
ತುಮಕೂರು: ಮದುವೆ ಸಮಾರಂಭದ ಆರಕ್ಷತೆಯಲ್ಲಿ ವರನೇ ಮದುವೆ ಬೇಡ ಎಂದು ಮಾತ್ರೆ ಸೇವಿಸಿ ಹೈಡ್ರಾಮಾ ಮಾಡಿರುವ ಘಟನೆ ತುಮಕೂರಿನಲ್ಲಿ ನಡೆದಿದೆ. ತುಮಕೂರು ಜಿಲ್ಲೆಯ ಪಾವಗಡ ಠಾಣೆ ಸಿಬ್ಬಂದಿಯಾಗಿರುವ ಸಂಪತ್, ಮದುವೆ ಮಂಟಪದವರೆಗೂ ಬಂದು ಉಲ್ಟಾ ಹೊಡೆದ ವರ ಎಂದು ತಿಳಿದು ಬಂದಿದೆ.
ಆಂಧ್ರ ಪ್ರದೇಶದ ಮಡಕಶಿರಾದಲ್ಲಿ ಸಂಪತ್ ಆರತಕ್ಷತೆ ಕಾರ್ಯಕ್ರಮ ನಿಗದಿಯಾಗಿತ್ತು. ಮದುವೆ ಮಂಟಪದ ವರೆಗೂ ಬಂದಿದ್ದ ವರ ಸಂಪತ್, ತನಗೆ ಮದುವೆ ಬೇಡ ಅಂತ ಕೊನೆಯ ಕ್ಷಣದಲ್ಲಿ ಕೇಳಿದ್ದನಂತೆ. ಅಲ್ಲದೇ ರಿಸೆಕ್ಷನ್ ಮುನ್ನ ತನಗೆ ಮದುವೆ ಬೇಡ ಎಂದು ಮಾತ್ರೆ ನುಂಗಿ ಹೈಡ್ರಾಮಾ ಮಾಡಿದ್ದನಂತೆ. ಮಾತ್ರೆ ನುಂಗಿದ್ದ ವರನಿಗೆ ಚಿಕಿತ್ಸೆ ಕೊಡಿಸಿ, ಆತನ ಚೇತರಿಸಿಕೊಂಡ ಬಳಿಕ ಹಿರಿಯರು ಆತನ ಮನವೊಲಿಕೆ ಮಾಡಿ ಮದುವೆಯನ್ನು ಯಶಸ್ವಿಯಾಗಿ ಮಾಡಲಾಗಿದೆ ಎಂಬ ಮಾಹಿತಿ ತಿಳಿದು ಬಂದಿದೆ.
ಇತ್ತ ಮದುವೆ ಮಂಟಪದವರೆಗೂ ಬಂದು ವರ ಮದುವೆ ನಿರಾಕರಿಸಿದ್ದಕ್ಕೆ ವಧು ಆತಂಕಗೊಂಡಿದ್ದರು. ಓರ್ವ ಕಾನೂನು ಪಾಲಕನಾಗಿ ಮದುವೆ ವೇಳೆ ಪೊಲೀಸಪ್ಪ ಹೈಡ್ರಾಮಾ ಮಾಡಿರುವುದು ಅಲ್ಲಿದ್ದ ಎಲ್ಲರಿಗೂ ಬಿಗ್ ಶಾಕ್ ನೀಡಿತ್ತಂತೆ.
ಘಟನೆ ಸಂಬಂಧ ಮಾಧ್ಯಮಗಳೊಂದಿಗೆ ಮಾತನಾಡಿರುವ ಸಂಬಂಧಿಗಳು, ಇವತ್ತು ನಾಳೆ ಮದುವೆ ನಿಗಧಿಯಾಗಿತ್ತು. ಮದುವೆ ಕಾರ್ಡ್ ಕೂಡ ವರನೇ ಪ್ರೀಂಟ್ ಮಾಡಿಸಿ, ಎಲ್ಲರಿಗೂ ಹಂಚಿಕೆ ಮಾಡಿದ್ದ. ನಮಗೂ ಆತನೇ ಖುದ್ದು ಮದುವೆ ಕಾರ್ಡ್ ಪ್ರೀಂಟ್ ಮಾಡಿಸಿದ್ದ. ಅಲ್ಲದೇ ವೆಡ್ಡಿಂಗ್ ಕಾರ್ಡ್ ಗಳನ್ನು ಎಲ್ಲರಿಗೂ ಹಂಚಿಕೆ ಮಾಡಿದ್ರಾ ಎಂದು ಫೋನ್ ಮಾಡಿ ಕೇಳಿದ್ದ ಆದರೆ ಈಗ ಆತನೇ ಹೀಗೆ ಮಾಡಿದ್ದ ಎಂದು ತಿಳಿಸಿದ್ದಾರೆ.
