ಕೊಪ್ಪಳ: ಕೇವಲ 10 ದಿನ​ಗ​ಳಲ್ಲಿ ತುಂಬಿದ ತುಂಗಭದ್ರಾ ಜಲಾಶಯ

By Kannadaprabha NewsFirst Published Aug 17, 2020, 11:41 AM IST
Highlights

ತುಂಗಭದ್ರಾ ಡ್ಯಾಂ ಭರ್ತಿ: 3 ಗೇಟ್‌​ಗ​ಳಿಂದ ನದಿಗೆ ನೀರು| ನದಿಗೆ 5 ಸಾವಿರ ಕ್ಯೂಸೆಕ್‌ ನೀರು ಬಿಡು​ಗ​ಡೆ|  ಚಿಕ್ಕಮಗಳೂರು ಹಾಗೂ ಶಿವಮೊಗ್ಗದಲ್ಲಿ ಬಿದ್ದ ಬಾರಿ ಮಳೆಯಿಂದ ತುಂಗಾನದಿಯಲ್ಲಿ ಉಂಟಾದ ಭಾರಿ ಪ್ರವಾಹ|  ಆ. 6ರಂದು ಕೇವಲ 39 ಟಿಎಂಸಿ ನೀರು ಶೇಖರಣೆ| ಆಗಸ್ಟ್‌ 16ರ ವರೆಗೆ ಜಲಾಶಯಕ್ಕೆ 61 ಟಿಎಂಸಿಯಷ್ಟು ಹರಿದು ಬಂದ ನೀರು|
 
 

ಮುನಿರಾಬಾದ್‌(ಆ.17): ತುಂಗಭದ್ರಾ ಜಲಾಶಯ ಭಾನು​ವಾ​ರ ಬಹುತೇಕ ಭರ್ತಿಯಾಗಿದ್ದು, ಜಲಾಶಯದ ನೀರಿನ ಮಟ್ಟ 1632.20 ಅಡಿಗಳಿಗೆ ತಲುಪಿದ್ದು, 3 ಗೇಟ್‌​ಗ​ಳಿಂದ ನದಿಗೆ 5 ಸಾವಿರ ಕ್ಯೂಸೆಕ್‌ ನೀರು ಹರಿ​ಸ​ಲಾ​ಗು​ತ್ತಿ​ದೆ.

ಜಲಾಶಯಕ್ಕೆ ಭಾನು​ವಾರ 33,737 ಕ್ಯೂಸೆಕ್‌ ನೀರಿನ ಒಳ ಹರಿವಿತ್ತು ಹಾಗೂ ಜಲಾಶಯದಲ್ಲಿ 98 ಟಿಎಂಸಿ ನೀರು ಸಂಗ್ರ​ಹ​ವಾ​ದ ಹಿನ್ನೆಲೆಯಲ್ಲಿ ತುಂಗಭದ್ರಾ ಮಂಡಳಿಯ ಕಾರ್ಯದರ್ಶಿ ನಾಗಮೋಹನ್‌ ಹಾಗೂ ಅಧೀಕ್ಷಕ ಅಭಿಯಂತ ವಿ. ರಮಣ ಕ್ರಸ್ಟ್‌ ಗೇ​ಟ್‌ಗಳಿಗೆ ಭಾನುವಾರ ಸಂಜೆ 7.15ಕ್ಕೆ ಪೂಜೆ ಸಲ್ಲಿಸಿದರು. ಬಳಿ​ಕ 3 ಗೇಟ್‌ಗಳನ್ನು ತೆರೆದು ಜಲಾಶಯದಿಂದ ನದಿಗೆ 5 ಸಾವಿರ ಕ್ಯೂಸೆಕ್‌ ನೀರನ್ನು ಹರಿಸಲಾಗುತ್ತಿದೆ ಎಂದು ತುಂಗಭದ್ರಾ ಮಂಡಳಿಯ ಕಾರ್ಯದರ್ಶಿ ನಾಗಮೋಹನ್‌ ಕನ್ನಡಪ್ರಭಕ್ಕೆ ತಿಳಿಸಿದ್ದಾರೆ. ಮುಂಬರುವ ದಿನಗಳಲ್ಲಿ ಜಲಾಶಯಕ್ಕೆ ನೀರಿನ ಒಳಹರಿವು ಹೆಚ್ಚಾಗಲಿದ್ದು, ಅದಕ್ಕನುಗುಣವಾಗಿ ಇನ್ನೂ ಹೆಚ್ಚಿನ ನೀರನ್ನು ನದಿಗೆ ಹರಿಸಲಾಗುವುದು ಎಂದರು.

