* ಭಾರೀ ಸಂಚಲನ ಮೂಡಿಸುತ್ತಿರುವ ಶಾಸಕರ ಆರೋಪ-ಪ್ರತ್ಯಾರೋಪಗಳು
* ಸಿದ್ದರಾಮಮಯ್ಯ ಸರ್ಕಾರದಲ್ಲಿ ಕೆರೆ ತುಂಬಿಸುವ ಯೋಜನೆ ಮಂಜೂರು
* ಎಲ್ಲ ಕೆರೆಗಳಿಗೆ ಕೃಷ್ಣೆಯ ನೀರು ತುಂಬಿಸುವುದಾಗಿ ಹೇಳುತ್ತಿರುವ ಸಚಿವ ಆಚಾರ್
ಶಿವಮೂರ್ತಿ ಇಟಗಿ
ಯಲಬುರ್ಗಾ(ಅ.09): ವಿಧಾನಸಭಾ ಚುನಾವಣೆ(Assembly Election) ಸಮೀಪಿಸುತ್ತಿದ್ದಂತೆ ಯಲಬುರ್ಗಾ(Yelburga) ವಿಧಾನಸಭಾ ಕ್ಷೇತ್ರದಲ್ಲಿ ಹಾಲಿ ಹಾಗೂ ಮಾಜಿ ಸಚಿವರಗಳ ಬೆಂಬಲಿಗರ ಮಧ್ಯೆ ನೀರಾವರಿ ಯೋಜನೆಗಳ ಕುರಿತು ವ್ಯಾಪಕ ಚರ್ಚೆಗಳು ತಾಲೂಕಿನಾದ್ಯಂತ ಸಂಚಲನ ಮೂಡಿಸುತ್ತಿದೆ.
ಮಾಜಿ ಸಚಿವ ಬಸವರಾಜ ರಾಯರಡ್ಡಿ(Basavaraj Rayareddy) ಕೆರೆ ತುಂಬಿಸುವ ಯೋಜನೆ ತಂದಿದ್ದೇ ನಾನು ಎನ್ನುತ್ತಿದ್ದರೆ, ಇತ್ತ ಹಾಲಿ ಸಚಿವ ಹಾಲಪ್ಪ ಆಚಾರ್(Halappa Achar) ಕಾಮಗಾರಿಗೆ ಟೆಂಡರ್ಕರೆದು ಕಾಮಗಾರಿ ಭರದಿಂದ ಸಾಗುತ್ತಿರುವುದು ತಮ್ಮ ಅವಧಿಯಲ್ಲಿ ಎಂದೇಳುತ್ತಿದ್ದು, ಒಟ್ಟಾರೆ ಮುಂಬರುವ ವಿಧಾನಸಭೆ ಚುನಾವಣೆ ದೃಷ್ಟಿಯಲ್ಲಿಟ್ಟುಕೊಂಡು ಈಗಿನಿಂದಲೇ ಹಗ್ಗಜಗ್ಗಾಟ ಆರಂಭವಾಗಿದೆ.