ಅಲ್ಲದೇ, ಗುರು-ಹಿರಿಯರು ನಿಶ್ಚಯ ಮಾಡಿದ್ದ ಮದುವೆಯಾಗಿದ್ದು, ವರನ ಕಡೆಯವರೇ ನಮ್ಮ ಮನೆಗೆ ಬಂದು ಹುಡುಗಿ ಕೊಡಲು ಮನವಿ ಮಾಡಿದ್ದರು. ನಮ್ಮ ಮನೆಗೆ ಬಂದು ವಧು ಕೇಳಿದ್ದರು. ಇದಾದ ಬಳಿಕ ನಾವು ಅವರ ಮನೆಗೆ ಹೋಗಿ ನೋಡಿಕೊಂಡು ಬಂದು ಮದುವೆ ನಿಶ್ಚಯ ಮಾಡಿದ್ದೇವು. ಆಗ ಹುಡುಗ ಕೂಡ ಮದುವೆಗೆ ಒಪ್ಪಿಗೆ ಕೊಟ್ಟಿದ್ದ. ನಮ್ಮ ಹುಡುಗಿ ಕೂಡ ಮದುವೆಗೆ ಒಪ್ಪಿಗೆ ಸೂಚಿಸಿದ್ದರಿಂದ ಮದುವೆ ನಿಶ್ಚಯ ಮಾಡಿದ್ದೇವು. ಆರತಕ್ಷತೆ ಕೂಡ ನಡೆಸಿದ್ದೇವು, ಇದಾದ ಬಳಿಕ ಮದುವೆ ದಿನಾಂಕ ಕೂಡ ನಿಗದಿಯಾಗಿತ್ತು. ಆಗ ಕೂಡ ಹುಡುಗ ಚೆನ್ನಾಗಿದ್ದ, ಆದರೆ ಇವತ್ತು ಮದುವೆ ಇಷ್ಟ ಇಲ್ಲ ಎಂದು ಮಾತ್ರೆ ತಗೊಂಡಿದ್ದ. ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದೇವೆ ಎಂದು ಹೇಳಿದ್ದಾರೆ.
ವರನ ಹೈಡ್ರಾಮಾಕ್ಕೆ ವಧು ಕುಟುಂಬ ಕಂಗಾಲಾಗಿದ್ದು, ಸಂಭ್ರಮದಿಂದ ಆರತಕ್ಷತೆ ನಡೆಯಬೇಕಾದ ಸಮಯದಲ್ಲಿ ಎರಡು ಕುಟುಂಬಸ್ಥರು ಆಸ್ಪತ್ರೆ ಅಲೆದಾಡಿದ್ದಾರೆ. ವರ ಚೇತರಿಕೆ ಕಂಡ ಬಳಿಕ ಅಂತಿಮವಾಗಿ ಮನೆಯ ಹಿರಿಯರು ಆತನ ಮನವೊಲಿಕೆ ಮಾಡಿದ್ದು, ಆ ಬಳಿಕ ಆಸ್ಪತ್ರೆಯಿಂದ ಮದುವೆ ಮಂಟಪಕ್ಕೆ ವಾಪಸ್ ಬಂದು ವಧುವಿಗೆ ಮಾಂಗಲ್ಯ ಧಾರಣೆ ಮಾಡಿದ್ದಾನೆ. ವರನ ನಡೆಯಿಂದ ಕೆಲ ಗಂಟೆಗಳ ಕಾಲ ಗೊಂದಲದ ವಾತಾವರಣ ನಿರ್ಮಾಣವಾದರೂ, ಹಿರಿಯರು ಮನವೊಲಿಯಿಂದ ಜೋಡಿ ಸಪ್ತಪದಿ ತುಳಿದಿದೆ. (ವರದಿ: ಮಹಂತೇಶ್, ಏಷ್ಯಾನೆಟ್ ಸುವರ್ಣ ನ್ಯೂಸ್, ತುಮಕೂರು)