ಕೊಪ್ಪಳ: ತುಂಗಭದ್ರಾ ಜಲಾಶಯಕ್ಕೆ ಒಂದೇ ದಿನ ಲಕ್ಷ ಕ್ಯುಸೆಕ್‌ ನೀರು..!

ಕೇವಲ 10 ದಿನಗಳಲ್ಲಿ ಭರ್ತಿ:

ಆಗಸ್ಟ್‌ 7 ಶ್ರಾವಣ ಶುಕ್ರವಾರ ಅಚ್ಚುಕಟ್ಟು ಪ್ರದೇಶದ ರೈತರ ಭಾಗ್ಯದ ಬಾಗಿಲನ್ನು ತೆಗೆದ ಶುಕ್ರವಾರ ಎಂದರೆ ತಪ್ಪಾಗಲಾರದು. ಅಂದಿನಿಂದ ಜಲಾಶಯಕ್ಕೆ ಲಕ್ಷ ಕ್ಯೂಸೆಕ್‌ನಿಂದ ಒಳಹರಿವು ಪ್ರಾರಂಭವಾಯಿತು. ಅಂದು ಜಲಾಶಯಕ್ಕೆ 1,03,000 ಕ್ಯೂಸೆಕ್‌, ಶನಿವಾರದಂದು 1,06,000 ಕ್ಯೂಸೆಕ್‌, ಭಾನುವಾರ 1,20,000 ಕ್ಯೂಸೆಕ್‌, ಸೋಮವಾರ 1,16,877 ಕ್ಯೂಸೆಕ್‌, ಮಂಗಳವಾರ 1,04,000 ಕ್ಯೂಸೆಕ್‌, ಹೀಗೆ ಸತತವಾಗಿ 5 ದಿನ ಲಕ್ಷ ಕ್ಯೂಸೆಕ್‌ಗಿಂತ ಅಧಿಕ ನೀರು ಜಲಾಶಯಕ್ಕೆ ಹರಿದು ಬಂದಿದೆ. ನಂತರ ಬುಧವಾರದಿಂದ ಜಲಾಶಯಕ್ಕೆ 62,943 ಕ್ಯೂಸೆಕ್‌, ಗುರುವಾರ 50,609 ಕ್ಯೂಸೆಕ್‌, ಶುಕ್ರವಾರ 51,177 ಕ್ಯೂಸೆಕ್‌, ಶನಿವಾರ 49,073 ಕ್ಯೂಸೆಕ್‌ ಹಾಗೂ ಭಾನುವಾರ 33,737 ಕ್ಯೂಸೆಕ್‌ ನೀರು ಜಲಾಶಯಕ್ಕೆ ಹರಿದು ಬಂದಿದೆ.

