ಡ್ಯಾಂ ಇತಿಹಾಸದಲ್ಲೇ ಸಾರ್ವಕಾಲಿಕ ದಾಖಲೆ: 1,600 ಅಡಿ ತಲುಪಿದ ತುಂಗಭದ್ರಾ ನೀರಿನ ಮಟ್ಟ

By Girish Goudar  |  First Published May 22, 2022, 7:23 AM IST

*  69 ವರ್ಷಗಳ ಇತಿಹಾಸದಲ್ಲಿ ಜಲಾಶಯದ ನೀರಿನ ಮಟ್ಟ ದಾಖಲೆ
*  ಜಲಾಶಯಕ್ಕೆ ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ನೀರು ಹರಿದು ಬರುವ ಸಾಧ್ಯತೆ 
*  ಶನಿವಾರ ಒಂದೇ ದಿನ ಜಲಾಶಯದಲ್ಲಿ 5 ಅಡಿಗಳಷ್ಟು ಶೇಖರಣೆ 


ಎಸ್‌. ನಾರಾಯಣ

ಮುನಿರಾಬಾದ್‌(ಮೇ.22): 69 ವರ್ಷಗಳ ಇತಿಹಾಸದಲ್ಲಿ ಪ್ರಥಮ ಬಾರಿಗೆ ಬೇಸಿಗೆಯಲ್ಲಿ ತುಂಗಭದ್ರಾ ಜಲಾಶಯದ ನೀರಿನ ಮಟ್ಟ 1600 ಅಡಿ ತಲುಪಿದೆ. ಶನಿವಾರ 61,189 ಕ್ಯುಸೆಕ್‌ ನೀರು ಹರಿದು ಬಂದಿದ್ದು, ಜಲಾಶಯದಲ್ಲಿ 20 ಟಿಎಂಸಿಯಷ್ಟು ನೀರು ಶೇಖರಣೆಯಾಗಿದೆ.

Tap to resize

Latest Videos

ಮೇ 20ರಂದು ಜಲಾಶಯದ ನೀರಿನ ಮಟ್ಟ 1595 ಅಡಿ ಇದ್ದರೆ, ಒಳ ಹರಿವು 16,046 ಕ್ಯುಸೆಕ್‌ ಇತ್ತು. ಶನಿವಾರ ಒಂದೇ ದಿನ ಜಲಾಶಯದಲ್ಲಿ 5 ಅಡಿಗಳಷ್ಟು ಶೇಖರಣೆಯಾಗಿದೆ. ಕಳೆದ ವರ್ಷ ಇದೇ ವೇಳೆ ಜಲಾಶಯದ ನೀರಿನ ಮಟ್ಟ1585, ಒಳ ಹರಿವು 3,995 ಕ್ಯುಸೆಕ್‌ ನೀರು ಹರಿದು ಬಂದಿತ್ತು. 7 ಟಿಎಂಸಿ ನೀರು ಶೇಖರಣೆಯಾಗಿತ್ತು.

Koppal: ಭಾರೀ ಮಳೆ ತುಂಗಭದ್ರಾ ಜಲಾಶಯಕ್ಕೆ ಒಳಹರಿವು ಹೆಚ್ಚಳ

ಮೇ ತಿಂಗಳಲ್ಲಿ ಬಂದ ನೀರು:

ಮೇ 1ರಂದು 3361 ಕ್ಯುಸೆಕ್‌, ಮೇ 2ರಂದು 1438 ಕ್ಯುಸೆಕ್‌, ಮೇ 3ರಂದು 1519, ಮೇ 4ರಂದು 1577, 5ರಂದು 743, 6ರಂದು 1585, 7ರಂದು 1248, 8ರಂದು 652, 9ರಂದು 4459, 10ರಂದು 2959, 11ರಂದು 4439, 12ರಂದು 3093, 13ರಂದು 4206, 14ರಂದು 5785, 15ರಂದು 9342, 16ರಂದು 4201, 17ರಂದು 525, 18ರಂದು 544, 19ರಂದು 3126, 20ರಂದು 16,046, 21ರಂದು 61,189 ಕ್ಯುಸೆಕ್‌ ನೀರು ಹರಿದು ಬಂದಿದೆ. ಮೇ 20 ಹಾಗೂ 21ರಂದು ಜಲಾಶಯಕ್ಕೆ ಹರಿದು ಬರುವ ನೀರಿನ ಪ್ರಮಾಣವು ಅಧಿಕವಾಗಿ ಜಲಾಶಯದ ಇತಿಹಾಸದಲ್ಲಿ ನೂತನ ದಾಖಲೆ ನಿರ್ಮಾಣವಾಗಿದೆ.

ಇಂದಿನ ನೀರಿನ ಮಟ್ಟವು ಜಲಾಶಯದ ಇತಿಹಾಸದಲ್ಲೇ ಸರ್ವಕಾಲಿಕ ದಾಖಲೆಯಾಗಿದೆ. ಹಿಂದೆ 2008ರ ಮೇ ತಿಂಗಳಲ್ಲಿ ಜಲಾಶಯದಲ್ಲಿ 14 ಟಿಎಂಸಿಯಷ್ಟು ನೀರು ಶೇಖರಣೆಯಾಗಿತ್ತು. 2014ರ ಮೇ ತಿಂಗಳಲ್ಲಿ ಜಲಾಶಯಕ್ಕೆ 71,333 ಕ್ಯುಸೆಕ್‌ ನೀರು ಹರಿದು ಬಂದಿದ್ದು, ಜಲಾಶಯದಲ್ಲಿ 8 ಟಿಎಂಸಿಯಷ್ಟು ನೀರು ಶೇಖರಣೆಯಾಗಿತ್ತು. ಮೇ ತಿಂಗಳಲ್ಲಿ ತುಂಗಭದ್ರಾ ಜಲಾಶಯಕ್ಕೆ ಇಂದಿನವರೆಗೆ ಒಟ್ಟು 1,33,000 ಕ್ಯುಸೆಕ್‌ನಷ್ಟು ಹರಿದು ಬಂದಿದೆ. ಜಲಾನಯನ ಪ್ರದೇಶದಲ್ಲಿ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ತುಂಗಭದ್ರಾ ಜಲಾಶಯಕ್ಕೆ ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ನೀರು ಹರಿದು ಬರುವ ಸಾಧ್ಯತೆ ಇದ್ದು, ಮೇ ಅಂತ್ಯದ ವರೆಗೆ ಜಲಾಶಯದಲ್ಲಿ 25 ಟಿಎಂಸಿಯಷ್ಟು ನೀರು ಶೇಖರಣೆಯಾಗುವ ಸಾಧ್ಯತೆಗಳಿವೆ ಎಂದು ತುಂಗಭದ್ರಾ ಮಂಡಳಿಯ ಅಧಿಕಾರಿಗಳು ‘ಕನ್ನಡಪ್ರಭ’ಕ್ಕೆ ತಿಳಿಸಿದ್ದಾರೆ.
 

click me!