
ತುಮಕೂರು: ತುರುವೇಕೆರೆ ತಾಲೂಕಿನಲ್ಲಿ ಸುಮಾರು 25 ಸಾವಿರ ರಾಸುಗಳಿಗೆ ಉಚಿತವಾಗಿ ವಿಮಾ ಸೌಲಭ್ಯ ನೀಡಲು ಕ್ರಮ ಕೈಗೊಳ್ಳಲಾಗಿದೆ ಎಂದು ಜಿಲ್ಲಾ ಹಾಲು ಒಕ್ಕೂಟದ ನಿರ್ದೇಶಕ ಸಿ.ವಿ.ಮಹಲಿಂಗಯ್ಯ ಹೇಳಿದರು.
ತಾಲೂಕಿನ ಬೊಮ್ಮೇನಹಳ್ಳಿಯ ಹಾಲು ಉತ್ಪಾದಕರ ಸಹಕಾರ ಸಂಘದ ಆವರಣದಲ್ಲಿ ಜಿಲ್ಲಾ ಸಹಕಾರಿ ಹಾಲು ಉತ್ಪಾದಕರ ಸಂಘಗಳ ಒಕ್ಕೂಟದ ಆಶ್ರಯದಲ್ಲಿ ಏರ್ಪಡಿಸಲಾಗಿದ್ದ ರಾಸುಗಳಿಗೆ ಉಚಿತ ವಿಮಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡುತ್ತಿದ್ದರು.
ಕಳೆದ ವರ್ಷ ತಾಲೂಕಿನಲ್ಲಿ ಸುಮಾರು 18.50 ಸಾವಿರ ರಾಸುಗಳಿಗೆ ವಿಮೆ ಮಾಡಿಸಲಾಗಿತ್ತು. ಈ ಬಾರಿ 25 ಸಾವಿರ ರಾಸುಗಳಿಗೆ ವಿಮೆ ಮಾಡಿಸಲು ಕ್ರಮ ಕೈಗೊಳ್ಳಲಾಗಿದೆ. ರಾಸುಗಳು ನೀಡುವ ಹಾಲಿನ ಸಾಮರ್ಥ್ಯದ ಆಧಾರದ ಮೇಲೆ ರಾಸುಗಳಿಗೆ ವಿಮೆ ನಿರ್ಧರಿಸಲಾಗುತ್ತದೆ. ಕನಿಷ್ಠ 40 ಸಾವಿರದಿಂದ 75 ಸಾವಿರದವರೆಗೆ ಉಚಿತವಾಗಿ ವಿಮೆ ನೀಡಲಾಗುವುದು ಎಂದರು.
ಜಿಲ್ಲೆಯಲ್ಲಿ ಪ್ರತಿ ತಿಂಗಳೂ ಕನಿಷ್ಠ 150 ರಿಂದ 200 ಹೈನುಗಾರರು ಮೃತ ಪಡುತ್ತಿದ್ದಾರೆ. ಈ ಮೃತಪಟ್ಟ ಕುಟುಂಬಕ್ಕೆ ನಮ್ಮ ಒಕ್ಕೂಟದಿಂದ 50 ಸಾವಿರ ರು. ಪರಿಹಾರ ನೀಡಲಾಗುತ್ತಿದೆ. ಹೈನುಗಾರರಿಗೆ ಶೇಕಡಾ 50 ರ ರಿಯಾಯಿತಿ ದರದಲ್ಲಿ ಪರಿಕರಗಳನ್ನು ನೀಡಲಾಗುತ್ತಿದೆ. ಹೈನುಗಾರರ ಮಕ್ಕಳ ಶಿಕ್ಷಣಕ್ಕೆ ಒತ್ತು ನೀಡಲಾಗಿದೆ. ಈಗ 224 ವಿದ್ಯಾರ್ಥಿನಿಯರಿಗೆ ಉಚಿತ ವಸತಿ ನಿಲಯ ಕಲ್ಪಿಸಲಾಗಿದೆ. ಇನ್ನು ಕೆಲವೇ ದಿನಗಳಲ್ಲಿ ಸುಮಾರು 500 ವಿದ್ಯಾರ್ಥಿನಿಯರಿಗೆ ಅವಕಾಶ ಕಲ್ಪಿಸಲಾಗುತ್ತಿದೆ ಎಂದರು.
