ಕೆಲ ರೈಲುಗಳ ಸಂಚಾರ ರದ್ದುಪಡಿಸಿದ್ದರೆ, ಕೆಲ ರೈಲುಗಳ ಸಂಚಾರವನ್ನು ಭಾಗಶಃ ರದ್ದುಪಡಿಸಲಾಗಿತ್ತು.
ಹುಬ್ಬಳ್ಳಿ(ಅ.25): ಕಲ್ಲಿದ್ದಲು ತುಂಬಿದ್ದ ಗೂಡ್ಸ್ ರೈಲವೊಂದು ಹಳೆ ತಪ್ಪಿದ ಘಟನೆ ಗದಗ-ಹೂಟಗಿ ರೈಲು ಮಾರ್ಗದಲ್ಲಿ ನಡೆದಿದೆ. ಏಳು ಬೋಗಿಗಳ ಹಳಿ ತಪ್ಪಿದ್ದು ಸೋಮವಾರ ರಾತ್ರಿವರೆಗೂ ದುರಸ್ತಿ ಮಾಡಿ ರೈಲನ್ನು ಮತ್ತೆ ಹಳಿಗೆ ತರಲಾಗಿದೆ. ಇದರಿಂದಾಗಿ ಕೆಲ ರೈಲುಗಳ ಸಂಚಾರ ರದ್ದುಪಡಿಸಿದ್ದರೆ, ಕೆಲ ರೈಲುಗಳ ಸಂಚಾರವನ್ನು ಭಾಗಶಃ ರದ್ದುಪಡಿಸಲಾಗಿತ್ತು.
ಗದಗ-ಹೂಟಗಿ ಮಾರ್ಗ ಮಧ್ಯೆ ಬರುವ ಜುಮ್ನಾಲ್-ಮುಲ್ವಾಡ್ ಮಧ್ಯೆ ಗೂಡ್ಸ್ ರೈಲಿನ ಏಳು ಬೋಗಿಗಳು ಹಳಿ ತಪ್ಪಿದ್ದವು. ಎಲ್ಲ ಬೋಗಿಗಳಲ್ಲಿ ಕಲ್ಲಿದ್ದಲು ತುಂಬಿದ್ದವು. ಹುಬ್ಬಳ್ಳಿ ಹಾಗೂ ಸೊಲ್ಲಾಪುರದಿಂದ ಹಿರಿಯ ಅಧಿಕಾರಿಗಳು, ಸಿಬ್ಬಂದಿಯ ತಂಡ ತಕ್ಷಣವೇ ತೆರಳಿ ಮರು ಸ್ಥಾಪನೆ ಕೆಲಸ ಶುರುಮಾಡಿದರು. ಬರೋಬ್ಬರಿ 12 ಗಂಟೆಗೂ ಅಧಿಕ ಸಮಯದ ನಿರಂತರ ಕಾರ್ಯಾಚರಣೆ ಬಳಿಕ ಸೋಮವಾರ ರಾತ್ರಿ ದುರಸ್ತಿ ಕಾರ್ಯ ಮುಗಿದಿದ್ದು ಬಳಿಕವಷ್ಟೇ ರೈಲು ಸಂಚಾರ ಸುಗಮಗೊಂಡಿತು.
Vande Bharat Goods Train: ವಂದೇ ಭಾರತ ಗೂಡ್ಸ್ ರೈಲು ಆರಂಭಕ್ಕೆ ರೈಲ್ವೆ ನಿರ್ಧಾರ
ಇದು ಡಬಲ್ ಲೈನ್ ವಿಭಾಗವಾಗಿದೆ. ಪರಿಣಾಮ ಬೀರದ ಮಾರ್ಗದಲ್ಲಿ ರೈಲುಗಳನ್ನು (ಸೋಲಾಪುರ ಕಡೆಗೆ) ತ್ವರಿತವಾಗಿ ತಾತ್ಕಾಲಿಕ ಏಕ ಮಾರ್ಗದ ಮೂಲಕ ರೈಲುಗಳನ್ನು ಓಡಿಸಲಾಗಿದೆ.
ರೈಲು ಸಂಚಾರ ರದ್ದು:
ಇದರಿಂದಾಗಿ 6 ರೈಲುಗಳ ಸಂಚಾರ ರದ್ದುಪಡಿಸಲಾಗಿತ್ತು. ಹುಬ್ಬಳ್ಳಿ-ವಿಜಯಪುರ ಎಸ್‌ಎಸ್‌ಎಸ್ ಹುಬ್ಬಳ್ಳಿ ವಿಶೇಷ ರೈಲು (ಸಂಖ್ಯೆ 06919/20), ಹುಬ್ಬಳ್ಳಿ-ಸೋಲಾಪುರ ಪ್ಯಾಸೆಂಜರ್ ವಿಶೇಷ ರೈಲು (ಸಂಖ್ಯೆ- 07332), ಸೋಲಾಪುರ-ಧಾರವಾಡ ಪ್ಯಾಸೆಂಜರ್ ವಿಶೇಷ ರೈಲು (ಸಂಖ್ಯೆ- 07321), ಸೋಲಾಪುರ- ಗದಗ್ ಎಕ್ಸ್‌ಪ್ರೆಸ್ ರೈಲು (ಸಂಖ್ಯೆ- 11305), ಗದಗ-ಸೋಲಾಪುರ ಎಕ್ಸ್‌ಪ್ರೆಸ್ (ಸಂಖ್ಯೆ-11306), ವಿಜಯಪುರ-ಎಸ್‌ಎಸ್‌ಎಸ್ ಹುಬ್ಬಳ್ಳಿ ಎಕ್ಸ್‌ಪ್ರೆಸ್ ವಿಶೇಷ ರೈಲು (ಸಂಖ್ಯೆ-07330) ರೈಲುಗಳ ಸಂಚಾರ ರದ್ದುಪಡಿಸಲಾಗಿದೆ. ಇನ್ನು ವಿಜಯಪುರ-ಮಂಗಳೂರು ಎಕ್ಸ್‌ಪ್ರೆಸ್ (ರೈಲು ಸಂಖ್ಯೆ- 07377) ಸಂಚಾರವು ವಿಜಯಪುರ- ಹುಬ್ಬಳ್ಳಿ ನಡುವಿನ ಸಂಚಾರವನ್ನು ರದ್ದುಪಡಿಸಲಾಗಿದೆ ಎಂದು ನೈಋುತ್ಯ ರೈಲ್ವೆ ವಲಯದ ಪ್ರಕಟಣೆ ತಿಳಿಸಿದೆ.