ಕರಾವಳಿ ನಗರಿ ಕಾರವಾರದಲ್ಲಿ ರಾಜ್ಯದ ಏಕೈಕ ಯುದ್ಧನೌಕೆ ವಸ್ತು ಸಂಗ್ರಹಾಲಯವಿದ್ದು, ಇದರ ವೀಕ್ಷಣೆಗೆ ಪ್ರತಿನಿತ್ಯ ಸಾಕಷ್ಟು ಮಂದಿ ಪ್ರವಾಸಿಗರು ಆಗಮಿಸುತ್ತಾರೆ. ಇದಕ್ಕೆ ಸೇರ್ಪಡೆ ಅನ್ನೋವಂತೆ ನಗರದ ರವೀಂದ್ರನಾಥ ಟ್ಯಾಗೋರ್ ಕಡಲ ತೀರದಲ್ಲಿ ಯುದ್ಧ ವಿಮಾನವೊಂದನ್ನು ಮ್ಯೂಸಿಯಂ ಆಗಿ ಸ್ಥಾಪಿಸಲು ಕಳೆದ ಮೂರ್ನಾಲ್ಕು ವರ್ಷಗಳ ಹಿಂದೆಯೇ ನೌಕಾನೆಲೆಯೊಂದಿಗೆ ಮಾತುಕತೆ ನಡೆದಿತ್ತು.
ಭರತ್‌ರಾಜ್ ಕಲ್ಲಡ್ಕ, ಏಷ್ಯಾನೆಟ್ ಸುವರ್ಣ ನ್ಯೂಸ್, ಕಾರವಾರ
ಕಾರವಾರ (ಜ.29): ಕರಾವಳಿ ನಗರಿ ಕಾರವಾರದಲ್ಲಿ ರಾಜ್ಯದ ಏಕೈಕ ಯುದ್ಧನೌಕೆ ವಸ್ತು ಸಂಗ್ರಹಾಲಯವಿದ್ದು, ಇದರ ವೀಕ್ಷಣೆಗೆ ಪ್ರತಿನಿತ್ಯ ಸಾಕಷ್ಟು ಮಂದಿ ಪ್ರವಾಸಿಗರು ಆಗಮಿಸುತ್ತಾರೆ. ಇದಕ್ಕೆ ಸೇರ್ಪಡೆ ಅನ್ನೋವಂತೆ ನಗರದ ರವೀಂದ್ರನಾಥ ಟ್ಯಾಗೋರ್ ಕಡಲ ತೀರದಲ್ಲಿ ಯುದ್ಧ ವಿಮಾನವೊಂದನ್ನು ಮ್ಯೂಸಿಯಂ ಆಗಿ ಸ್ಥಾಪಿಸಲು ಕಳೆದ ಮೂರ್ನಾಲ್ಕು ವರ್ಷಗಳ ಹಿಂದೆಯೇ ನೌಕಾನೆಲೆಯೊಂದಿಗೆ ಮಾತುಕತೆ ನಡೆದಿತ್ತು. ಆದರೆ, ತಾಂತ್ರಿಕ ತೊಂದರೆಯಿಂದಾಗಿ ಅದು ಸಾಧ್ಯವಾಗಿರಲಿಲ್ಲ. ಇದೀಗ ಈ ಯುದ್ಧ ವಿಮಾನವನ್ನು ತರಲು ಎದುರಾಗಿದ್ದ ತಾಂತ್ರಿಕ ಸಮಸ್ಯೆಯನ್ನು ನೌಕಾನೆಲೆ ನಿವಾರಿಸಿದ್ದು, ಕೆಲವೇ ತಿಂಗಳಲ್ಲಿ ರಾಜ್ಯದ ಜನರು ವಿಮಾನ ಮ್ಯೂಸಿಯಂ ಕಾಣಬಹುದಾಗಿದೆ. ಈ ಕುರಿತ ಒಂದು ವರದಿ ಇಲ್ಲಿದೆ ನೋಡಿ.
