
ತುಮಕೂರು: ಶಿರಾ ತಾಲೂಕು ಮೇಲುಕುಂಟೆ ಗ್ರಾಮದಲ್ಲಿ ಅಪರೂಪದ ದರ್ಪಣಧಾರಿಣಿ ಮಹಾಸತಿಕಲ್ಲು ಪತ್ತೆಯಾಗಿದೆ. ಗ್ರಾಮೀಣ ಭಾಗದ ಮಣ್ಣಿನ ಪದರಗಳಲ್ಲಿ ಶತಮಾನಗಳಿಂದ ಕಾಲಗರ್ಭ ಸೇರಿದ್ದ ಮಧ್ಯಕಾಲೀನ ಕರ್ನಾಟಕದ ಐತಿಹಾಸಿಕ ಮತ್ತು ಕಲಾತ್ಮಕ ಸಂಪತ್ತು ಇದೀಗ ಬೆಳಕಿಗೆ ಬಂದಿದೆ.
ಮಂಡ್ಯ ವಿಶ್ವವಿದ್ಯಾಲಯದ ವ್ಯಾಪ್ತಿಯ ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜಿನ ಸಂಶೋಧನಾ ಕೇಂದ್ರದ ಇತಿಹಾಸ ಸಂಶೋಧನಾರ್ಥಿ ಮಹಾಲಿಂಗೇಗೌಡ ಜಿ. ಅವರು ತಮ್ಮ ಮಾರ್ಗದರ್ಶಕರಾದ ಡಾ.ಗುರುರಾಜ್ ಪ್ರಭು.ಕೆ.ರವರ ಮಾರ್ಗದರ್ಶನದಲ್ಲಿ ಕೈಗೊಂಡ ಕ್ಷೇತ್ರ ಕಾರ್ಯದ ವೇಳೆ, ಮೇಲುಕುಂಟೆ ಕೆರೆಯ ಹಿಂಭಾಗದ ಕೃಷಿ ಜಮೀನಿನಲ್ಲಿ ಮಣ್ಣಿನಡಿ ಸಂಪೂರ್ಣ ಹೂತುಹೋಗಿದ್ದ ಅಪರೂಪದ ಕೆತ್ತನೆಯ ಮಹಾಸತಿಕಲ್ಲು ಮತ್ತು ತುರುಗೋಳ್ ವೀರಗಲ್ಲು ಪತ್ತೆಯಾಗಿವೆ.
ಒಂದೇ (ಮಧ್ಯಫಲಕದಲ್ಲಿ) ಭಾಗದಲ್ಲಿ ವೀರನೊಬ್ಬ ಕಾದಾಡುತ್ತಿರುವ ದೃಶ್ಯ, ಅದರ ಪಕ್ಕದಲ್ಲಿಯೇ ಕೊಳಲನ್ನು ಊದುತ್ತಿರುವ ಗೋಪಾಲಕನ ಅಪರೂಪದ ದೃಶ್ಯವಿರುವ ತುರುಗೋಳ್ ವೀರಗಲ್ಲು ಪತ್ತೆಯಾಗಿದೆ. ಭೂ ಉತ್ಖನನದ ಮೂಲಕ ಸಂರಕ್ಷಣೆ ಮಾಡಲಾಗಿದೆ.
ಈ ಮಹತ್ವದ ಸಂರಕ್ಷಣಾ ಕಾರ್ಯದಲ್ಲಿ ಗ್ರಾಮ ನಿವಾಸಿಗಳಾದ ಭೂತರಾಜು ಸಿ., ಮಹೇಶ್ ಗೌಡ ಎಂ. ಎಚ್., ಬಿಲ್ವಕುಮಾರ್, ರಘು ಜಗದೀಶ್, ತಿಪ್ಪೇಸ್ವಾಮಿ, ನಾಗರಾಜು ಹಾಗೂ ನಿತಿನ್ ಅವರು ಕೈಜೋಡಿಸಿ ಶಿಲೆಗಳನ್ನು ಹೊರತೆಗೆಯಲು ನೆರವಾಗಿದ್ದಾರೆ.
ಗುಬ್ಬಿ: ಪೂರ್ವಜರಿಂದ ಬಂದಿರುವ ಐತಿಹಾಸಿಕ ಕುರುಹುಗಳನ್ನು ಶಾಶ್ವತವಾಗಿ ಉಳಿಯುವಂತೆ ರಕ್ಷಿಸಬೇಕು ಎಂದು ಸಂಶೋಧಕ ಡಾ.ಎ.ಜಿ. ಶ್ರೀನಿವಾಸ್ ತಿಳಿಸಿದರು. ಪಟ್ಟಣದ ಚಿದಂಬರಾಶ್ರಮದ ಸೇವಾಸದನ ಪ್ರೌಢಶಾಲೆಯಲ್ಲಿ ತುಮಕೂರು ಸಂಶೋಧಕರ ತಂಡ, ಇತಿಹಾಸ ಸಂಕಲನ ಸಮಿತಿ. ಕರ್ನಾಟಕ ಇತಿಹಾಸ ಅಕಾಡೆಮಿ ಬೆಂಗಳೂರು ವತಿಯಿಂದ ಐತಿಹಾಸಿಕ ಪರಂಪರೆ ಉಳಿಸಿ ಮತ್ತು ಇತಿಹಾಸ ದಿವಸ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ತಾಲೂಕಿನಲ್ಲಿ ದೊರೆತಿರುವ ಪ್ರಾಚೀನ ಶಾಸನಗಳು, ಕೋಟೆಗಳು, ದೇವಸ್ಥಾನಗಳು ಇನ್ನೂ ಮುಂತಾದವುಗಳ ಬಗ್ಗೆ ಮಾಹಿತಿ ನೀಡಿದರು. ನಮ್ಮ ಪರಂಪರೆಯನ್ನು ಮುಂದಿನ ಪೀಳಿಗೆಗೆ ಉಳಿಸುವುದು ನಮ್ಮೆಲ್ಲರ ಜವಾಬ್ದಾರಿ ಎಂದರು.
ಮುಖ್ಯ ಶಿಕ್ಷಕ ಎ.ಬಿ.ಜಗದೀಶ್ ಮಾತನಾಡಿ, ಪ್ರತಿ ವಿಷಯಕ್ಕೂ ತನ್ನದೇ ಆದ ಇತಿಹಾಸವಿದೆ. ಇತಿಹಾಸ ಮತ್ತು ಪರಂಪರೆಯನ್ನು ಉಳಿಸಬೇಕು. ಪಾರಂಪರಿಕ ಸಾವಯವ ಕೃಷಿ ಆಹಾರ ಸೇವಿಸುವುದರೊಂದಿಗೆ ಉತ್ತಮ ಆರೋಗ್ಯ ಕಾಪಾಡಿಕೊಳ್ಳಬೇಕು ಎಂದರು. ಕಾರ್ಯಕ್ರಮದಲ್ಲಿ ಡಾ. ರಶ್ಮಿ, ಮಲ್ಲಿಕಾರ್ಜುನ್. ಶಶಿಕಲಾ, ಸಹನಾ, ಪದ್ಮ, ಮಮತಾರಶ್ಮಿ, ಶ್ರೀನಿವಾಸ್ ಮತ್ತು ಬಿ.ಇಡಿ ಪ್ರಶಿಕ್ಷಣಾರ್ಥಿಗಳು ಭಾಗವಹಿಸಿದ್ದರು.