ಸದ್ಯ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಕಾಂಗ್ರೆಸ್ ಟ್ರಬಲ್ ಶೂಟರ್ ಎಂದೇ ಕರೆಸಿಕೊಳ್ಳುತ್ತಿದ್ದು, ಇದೀಗ ಅವರನ್ನು ರಾಜ್ಯದ ಸಿಎಂ ಮಾಡುವ ಯತ್ನವು ನಡೆದಿದೆ.
ರಾಮನಗರ (ಆ.17) : ರಾಜ್ಯದಲ್ಲಿ ಕೊರೋನಾ ತಡೆಗಟ್ಟುವ ನಿಟ್ಟಿನಲ್ಲಿ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ರೂಪಿಸಿರುವ ಆರೋಗ್ಯ ಹಸ್ತ ಕಾರ್ಯಕ್ರಮವನ್ನು ಯಶಸ್ವಿಗೊಳಿಸುವುದರ ಜೊತೆಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರನ್ನು ಮುಂಬರುವ ದಿನಗಳಲ್ಲಿ ಮುಖ್ಯಮಂತ್ರಿ ಮಾಡುವಲ್ಲಿ ಮಹಿಳಾ ಕಾಂಗ್ರೆಸ್ ಪದಾಧಿಕಾರಿಗಳು ಹಾಗೂ ಕಾರ್ಯಕರ್ತೆಯರು ಪ್ರಮುಖ ಪಾತ್ರವಹಿಸಬೇಕು ಎಂದು ಜಿಲ್ಲಾ ಮಹಿಳಾ ಕಾಂಗ್ರೆಸ್ ಸಮಿತಿ ಅಧ್ಯಕ್ಷೆ ಬಿ.ಸಿ.ಪಾರ್ವತಮ್ಮ ಕರೆ ನೀಡಿದರು.
ನಗರದ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಮಹಿಳಾ ಕಾರ್ಯಕರ್ತೆಯರ ಸಭೆಯಲ್ಲಿ ಮಾತನಾಡಿದ ಅವರು, ನಮ್ಮದೇ ಜಿಲ್ಲೆಯ ಅಧಿನಾಯಕರೊಬ್ಬರು ಕೆಪಿಸಿಸಿ ಅಧ್ಯಕ್ಷರಾಗಿರುವ ಕಾರಣ ಹಿಂದೆಂದಿಗಿಂತಲೂ ಇಂದು ಜಿಲ್ಲೆಯ ಮಹಿಳಾ ಕಾಂಗ್ರೆಸ್ ಸಮಿತಿಗೆ ಬಹುದೊಡ್ಡ ಜವಾಬ್ದಾರಿ ಎದುರಾಗಿದೆ. ಇದನ್ನು ನಾವುಗಳು ಸವಾಲಾಗಿ ಸ್ವೀಕರಿಸಿ ಡಿ.ಕೆ.ಶಿವಕುಮಾರ್ ಅವರನ್ನು ಮುಖ್ಯಮಂತ್ರಿಯನ್ನಾಗಿ ಮಾಡಿಯೇ ತೀರುತ್ತೇವೆಂದು ಪ್ರತಿಜ್ಞೆ ಮಾಡಬೇಕಾಗಿದೆ ಎಂದರು.
ಅಖಂಡಗೇ ಟಿಕೆಟ್, ಅನ್ಯರಿಗೆ ಇಲ್ಲ: ಡಿಕೆಶಿ ಸ್ಪಷ್ಟನೆ...
ಮಹಿಳೆಯರ ಸಂಘಟನಾ ಶಕ್ತಿ ತೋರಿಸಿ
ಈ ನಿಟ್ಟಿನಲ್ಲಿ ಜಿಲ್ಲಾ ಮಹಿಳಾ ಕಾಂಗ್ರೆಸ್ ಸಮಿತಿಯ ಎಲ್ಲಾ ಘಟಕಗಳ ಪದಾಧಿಕಾರಿಗಳು ಚುರುಕಾಗಬೇಕಿದ್ದು, ಮಹಿಳೆಯರ ಸಂಘಟನಾ ಶಕ್ತಿ ಎಂಥದ್ದು ಎಂಬುದನ್ನು ತಳಮಟ್ಟದಿಂದ ಪಕ್ಷ ಸಂಘಟಿಸುವ ಮೂಲಕ ತೋರಿಸಬೇಕಿದೆ. ಈಗಲ್ಲದೇ ಇನ್ನು ಯಾವಾಗ ಎಂಬ ಸಕರಾತ್ಮಕ ಮನೋಭಾವದೊಂದಿಗೆ ಜಿಲ್ಲೆಯ ಎಲ್ಲ ಕಡೆ ಮನೆ-ಮನೆಗೆ ತೆರಳಿ ಈ ಹಿಂದೆ ಕಾಂಗ್ರೆಸ್ ಸರ್ಕಾರಗಳು ನೀಡಿರುವ ಜನಪರ, ಜನಪ್ರಿಯ ಹಾಗೂ ಸಮಾಜಮುಖಿ ಯೋಜನೆಗಳ ಬಗ್ಗೆ ತಿಳಿಸಿ ಮತದಾರರ ಮನಗೆಲ್ಲುವ ಕೆಲಸವನ್ನು ಪ್ರತಿ ಕಾರ್ಯಕರ್ತೆಯರು ಮಾಡಬೇಕಾಗಿದೆ ಎಂದು ಸಲಹೆ ನೀಡಿದರು.
ಬಿಜೆಪಿ ಮುಖಂಡ ಸಿ.ಪಿ.ಯೋಗೇಶ್ವರ್ ಹಠಾತ್ ದೆಹಲಿಗೆ.