undefined
ಹೌದು! ಕರಾವಳಿ ನಗರ ಕಾರವಾರದ ಕಡಲತೀರಕ್ಕೆ ಭೇಟಿ ನೀಡುತ್ತಿದ್ದ ಪ್ರವಾಸಿಗರಿಗೆ ಇಷ್ಟು ದಿನ ಇಲ್ಲಿನ ಐಎನ್ಎಸ್ ಚಾಪೆಲ್ ಯುದ್ಧನೌಕೆ ವಸ್ತುಸಂಗ್ರಹಾಲಯ ಆಕರ್ಷಣೆಯ ತಾಣವಾಗಿತ್ತು. ಆದರೆ, ಇದೀಗ ಇದಕ್ಕೆ ಹೊಸ ಸೇರ್ಪಡೆ ಎನ್ನುವಂತೆ ನೌಕಾಸೇನೆಯಿಂದ ನಿವೃತ್ತಿ ಹೊಂದಿರುವ ಯುದ್ಧವಿಮಾನ ಟ್ಯುಪೆಲೊವ್ 142ಅನ್ನು ಇದೇ ಯುದ್ಧನೌಕೆ ಪಕ್ಕದಲ್ಲಿ ಮ್ಯೂಸಿಯಂ ಆಗಿ ಸ್ಥಾಪನೆ ಮಾಡಲಾಗುತ್ತಿದೆ. ವಸ್ತುಸಂಗ್ರಹಾಲಯಕ್ಕಾಗಿ ಯುದ್ಧವಿಮಾನ ನೀಡುವ ಕುರಿತು ಉತ್ತರಕನ್ನಡ ಜಿಲ್ಲಾಡಳಿತ ಹಾಗೂ ನೌಕಾನೆಲೆಯೊಂದಿಗೆ ಕಳೆದ ಎರಡು ಮೂರು ವರ್ಷಗಳ ಹಿಂದೆಯೇ ಒಪ್ಪಂದ ಆಗಿತ್ತು.
Kolar: ಸಿದ್ದರಾಮಯ್ಯ ಸ್ಪರ್ಧೆ: ಇನ್ನೂ ಬಗೆಹರಿಯದ ಗೊಂದಲ
ಆ ಸಂದರ್ಭದಲ್ಲಿ ಯುದ್ಧವಿಮಾನವನ್ನು ಚೆನ್ನೈನಿಂದ ಕಾರವಾರಕ್ಕೆ ಸ್ಥಳಾಂತರ ಮಾಡಲು ತಾಂತ್ರಿಕ ಸಮಸ್ಯೆ ಎದುರಾಗಿದ್ದರಿಂದ ಅದು ವಿಳಂಬವಾಗಿತ್ತು. ಆದರೆ, ಇದೀಗ ಯುದ್ಧವಿಮಾನ ಸ್ಥಳಾಂತರಕ್ಕೆ ಕರೆಯಲಾಗಿದ್ದ ಟೆಂಡರ್‌ನಲ್ಲಿ ಎರಡು ಕಂಪೆನಿಗಳು ಭಾಗವಹಿಸಿದ್ದು, ಟೆಂಡರ್ ಪ್ರಕ್ರಿಯೆ ಪೂರ್ಣಗೊಳ್ಳುತ್ತಿದ್ದಂತೆ ಯುದ್ಧವಿಮಾನವನ್ನು ಬಿಡಿ ಭಾಗಗಳನ್ನಾಗಿ ಬೇಪರ್ಡಿಸುವ ಕಾರ್ಯ ಆರಂಭವಾಗಲಿದೆ. ಯುದ್ಧವಿಮಾನದ ಸ್ಥಳಾಂತರಕ್ಕೆ ತಗಲುವ ಸುಮಾರು 4 ಕೋಟಿ ರೂಪಾಯಿ ವೆಚ್ಚವನ್ನು ನೌಕಾನೆಲೆಯೇ ಭರಿಸಲಿದ್ದು, ಸುಮಾರು ನಾಲ್ಕು ತಿಂಗಳ ಅವಧಿಯಲ್ಲಿ ಸ್ಥಳಾಂತರ ಪ್ರಕ್ರಿಯೆ ಪ್ರಾರಂಭವಾಗುವ ನಿರೀಕ್ಷೆಗಳಿವೆ.