ಗುರುವಾರ ಆ. 6ರಂದು ಕೇವಲ 39 ಟಿಎಂಸಿ ನೀರು ಶೇಖರಣೆಯಾಗಿತ್ತು. ಆಗಸ್ಟ್‌ 16ರ ವರೆಗೆ ಜಲಾಶಯಕ್ಕೆ 61 ಟಿಎಂಸಿಯಷ್ಟು ನೀರು ಹರಿದು ಬಂದಿದೆ. ಚಿಕ್ಕಮಗಳೂರು ಹಾಗೂ ಶಿವಮೊಗ್ಗದಲ್ಲಿ ಬಿದ್ದ ಬಾರಿ ಮಳೆಯಿಂದ ತುಂಗಾನದಿಯಲ್ಲಿ ಭಾರಿ ಪ್ರವಾಹ ಉಂಟಾಯಿತು. ತುಂಗಾ ನದಿಯ ಕೃಪೆ, ವರದಾ ನದಿಯ ಒಳಹರಿವು ಹಾಗೂ ಗದಗ, ಹಾವೇರಿ ಮತ್ತು ದಾವಣಗೆರೆ ಜಿಲ್ಲೆಗಳಲ್ಲಿ ಬಿದ್ದ ಭಾರಿ ಮಳೆಯಿಂದಾಗಿ ತುಂಗಭದ್ರಾ ಜಲಾಶಯದ ಒಳಹರಿವು ಹೆಚ್ಚಳವಾಗಿ ಜಲಾಶಯ ಕೇವಲ 10 ದಿನಗಳಲ್ಲಿ ಭರ್ತಿಯಾಯಿತು.

ಕೈಕೊಟ್ಟ ಭದ್ರಾ ನದಿ:

ಪ್ರತಿ ಬಾರಿ ತುಂಗಭದ್ರಾ ಜಲಾಶಯಕ್ಕೆ ತುಂಗ ಹಾಗೂ ಭದ್ರಾ ನದಿಗಳಲ್ಲಿ ಪ್ರವಾಹ ಉಂಟಾಗಿ ಎರಡು ನದಿಗಳಿಂದ ಜಲಾಶಯಕ್ಕೆ ನೀರು ಹರಿದು ಬರುತ್ತಿತ್ತು. ಆದರೆ, ಪ್ರಸಕ್ತ ಸಾಲಿನಲ್ಲಿ ಭದ್ರಾ ನದಿ ಪಾತ್ರದಲ್ಲಿ ನಿರೀಕ್ಷಿತ ಪ್ರಮಾಣದಲ್ಲಿ ಮಳೆಯಾಗದೆ ಭದ್ರ ನದಿಯಿಂದ ನೀರಿನ ಒಳಹರಿವು ಇರಲಿಲ್ಲ.

ಒಂದು ಹಂತದಲ್ಲಿ ತುಂಗಭದ್ರಾ ಜಲಾಶಯ ಭರ್ತಿಯಾಗುವುದು ಅನುಮಾನವಾಗಿತ್ತು. ಏಕೆಂದರೆ ಜುಲೈ ತಿಂಗಳಲ್ಲಿ ಜಲಾಶಯಕ್ಕೆ ನೀರಿನ ಒಳಹರಿವು ಪ್ರಮಾಣ ತುಂಬಾ ಕಡಿಮೆ ಇತ್ತು. ಇನ್ನೊಂದಡೆ ಕಾಲುವೆಗೆ ನೀರು ಹರಿಸಲಾಯಿತು. ಜುಲೈ 30ರಂದು ಜಲಾಶಯದಲ್ಲಿ ಕೇವಲ 39 ಟಿಎಂಸಿಯಷ್ಟು ನೀರು ಶೇಖರಣೆಯಾಯಿತು. ಇದೇ ತಿಂಗಳ ಆ. 6ರ ವರೆಗೂ ನೀರಿನ ಒಳಹರಿವಿನ ಪ್ರಮಾಣ ಕಡಿಮೆಯಾಗಿದ್ದು, ಅಂದಿನವರೆಗೂ ಜಲಾಶಯದಲ್ಲಿ ಕೇವಲ 39 ಟಿಎಂಸಿಯಷ್ಟು ನೀರು ಶೇಖರಣೆಯಾಗಿತ್ತು. ಇದರಿಂದ ಅಧಿಕಾರಿಗಳಲ್ಲಿ ಆತಂಕವುಂಟಾಗಿದ್ದನ್ನು ಇಲ್ಲಿ ಸ್ಮರಿಸಬಹುದು.
 

click me!