ಕಳೆದ ವಿಧಾನಸಭಾ ಚುನಾವಣೆಯಲ್ಲಿ ಸಚಿವ ಹಾಲಪ್ಪ ಆಚಾರ್ಕೃಷ್ಣಾ ಬೀ ಸ್ಕೀಂ ಯೋಜನೆಯ ಮೂಲಕ ಕ್ಷೇತ್ರದಲ್ಲಿ ನೀರಾವರಿ ಮಾಡುತ್ತೇನೆಂದು ಪ್ರಚಾರ ಕೈಗೊಂಡಿದ್ದರು. ಆದರೆ ಇದಕ್ಕೆ ಸಂಬಂಧಿಸಿದಂತೆ ನ್ಯಾಯಾಧಿಕರಣದಲ್ಲಿ ಅಂತಾರಾಜ್ಯ ಜಲವಿವಾದವಿದ್ದು(Water Dispute) ಈ ನೀರಾವರಿ ಯೋಜನೆ ಕಷ್ಟಸಾಧ್ಯ. ಇದರ ಬದಲು ಕೆರೆಗಳಿಗೆ ನೀರು ತುಂಬಿಸಲಾಗುವುದು ಎಂದು ಮಾಜಿ ಸಚಿವ ಬಸವರಾಜ ರಾಯರೆಡ್ಡಿ ಹೇಳುತ್ತಿದ್ದಾರೆ. ಜಲವಿವಾದದ ಹಿನ್ನೆಲೆಯಲ್ಲಿ ತ್ವರಿತವಾಗಿ ಕಾರ್ಯವಾಗುವುದಿಲ್ಲ. ಆಲಮಟ್ಟಿ ಅಣೆಕಟ್ಟು(Almatti Dam) ಎತ್ತರ ಹೆಚ್ಚಿಸುವುದು, ರೈತದರ ಜಮೀನು ಭೂಸ್ವಾಧೀನ, ಹಳ್ಳಿಗಳ ಸ್ಥಳಾಂತರ, ಪರಿಹಾರ ನೀಡಿಕೆ ಇವೆಲ್ಲ ಮುಗಿದ ಬಳಿಕವೇ ಯೋಜನೆ ಕೈಗೆತ್ತಿಕೊಳ್ಳಬೇಕಾಗುತ್ತದೆ. ಆದ್ದರಿಂದ ಯೋಜನೆ ವಿಳಂಬವಾಗುತ್ತದೆ ಎನ್ನುತ್ತಾರೆ ರಾಯರಡ್ಡಿ.
Koppal| ಕೃಷಿ ಕಾಯ್ದೆಗಳ ವಿರುದ್ಧ ಕಾಂಗ್ರೆಸ್ ಅಪಪ್ರಚಾರ: ಹಾಲಪ್ಪ ಆಚಾರ್
ಮಾಜಿ ಸಿಎಂ ಸಿದ್ದರಾಮಮಯ್ಯನವರ(Siddaramaiah) ಸರ್ಕಾರದಲ್ಲಿ ಕೆರೆ ತುಂಬಿಸುವ ಯೋಜನೆ ಮಂಜೂರಾಗಿದೆ ಎಂದು ಮಾಜಿ ಸಚಿವ ರಾಯರಡ್ಡಿ ಅವರು ದಾಖಲೆ ಸಮೇತ ಪುಸ್ತಕ ಬಿಡುಗಡೆ ಮಾಡಿ ಕ್ಷೇತ್ರದ ಜನರ ಮನೆ ಮನೆ ಬಾಗಿಲಿಗೆ ತಲುಪಿಸಲು ಸಿದ್ಧತೆ ನಡೆಸಿದ್ದಾರೆ. ನಮ್ಮ ಸರ್ಕಾರದಲ್ಲಿ ಟೆಂಡರ್(Tender) ಕರೆದು ಕಾಮಗಾರಿ ಪ್ರಗತಿಯಲ್ಲಿದ್ದು, ಬರುವ ವರ್ಷದೊಳಗಾಗಿ ತಾಲೂಕಿನ ಎಲ್ಲ ಕೆರೆಗಳಿಗೆ ಕೃಷ್ಣೆಯ(Krishna River) ನೀರು ತುಂಬಿಸುವುದಾಗಿ ಸಚಿವ ಹಾಲಪ್ಪ ಆಚಾರ್ ಹೇಳುತ್ತಿದ್ದಾರೆ.
ಹಾಲಿ, ಮಾಜಿಗಳ ರಾಜಕೀಯ ಜಿದ್ದಾ- ಜಿದ್ದಿ, ಪ್ರತಿಷ್ಠೆಯ ತಿಕ್ಕಾಟ ಏನೇ ಇರಲಿ ತಾಲೂಕಿಗೆ ನೀರಾವರಿ ಆದರೆ ಸಾಕು. ಕ್ಷೇತ್ರದ ಕೆರೆ ತುಂಬಿಸಿ, ಕೃಷ್ಣಾ ಯೋಜನೆಯನ್ನೂ ತಂದು ತಾಲೂಕಿನ ಖುಷ್ಕಿ ಭೂಮಿಗೆ ನೀರು ಹರಿದರೆ ಸಾಕೆಂಬುದು ಕ್ಷೇತ್ರದ ಜನರ ಆಶಯವಾಗಿದೆ.