ಇನ್ನು 2017ರಲ್ಲಿ ತಮಿಳುನಾಡಿನ ಅರಕ್ಕೋಣಂನಲ್ಲಿರುವ ಐಎನ್ಎಸ್ ರಾಜಲಿ ನೌಕಾನೆಲೆಯಲ್ಲಿ ನಿವೃತ್ತಿಗೊಂಡ 5 ಟ್ಯುಪೊಲೆವ್ ಯುದ್ಧವಿಮಾನಗಳ ಪೈಕಿ ಒಂದನ್ನು ಕಾರವಾರದಲ್ಲಿ ಮ್ಯೂಸಿಯಂಗಾಗಿ ನೀಡಲು ನೌಕಾನೆಲೆ ಜಿಲ್ಲಾಡಳಿತದೊಂದಿಗೆ ಈ ಹಿಂದೆಯೇ ಒಪ್ಪಂದ ಮಾಡಿಕೊಂಡಿದೆ. ಈಗಾಗಲೇ ಆಂಧ್ರಪ್ರದೇಶದ ವಿಶಾಖಪಟ್ಟಣಂನಲ್ಲಿ ಟ್ಯುಪೊಲೆವ್ ಯುದ್ಧವಿಮಾನದ ಮ್ಯೂಸಿಯಂವೊಂದನ್ನು ಸ್ಥಾಪನೆ ಮಾಡಲಾಗಿದ್ದು, ಅದು ಪ್ರವಾಸಿಗರ ಆಕರ್ಷಣೆಯ ತಾಣವಾಗಿದೆ. ಕಾರವಾರದ ಟ್ಯಾಗೋರ್ ಕಡಲತೀರದಲ್ಲಿ ಈಗಿರುವ ಚಾಪೆಲ್ ಯುದ್ಧನೌಕೆ ವಸ್ತುಸಂಗ್ರಹಾಲಯದ ಜೊತೆಗೆ ಟ್ಯುಪೊಲೆವ್ ಯುದ್ಧನೌಕೆ ಮ್ಯುಸಿಯಂ ಕೂಡಾ ನಿರ್ಮಾಣವಾಗುವುದರಿಂದ ರಾಜ್ಯದಲ್ಲೇ ಪ್ರವಾಸಿಗರ ಆಕರ್ಷಣೆಯ ತಾಣವಾಗಲಿದೆ.
ರಾಜ್ಯದಲ್ಲಿ ಮತ್ತೆ ಬಿಜೆಪಿಗೆ ಬಹುಮತ ಖಚಿತ: ಕೆ.ಎಸ್.ಈಶ್ವರಪ್ಪ
ಕಡಲತೀರದಲ್ಲಿ ಯುದ್ಧವಿಮಾನ ನಿಲುಗಡೆಗೆ ಅಗತ್ಯ ಕಾಮಗಾರಿಗಳನ್ನು 2 ಕೋಟಿ ರೂ. ವೆಚ್ಚದಲ್ಲಿ ರಾಜ್ಯ ಸರ್ಕಾರ ನಿರ್ವಹಿಸಲಿದ್ದು, ಇದೀಗ ಶಿಲಾನ್ಯಾಸ ನೆರವೇರಿಸುವ ಮೂಲಕ ಕಾಮಗಾರಿಗೆ ಚಾಲನೆ ನೀಡಲಾಗಿದೆ. ಇನ್ನು ಯುದ್ಧವಿಮಾನ ತರಲು ಇರುವ ಇತರೆ ತೊಂದರೆಗಳನ್ನು ಆದಷ್ಟು ಶೀಘ್ರದಲ್ಲಿ ನಿವಾರಿಸಿ ಯುದ್ಧವಿಮಾನವನ್ನು ತಂದೇ ತರುತ್ತೇವೆ ಅಂತಾರೇ ಜಿಲ್ಲಾ ಉಸ್ತುವಾರಿ ಸಚಿವರು. ಒಟ್ಟಿನಲ್ಲಿ ಕಾರವಾರ ಕಡಲತೀರಕ್ಕೆ ಹೊಸ ಆಕರ್ಷಣೆಯಾಗಿ ಟ್ಯುಪೊಲೆವ್ ಯುದ್ದವಿಮಾನ ಸೇರ್ಪಡೆಯಾಗುತ್ತಿರುವುದು ಜಿಲ್ಲೆಯ ಪ್ರವಾಸೋದ್ಯಮ ಅಭಿವೃದ್ಧಿಗೆ ಸಹಕಾರಿಯಾಗುವುದರಲ್ಲಿ ಯಾವುದೇ ಅನುಮಾನಗಳಿಲ್ಲ. ಈ ನಿಟ್ಟಿನಲ್ಲಿ ಆದಷ್ಟು ಬೇಗ ಯುದ್ಧವಿಮಾನ ವಸ್ತುಸಂಗ್ರಹಾಲಯ ಸಾರ್ವಜನಿಕರ ವೀಕ್ಷಣೆಗೆ ಲಭ್ಯವಾಗಲಿ ಅನ್ನೋದೇ ನಮ್ಮ ಆಶಯ.