. ನಗರದಲ್ಲಿರುವ 21 ಲಕ್ಷ ಆಸ್ತಿಗಳ ಪೈಕಿ ಶೇ.50 ರಷ್ಟುಆಸ್ತಿಗಳಿಗೆ ಮಾರ್ಗಸೂಚಿ ದರದಡಿ ಆಸ್ತಿ ತೆರಿಗೆ ವಿಧಿಸಿದರೆ, ಸದ್ಯ ಪಾವತಿ ಮಾಡುತ್ತಿರುವ ಆಸ್ತಿ ತೆರಿಗೆ ಮೊತ್ತಕ್ಕಿಂತ ಎಷ್ಟುಪ್ರಮಾಣ ಹೆಚ್ಚಾಗಲಿದೆ ಎಂಬು ದನ್ನು ಪರಿಶೀಲನೆ ಮಾಡಬೇಕಿದೆ. ಏಕಾಏಕಿ ಜಾರಿಗೊಳಿಸಿದರೆ, ಗೊಂದಲ ಸೃಷ್ಟಿಯಾಗುವ ಆತಂಕ ಇದೆ.
ಹೀಗಾಗಿ, ವಸತಿ ಪ್ರದೇಶಗಳು, ವಾಣಿಜ್ಯ ಪ್ರದೇಶ ಸೇರಿದಂತೆ ವಿವಿಧ ವರ್ಗೀಕರಣ ಮಾಡಿಕೊಂಡು ಪರಿಶೀಲನೆ ನಡೆ ಸಬೇಕಿದೆ. ಅದಕ್ಕೆ ಸುಮಾರು 6 ತಿಂಗಳು ಕಾಲವಕಾಶ ಬೇಕಾಗಲಿದೆ. ಅದಾದ ಬಳಿಕ ಹೊಸ ತಂತ್ರಾಂಶ ಸಿದ್ಧಪಡಿಸಬೇಕು. ಕಾಯ್ದೆ ತಿದ್ದುಪಡಿಸಿ ಮಾಡಿಕೊಳ್ಳಬೇಕು. ದರ ಹೆಚ್ಚಳದ ಬಗ್ಗೆ ಸಾರ್ವಜನಿಕರಿಂದ ಆಕ್ಷೇಪಣೆ ಆಹ್ವಾನಿಸಿ ಸ್ಪಷ್ಟೀಕರಣ ನೀಡುವುದು. ಬಳಿಕ ಜನರಲ್ಲಿ ಜಾಗೃತಿ ಮೂಡಿಸಿ ಆರ್ಥಿಕ ವರ್ಷದ ಆರಂಭದಿಂದ ಅನುಷ್ಠಾನ ಗೊಳಿಸಬೇಕು.
ವಿಘ್ನ ಬಂದರೆ 2025ರವರೆಗೆ ತೆರಿಗೆ ಹೆಚ್ಚಳವಿಲ್ಲ: ಈ ಎಲ್ಲಾ ಕಾರ್ಯಗಳಿಗೆ ಯಾವುದೇ ವಿಘ್ನಗಳಿಲ್ಲದೇ ಜರುಗಿದರೆ, ಮುಂದಿನ 2024-25ನೇ ಆರ್ಥಿಕ ವರ್ಷದಿಂದ ಜಾರಿ ಆಗಲಿದೆ. ಆದರೆ, ಈ ನಡುವೆ ಬಿಬಿಎಂಪಿ ಚುನಾವಣೆ, ಲೋಕಸಭಾ ಚುನಾವಣೆ ನೆಪದಲ್ಲಿ ವಿಳಂಬಗೊಂಡರೆ ಮುಂದಿನ ವರ್ಷವೂ ಆಸ್ತಿ ತೆರಿಗೆ ಹೆಚ್ಚಳ ಆಗುವುದು ಅನುಮಾನವಾಗಿದೆ ಎನ್ನುವ ಅಭಿಪ್ರಾಯಗಳನ್ನು ಅಧಿಕಾರಿಗಳು ವ್ಯಕ್ತಪಡಿಸಿದ್ದಾರೆ.
ಶೇ.20-25 ರಷ್ಟು ಆದಾಯ ಹೆಚ್ಚಳ: ಸದ್ಯ ಬಿಬಿಎಂಪಿಯು ಸುಮಾರು 3500 ಕೋಟಿ ರು. ವರೆಗೆ ವಾರ್ಷಿಕ ಆಸ್ತಿ ತೆರಿಗೆ ಸಂಗ್ರಹಣೆ ಮಾಡುತ್ತಿದೆ. ಮಾರ್ಗಸೂಚಿ ದರವನ್ನಾಧರಿ ಆಸ್ತಿ ತೆರಿಗೆ ವಿಧಿಸುವುದರಿಂದ ಬಿಬಿಎಂಪಿಗೆ ಶೇ.20 ರಿಂದ 25 ರಷ್ಟು ಅಂದರೆ, ಸುಮಾರು 1250 ಕೋಟಿ ರು. ಆದಾಯ ಹೆಚ್ಚಾಗಲಿದೆ ಎಂದು ಕಂದಾಯ ವಿಭಾಗದ ಅಧಿಕಾರಿಗಳು ಅಂದಾಜಿಸಿದ್ದಾರೆ.
ಎಂಎ ಇಂಗ್ಲಿಷ್ ಅಂತಿಮ ಪರೀಕ್ಷೆ ಬರೆದ 81 ವರ್ಷದ ಹಿರಿಯಜ್ಜ: ಸಾಧನೆಗೆ ಪತ್ನಿಯೇ ಪ್ರೇರಣೆ
ಮಾರ್ಗಸೂಚಿ ದರವನ್ನಾದರಿಸಿ ಆಸ್ತಿ ತೆರಿಗೆ ಸಂಗ್ರಹ ವ್ಯವಸ್ಥೆ ಅನುಷ್ಠಾನದ ಕುರಿತು ಚರ್ಚೆಗಳನ್ನು ನಡೆಸಲಾಗಿದೆ. ಈ ವ್ಯವಸ್ಥೆ ಜಾರಿಗೆ ಸಾಕಷ್ಟುಸಮಯ ಬೇಕಾಗಲಿದೆ. ಈ ಬಗ್ಗೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸುವುದಕ್ಕೆ ಸಿದ್ಧತೆ ಮಾಡಿಕೊಳ್ಳಲಾಗಿದೆ.
- ಡಾ.ಆರ್.ಎಲ್.ದೀಪಕ್, ವಿಶೇಷ ಆಯುಕ್ತರು, ಬಿಬಿಎಂಪಿ ಕಂದಾಯ