ಕುಷ್ಟಗಿ: ಎತ್ತಿನ ಮೈ ತೊಳೆಯಲು ಹೋಗಿ ಕಲ್ಲು ಕ್ವಾರಿಯಲ್ಲಿ ಬಿದ್ದು ಇಬ್ಬರು ಬಾಲಕರ ಸಾವು

By Kannadaprabha NewsFirst Published Oct 25, 2022, 10:38 AM IST
Highlights

ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲೂಕಿನ ವಕ್ಕಂದುರ್ಗಾ ಗ್ರಾಮದ ಕಲ್ಲಿನ ಕ್ವಾರಿಯಲ್ಲಿ ನಡೆದ ಘಟನೆ

ಕುಷ್ಟಗಿ(ಅ.25):  ಎತ್ತು ಮೈ ತೊಳೆಯಲು ಹೋಗಿದ್ದ ಇಬ್ಬರು ಬಾಲಕರು ನೀರುಪಾಲಾಗಿರುವ ಘಟನೆ ತಾಲೂಕಿನ ವಕ್ಕಂದುರ್ಗಾ ಗ್ರಾಮದ ಹತ್ತಿರ ಇರುವ ಕಲ್ಲಿನ ಕ್ವಾರಿಯೊಂದರಲ್ಲಿ ಸೋಮವಾರ ಸಂಭವಿಸಿದೆ. ಮೃತಪಟ್ಟ ಬಾಲಕರನ್ನು ರಾಂಪೂರ ಗ್ರಾಮದ ಮಹಾಂತೇಶ ಮಾದರ (9) ಹಾಗೂ ವಿಜಯ ಮಾದರ (9) ಎಂದು ಗುರುತಿಸಲಾಗಿದೆ. ಇವರೊಂದಿಗಿದ್ದ ಇಬ್ಬರು ಬಾಲಕರು ಬದುಕುಳಿದಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ವಕ್ಕಂದುರ್ಗಾ ಗ್ರಾಮದ ಹತ್ತಿರ ಕಲ್ಲು ಗಣಿಗಾರಿಕೆಗಾಗಿ ಬೃಹತ್‌ ಗುಂಡಿ ತೋಡಲಾಗಿದೆ. ಮಳೆಯಿಂದ ಅದರಲ್ಲಿ ನೀರು ತುಂಬಿದ್ದು, ರಾಂಪುರ ಗ್ರಾಮದ ನಾಲ್ವರು ಬಾಲಕರು ಎತ್ತಿನ ಮೈ ತೊಳೆಯಲು ಹೋಗಿದ್ದು, ಕಾಲುಜಾರಿ ಬಿದ್ದು ಇಬ್ಬರು ಮೃತಪಟ್ಟಿದ್ದಾರೆ. ಬದುಕುಳಿದ ಇಬ್ಬರು ಬಾಲಕರನ್ನು ಬಾಗಲಕೋಟೆ ಜಿಲ್ಲೆ ಬಾದಾಮಿಯ ಖಾಸಗಿ ಆಸ್ಪತ್ರೆಗೆ ಚಿಕಿತ್ಸೆಗೆ ಸೇರಿಸಲಾಗಿದೆ. ಹನುಮಸಾಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Koppal News: ಅಪ್ರತಿಮ ದೇಶಭಕ್ತ ಅಶ್ಫಾಖ್‌ ಉಲ್ಲಾ ಖಾನ್‌

ಕುಟುಂಬಸ್ಥರಿಗೆ ಸಾಂತ್ವನ:

ಮೃತಪಟ್ಟ ಇಬ್ಬರು ಬಾಲಕರ ಶವಗಳನ್ನು ಕುಷ್ಟಗಿ ತಾಲೂಕು ಸಾರ್ವಜನಿಕ ಆಸ್ಪತ್ರೆಗೆ ತಂದ ಹಿನ್ನೆಲೆ ಶಾಸಕ ಅಮರೇಗೌಡ ಪಾಟೀಲ ಭಯ್ಯಾಪುರ ಆಸ್ಪತ್ರೆಗೆ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು.
ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಂಪುರ ಗ್ರಾಮದಲ್ಲಿ ನಡೆದ ದುರ್ಘಟನೆಗೆ ಸಂಬಂಧಪಟ್ಟಂತೆ ಕುಷ್ಟಗಿ ತಾಲೂಕಿನ ಎಲ್ಲ ಕೆರೆ ಹಾಗೂ ಗುಂಡಿಗಳಿಗೆ ತಂತಿ ಬೇಲಿ ಅಳವಡಿಸಿ ಭದ್ರತಾ ವ್ಯವಸ್ಥೆ ಮಾಡಬೇಕು ಎಂದು ಗ್ರಾಪಂ ಅಭಿವೃದ್ಧಿ ಅಧಿಕಾರಿಗಳಿಗೆ ಸೂಚಿಸುತ್ತೇನೆ ಎಂದು ಭರವಸೆ ನೀಡಿದರು.

ಕುಟುಂಬಸ್ಥರ ಆಕ್ರಂದನ:

ಘಟನೆಯಲ್ಲಿ ಮೃತಪಟ್ಟ ಮಹಾಂತೇಶ ಹಾಗೂ ವಿಜಯ ಅವರ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು. ಘಟನೆಯಿಂದಾಗಿ ಗ್ರಾಮದಲ್ಲಿ ಸೂತಕದ ಛಾಯೆ ಆವರಿಸಿದೆ.

ಈ ವೇಳೆ ಸಿಪಿಐ ನಿಂಗಪ್ಪ ರುದ್ರಪ್ಪಗೋಳ, ಪಿಎಸ್‌ಐ ಅಶೋಕ ಬೇವೂರು, ಕುಟುಂಬಸ್ಟರಿಂದ ಘಟನೆ ಮಾಹಿತಿ ಪಡೆದುಕೊಂಡು ಪ್ರಕರಣವನ್ನು ದಾಖಲು ಮಾಡಿಕೊಂಡಿದ್ದಾರೆ. ಈ ಸಂದರ್ಭದಲ್ಲಿ ಗ್ರಾಪಂ ಸದಸ್ಯರು ಹನುಮಂತ ಪೂಜಾರ, ಯಮನೂರು ಮೇಲಿನಮನಿ, ಹನುಮಂತ ಗುಮಗೇರಿ ಇತರರು ಇದ್ದರು.
 

click me!