ಕಾಂಗ್ರೆಸ್‌ನಲ್ಲಿ ಮಹಿಳೆಯರಿಗೆ ಅವಕಾಶ
ಜಿಲ್ಲಾ ವೀಕ್ಷಕಿ ರಾಧಾ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ರಾಜಕೀಯದಲ್ಲಿ ಮಹಿಳೆಯರ ಭಾಗವಹಿಸುವಿಕೆ ಹೆಚ್ಚಾಗಿರುವುದು ಉತ್ತಮ ಬೆಳವಣಿಗೆ. ಈ ದಿಕ್ಕಿನಲ್ಲಿ ಮಹಿಳೆಯರಿಗೆ ಕಾಂಗ್ರೆಸ್ ನೀಡಿರುವ ಅವಕಾಶವನ್ನು ಬೇರೆ ರಾಜಕೀಯ ಪಕ್ಷಗಳು ನೀಡಿಲ್ಲ ಎಂಬುದನ್ನು ನಮ್ಮ ಕಾರ್ಯಕರ್ತೆಯರು ಹಾಗೂ ಮಹಿಳಾ ನಾಯಕಿಯರು ಮನದಲ್ಲಿಟ್ಟುಕೊಂಡು, ಕಾಂಗ್ರೆಸ್ ಪಕ್ಷ ರಾಜ್ಯದಲ್ಲಿ ಮತ್ತೊಮ್ಮೆ ಅಧಿಕಾರಕ್ಕೆ ಬರಲು ಶ್ರಮಿಸಬೇಕು. ಈ ಮೂಲಕ ನಾವುಗಳು ಕೂಡ ಹಂತ-ಹಂತವಾಗಿ ಬೆಳೆಯಬೇಕು ಎಂದರು.
ಚನ್ನಪಟ್ಟಣ ತಾಲೂಕು ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಕೆ.ಟಿ.ಲಕ್ಷ್ಮಮ್ಮ ಮಾತನಾಡಿ, ನಮ್ಮ ವ್ಯಾಪ್ತಿಯಲ್ಲಿ ಮಹಿಳಾ ಕಾಂಗ್ರೆಸ್ ವತಿಯಿಂದ ಈಗಾಗಲೇ ಅರ್ಥಪೂರ್ಣ ಚಟುವಟಿಕೆಗಳು ಹಾಗೂ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು, ಲಾಕ್ ಡೌನ್ ಹಾಗೂ ಕೊರೋನಾ ಸಂಕಷ್ಟದ ಸಮಯದಲ್ಲಿ ಗ್ರಾಮೀಣ ಭಾಗದಲ್ಲಿ ಸಂತ್ರಸ್ತ ಕುಟುಂಬಗಳಿಗೆ ತರಕಾರಿ ಹಂಚುವುದು, ನಿರ್ಗತಿಕರಿಗೆ ಅಗತ್ಯ ದಿನಸಿ ಪದಾರ್ಥಗಳ ವಿತರಣೆ ಮಾಡಲಾಗಿತ್ತು ಎಂದು ತಿಳಿಸಿದರು.
ಕರೋನಾ ಸಂತ್ರಸ್ತರಿಗೆ ನೆರವು
ಕೊರೋನಾ ಹಿನ್ನೆಲೆಯಲ್ಲಿ ಹಳ್ಳಿಗಳಲ್ಲಿ ಸಾಮಾಜಿಕ ಅಂತರ ಕಾಪಾಡಿಕೊಳ್ಳವ ಬಗ್ಗೆ ಅರಿವು ಮೂಡಿಸುವುದರ ಜೊತೆಗೆ, ಮಾÓ್ಕ…, ಸಾನಿಟೈಜರ್ ಗಳನ್ನು ನೀಡಲಾಗಿದೆ. ಇದಲ್ಲದೆ, ಎಸ್ಸೆಸ್ಸೆಲ್ಸಿ ಪರೀಕ್ಷೆ ವೇಳೆಯಲ್ಲಿ ವಿದ್ಯಾರ್ಥಿಗಳಿಗೆ ಮಾಸ್ಕ್ - ಸಾನಿಟೈಸರ್ ಗಳನ್ನು ವಿತರಿಸುವ ಸಾರ್ಥಕತೆಯ ಕೆಲಸಗಳನ್ನು ಹಮ್ಮಿಕೊಳ್ಳಲಾಗಿತ್ತು ಎಂದು ಹೇಳಿದರು.
ಜಿಲ್ಲಾ ಮಹಿಳಾ ಕಾಂಗ್ರೆಸ್ ಉಪ ವೀಕ್ಷಕಿ ಡಾ.ಪದ್ಮಜಾ ಪ್ರಕಾಶ್, ದಿಶಾ ಸಮಿತಿ ಸದಸ್ಯೆ ಕೆ.ಕಾವ್ಯಾ, ಮಹಿಳಾ ಕಾಂಗ್ರೆಸ್ ಪದಾಧಿಕಾರಿಗಳಾದ ರೋಹಿಣಿ, ಪ್ರಿಯಾ, ರೂಪಾ, ನಗರಸಭೆ ಮಾಜಿ ಸದಸ್ಯೆ ಜಯಮ್ಮ, ಜಿಲ್ಲೆಯ ಮಹಿಳಾ ಘಟಕದ ಅಧ್ಯಕ್ಷರಾದ ಪುಟ್ಟಗೌರಮ್ಮ, ಪದ್ಮಮ್ಮ, ಮಹದೇವಮ್ಮ ಮತ್ತಿತರರು ಉಪಸ್ಥಿತರಿದ್ದರು.