ಸತ್ಯಹರಿಶ್ಚಂದ್ರ ಬಂದರೂ ಈ ತಾಲೂಕನ್ನು ನೀರಾವರಿಯನ್ನಾಗಿ ಮಾಡಲು ಸಾಧ್ಯವಿಲ್ಲ ಎಂದು ಮಾಜಿ ಸಚಿವರು ಹೇಳಿದ್ದನ್ನು ಕ್ಷೇತ್ರದ ಜನತೆ ಮರೆತಿಲ್ಲ. ಕ್ಷೇತ್ರವನ್ನು ನೀರಾವರಿ ಮಾಡುವುದು ಸೇರಿದಂತೆ ಕೆರೆಗೆ ನೀರು ತುಂಬಿಸುವ ಯೋಜನೆಗೆ ಸಂಬಂಧಿಸಿದಂತೆ ಆಗಲಾರದನ್ನು ಆಗುವಂತೆ ಮಾಡಿ ತೋರಿಸುತ್ತೇನೆ. ಮುಂದಿನ ವರ್ಷದೊಳಗೆ ಕೆರೆಗೆ ನೀರು ತುಂಬಿಸುವ ಪ್ರಮಾಣಿಕ ಪ್ರಯತ್ನ ಮಾಡುತ್ತೇನೆ ಎಂದು ಯಲಬುರ್ಗಾ ಶಾಸಕ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಹಾಲಪ್ಪ ಆಚಾರ್ ತಿಳಿಸಿದ್ದಾರೆ.
'ಬಿಜೆಪಿ ಪಕ್ಷದ ದುರಾಡಳಿತದಿಂದ ಬೇಸತ್ತು ಕಾಂಗ್ರೆಸ್ ಸೇರ್ಪಡೆ'
ಕೆರೆ ತುಂಬಿಸುವ ಯೋಜನೆಗೆ 290ಕೋಟಿ ಮಂಜೂರಾತಿ ನೀಡಿದ್ದು ಕಾಂಗ್ರೆಸ್(Congress) ಸರ್ಕಾರ ಅದನ್ನು ದಾಖಲೆ ಸಮೇತ ಪುಸ್ತಕವನ್ನು ಬಿಡುಗಡೆ ಮಾಡಿ ಕ್ಷೇತ್ರದ ಜನರ ಕೈ ತಲುಪಿಸಿದ್ದೇನೆ.ನಾನು ಸುಳ್ಳು ಹೇಳಲು ರಾಜಕಾರಣಕ್ಕೆ ಬಂದವನಲ್ಲ. ಅಭಿವೃದ್ಧಿ ಕಾರ್ಯಗಳ ಮೂಲಕ ರಾಜಕಾರಣಕ್ಕೆ ಬಂದಿದ್ದೇನೆ ಎಂದು ಯಲಬುರ್ಗಾ ಮಾಜಿ ಸಚಿವ ಬಸವರಾಜ ರಾಯರಡ್ಡಿ ಹೇಳಿದ್ದಾರೆ.
ಹಾಲಿ, ಮಾಜಿಗಳು ಒಣ ರಾಜಕೀಯ ಪ್ರತಿಷ್ಠೆಗಾಗಿ ಪ್ರಚಾರ ಪಡೆದುಕೊಳ್ಳುತ್ತಿದ್ದಾರೆ. ಇಬ್ಬರಿಂದಲೂ ನೀರಾವರಿ ಯೋಜನೆ ಮಾಡಲು ಸಾಧ್ಯವಿಲ್ಲ. ಬರುವ ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್(JDS) ಪಕ್ಷಕ್ಕೆ ರಾಜ್ಯದ ಜನತೆ ಪೂರ್ಣ ಪ್ರಮಾಣದ ಅಧಿಕಾರ ನೀಡಿದರೆ ನೀರಾವರಿ(Irrigation) ಯೋಜನೆ ಮಾಡುತ್ತೇವೆ ಎಂದು ಯಲಬುರ್ಗಾ ಜೆಡಿಎಸ್ ತಾಲೂಕಾ ಅಧ್ಯಕ್ಷ ಮಲ್ಲನನಗೌಡ ಕೋನನಗೌಡ ತಿಳಿಸಿದ್ದಾರೆ.