ಶಾಸಕ ಎಂ.ಟಿ.ಕೃಷ್ಣಪ್ಪ ಮಾತನಾಡಿ ತಾಲೂಕಿನಲ್ಲಿ ಬರಗಾಲ ತಾಂಡವಾಡುತ್ತಿದೆ. ಅಂತರ್ಜಲ ಮಟ್ಟ ಕುಸಿಯುತ್ತಿದೆ. ತೆಂಗು ಅಡಿಕೆ ಮುಂತಾದ ಬೆಳೆಗಳು ಒಣಗುತ್ತಿವೆ. ಇಂತಹ ಸ್ಥಿತಿಯಲ್ಲಿ ಹೈನುಗಾರಿಕೆ ರೈತರ ಕೈ ಹಿಡಿದಿದೆ. ರಾಸುಗಳಿಗೆ ವಿಮೆ ನೀಡುತ್ತಿರುವುದು ಸ್ವಾಗತಾರ್ಹ. ವಿಮೆ ಹಣ ದೊರೆತ ನಂತರ ಪುನಃ ರಾಸುಗಳನ್ನು ತಂದು ಆರ್ಥಿಕ ಪ್ರಗತಿ ಸಾಧಿಸಲು ಮುಂದಾಗಬೇಕೆಂದು ಹೇಳಿದರು.
ತಾಲೂಕಿನಲ್ಲಿ ಹೇಮಾವತಿ ನೀರು ಹರಿಸಲಾಗುತ್ತಿದೆ. ರೈತಾಪಿಗಳು ತಮ್ಮ ಗ್ರಾಮಗಳಲ್ಲಿರುವ ಕೆರೆಗಳಲ್ಲಿ ಕನಿಷ್ಠ ಅರ್ಧದಷ್ಠಾದರೂ ಕೆರೆಯನ್ನು ತುಂಬಿಸಿಕೊಳ್ಳಿ. ತಾವು ಹಗಲು ರಾತ್ರಿ ಎನ್ನದೇ ಹೇಮಾವತಿ ನಾಲಾ ಬಳಿ ಓಡಾಡುತ್ತಿದ್ದೇನೆ, ನನ್ನೊಂದಿಗೆ ಕೈ ಜೋಡಿಸಿದರೆ ನಿಮ್ಮ ಗ್ರಾಮದ ಕೆರೆ ಕಟ್ಟೆಗಳು ತುಂಬಲು ಸಹಕಾರಿಯಾಗಲಿದೆ ಎಂದರು.
ಈ ವೇಳೆ ಸಂಘದ ಅಧ್ಯಕ್ಷ ಬಿ.ಸಿ.ನಾಗರಾಜು, ಉಪಾಧ್ಯಕ್ಷೆ ಕೆ.ಧನಲಕ್ಷ್ಮಿ, ನಿರ್ದೇಶಕರಾದ ಗಂಗಾಧರಯ್ಯ, ಮಾಯಣ್ಣ, ನಟರಾಜು, ಶ್ರೀನಿವಾಸ್, ಬಿ.ಕೆ.ನಾಗರಾಜು, ವೆಂಕಟೇಶ್, ಕೃಷ್ಣಪ್ಪ, ಶಂಕರಪ್ಪ, ಕಾರ್ಯದರ್ಶಿ ರೇಣುಕಪ್ಪ, ವಿಸ್ತರಣಾಧಿಕಾರಿಗಳಾದ ಮಂಜುನಾಥ್, ಕಿರಣ್ ಕುಮಾರ್, ದಿವಾಕರ್, ಡಾ.ಲೋಹಿತ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.